ಬೆಂಗಳೂರು, ಜ.21 www.bengaluruwire.com : ರಾಜಧಾನಿ ಬೆಂಗಳೂರು, ಭಾರತದಲ್ಲೇ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿಯ ಜನರಿಗೆ ನೆಲೆಯೂರಲು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಪರಿಸರಕ್ಕೆ ಹಾನಿಯುಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ನಗರದಾದ್ಯಂತ ಹೆಚ್ಚು ಸಸಿಗಳನ್ನು ನೆಟ್ಟು ಅವು ಬೆಳೆಯುವವರೆಗೆ ಪೋಷಿಸಬೇಕೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ನಗರದ ಜನತೆಗೆ ಕರೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಕೋಟಿ ವೃಕ್ಷ ಸೈನ್ಯವು ಹಮ್ಮಿಕೊಂಡಿರುವ ಬಿಬಿಎಂಪಿ ಕೋಟಿ ವೃಕ್ಷ ಅಭಿಯಾನ-2023ಕ್ಕೆ ಪಾಲಿಕೆಯ ಕೇಂದ್ರ ಕಛೇರಿ ಡಾ. ರಾಜ್ ಕುಮಾರ್ ಗಾಜಿನ ಮನೆಯ ಮುಂಭಾಗ ಸಾಂಕೇತಿಕವಾಗಿ ಶನಿವಾರ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಅರಣ್ಯ ಇಲಾಖೆ, ಪಾಲಿಕೆಯ ಅರಣ್ಯ ವಿಭಾಗವು ಸಮನ್ವಯ ಮಾಡಿಕೊಂಡು ನಗರದಾದ್ಯಂತ ಯತೇಚ್ಛವಾಗಿ ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಅದರ ಜೊತೆಗೆ ಕೋಟಿ ವೃಕ್ಷ ಸೈನ್ಯದ ವತಿಯಿಂದಲೂ ನಗರದ ಕೆರೆಗಳು, ಉದ್ಯಾನವನಗಳು, ಮೀಸಲು ಅರಣ್ಯ ಹಾಗೂ ಇನ್ನಿತರೆ ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನೆಡುತ್ತಾರೆ. ಅದನ್ನು 3 ವರ್ಷಗಳ ಕಾಲ ಆ ಸಂಸ್ಥೆಯವರು ಪೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಕಳೆದ 3 ವರ್ಷಗಳಿಂದ ಕೋವಿಡ್ ಇದ್ದ ಪರಿಣಾಮ ನಗರದಲ್ಲಿ ಹೆಚ್ಚಾಗಿ ಸಸಿಗಳನ್ನು ನೆಡಲು ಸಾಧ್ಯವಾಗಿಲ್ಲ. ಪ್ರಸಕ್ತ ಸಾಲಿನಿಂದ ಸಸಿಗಳನ್ನು ನೆಡುವ ಪ್ರಮಾಣವನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಂಡು ಹೋಗುತ್ತಾ ನಗರಲ್ಲಿ ಹೆಚ್ಚು ಸಸಿಗಳನ್ನು ಬೆಳೆಸಲು ಕ್ರಮ ವಹಸಿಬೇಕು. ಅದಕ್ಕಾಗಿ ನಗರದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ನಾಗರಿಕರು ಹಾಗೂ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಅವುಗಳನ್ನು ಬೆಳೆಯುವವರೆಗೆ ಪೋಷಣೆ ಮಾಡಬೇಕು. ಈ ವರ್ಷ ಬಿಬಿಎಂಪಿಯು ನಗರದಾದ್ಯಂತ ಒಟ್ಟು 2 ಲಕ್ಷ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ನಗರದಲ್ಲಿ ಸದ್ಯ ಇರುವ ಮರಗಳ ಮೇಲೆ ಬಿತ್ತಿಪತ್ರಗಳನ್ನು ಅಂಟಿಸುವುದು, ಮೊಳೆ ಹೊಡೆಯುವುದು, ಮರಗಳನ್ನು ನಾಶ ಪಡಿಸಲು ಆಸಿಡ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಅಂತಹ ಘಟನೆಗಳು ಕಂಡುಬಂದಲ್ಲಿ ಅದನ್ನು ಕೂಡಲೆ ತಡೆಯುವ ಕೆಲಸ ಮಾಡಬೇಕು. ನಗರದಲ್ಲಿ ಹಸಿರೀಕರಣವನ್ನು ವೃದ್ಧಿಸುವ ಕೆಲಸ ಮಾಡಬೇಕು. ಇದರಿಂದ ವಾಯು ಮಾಲೀನ್ಯ ಕಡಿಮೆಯಾಗಿ ನಾಗರಿಕರಿಗೆ ಉತ್ತಮ ಆಮ್ಲಜನಕ ಸಿಗಲಿದೆ ಎಂದು ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಸರಿನಾ ಸಿಕ್ಕಲಿಗರ್ ರವರು ಮಾತನಾಡಿ, ನಗರದಲ್ಲಿ ಸಾಮಾನ್ಯ ಕಾರಣಗಳಿಗಾಗಿ ಮರಗಳನ್ನು ಕಡಿಯುವಂತೆ ಸಾಕಷ್ಟು ಅರ್ಜಿಗಳು ಬರುತ್ತವೆ. ಮರಗಳನ್ನು ಕಡಿಯುತ್ತಾ ಹೋದರೆ ಪರಿಸರ ಹಾಳಾಗುತ್ತದೆ. ಹಾಗಾಗಿ ಮರಗಳನ್ನು ಉಳಿಸುವುದು ಹಾಗೂ ಹೆಚ್ಚಾಗಿ ಬೆಳೆಸುವುದರಿಂದ ಪರಿಸರ ಉಳಿಯುತ್ತದೆ. ಈ ಸಂಬಂಧ ನಾಗರಿಕರಿಗೆ, ಸಸಿಗಳನ್ನು ನೆಡುವ ಹಾಗೂ ಮರಗಳನ್ನು ಕಾಪಾಡುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ಬೆಂಗಳೂರು ಸಾಕಷ್ಟು ಅಭಿವೃದ್ಧಿ ಯಾಗುತ್ತಿದ್ದು, ಅಭಿವೃದ್ಧಿಯ ಜೊತೆ ಜೊತೆಗೆ ಮರಗಳನ್ನು ಉಳಿಸುವ ಹಾಗೂ ಹೆಚ್ಚು ಸಸಿಗಳನ್ನು ನೆಡುವ ಕೆಲಸ ಮಾಡಬೇಕು. ಇದರಿಂದ ಮಾಲಿನ್ಯವನ್ನು ತಡೆಗಟ್ಟಬಹುದು. ಪಾಲಿಕೆಯ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದ್ದು, ಪ್ರತಿ ವರ್ಷವೂ ಪಾಲಿಕೆಯಿಂದ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತದೆ ಎಂದರು.
ಕೋಟಿ ವೃಕ್ಷ ಸೈನ್ಯದ ವತಿಯಿಂದ ಪಾಲಿಕೆಯ ಎಲ್ಲಾ ವಾರ್ಡ್ ವಾರು ತಂಡಗಳನ್ನು ಮಾಡಿಕೊಂಡು ಸಸಿಗಳನ್ನು ನೆಟ್ಟು 3 ವರ್ಷಗಳ ಕಾಲ ಪೋಷಣೆ ಮಾಡಲಿದ್ದಾರೆ. ಈ ಮೂಲಕ ಬೆಂಗಳೂರು ನಗರವನ್ನು ಮತ್ತೆ ಉದ್ಯಾನ ನಗರಿಯನ್ನಾಗಿ ಮಾಡಲು ಎಲ್ಲಾ ಎನ್.ಜಿ.ಒಗಳು, ನಾಗರಿಕರು ಕೂಡಾ ಕೈ ಜೋಡಿಸಬೇಕೆಂದು ತಿಳಿಸಿದರು.
ಪ್ರಶಂಸನಾ ಪ್ರಮಾಣ ಪತ್ರ ವಿತರಣೆ:
ನಗರದಲ್ಲಿ ಸಸಿ ನೆಡಲು ಪಾಲ್ಗೊಂಡಿರುವಂತಹ ತಂಡಗಳಿಗೆ ಬಿಬಿಎಂಪಿ ವತಿಯಿಂದ ವಿಧಾನಸಭಾ ಕ್ಷೇತ್ರವಾರು ಪ್ರಶಂಸನಾ ಪ್ರಮಾಣ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಈ ವೇಳೆ ವಿಶೇಷ ಆಯುಕ್ತರಾದ ಡಾ. ಆರ್.ಎಲ್ ದೀಪಕ್, ಕೋಟಿ ವೃಕ್ಷ ಸೈನ್ಯದ ಸಂಸ್ಥಾಪಕರಾದ ಸುರಭಿ, ಪಾಲಿಕೆ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.