ಬೆಂಗಳೂರು, ಜ.30 www.bengaluruwire.com : ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು (Free and Fair Election) ಖಾತ್ರಿ ಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರಸಮಿತಿ ಪಕ್ಷ (Karnataka Rashtra Samithi Party- KRS) ಮತದಾರರಿಗೆ ಓಪನ್ ಆಫರ್ ಇಟ್ಟಿದೆ.
ಅದೇನಪ್ಪ ಅಂದರೆ, “ಭ್ರಷ್ಟ, ದುಷ್ಟ, ನೀಚ, ಜನದ್ರೋಹಿ ರಾಜಕಾರಣಿಗಳು ಓಟಿಗಾಗಿ ಮತದಾರರಿಗೆ ಆಮಿಷ ಒಡ್ಡುವಂತಹ ಚುನಾವಣಾ ಅಕ್ರಮಗಳನ್ನು ನಿಲ್ಲಿಸಲು, ಯಾವ ಪಕ್ಷದ ಭ್ರಷ್ಟ ಅಭ್ಯರ್ಥಿ ಅಥವಾ ಆತನ ಬೆಂಬಲಿಗರು ಕುಕ್ಕರ್, ಮಿಕ್ಸಿ,ತಟ್ಟೆ, ಚೆಂಬು, ಕಿಟ್ ಹಂಚಿ ಜನರನ್ನು ಅನೈತಿಕ ಕೆಲಸಕ್ಕೆ ಪ್ರಚೋದಿಸುತ್ತಿದ್ದರೆ, ಅದನ್ನು ಪ್ರಶ್ನಿಸಿ, ತಿರಸ್ಕರಿಸಿ, ಆ ಘಟನೆಯ ವಿಡಿಯೋ ಮಾಡಿ 88617-75862 ಸಂಖ್ಯೆಗೆ ಕಳುಹಿಸುವ ಧೀರ ದೇಶಭಕ್ತರಿಗೆ ₹5000 ಬಹುಮಾನ ನೀಡಲಾಗುವುದು!” ಎಂದು ಮತದಾರರಿಗೆ ಬಹಿರಂಗವಾಗಿ ಬಹುಮಾನ ಘೋಷಿಸಿದೆ.
ಆದರೆ ಕೆಆರ್ ಎಸ್ ಪಕ್ಷ ಇದಕ್ಕೊಂದು ಷರತ್ತು ವಿಧಿಸಿದೆ, ಮತದಾರರಿಗೆ ಆಮಿಷ ಒಡ್ಡುವ ವಸ್ತುಗಳನ್ನು ವಿತರಿಸುತ್ತಿರುವ ವಿಡಿಯೋ ಕಳುಹಿಸುವುದಲ್ಲ, ಬದಲಿಗೆ ಆ ವಸ್ತು ಕೊಟ್ಟವರನ್ನು ಪ್ರಶ್ನಿಸಿ, ಅದನ್ನು ತಿರಸ್ಕರಿಸಿ, ನೀಚ ಮತ್ತು ಭ್ರಷ್ಟ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಳ್ಳುವ ವಿಡಿಯೋವನ್ನು ತಮ್ಮ ಪಕ್ಷದ ಮೊಬೈಲ್ ನಂಬರ್ ಗೆ ಕಳುಹಿಸಬೇಕು ಎಂದು ಹೇಳಿದೆ.
“ಈ ವಿಚಾರದಲ್ಲಿ ಪ್ರಾಮಾಣಿಕ ಮತದಾರರು ಭಯ ಪಡಬೇಡಿ. ಈ ಸಮಯದಲ್ಲಿ ನೀಚರು ನಿಮ್ಮನ್ನೇನೂ ಮಾಡಲಾರರು. ನಿಮಗೆ ಯಾವುದೇ ರೀತಿಯ ತೊಂದರೆ ಆದರೆ ಕೆಆರ್ ಎಸ್ ಪಕ್ಷ ನಿಮ್ಮ ಬೆನ್ನಿಗಿರುತ್ತದೆ” ಎಂದು ವಾಗ್ದಾನವನ್ನು ನೀಡಿದೆ.
ರಾಜ್ಯದಲ್ಲಿ ಓಟಿಗಾಗಿ ರಾಜಕಾರಣಿಗಳು ಮತದಾರರಿಗೆ ಆಮಿಷ ಒಡ್ಡುವಂತಹ ಚುನಾವಣಾ ಅಕ್ರಮಗಳನ್ನು ನಿಲ್ಲಿಸಲು ಆಗ್ರಹಿಸಿ, ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಾತ್ರಿ ಪಡಿಸುವಂತೆ ಒತ್ತಾಯಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರ ಜವಾಬ್ದಾರಿಯನ್ನು ನೆನಪಿಸುವ ಹಿನ್ನಲೆಯಲ್ಲಿ ‘#ನ್ಯಾಯಸಮ್ಮತಚುನಾವಣೆಗಾಗಿKRSಅಭಿಯಾನ’ವನ್ನು KRS ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿಯವರು ಜ.27ರಿಂದ ಬೆಂಗಳೂರು ಗ್ರಾಮಾಂತರಿಂದ ಈ ಅಭಿಯಾನವನ್ನು ಆರಂಭಿಸಿದ್ದು, ಫೆಬ್ರವರಿ 10ರ ವರೆಗೆ ಈ ಅಭಿಯಾನ ನಡೆಯಲಿದೆ.
ಎಲ್ಲೆಲ್ಲಿಯ ಜಿಲ್ಲಾಧಿಕಾರಿಗಳನ್ನು ಕೆಆರ್ ಎಸ್ ಪಕ್ಷ ಭೇಟಿಯಾಗಲಿದೆ?:
ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಮಡಿಕೇರಿ, ಉಡುಪಿ, ಕಾರವಾರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಗುರ್ಲರ್ಗ, ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಬೆಂಗಳೂರು ಜಿಲ್ಲಾಧಿಕಾರಿಗಳನ್ನು ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಭೇಟಿಯಾಗಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಂತೆ ಮನವಿ ಪತ್ರಗಳನ್ನು ನೀಡಲಿದ್ದಾರೆ.
ವಿಡಿಯೋ ಕಳುಹಿಸಿ ಬಹುಮಾನ ಪಡೆಯಿರಿ :
“ನಮ್ಮ ರಾಜ್ಯದಲ್ಲಿಯ ಇಂದಿನ ಈ ಮಟ್ಟದ ಲಂಚ, ಭ್ರಷ್ಟಾಚಾರ, ದುರಾಡಳಿತದ ಮೂಲವೇ ಚುನಾವಣಾ ಅಕ್ರಮಗಳು. ಚುನಾವಣಾ ಸಂದರ್ಭದಲ್ಲಿ ಅಪರಾಧ ಎಂದು ಪರಿಗಣಿಸಲ್ಪಡುವ ಕೃತ್ಯಗಳು ಚುನಾವಣಾಪೂರ್ವದಲ್ಲಿಯೂ ಅಪರಾಧಗಳೇ. ಹಾಗಾಗಿ ವಿಚಾರದಲ್ಲಿ ನಾಡಿನ ಜನತೆ ಸರ್ಕಾರಿ ಅಧಿಕಾರಿಗಳ ಮೇಲೆ ಅವಲಂಬಿತರಾದರೆ ಏನೇನೂ ಪ್ರಯೋಜನವಿಲ್ಲ. ಜನರೇ ಈ ಆಮಿಷಗಳನ್ನು ತಿರಸ್ಕರಿಸುವ ಮತ್ತು ಚುನಾವಣಾ ಅಕ್ರಮಗಳನ್ನು ನಿಲ್ಲಿಸುವ ಕಾರ್ಯಕ್ಕೆ ಮುಂದಾಗಬೇಕು. ಹಾಗಾಗಿ ಯಾರೇ ಆದರೂ ಜನರನ್ನು ಅನೈತಿಕ ಕೆಲಸಕ್ಕೆ ಪ್ರಚೋದಿಸುತ್ತಿದ್ದರೆ, ಅದನ್ನು ಪ್ರಶ್ನಿಸಿ, ಅವರು ಕೊಟ್ಟ ವಸ್ತುಗಳನ್ನು ತಿರಸ್ಕರಿಸಿ, ಅವರನ್ನು ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ಮಾಡಿ ನಮ್ಮ ಪಕ್ಷದ ಮೊಬೈಲ್ ನಂಬರ್ ಗೆ ಕಳಿಸಿದರೆ, ಅಂತಹವರಿಗೆ ಬಹುಮಾನ ನೀಡಲಾಗುವುದು. “
- ರವಿಕೃಷ್ಣರೆಡ್ಡಿ, ರಾಜ್ಯಾಧ್ಯಕ್ಷ, ಕೆಆರ್ ಎಸ್ ಪಕ್ಷ
.