ಬೆಂಗಳೂರು, ಜ.21 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಡಾ.ಕೆ.ಶಿವರಾಮಕಾರಂತ ಬಡಾವಣೆ (Dr.K.ShivaramaKarnath Layout)ಗೆ ಅಧಿಸೂಚಿಸಿರುವ ಜಮೀನಿನಲ್ಲಿ ನಿರ್ಮಾಣವಾಗಿರುವ ಕಟ್ಟಡಗಳ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಜ.25ರಂದು ಕೊನೆಯ ದಿನವಾಗಿರುತ್ತದೆ. ತದನಂತರ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರಾಧಿಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಡಿಎ ಡಾ.ಶಿವರಾಮ ಕಾರಂತ ಬಡಾವಣೆ ನಿರ್ಮಿಸಲು ಈ ಹಿಂದೆ ಒಟ್ಟು 3546 ಎಕರೆ 12 ಗುಂಟೆ ಜಮೀನಿನ ಮಧ್ಯಭಾಗದಲ್ಲಿ ಬರುವ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಯಲ್ಲಿ ಕೈಬಿಟ್ಟು ಹೋಗಿರುವ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರವು 2022ರ ಆಗಸ್ಟ್ 23ರಂದು ಕರ್ನಾಟಕ ಗೆಜೆಟ್ ನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.
ಅದರಂತೆ ಸೋಮಶೆಟ್ಟಿಹಳ್ಳಿ, ಲಕ್ಷ್ಮಿಪುರ, ಗಾಣಿಗರಹಳ್ಳಿ, ಬ್ಯಾಲಕೆರೆ, ಕಾಳತಮ್ಮನಹಳ್ಳಿ, ಗುಣಿಅಗ್ರಹಾರ, ಮೇಡಿ ಅಗ್ರಹಾರ, ಆವಲಹಳ್ಳಿ, ರಾಮಗೊಂಡನಹಳ್ಳಿ, ಕೆಂಪನಹಳ್ಳಿ, ವೀರಸಾಗರ, ದೊಡ್ಡಬೆಟ್ಟಹಳ್ಳಿ, ಶ್ಯಾಮರಾಜಪುರದ 14 ಗ್ರಾಮಗಳ ಒಟ್ಟು 245 ಎಕರೆ 16 ಗುಂಟೆ ಜಮೀನಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಈ ಹಿನ್ನಲೆಯಲ್ಲಿ, ಈ ಪ್ರದೇಶದಲ್ಲಿರುವ ಅರ್ಹ ಕಟ್ಟಡಗಳ ಮಾಲೀಕರು ತಮ್ಮ ಕಟ್ಟಡಗಳ ಸಕ್ರಮೀಕರಣಕ್ಕಾಗಿ ಬಿಡಿಎ ಕೇಂದ್ರ ಕಚೇರಿಯಲ್ಲಿ ತರೆಯಲಾಗಿರುವ ಸಹಾಯ ಕೇಂದ್ರದಲ್ಲಿ ಜ.25ರ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
2,600 ಕೋಟಿ ರೂ. ವೆಚ್ಚದಲ್ಲಿ ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಡಿ.15ರಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಭೂಮಿ ಪೂಜೆ ನೆರವೇರಿಸಿದ್ದರು. ಈ ಮೂಲಕ ಯಲಹಂಕ ವಿಧಾನಸಭಾ ಕ್ಷೇತ್ರದ 17 ಗ್ರಾಮಗಳ 3546 ಎಕರೆ ಪ್ರದೇಶದಲ್ಲಿ ಸುಮಾರು 22 ಸಾವಿರ ನಿವೇಶನಗಳನ್ನು ನಿರ್ಮಾಣ ಮಾಡಿ ರೈತರು ಹಾಗೂ ಸಾರ್ವಜನಿಕರಿಗೆ ಹಂಚಿಕೆ ಮಾಡುವ ಗುರಿಯನ್ನು ಬಿಡಿಎ ಹೊಂದಿದೆ. ಆ ಸಂದರ್ಭದಲ್ಲಿ ಮಾತನಾಡಿದ್ದ ಎಸ್.ಆರ್.ವಿಶ್ವನಾಥ್ 18 ತಿಂಗಳಲ್ಲಿ ಮನೆ ನಿರ್ಮಾಣಕ್ಕೆ ಸಹಕಾರಿಯಾಗುವ ರೀತಿಯಲ್ಲಿ ಕಾಮಗಾರಿ ಪೂರ್ಣ ಮಾಡಲು ನಿರ್ಧರಿಸಲಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು 9 ಪ್ಯಾಕೇಜ್ ಗಳನ್ನು ಮಾಡಲಾಗಿದ್ದು, ಏಕ ಕಾಲಕ್ಕೆ ಎಲ್ಲಾ ಪ್ಯಾಕೇಜ್ ಕಾಮಗಾರಿ ನಡೆಸುಲಾಗುತ್ತದೆ ಎಂದಿದ್ದರು.
ಈ ಬಡಾವಣೆಯು ಹಲವು ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಬಡಾವಣೆಯಾಗಿರಲಿದ್ದು, ಬೆಂಗಳೂರು ನಗರದಲ್ಲಿರುವ ಇತರೆ ಬಡಾವಣೆಗಳಿಗಿಂತ ಸುಸಜ್ಜಿತವಾಗಿ ಮತ್ತು ಮಾದರಿ ಬಡಾವಣೆ ಆಗಲಿದೆ ಎಂದು ಹೇಳಿದ್ದರು.