ಬೆಂಗಳೂರು, ಜ.21 www.bengaluruwire.com : ಕೇಂದ್ರ ಸರ್ಕಾರದ ಹುದ್ದೆಯ ನಿರೀಕ್ಷೆಯಲ್ಲಿರುವ ಕನ್ನಡಿಗರಿಗೆ ಸಿಹಿ ಸುದ್ದಿ. ಸಿಬ್ಬಂದಿ ನೇಮಕಾತಿ ಅಯೋಗ (ಎಸ್‌ಎಸ್‌ಸಿ- SSC) ಇದೇ ಪ್ರಥಮ ಬಾರಿಗೆ ಕನ್ನಡ, ಕೊಂಕಣಿ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ಎಸ್ಎಸ್ ಸಿಯು ಒಟ್ಟು 11,409 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಎಸ್‌ಎಸ್‌ಸಿ ಪರೀಕ್ಷೆಗಳನ್ನು ಇಲ್ಲಿಯವರೆಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶವಿತ್ತು. ಇದರಿಂದ ಹಿಂದಿ ಭಾಷಿಗರೇ ಹೆಚ್ಚಿನ ಸಂಖ್ಯೆ ಯಲ್ಲಿ ಕೇಂದ್ರ ಸರ್ಕಾರದ ಸೇವೆಗೆ ಆಯ್ಕೆಯಾಗುತ್ತಿದ್ದರು. ಹಾಗಾಗಿ, ಇದುವರೆಗೂ ಕೇಂದ್ರ ಸರ್ಕಾರದ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹಿಂದಿ ಭಾಷಿಕರ ಪ್ರಾಬಲ್ಯವಿತ್ತು. ಕನ್ನಡಿಗರ ಧ್ವನಿ ಕ್ಷೀಣಿಸಿತ್ತು. ಆದರೀಗ ಸಿಬ್ಬಂದಿ ನೇಮಕಾತಿ ಆಯೋಗ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದು ಹುದ್ದೆಯ ಆಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
ಎಸ್.ಎಸ್‌ಸಿ 10,880 ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್- Multi Tasking Staff) ಹಾಗೂ ಸುಂಕ ಮತ್ತು ಪರೋಕ್ಷ ತೆರಿಗೆಯ ಕೇಂದ್ರೀಯ ಮಂಡಳಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊದಲ್ಲಿ ಖಾಲಿ ಇರುವ 529 ಹವಾಲ್ದಾರ್ (Hawaldar) ಸೇರಿ 11,409 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಪರೀಕ್ಷೆ ತೆಗೆದುಕೊಳ್ಳುವ ರಾಜ್ಯದ ಅಭ್ಯರ್ಥಿಗಳು ಕನ್ನಡವನ್ನು ಆಯ್ಕೆ ಮಾಡಿಕೊಳ್ಳಲು 08 ಕೋಡ್ ಬಳಸಬಹುದು. ಕಂಪ್ಯೂಟರ್ ಆಧಾರಿತ ಪರೀಕ್ಷೆಯು (ಪತ್ರಿಕೆ ಒಂದು) ವಸ್ತುನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪತ್ರಿಕೆಯನ್ನು ಅಭ್ಯರ್ಥಿಗಳು ತಮಗೆ ಅನುಕೂಲವಾಗುವ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಬಹುದು. ಆದರೆ ಎರಡನೇ ಪತ್ರಿಕೆಯನ್ನು ಅಭ್ಯರ್ಥಿಗಳು ಹಿಂದಿ, ಇಂಗ್ಲಿಷ್ ಅಲ್ಲದೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಯಾವುದಾದರೂ ಒಂದು ಭಾಷೆಯಲ್ಲಿ ಬರೆಯಬಹುದು. 50 ಅಂಕಗಳಿಗೆ ವಿವರಣಾತ್ಮಕ ಅಥವಾ ಪ್ರಬಂಧ ಮಾದರಿಯಲ್ಲಿ ಉತ್ತರಿಸಬೇಕಾಗುತ್ತದೆ. ಇದಕ್ಕೆ 45 ನಿಮಿಷಗಳ ಅವಕಾಶವಿರುತ್ತದೆ ಎಂದು ಎಸ್ ಎಸ್ ಸಿ ತಿಳಿಸಿದೆ.
ರಾಜ್ಯದ ಎಲ್ಲೆಲ್ಲಿವೆ ಪರೀಕ್ಷಾ ಕೇಂದ್ರಗಳು? : ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಎಸ್ ಎಸ್ ಸಿಯ ಪರೀಕ್ಷಾ ಕೇಂದ್ರಗಳಿವೆ. ಹುದ್ದೆ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ಫೆ.17 ಕೊನೆಯ ದಿನವಾಗಿದೆ. ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಯಲಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಸಹಾಯವಾಣಿ 9483862020, ವೆಬ್ ಸೈಟ್ : https://ssc.nic.in ಸಂಪರ್ಕಿಸಬಹುದು.
ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದಕ್ಕೆ ರಾಜ್ಯದ ಅಭ್ಯರ್ಥಿಗಳು ಸ್ವಾಗತಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಕನ್ನಡಿಗರನ್ನೇ ಆಯ್ಕೆ ಮಾಡಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಪ್ರಾದೇಶಿಕ ಮೀಸಲಾತಿ ಕಲ್ಪಿಸಬೇಕು. ಆಗ ಇಲ್ಲಿಯ ಕನ್ನಡಿಗರಿಗೆ ರಾಜ್ಯದಲ್ಲಿಯೇ ಕೆಲಸ ನಿರ್ವಹಿಸಲು ಅನುಕೂಲವಾಗುತ್ತದೆ ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಎಸ್ ಎಸ್ ಸಿ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತ :
‘ಎಸ್ಎಸ್ ಸಿ ಆಯೋಗ ಮುಂದಿನ ಏಪ್ರಿಲ್ ತಿಂಗಳಿನಲ್ಲಿ 11,409 ಹುದ್ದೆಗಳಿಗೆ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಗೌರವದಿಂದ ಸ್ವಾಗತಿಸುತ್ತದೆ. ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾನೂನು ಕ್ರಮ ಸೇರಿದಂತೆ ನಿರಂತರ ಹೋರಾಟ ನಡಸುತ್ತಾ ಬಂದಿದ್ದು ಪರಿಷತ್ತಿನ ಕಾನೂನು ಹೋರಾಟಕ್ಕೆ ಸಂದ ಜಯವಾಗಿದೆ. ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಪಡೆಯಲು ಬಯಸುವ ಕನ್ನಡಿಗರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯುವುದು ಕಷ್ಟವಾಗುತ್ತಿತ್ತು. ಈ ಸಮಸ್ಯೆ ಈಗ ನಿವಾರಣೆಯಾಗಿದೆ.’
– ನಾಡೋಜ ಡಾ.ಮಹೇಶ್ ಜೋಶಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು