ಬೆಂಗಳೂರು, ಜ.24 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ವ್ಯಕ್ತಿಯೊಬ್ಬ ಹಣವನ್ನು ಕೆ.ಆರ್.ಮಾರ್ಕೇಟ್ ಫ್ಲೈಓವರ್ ಮೇಲಿಂದ ಕಂತೆ ಕಂತೆ ನೋಟನ್ನು ಕೆಳಗೆ ಎಸೆದು ಎಲ್ಲರ ಗಮನ ಸೆಳೆದಿದ್ದಾನೆ. ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಮೈಸೂರು ರಸ್ತೆ ಫ್ಲೈಓವರ್ ಮೇಲೆ ಹೋಂಡಾ ಆಕ್ಟೀವಾ ಟೂವೀಲರ್ ಗಾಡಿ ನಿಲ್ಲಿಸಿ, ಬ್ಯಾಗ್ ನಿಂದ ಏಕಾ ಏಕಿ ನೋಟು ತೆಗೆದು ಕೆಳಗೆ ಓಡಾಡುತ್ತಿದ್ದ ಜನರ ಮೇಲೆ ಹಣವನ್ನು ಎಸೆದಿದ್ದರಿಂದ ಕೆ.ಆರ್.ಮಾರ್ಕೇಟ್ ಸರ್ಕಲ್ ಬಳಿ ಓಡಾಡುತ್ತಿದ್ದ ಸಾರ್ವಜನಿಕರು ಮುತ್ತಿಕೊಂಡು ಮೇಲಿಂದ ಬೀಳುತ್ತಿದ್ದ ಹಣವನ್ನು ಹೆಕ್ಕಲು ಜಮಾಯಿಸಿದ್ದರು.
ಈ ರೀತಿ ಕೋಟ್ ಹಾಕಿಕೊಂಡು ಬಂದು ಬ್ಯಾಗ್ ನಿಂದ 10, 20 ಹಾಗೂ 50 ರೂ. ನೋಟನ್ನು ಎಸೆಯುತ್ತಿದ್ದ ಈ ವ್ಯಕ್ತಿ ತನ್ನ ಕುತ್ತಿಗೆಗೆ ದೊಡ್ಡ ಗಡಿಯಾರವನ್ನು ಹಾಕಿಕೊಂಡಿದ್ದ. ‘ತನಗೆ ಜೀವನದಲ್ಲಿ ಜಿಗುಪ್ಸೆ ಬಂದಿದೆ’ ಎಂದು ಹೇಳುತ್ತಾ ಹಣವನ್ನು ಬ್ಯಾಗಿನಿಂದ ಎತ್ತಿ ಎತ್ತಿ ಜನರತ್ತ ತೂರಿಬಿಡುತ್ತಿದ್ದ. ಈತ ಹಣ ಎಸೆಯುತ್ತಿದ್ದಿದ್ದನ್ನು, ಈತನ ಪಕ್ಕದಲ್ಲಿದ್ದ ಈತನ ಸ್ನೇಹಿತ ಅವುಗಳನ್ನೆಲ್ಲಾ ರೆಕಾರ್ಡ್ ಮಾಡುತ್ತಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಫ್ಲೈಓವರ್ ಕೆಳಗಿದ್ದ ಪೂಲೀಸರು ಈ ಘಟನೆಯನ್ನು ಕಂಡು ಎಚ್ಚೆತ್ತುಕೊಳ್ಳುತ್ತಿದ್ದಂತೆ ಹಣ ಎಸೆಯುತ್ತಿದ್ದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಈತನನ್ನು ಅರುಣ್ ಎಂದು ಗುರುತಿಸಲಾಗಿದೆ. ಫೇಸ್ ಬುಕ್ ನಲ್ಲಿ ಖಾತೆ ಹೊಂದಿರುವ ಈತ, ತನ್ನದು ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯಿದ್ದು, ತಾನೊಬ್ಬ ಮಾರ್ಕೆಟಿಂಗ್ ತಜ್ಞನೆಂದು ಬರೆದುಕೊಂಡಿದ್ದಾನೆ.
ಈ ಕುರಿತಂತೆ ಟಿವಿ ಮಾಧ್ಯಮಗಳಿಗೆ ಪ್ರತ್ರಿಕ್ರಿಯಿಸಿರೋ ಅರಣ್. ‘ತನ್ನ ಈ ನಡುವಳಿಕೆಗೆ ನಿಖರವಾದ ಕಾರಣವನ್ನು ಮಾತ್ರ ಬಾಯ್ಬಿಟ್ಟು ಹೇಳಿಲ್ಲ. ತಾನು ಮಾಡಿರುವ ಈ ಕಾರ್ಯದಲ್ಲಿ ಒಳ್ಳೆಯ ಸಂದೇಶವಿದೆ. ನಾನು ರೀಲ್ಸ್ ಗೋಸ್ಕರ ಅಥವಾ ಪ್ರಚಾರಕ್ಕೋಸ್ಕರ ಇವನ್ನೆಲ್ಲಾ ಮಾಡಿಲ್ಲ. ಸ್ವಲ್ಪ ಟೈಮ್ ಕೊಡಿ. ಎಲ್ಲವನ್ನು ಹೇಳುತ್ತೇನೆ.’ ಎಂದಷ್ಟೇ ಹೇಳಿದ್ದಾನೆ.
ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ಹಣ ಎಸೆಯುವುದು ಸರಿಯಲ್ಲ. ಹೀಗೆ ಏಕಾ ಏಕಿ ಹಣವನ್ನು ಎಸೆಯುವ ಬದಲು ಭಿಕ್ಷುಕರಿಗೋ ಅಥವಾ ಬಡವರಿಗೋ ಆತ ಹಣವನ್ನು ಕೈಗೆ ಕೊಟ್ಟು ಸಹಾಯ ಮಾಡಬಹುದಿತ್ತಲ್ಲ. ತಾನು ಹಣ ಎಸೆಯುವ ವಿಡಿಯೋವನ್ನು ಬೇರೊಬ್ಬರಿಂದ ಮಾಡಿಸಿ, ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿ ಜನಪ್ರಿಯತೆ, ಪ್ರಚಾರ ಮಾಡಲು ಹೂಡಿದ ತಂತ್ರವೇ? ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.