ಬೆಂಗಳೂರು, ಜ.24 www.bengaluruwire.com : ಶಾರದಾ ಮಠದಲ್ಲಿ ಮಂಗಳವಾರ ಬೆಳಗ್ಗೆ ಶ್ರೀ ಶಾರದೆಯ ಪಂಚಲೋಹ ವಿಗ್ರಹಕ್ಕೆ ಅರ್ಚಕರು ವಿದ್ಯುಕ್ತವಾಗಿ ಹೊಸ ರೇಷ್ಮೆ ಸೀರೆ, ಹೂವಿನ ಅಲಂಕಾರ ಮಾಡಿ, ವಿದ್ಯುಕ್ತವಾಗಿ ಪೂಜೆ ನೆರವೇರಿಸುವ ಮೂಲಕ ಭಾರತ ಗಡಿಯಂಚಿನ ದೇವಸ್ಥಾನಕ್ಕೆ ತಾಯಿಯ ವಿಗ್ರಹವನ್ನು ಕೊಂಡೊಯ್ಯುವ ಪವಿತ್ರ ಯಾತ್ರೆಗೆ ಮಂಗಳವಾರ ಚಾಲನೆ ದೊರೆಯಿತು.
ಆ ಮೂಲಕ ಭಾರತದ ಅಂಚಿನಲ್ಲಿನ ಕಾಶ್ಮೀರ ಗಡಿ ನಿಯಂತ್ರಣ ರೇಖೆ ತೀತ್ವಾಲ್ ನಲ್ಲಿ ಶ್ರೀ ಶಾರದಾಂಬೆಯ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಬೆಳಗ್ಗೆ ಶೃಂಗೇರಿಯ ದೇವಸ್ಥಾನದ ಆವರಣದಲ್ಲಿ ಸಂಜೆಯವರೆಗೆ ಭಕ್ತರಿಗೆ ದರ್ಶನ ನೀಡಿದ ಬಳಿಕ ಸಂಜೆ 4.30ರಿಂದ ಬೆಂಗಳೂರಿನತ್ತ ದೇವಿಯ ವಿಗ್ರಹವನ್ನು ಹೊತ್ತ ವಾಹನ ಶೃಂಗೇರಿಯ ಮುಖ್ಯ ಬೀದಿಯಲ್ಲಿ ಭಕ್ತರ ಸಮ್ಮುಖದಲ್ಲಿ ಹೊರಟಿತು.
ಜ.24ರಂದು ಚಿಕ್ಕಮಗಳೂರಿನಲ್ಲಿರುವ ಶೃಂಗೇರಿ ಶಾಖಾ ಮಠದಲ್ಲಿ ಕಾಶ್ಮೀರ ಶಾರದಾ ಸಂರಕ್ಷಣಾ ಸಮಿತಿಯ ಸಂಸ್ಥಾಪಕರಾದ ರವೀಂದ್ರ ಪಂಡಿತ್, ಟ್ರಸ್ಟಿಗಳಾದ ಮೋಹನ್ ಮೋಂಗಾ ಗುರೂಜಿ ಸೇರಿದಂತೆ ಹಲವರು ವಿಗ್ರಹದೊಂದಿಗೆ ತಂಗಲಿದ್ದಾರೆ. ಮರುದಿನ ಅಂದರೆ ಜ.25ರಂದು ಬೆಳಗ್ಗೆ ಹಾಸನದತ್ತ ಹೊರಡುವ ವಾಹನ ಅಲ್ಲಿನ ಶೃಂಗೇರಿ ಶಾಖಾ ಮಠಕ್ಕೆ ತೆರಳಿ ಮಧ್ಯಾಹ್ನದ ವರೆಗೆ ಶಾರದಾ ವಿಗ್ರಹಕ್ಕೆ ಪೂಜೆ ನೆರವೇರಿಸಿದ ಬಳಿಕ ಬೆಂಗಳೂರಿನ ಜಯನಗರ ನಾಲ್ಕನೇ ಬ್ಲಾಕ್ ನಲ್ಲಿರುವ ಕಾಶ್ಮೀರ ಭವನದತ್ತ ತೆರಳಲಿದೆ. ಜ.26 ರಿಂದ ಜ.28ರವರೆಗೆ ವಿಗ್ರಹವನ್ನು ಕಾಶ್ಮೀರ ಭವನದಲ್ಲಿಡಲಾಗುತ್ತದೆ. ತದನಂತರ ಜ.28ರಂದು ಸಂಜೆ 3ಗಂಟೆಗೆ ವಿಗ್ರಹವನ್ನು ಹೊತ್ತ ವಾಹನವು ಮುಂಬೈನತ್ತ ಯಾತ್ರೆ ಮುಂದುವರೆಯಲಿದೆ. ಮಾರ್ಚ್ 20ರಂದು ಮಾತೆಯ ಪಂಚಲೋಹದ ವಿಗ್ರಹವು ತೀತ್ವಾಲ್ ತಲುಪಲಿದೆ. ಈ ಕುರಿತು ಕಾಶ್ಮೀರ ಶಾರದಾ ಸಂರಕ್ಷಣಾ ಸಮಿತಿ ಪೂರ್ವ ನಿರ್ಧರಿತವಾಗಿ ವೇಳಾಪಟ್ಟಿಯನ್ನು ಹಾಕಿಕೊಂಡಿದೆ.
ತೀತ್ವಾಲ್‌ಗೆ ಪ್ರಯಾಣದ ಮಾರ್ಗ ಹೀಗಿದೆ :
ಜನವರಿ 24 ರಂದು ಶೃಂಗೇರಿಯಿಂದ ದೇವಸ್ಥಾನದಿಂದ ವಾಹನದಲ್ಲಿ ಯಾತ್ರೆ ಆರಂಭವಾಗಿದ್ದು, ಬೆಂಗಳೂರು, ಮುಂಬೈ, ಅಹಮದಾಬಾದ್, ಜೈಪುರ, ದೆಹಲಿ, ಚಂಡೀಗಢ, ಅಮೃತಸರ, ಜಮ್ಮು ಮತ್ತು ಕುಪ್ವಾರದ ಮೂಲಕ ಯಾತ್ರೆ ಕೈಗೊಳ್ಳಲಾಗುತ್ತಿದೆ. ಎಲ್ಲಿಯೂ ಕೂಡ ಶೃಂಗೇರಿಯಲ್ಲಿ ಅಂಲಕೃತ ರೂಪದಲ್ಲಿ ಇಡಲಾದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ತೀತ್ವಾಲ್ ದೇವಸ್ಥಾನ ತಲುಪುವ ತನಕ ಹೊರಗೆ ತೆಗೆಯುವ ಪ್ರಶ್ನೆಯೇ ಇಲ್ಲ. ವಸಂತ ನವರಾತ್ರಿಯ ಮೊದಲ ದಿನದಂದು (ಮಾರ್ಚ್ 22) ಕಾಶ್ಮೀರದ ತೀತ್ವಾಲ್ ನಲ್ಲಿ ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು ಎಂದು ಕಾಶ್ಮೀರ ಶಾರದಾ ಸಂರಕ್ಷಣಾ ಸಮಿತಿಯ ಸಂಸ್ಥಾಪಕರಾದ ರವೀಂದ್ರ ಪಂಡಿತ್ ತಿಳಿಸಿದ್ದಾರೆ.