ಬೆಂಗಳೂರು, ಜ.22 www.bengaluruwire.com : ನಗರದಲ್ಲಿ ಈಗಾಗಲೇ ಮೂರು ವರ್ಷಗಳ ಹಿಂದೆಯೇ ಆಗಬೇಕಿದ್ದ ಮರಗಣತಿಗೆ ಪೂರ್ವಭಾವಿಯಾಗಿ ಪೈಲೆಟ್ ಯೋಜನೆ ಎರಡು ವಾರ್ಡ್ ಗಳಲ್ಲಿ ಡಿಸೆಂಬರ್ ನಿಂದ ಆರಂಭವಾಗಿದೆ. ಆದರೂ ಪರೀಕ್ಷೆ ಹಂತದಲ್ಲಿರುವ ಟ್ರೀ ಆಪ್ ನಲ್ಲಿನ ತಾಂತ್ರಿಕ ದೋಷದ ಕಾರಣ ಪೈಲೆಟ್ ಯೋಜನೆ ಕಾರ್ಯಕ್ಕೆ ತೊಡಕಾಗಿದೆ.
ಹಸಿರು ಹೊದಿಕೆ ಸಂರಕ್ಷಣೆ ದೃಷ್ಟಿಯಿಂದ ಅತಿ ಮುಖ್ಯವಾಗಿರುವ ಬಹು ನಿರೀಕ್ಷಿತ ಮರಗಳ ಗಣತಿ (Tree Census) ಕಾರ್ಯದ ಪೈಲೆಟ್ ಯೋಜನೆ ಮಲ್ಲೇಶ್ವರ ಮತ್ತು ಮಹದೇವಪುರದ ಎಇಸಿಎಸ್ ಲೇಔಟ್ ವಾರ್ಡ್ ಗಳಲ್ಲಿ ಡಿಸೆಂಬರ್ ನಿಂದ ಆರಂಭವಾಗಿದೆ. ಆದರೆ ಬಿಬಿಎಂಪಿಯ ಅರಣ್ಯ ವಿಭಾಗವು ಟೆಂಡರ್ ಕರೆದು ಮಾರ್ಚ್ ವೇಳೆಗೆ ಮರ ಗಣತಿ ಕಾರ್ಯ ಆರಂಭಿಸಲು ನಿರ್ಧರಿಸಿದೆ. ಆದರೆ ಗಣತಿ ಕಾರ್ಯಕ್ಕೆ ಅಗತ್ಯವಾದ ಟ್ರೀ ಆಂಡ್ರಾಯ್ಡ್ ಆಪ್ ಇನ್ನೂ ಪೂರ್ಣ ರೂಪದಲ್ಲಿ ಸಿದ್ಧವಾಗದ ಕಾರಣ ಮರಗಣತಿ ಕಾರ್ಯ ಮತ್ತೆ ವಿಳಂಬವಾಗುವ ಸಾಧ್ಯತೆಯಿದೆ.
ಕೆಎಸ್ ಆರ್ ಎಸ್ಎಸಿ ನಿರ್ಮಾಣದ ಆಪ್ ನಲ್ಲಿ ತಾಂತ್ರಿಕ ದೋಷ :
ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಮರಗಣತಿ ಕಾರ್ಯವನ್ನು ಪೈಲೆಟ್ ಯೋಜನೆ ಮೂಲಕ ಮಲ್ಲೇಶ್ವರ ವಾರ್ಡ್ ಹಾಗೂ ಮಹದೇವಪುರದಲ್ಲಿರುವ ಎಇಸಿಎಸ್ ಲೇಔಟ್ ವಾರ್ಡ್ ನಲ್ಲಿ ಡಿಸೆಂಬರ್ ನಲ್ಲಿ ಮರಗಣತಿಯನ್ನು ಡಿಸೆಂಬರ್ ಮೂರನೇ ವಾರದಿಂದ ಆರಂಭಿಸಿದೆ. ಆದರೆ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ (KSRSAC) ನಿರ್ಮಿಸಿರುವ ಮರಗಣತಿ ಆಪ್ ಆಗಾಗ ಹ್ಯಾಂಗ್ ಹಾಗೂ ದಾಖಲಿಸಿದ ಮಾಹಿತಿ ಅಂತರ್ಜಾಲದ ಮೂಲಕ ಅಪಲೋಡ್ ಆಗಲು ಸಾಕಷ್ಟು ವಿಳಂಬ ಆಗುತ್ತಿರುವ ಕಾರಣ ಹೆಚ್ಚು ಮರಗಳ ಗಣತಿ ಕಾರ್ಯ ವಿಳಂಬವಾಗುತ್ತಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಪಾಲಿಕೆಯಿಂದ ಈತನಕ 2,053 ಮರಗಣತಿ :
ಡಿಸೆಂಬರ್ ತಿಂಗಳನಲ್ಲಿ ಮೊದಲಿಗೆ ಮಹಾರಾಷ್ಟ್ರದ ಸಸ್ಯಶಾಸ್ತ್ರದ ವಿದ್ಯಾರ್ಥಿಗಳು ಒಂದು ವಾರಗಳ ಕಾಲ ತಾವೇ ಅಭಿವೃದ್ಧಿಪಡಿಸಿದ ಆಪ್ ನಲ್ಲಿ ಮಲ್ಲೇಶ್ವರದಲ್ಲಿ 2,000 ಮರಗಳ ಗಣತಿ ಕಾರ್ಯವನ್ನು ಕೈಗೊಂಡಿದ್ದರು. ಆದರೆ ಕೆಎಸ್ ಆರ್ ಎಸ್ಎಸಿ ಡೆವಲಪ್ ಮಾಡಿದ ಟ್ರೀ ಆಪ್ ನಲ್ಲಿ ಆ ದಾಖಲಿಸಿದ ವಿವರಗಳನ್ನು ವರ್ಗಾಯಿಸಲು ತಾಂತ್ರಿಕ ತೊಂದರೆಯಾಗಿ ಈ ವಿಧ್ಯಾರ್ಥಿಗಳು ತಮ್ಮ ಗಣತಿ ಕಾರ್ಯವನ್ನು ಅಲ್ಲಿಗೇ ಕೈಬಿಟ್ಟರು. ತದನಂತರ ಬಿಬಿಎಂಪಿಯ ಅರಣ್ಯ ವಿಭಾಗದ ಸಿಬ್ಬಂದಿ ಪಾಲಿಕೆಯ ಮರಗಣತಿ ಆಪ್ ಮೂಲಕ ಈತನಕ 453 ಮರಗಳನ್ನು ಗಣತಿ ಮಾಡಿ ಅವುಗಳ ವಿವರಗಳನ್ನು ಹೊಸ ಆಪ್ ನಲ್ಲಿ ದಾಖಲಿಸಿದ್ದಾರೆ. ಹಿಂದೆ ವಿದ್ಯಾರ್ಥಿಗಳು ನಡೆಸಿದ 2 ಸಾವಿರ ಮರಗಳ ಗಣತಿ ಕಾರ್ಯ ನೀರಲ್ಲಿ ಹೋಮ ಮಾಡಿದಂತಾಗಿದೆ. ಇನ್ನು ಮಹದೇವಪುರದ ಎಇಸಿಎಸ್ ಲೇಔಟ್ ವಾರ್ಡ್ ನಲ್ಲಿ ಸದ್ಯ ಡಿ.25ರಿಂದ ಜ್ಯೋತಿ ನಿವಾಸ್ ಕಾಲೇಜಿನ ವಿದ್ಯಾರ್ಥಿಗಳ ಮೂಲಕ ಈವರೆಗೆ 1,600 ಮರಗಳ ಗಣತಿ ಕಾರ್ಯವನ್ನು ಕೈಗೊಳ್ಳಲಾಗಿದೆ.
ಮರಗಣತಿ ಪೈಲೆಟ್ ಯೋಜನೆ ಮೇಲ್ವಿಚಾರಣೆಗೆ ಸಿಬ್ಬಂದಿ ಕೊರತೆ?:
ಕೆಎಸ್ ಆರ್ ಎಸ್ಎಸಿ ಅಭಿವೃದ್ಧಿಪಡಿಸಿದ ಆಪ್ ನಲ್ಲಿ ಮರಗಣತಿ ಆಪ್ ನಲ್ಲಿ ಮಾಹಿತಿ, ಮರದ ಚಿತ್ರ ಎಲ್ಲ ವಿವರಗಳನ್ನು ದಾಖಲಿಸಿ ಅಪಲೋಡ್ ಮಾಡಲು ಕನಿಷ್ಠ 5ರಿಂದ 10 ನಿಮಿಷ ಸಮಯ ಹಿಡಿಯುತ್ತಿದೆ. ಕೆಲವೊಮ್ಮೆ ಆಪ್ ಹ್ಯಾಂಗ್ ಆಗುತ್ತಿದೆ. ಅದು ಅಲ್ಲದೆ ಪಾಲಿಕೆಯ ಅರಣ್ಯ ವಿಭಾಗದಲ್ಲಿ ಸದ್ಯ ಇರುವ ಅಧಿಕಾರಿ ಮತ್ತು ಸಿಬ್ಬಂದಿ ಬೆರಳೆಣಿಕೆಯಷ್ಟಿದೆ. ಮರಗಣತಿಯಂತಹ ಸಂಕೀರ್ಣ ಹಾಗೂ ದೊಡ್ಡ ಯೋಜನೆಯನ್ನು ಕಾರ್ಯಗತಗೊಳಿಸಲು ಅಗತ್ಯ ಸಿಬ್ಬಂದಿ ಕೊರತೆಯು ಎದುರಾಗಿದೆ. ಸದ್ಯ ಪೈಲೆಟ್ ಯೋಜನೆ ಕಾರ್ಯಗತಗೊಳಿಸಲು ಅರಣ್ಯ ವಿಭಾಗದಲ್ಲಿ ನಿಗಧಿತ ಸಿಬ್ಬಂದಿ ಪೂರ್ಣರೂಪದಲ್ಲಿ ತೊಡಗಿಸಲು ಆಗುತ್ತಿಲ್ಲ.
ಎಂತಹ ಮರಗಳನ್ನು ಮರಗಣತಿ ಮಾಡಲಾಗುತ್ತಿದೆ? :
1.5 ಮೀಟರ್ ಎತ್ತರ, 18 ಸೆಂಟಿಮೀಟರ್ ಸುತ್ತಳತೆ ಹೊಂದಿರುವ ಮರಗಳನ್ನಷ್ಟೇ ಮರ ಗಣತಿ ಮಾಡಲಾಗುತ್ತದೆ. ಸಾಮಾನ್ಯವಾಗಿ ಸಾಮಾನ್ಯ ಎತ್ತರವಿರುವ ವ್ಯಕ್ತಿಯ ಎದೆಯ ಎತ್ತರದಲ್ಲಿ ಅಂದರೆ 1.37 ಸೆಂ.ಮೀ ಎತ್ತರಕ್ಕೆ ಸರಿಯಾಗಿ ಬೆಳೆದಿರುವ ಮರದ ಸುತ್ತಳತೆ ತೆಗೆದುಕೊಳ್ಳಲಾಗುತ್ತದೆ.
ಮರಗಣತಿ ಮಾಡುವ ವಿಧಾನ ಹೇಗೆ? :
ಮರಗಣತಿ ಆಪ್ ನಲ್ಲಿ ವಿವಿಧ ಜಾತಿಯ ಮರಗಳ ವಿವರ, ಸುತ್ತಳತೆ, ಎತ್ತರ, ಮರವಿರುವ ಸ್ಥಳದ ಭೌಗೋಳಿಕ ಸ್ಥಿತಿಗತಿ ದಾಖಲಿಸಲು ಅವಕಾಶವಿರುವಂತೆ ಈ ಮೊದಲೇ ವಿನ್ಯಾಸ ಮಾಡಲಾಗಿದೆ. ಮರವಿರುವ ಸ್ಥಳಕ್ಕೆ ತೆರಳುವ ಬಿಬಿಎಂಪಿ ಅರಣ್ಯ ಸಿಬ್ಬಂದಿ ಅಥವಾ ಕಾರ್ಯಕರ್ತರು, ಮರದ ಫೊಟೋ ಹೊಡೆದು, ಮರಗಳ ಎತ್ತರ, ಸುತ್ತಳತೆ, ಮರದ ಆರೋಗ್ಯ ಸೇರಿದಂತೆ ಮತ್ತಿತರ ವಿವರಗಳನ್ನು ದಾಖಲಿಸುತ್ತಾರೆ. ಇಂತಹ ಗಣತಿಯಾದ ಮರಗಳಿಗೆ, ಅವುಗಳ ಸಂಪೂರ್ಣ ವಿವರ ಹೊಂದಿರುವ ಕ್ಯೂಆರ್ ಕೋಡ್ ಉಬ್ಬು ಚಿತ್ರದ ಅಲ್ಯೂಮಿನಿಯ್ ಶೀಟ್ ಅನ್ನು ಹೊಡೆಯಲಾಗುತ್ತದೆ. ಮರಕ್ಕೆ ಮೊಳೆ ಹೊಡೆದು ಕ್ಯೂ ಆರ್ ಕೋಡ್ ಶೀಟ್ ಹಾಕಲು ಹೈಕೋರ್ಟ್ ಅನುಮತಿ ಕೋರಲಾಗಿದೆ. ಪ್ರಸ್ತುತ ಪೈಲೆಟ್ ಯೋಜನೆಯಲ್ಲಿ ಮರಕ್ಕೆ ದಾರದಿಂದ ಕ್ಯೂ ಆರ್ ಕೋಡ್ ಮಾಹಿತಿಯ ಫಲಕವನ್ನು ಕಟ್ಟಲಾಗುತ್ತಿದೆ. ಎಂದು ಬಿಬಿಎಂಪಿ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ.
ನಗರದಲ್ಲಿ ಈ ತನಕ ಪಾಲಿಕೆಯು ದಶಕಗಳಿಂದ ಲಕ್ಷಾಂತರ ಸಸಿಗಳನ್ನು ನೆಟ್ಟಿದೆ. ಆದರೆ ಎಷ್ಟು ಸಸಿಗಳು ಬೆಳೆದು ಮರಗಳಾಗಿದೆ. ಅದರಲ್ಲಿ ಎಷ್ಟು ಸಸಿಗಳು ಉಳಿದಕೊಂಡಿವೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನು ಹೊಂದಿಲ್ಲ. ಸಿಲಿಕಾನ್ ಸಿಟಿಯಲ್ಲಿ ವೈವಿಧ್ಯಮಯ ರೀತಿಯ ಮರಗಳಿವೆ. ಕಾಲಾಂತರದಲ್ಲಿ ಬೆಂಗಳೂರಿನ ಅಭಿವೃದ್ಧಿ, ಮೂಲಸೌಕರ್ಯ ಕಲ್ಪಿಸಲು ಸಾವಿರಾರು ಮರಗಳಿಗೆ ಕೊಡಲಿಪೆಟ್ಟು ಬಿದ್ದು ಧರಾಶಾಹಿಯಾಗಿದೆ. ಆದರೆ ನಮ್ಮಲ್ಲಿ ಬಲಯುತವಾದ ಮರಗಳೆಷ್ಟು? ಯಾವ್ಯಾವ ಭಾಗದಲ್ಲಿ ಯಾವ ರೀತಿಯ ಮರಗಳಿವೆ? ಅವುಗಳ ಸ್ಥಿತಿಗತಿಗಳೇನು? ಇವುಗಳೆಲ್ಲ ಮಾಹಿತಿಯನ್ನು ವೈಜ್ಞಾನಿಕವಾಗಿ ಗಣತಿ ಮಾಡುವ ನಿಟ್ಟಿನಲ್ಲಿ ಮರ ಗಣತಿ ಅತಿ ಅಗತ್ಯವಾಗಿದೆ.
ಈ ಹಿಂದೆ ಮರ ಗಣತಿ ಪ್ರಾರಂಭಿಸಲು ತಯಾರಿಸಲಾದ ಆಂಡ್ರಾಯ್ಡ್ ಆಪ್ ಗೆ ಕೆಲವೊಂದು ಬದಲಾವಣೆ ತಂದು, ಇಂಗ್ಲಿಷ್ ನಲ್ಲಷ್ಟೇ ಇದ್ದ ಆಪ್ ಅನ್ನು ಕನ್ನಡ ಭಾಷೆಯಲ್ಲೂ ಲಭ್ಯವಾಗುವಂತೆ ಹಾಗೂ ಜನ ಬಳಕೆಗೆ ಯೋಗ್ಯವಾಗುವ ನಿಟ್ಟಿನಲ್ಲಿ ಆಪ್ ಅಭಿವೃದ್ಧಿಪಡಿಸುವ ಕಾರ್ಯ ಮುಗಿದಿದ್ದು, ಆಪ್ ಪರೀಕ್ಷಾ ಹಂತದಲ್ಲಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನಿಂದ ಮರಗಣತಿ ಕಾರ್ಯ ಆರಂಭ? :
“ಮರಗಣತಿ ಕಾರ್ಯಕ್ಕೆ ಟೆಂಡರ್ ಕರೆಯುವ ಮುನ್ನ ಮರಗಣತಿ ಆಪ್ ಅಭಿವೃದ್ಧಿಪಡಿಸಿದ್ದು, ಪರೀಕ್ಷೆಗಳು ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ಇಂಗ್ಲಿಷ್ ಹಾಗೂ ಕನ್ನಡದಲ್ಲೂ ಆಪನ್ನು ಡೆವಲಪ್ ಮಾಡಿದೆ. ಗಣತಿ ಬಗ್ಗೆ ವಿಶ್ವದ ಬೇರೆ ಭಾಗಗಳಲ್ಲಿನ ಉತ್ತಮ ಅಂಶವನ್ನು ಅಳವಡಿಸಿಕೊಳ್ಳಲಾಗುವುದು.ಇದರ ಜೊತೆ ಜೊತೆಗೆ ಮರ ಗಣತಿ ಕಾರ್ಯ ನಡೆಸಲು ಅಂದಾಜು ದರ ಪಟ್ಟಿಯನ್ನು ಆಹ್ವಾನಿಸಲಾಗಿತ್ತು. ಹಲವು ಏಜನ್ಸಿಗಳು ದರಪಟ್ಟಿಯನ್ನು ಸಲ್ಲಿಸಿವೆ. ಇವುಗಳಲ್ಲಿ ಕಡಿಮೆ ವೆಚ್ಚದಲ್ಲಿ, ಗುಣಮಟ್ಟದ ಕಾರ್ಯ ಕೈಗೊಳ್ಳುವಂತಹ ಅಂಶಗಳನ್ನು ಪರಿಗಣಿಸಿ ಟೆಂಡರ್ ತಯಾರಿಸುತ್ತೇವೆ. ಬಳಿಕ ಟೆಂಡರ್ ಆಹ್ವಾನಿಸಿ ಅರ್ಹ ಸಂಸ್ಥೆಗೆ ಮರಗಣತಿ ಕಾರ್ಯ ನೀಡುತ್ತೇವೆ. ಮಾರ್ಚ್ ವೇಳೆಗೆ ಬೆಂಗಳೂರಿನಲ್ಲಿ ಮರಗಣತಿ ಆರಂಭವಾಗಲಿದೆ.”
– ಸರಿನಾ ಸಿಗ್ಗಲಿಗರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ
ವಿಧಾನಸಭಾ ಚುನಾವಣೆ ಘೋಷಣೆಯಾದಲ್ಲಿ ಗಣತಿಗೆ ಗ್ರಹಣ ಸಾಧ್ಯತೆ? :
2019ರಲ್ಲಿ ಹೈಕೋರ್ಟ್ ನಗರದಲ್ಲಿ ಮರಗಳ ಗಣತಿ ನಡೆಸುವಂತೆ ಆದೇಶಿಸಿತ್ತು. ಆ ಬಳಿಕ ಪಾಲಿಕೆಯು ಭಾರತೀಯ ಮರ ವಿಜ್ಞಾನ (Indian Wood Science)ಸಂಸ್ಥೆ ಯ ಮೂಲಕ ಮರ ಗಣತಿ ಮಾಡುವುದಾಗಿ ತಿಳಿಸಿ 2 ವರ್ಷಗಳ ಕಾಲ ವಿಳಂಬ ಮಾಡಿತ್ತು. ಆದಾದ ನಂತರ ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯ (GKVK) ಒಂದು ವರ್ಷಗಳ ಕಾಲ ಅಧ್ಯಯನ ನಡೆಸಿ ಮರಗಣತಿ ಆರಂಭಿಸುವುದಾಗಿ ತಿಳಿಸಿತ್ತು. ಆದರೆ ಸಾಧ್ಯವಾಗಲಿಲ್ಲ. ಇದರಿಂದ ಮೂರು ವರ್ಷಗಳ ಕಾಲ ಗಣತಿ ಆರಂಭಿಸಲು ವಿಳಂಬವಾಯಿತು. ಈಗ ಕೆಎಸ್ ಆರ್ ಎಸ್ಎಸಿ ಡೆವಲಪ್ ಮಾಡಿದ ಟ್ರೀ ಆಪ್ ನಲ್ಲಿನ ತಾಂತ್ರಿಕ ದೋಷಗಳನ್ನು ಆದಷ್ಟು ಶೀಘ್ರವಾಗಿ ನಿವಾರಿಸಿ ಮರ ಗಣತಿ ಕಾರ್ಯ ಆರಂಭಿಸಬೇಕಿದೆ. ತಡವಾದರೆ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಅಧಿಕಾರಿ, ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ಬಳಸಿದರೆ ಮರ ಗಣತಿ ಕಾರ್ಯದ ಉಸ್ತುವಾರಿ ಕೆಲಸಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ.