ಬೆಂಗಳೂರು, ಜ.31 www.bengaluruwire.com : ನಗರದಲ್ಲಿ ಸುಂದರ ಲೋಹದ ಹಕ್ಕಿಗಳ ರುದ್ರ ರಮಣೀಯ ಹಾರಾಟಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನಲೆಯಲ್ಲಿ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು ಹಾರಾಡುವ ಹಿನ್ನಲೆಯಲ್ಲಿ “ಏರ್ ಶೋ-2023” (Air Show 2023) ಪ್ರಯುಕ್ತ ಯಲಹಂಕ ವಾಯುಸೇನಾ ನೆಲೆಯ ಸುತ್ತಮುತ್ತ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಕ್ರೇನ್ ಎತ್ತವರನ್ನು ತಗ್ಗಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ಬಹುಮಹಡಿ ಕಟ್ಟಡಗಳ ಸಂಸ್ಥೆಗಳು, ಮಾಲೀಕರು ಹಾಗೂ ಅದನ್ನು ನಿರ್ಮಿಸುವ ಡೆವಲಪರ್ ಗಳಿಗೆ ಖಡಕ್ ಸೂಚನೆ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ವ್ಯಾಪ್ತಿಯ ವಾಯುಸೇನಾ ನೆಲೆ (Air Force Station) ಯಲ್ಲಿ ಫೆಬ್ರವರಿ 13ನೇ ತಾರೀಖಿನಿಂದ ಐದು ದಿನಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ‘ಏರೊ ಇಂಡಿಯಾ-2023(AERO INDIA)’ ಪ್ರದರ್ಶನ ಕಾರ್ಯಕ್ರಮ ನಡೆಯಲಿದ್ದು, ದೇಶ, ವಿದೇಶಗಳ ಶಸ್ತ್ರಾಸ್ತ್ರ ಕಂಪನಿಗಳು, ವಾಯುಯಾನ ಸಂಸ್ಥೆಗಳು ಹಾಗೂ ಯುದ್ಧ ವಿಮಾನ, ಹೆಲಿಕಾಪ್ಟರ್ ಗಳು ಆಗಮಿಸಲಿವೆ.
ಏರೋ ಇಂಡಿಯಾ ನಡೆಯುತ್ತಿರುವ ಪ್ರಯುಕ್ತ ಯಲಹಂಕ ವಾಯುಸೇನಾ ನೆಲೆಯಿಂದ 5 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದ ಬೃಹತ್ ಕಟ್ಟಡಗಳಲ್ಲಿ ಉಪಯೋಗಿಸುವ ಕ್ರೇನ್‌ಗಳ ಎತ್ತರವನ್ನು ಫೆಬ್ರವರಿ 9ರಿಂದ 17ನೇ ತಾರೀಖಿನ ವರೆಗೆ ತಗ್ಗಿಸಲು ಹಾಗೂ ಕ್ರೇನ್ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಬಹುಮಹಡಿ ಕಟ್ಟಡಗಳ ಸಂಸ್ಥೆಗಳು, ಮಾಲೀಕರು ಹಾಗೂ ಅದನ್ನು ನಿರ್ಮಿಸುವ ಡೆವಲಪರ್ ಗಳಿಗೆ ಸೂಚನೆ ನೀಡಿದೆ.
ಇದನ್ನು ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಎರ್‌ಕ್ರಾಫ್ಟ್ ರೂಲ್ಸ್ 1937ರ ರೂಲ್ 91 ರೀತ್ಯಾ ಕ್ರಮವಹಿಸಲಾಗುವುದೆಂದು ನಗರ ಯೋಜನೆಯ ಜಂಟಿ ನಿರ್ದೇಶಕ(ಉತ್ತರ) ಮಂಜೇಶ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.