ಬೆಂಗಳೂರು, ಜ.25 www.bengaluruwire.com : ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈ ವರ್ಷದ ಮಧ್ಯಭಾಗದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಮಿಷನ್ ಆದಿತ್ಯ-L1 ಅಂತರಿಕ್ಷನೌಕೆಯನ್ನು ಬಾಹ್ಯಾಕಾಶಕ್ಕೆ ಹಾರಿಸಲು ಸಿದ್ಧತೆ ನಡೆಸುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಜ.25ರಂದು ಬುಧವಾರ ಭಾರತೀಯ ಖಭೌತಶಾಸ್ತ್ರ ಸಂಸ್ಥೆ (Indian Institute Of Astrophysics) ಅಭಿವೃದ್ಧಿಪಡಿಸಿರುವ ವಿಸಿಬಲ್ ಎಮಿಷನ್ ಲೈನ್ ಸೋಲಾರ್ ಕೊರೋನಾಗ್ರಾಫ್ ಪೇಲೋಡ್ ಉಪಕರಣವನ್ನು (VELC) ಇಸ್ರೋ ಅಧ್ಯಕ್ಷರಿಗೆ ಹಸ್ತಾಂತರಿಸಲಿದೆ.
ವಿಇಎಲ್ ಸಿ ಎಂಬ ಈ ಉಪಕರಣವು ಸಾಕಷ್ಟು ಸಂಕೀರ್ಣ ಕಾರ್ಯಾಚರಣೆಯನ್ನು ಹೊಂದಿದ ಉಪಕರಣವಾಗಿದ್ದು, ಸೂರ್ಯನ ಪ್ರಕಾಶಮಾನವಾದ ಬೆಳಕನ್ನು ನಿಯಂತ್ರಿಸಿಕೊಂಡು ಆದಿತ್ಯನ ಹೊರಭಾಗದಲ್ಲಿರುವ ಕರೋನಾ ವಲಯ ಅಧ್ಯಯನವನ್ನು ಮಾಡುವ ಪ್ರಮುಖ ಉಪಕರಣವಾಗಿದೆ. ಇಸ್ರೋ ಈಗಾಗಲೇ ಬಿಡುಗಡೆ ಮಾಡಿರುವ ಆದಿತ್ಯ ಎಲ್-1 ಮಿಷನ್ ಅಂತರಿಕ್ಷ ನೌಕೆಯ ಮೇಲ್ಭಾಗದಲ್ಲಿ ಬರುವ ಪೇಲೋಡ್ ಇದಾಗಿದ್ದು, ನೌಕೆಯಲ್ಲಿರುವ 7 ಉಪಕರಣಗಳಲ್ಲೇ ಅತಿದೊಡ್ಡದಾಗಿದೆ. ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (Indian Institute Of AstroPhysics)ಯು ಹೊಸಕೋಟೆಯಲ್ಲಿರುವ ತನ್ನ ವಿಜ್ಞಾನ ಮತ್ತು ತಂತ್ರಜ್ಞಾನದ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ ಈ ವಿಇಎಲ್ ಸಿ ಉಪಕರಣವನ್ನು ಅಭಿವೃದ್ಧಿಪಡಿಸಿದೆ.
ಆದಿತ್ಯ-ಎಲ್ 1 ಮಿಷನ್ ನಲ್ಲಿ ಪ್ರಮುಖ ಉಪಕರಣವು ಉಪಗ್ರಹದಲ್ಲಿ ಸೇರ್ಪಡೆಯಾದ ನಂತರದಲ್ಲಿ ಆದಿತ್ಯ ಯೋಜನೆಯು ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಆದಿತ್ಯ-ಎಲ್1 ಮಿಷನ್ ಗೆ ಅಗತ್ಯವಾದ ಇತರೆ ಪೇಲೌಡ್ ಗಳು ಬಹುತೇಕ ಸಿದ್ಧವಾಗಿದ್ದು, ಏಪ್ರಿಲ್- ಮೇ ತಿಂಗಳಲ್ಲಿ ರಾಕೇಟ್ ಮೂಲಕ ಆದಿತ್ಯ-ಎಲ್1 ಅಂತರಿಕ್ಷ ನೌಕೆಯನ್ನು ಹಾರಿಬಿಡಲಾಗುತ್ತದೆ. ಒಂದು ವೇಳೆ ವಿಳಂಬವಾದರೆ ವರ್ಷದ ಮಧ್ಯಭಾಗದಲ್ಲಿ ಲಾಂಚ್ ಮಾಡಲಾಗುತ್ತದೆ ಎಂದು ಇಸ್ರೋ ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.
2022 ರ ಅಕ್ಟೋಬರ್ ನಲ್ಲಿ ಕೆ.ಶಂಕರ ಸುಬ್ರಮಣಿಯನ್ ಅವರನ್ನು ಆದಿತ್ಯ ಯೋಜನೆ(L1 Mission) ಯ ಪ್ರಧಾನ ವಿಜ್ಞಾನಿ ಎಂದು ಹೆಸರಿಸಲಾಯಿತು. 2015 ರಲ್ಲಿ ಆಸ್ಟ್ರೋಸ್ಯಾಟ್ (AstroSat) ಯಶಸ್ವಿ ಉಡಾವಣೆ ನಂತರ, ಆದಿತ್ಯ-L1 ಭಾರತದಲ್ಲಿ ಎರಡನೇ ಬಾಹ್ಯಾಕಾಶ ಆಧಾರಿತ ಯೋಜನೆಯಾಗಿದೆ.
ಸೂರ್ಯನಿಗೆ ಸಂಸ್ಕೃತದಲ್ಲಿ ಅನೇಕ ಹೆಸರುಗಳಿದ್ದು, ಅವುಗಳಲ್ಲಿ ಒಂದು ಹೆಸರಾದ ಆದಿತ್ಯ ಎಂಬುದನ್ನು ಈ ಯೋಜನೆಗೆ ಇಡಲಾಗಿದೆ. ಆದಿತ್ಯ- ಸೌರವ್ಯೂಹದ ಕೇಂದ್ರದಲ್ಲಿರುವ ನಕ್ಷತ್ರವನ್ನು ಅಧ್ಯಯನ ಮಾಡಲು ISRO ಯ ಯೋಜಿತ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-XL) ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಆದಿತ್ಯ-L1 ಉಡಾವಣೆ ಮಾಡಲು ನಿರ್ಧರಿಸಲಾಗಿದೆ.
ಸೂರ್ಯ- ಭೂಮಿ ನಡುವಿನ ಆ ಸ್ಥಳವು ಎಷ್ಟು ಮುಖ್ಯ? :
ಬೆಂಗಳೂರು ಮೂಲದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಪ್ರಕಾರ, ಬಾಹ್ಯಾಕಾಶ ನೌಕೆಯು ಸೂರ್ಯ-ಭೂಮಿಯ ವ್ಯವಸ್ಥೆಯ ಮೊದಲ ಲ್ಯಾಗ್ರೇಂಜ್ ಪಾಯಿಂಟ್ (first Lagrange point –L1) ಸುತ್ತ ಗೋಳಾಕಾರದ ಕಕ್ಷೆಯಲ್ಲಿ ಸುತ್ತುವಂತೆ ನಿಯೋಜಿಸಲಾಗುತ್ತದೆ. ಈ ಸ್ಥಳವು ಭೂಮಿಯಿಂದ ಸರಿಸುಮಾರು 1.5 ಮಿಲಿಯನ್ ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಅಲ್ಲಿ ಸೂರ್ಯ ಮತ್ತು ಭೂಮಿಯ ಸಂಯೋಜಿತ ಗುರುತ್ವಾಕರ್ಷಣೆಯು ಬಾಹ್ಯಾಕಾಶ ನೌಕೆಯು ಸೂರ್ಯನ ಬಳಿ ಬಹುತೇಕ ಸ್ಥಿರವಾಗಿರಲು ಅನುವು ಮಾಡಿಕೊಡುತ್ತದೆ. ಎಲ್-1 ಬಿಂದುವಿನಲ್ಲಿ ಸುತ್ತುವ ಉಪಗ್ರಹವು ಗ್ರಹಣ ಮತ್ತಿತರ ಅಡೆತಡೆಗಳನ್ನು ಮೀರಿ ಸೌರ ಚಟುವಟಿಕೆಗಳನ್ನು ನಿರಂತರವಾಗಿ ವೀಕ್ಷಿಸುವ ಅವಕಾಶವನ್ನು ನೀಡುತ್ತದೆ.
ಆದಿತ್ಯ-L1 ಉಪಗ್ರಹದಲ್ಲಿರಲಿದೆ 7 ಉಪಕರಣಗಳು :
ಆದಿತ್ಯ-L1 ಉಪಗ್ರಹವು ಒಟ್ಟು ಏಳು ಪೇಲೋಡ್ ಉಪಕರಣಗಳನ್ನು ಹೊಂದಿದ್ದು ಅದು ದ್ಯುತಿಗೋಳ, ವರ್ಣಗೋಳ ಮತ್ತು ಸೂರ್ಯನ ಹೊರಗಿನ ಪದರಗಳನ್ನು (ಕರೋನಾ) ಅಧ್ಯಯನ ಮಾಡಲು ವಿದ್ಯುತ್ಕಾಂತೀಯ (electromagnetic) ಮತ್ತು ಕಣ ಪತ್ತೆಕಾರಕಗಳನ್ನು (particle detectors) ಬಳಸುತ್ತದೆ. ಮೂರು ಪೇಲೋಡ್‌ಗಳು ಲ್ಯಾಗ್ರೇಂಜ್ ಪಾಯಿಂಟ್ L1 ನಲ್ಲಿ ಸ್ಥಳದಲ್ಲಿನ ಕಣ ಮತ್ತು ಫೀಲ್ಡ್ ಅಧ್ಯಯನಗಳನ್ನು ನಡೆಸುತ್ತವೆ. ಆದರೆ ನಾಲ್ಕು ಪೇಲೋಡ್‌ಗಳು ಸೂರ್ಯನನ್ನು ನೇರವಾಗಿ L1 ನ ವಿಶಿಷ್ಟವಾದ ಸ್ಥಾನದಿಂದ ವೀಕ್ಷಿಸುತ್ತಿರುತ್ತವೆ.
ಆದಿತ್ಯ-ಎಲ್1 ಮಿಷನ್ ಉದ್ದೇಶವೇನು? :
ಇಸ್ರೋ ನ ವೆಬ್‌ಸೈಟ್‌ನ ಪ್ರಕಾರ, ಆದಿತ್ಯ ಯೋಜನೆಯ ಪ್ರಮುಖ ವೈಜ್ಞಾನಿಕ ಉದ್ದೇಶವೆಂದರೆ, ಸೌರ ಮೇಲ್ಭಾಗದ ವಾತಾವರಣದ ಕ್ರೋಮೋಸ್ಫಿಯರ್ ಮತ್ತು ಕರೋನಾ (chromosphere and corona) ಚಲನೆಯನ್ನು ಅಧ್ಯಯನ ಮಾಡುವುದು ಮತ್ತು ಸೌರ ಕರೋನದ ಭೌತಶಾಸ್ತ್ರ ಮತ್ತು ಅದರ ತಾಪನ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವುದಾಗಿದೆ. ಸೂರ್ಯನ ಮೇಲ್ಮೈ ವಾತಾವರಣದ ತಾಪಮಾನ 9,99,726 ಡಿಗ್ರಿ ಸೆಲೆಸಿಯ್ಸ್ ಇರುತ್ತದೆ ಹಾಗೂ ಮತ್ತು ಅದರ ಕಡಿಮೆ ತಾಪಮಾನ 5,726 ಡಿಗ್ರಿ ಉಷ್ಣಾಂಶವಿದ್ದು, ಇದರ ನಡುವಿನ ವ್ಯತ್ಯಾಸವು ಸೌರ ಭೌತಶಾಸ್ತ್ರದ ಅಧ್ಯಯನದಲ್ಲಿ ಇದುವರೆಗೆ ಖಭೌತಶಾಸ್ತ್ರ ವಿಜ್ಞಾನಿಗಳಲ್ಲಿ ಪರಿಹರಿಸಲಾಗದ ಸಮಸ್ಯೆಗಳಲ್ಲಿ ಒಂದಾಗಿದೆ. ಆದಿತ್ಯ-ಎಲ್1 ಮಿಷನ್ ಯೋಜನೆಯಿಂದಾಗಿ ಅದರಲ್ಲಿರುವ ವಿವಿಧ ಉಪಕರಣಗಳು, ಸೂರ್ಯನ ವಾತಾವರಣದ ಹಲವು ಪದರಗಳ ಏಕಕಾಲಿಕ ಫೋಟೋಗಳನ್ನು ಸೆರೆಹಿಡಿಯುತ್ತದೆ, ಶಕ್ತಿಯನ್ನು ಒಂದು ಪದರದಿಂದ ಇನ್ನೊಂದು ಪದರಕ್ಕೆ ಹೇಗೆ ರವಾನಿಸಲಾಗುತ್ತದೆ ಮತ್ತು ಸಾಗಿಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸುತ್ತದೆ.
ಆದಿತ್ಯ-1 ಯೋಜನೆ ಆದಿತ್ಯ-ಎಲ್1 ಮಿಷನ್ ಆಗಿದ್ದು ಹೇಗೆ? :
ಈ ಯೋಜನೆಯನ್ನು ಆರಂಭದಲ್ಲಿ ಆದಿತ್ಯ-1 ಎಂದು ಹೆಸರಿಡಲಾಗಿತ್ತು. ಆ ಸಂದರ್ಭದಲ್ಲಿ 400 ಕೆಜಿ ವರ್ಗದ ಉಪಗ್ರಹದಲ್ಲಿ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC) ಎಂಬ ಒಂದೇ ಪೇಲೋಡ್ ಅನ್ನು ಹೊತ್ತೊಯ್ಯಲು ಉದ್ದೇಶಿಸಲಾಗಿತ್ತು. ಯಾವಾಗ ಆ ಗಗನನೌಕೆಯು ಸೂರ್ಯ-ಭೂಮಿಯ ವ್ಯವಸ್ಥೆಯ ಲಗ್ರಾಂಜಿಯನ್ ಪಾಯಿಂಟ್ 1 (L1) ನ ಕಕ್ಷೆಯಲ್ಲಿ ಹಾರಿಸಲು ಉದ್ದೇಶಿಸಿದ ನಂತರ ಅದನ್ನು ‘ಆದಿತ್ಯ-L1 ಮಿಷನ್’ ಎಂದು ಮರುನಾಮಕರಣ ಮಾಡಲಾಯಿತು. ಬಹು ಪೇಲೋಡ್‌ಗಳ ಸೇರ್ಪಡೆಯೊಂದಿಗೆ, ಈ ಯೋಜನೆಯು ದೇಶಾದ್ಯಂತದ ಸೌರ ವಿಜ್ಞಾನಿಗಳಿಗೆ ಬಾಹ್ಯಾಕಾಶ ಆಧಾರಿತ ಉಪಕರಣ ಮತ್ತು ವೀಕ್ಷಣೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಒದಗಿಸಿತು. ಇಸ್ರೋದ ವೆಬ್‌ಸೈಟ್ ಪ್ರಕಾರ, ಉದ್ದೇಶಿತ ಆದಿತ್ಯ-ಎಲ್ 1 ಯೋಜನೆಯಿಂದಾಗಿ ಸೂರ್ಯನಲ್ಲಿನ ಚಲನ ಪ್ರಕ್ರಿಯೆಗಳ ಬಗ್ಗೆ ವಿಜ್ಞಾನಿಗಳಿಗೆ ಸಂಪೂರ್ಣ ಜ್ಞಾನವನ್ನು ಒದಗಿಸುವ ಹಾಗೂ ಸೌರ ಭೌತಶಾಸ್ತ್ರದಲ್ಲಿನ ಕೆಲವು ಮಹತ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯಕವಾಗಲಿದೆ.