ಬೆಂಗಳೂರು, ಜ.20, www.bengaluruwire.com : ಸಿರಿಧಾನ್ಯ ಪೇಯ, ವಿವಿಧ ಬಗೆಯ ಚಕ್ಕುಲಿಗಳಂತಹ ಕುರುಕಲು ತಿಂಡಿಗಳು, ವಿಧ ವಿಧವಾದ ಚೈತನ್ಯಯುಕ್ತ ಚಹಾ, ಸಾಂಪ್ರದಾಯಿಕ ಗ್ರಾಮೀಣ ಕರಕುಶಲ ವಸ್ತುಗಳು, ಅಡುಗೆ ಮನೆಯ ಪರಿಕರಗಳು…..ಒಂದಾ ಎರಡಾ?
ಅಬಬ್ಬಾ ಸಾವಯವ ಮತ್ತು ಸಿರಿಧಾನ್ಯ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2023 ಇಂತಹ 300ಕ್ಕೂ ಹೆಚ್ಚು ಮಳಿಗೆಗಳು ದೇಶೀಯ ಆಹಾ ಪದ್ಧತಿಗಳನ್ನು ಪ್ರೋತ್ಸಾಹಿಸಲು ಒಂದೆಡೆ ಸೇರಿವೆ. ಈ ಮೇಳ ಶುಕ್ರವಾರದಿಂದ ಭಾನುವಾರದ ತನಕ ನಗರದ ಅರಮನೆಯ ಮೈದಾನದಲ್ಲಿ ಆಯೋಜಿತವಾಗಿದೆ.
ಕಲಬೆರಕೆ ಆಹಾರ, ರಾಸಾಯನಿಕಯುಕ್ತ ವಿಷಾಹಾರ ಸೇವಿಸುವ ಇಂದಿನ ದಿನಗಳಲ್ಲಿ ಪರಿಫೂರ್ಣ ಹಾಗೂ ಸತ್ವಯುತ ದೇಶಿಯ ಆಹಾರ ಉತ್ಪಾದಿಸುವ ರೈತರು, ಸಂಸ್ಕರಣೆ, ಮಾರಾಟಗಾರರು, ರಫ್ತುದಾರರಿಗೆ ಅವಕಾಶ ಒದಗಿಸುವ ದೃಷ್ಟಿಯಿಂದ ರಾಜ್ಯ ಕೃಷಿ ಇಲಾಖೆಯು ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ-2023 ವಾಣಿಜ್ಯ ಮೇಳಕ್ಕೆ ಇಂದಿನಿಂದ ಚಾಲನೆ ದೊರೆತಿದೆ.
ಕರಕುಶಲ, ಗೃಹ ಬಳಕೆ ವಸ್ತುಗಳು, ದೇಸಿತುಪ್ಪ, ರೆಡಿ ಟು ಈಟ್ ಆಹಾರ ಪದಾರ್ಥಗಳು, ಕ್ಯಾಸ್ಟಿಂಗ್ ಐರನ್ ಪಾತ್ರೆಗಳು, ದೇಶೀಯ ಸೌಂದರ್ಯ ವರ್ಧಕಗಳು, ಕೃಷಿ ಪರಿಕರಗಳು, ಮಡಿಕೆ ಪಾತ್ರೆಗಳು, ಪಾಲೀಷ್ ರಹಿತ ಧಾನ್ಯಗಳು, ಚನ್ನಪಟ್ಟಣದ ಮರದ ಆಟಿಕೆಗಳು, ಬಿದಿರಿನ ಬುಟ್ಟಿ, ದೀಪಗಳು ಹೀಗೆ ತರೇಹವಾರಿ ವಸ್ತುಗಳನ್ನು ಮೇಳದ ಸ್ಟಾಲ್ ಗಳಲ್ಲಿ ನೀವು ನೋಡಬಹುದು ಹಾಗೂ ಖರೀದಿಸಬಹುದು. ಮೊದಲ ದಿನ ಮೇಳದಲ್ಲಿ ಸಾವಿರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ದ್ರೋಣ್‌ನಲ್ಲಿ 5 ನಿಮಿಷದಲ್ಲಿ 1 ಎಕರೆ ಜಮೀನಿಗೆ ರಾಸಾಯನಿಕ ಸಿಂಪಡಣೆ :
ಕರ್ನಾಟಕ ಪೆವಿಲಿಯನ್‌ನಲ್ಲಿನ 3.5 ಲೀಟರ್ ಟೂಸ್ಟ್ರೋಕ್ ಇಂಜಿನ್ ಆರ್ ಪಿ ದ್ರೋಣ್ ಎಲ್ಲರ ಗಮನ ಸೆಳೆದಿದೆ. ರೈತರ ಒಂದು ಎಕರೆ ಜಮೀನಿನಲ್ಲಿ 12 ಲೀ. ರಾಸಾಯನಿಕವನ್ನು ಈ ದ್ರೋಣ್, ಕೇವಲ 5 ನಿಮಿಷದಲ್ಲಿ ಸಿಂಪಡಣೆ ಮಾಡಲಿದೆ. ಸಾಮಾನ್ಯ ರೈತ ತನ್ನ ಜಮೀನಿಗೆ 8 ರಿಂದ 9 ಗಂಟೆ ಸುತ್ತಾಡಿ ರಾಸಾಯನಿಕ ಸಿಂಪಡಿಸಲು ಬರೋಬ್ಬರಿ 200 ಲೀ. ರಾಸಾಯನಿಕ ಬೇಕು. ಆದರೆ ಆರ್.ಪಿ.ದ್ರೋಣ್ ಗರಿಷ್ಠ ಒಂದು ಕಿ.ಮೀ ಎತ್ತರಕ್ಕೆ ಹಾರಿ ರಾಸಾಯನಿಕ ಸಿಂಪಡಿಸಲಿದೆ. ಈ ಯಂತ್ರದ ಬೆಲೆ 12.5 ಲಕ್ಷ ರೂ. ಗಳಾಗಿದೆ. ಮೂಲತಃ ಚೆನ್ನೈ ಮೂಲದ ದಕ್ಷ ಅಗ್ರಿಗೇಟರ್ ಸಂಸ್ಥೆಯು ಈ ದ್ರೋಣ್ ಅನ್ನು ಅಭಿವೃದ್ಧಿಪಡಿಸಿದೆ.
ಸಿರಿಧಾನ್ಯದ ಪಾಸ್ತಾ, ನವಣೆ ಪಿಜ್ಜಾ :
ಕರ್ನಾಟಕ ಪೆವಿಲಿಯನ್ ನಲ್ಲಿನ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸ್ಟಾಲ್ ನಲ್ಲಿ ನವಣೆಯಿಂದ ಮಾಡಿದ ಫಿಜಾ, ಡೋನಟ್, ಸಿರಿಧಾನ್ಯದ ಪಾಸ್ತಾ, ಹಪ್ಪಳ ಮಾದರಿಯ ಖಾಖ್ರಾ ಎಲ್ಲರನ್ನು ಆಕರ್ಷಿಸುತ್ತಿದೆ. ದೇಶದಲ್ಲೆ ಮೊದಲ ಬಾರಿಗೆ ಕೊರಲೆಯ ಹೊಸ ತಳಿ ಎಚ್ ಬಿಆರ್-2 ಅನ್ನು (HBR-2) ರಾಯಚೂರು ಕೃಷಿ ವಿಶ್ವ ವಿದ್ಯಾಲಯ ಅಭಿವೃದ್ಧಿಪಡಿಸಿದೆ. ಹೊಸ ತಳಿಯಲ್ಲಿ ಕಬ್ಬಿಣ, ಜಿಂಕ್, ಕ್ಯಾಲ್ಸಿಯಮ್ ಹಾಗೂ ನಾರಿನಾಂಶ ಹೆಚ್ಚಾಗಿದೆ ಎನ್ನುತ್ತಾರೆ ವಿವಿಯ ತಳಿವರ್ಧಕರಾದ ಡಾ.ಯೋಗೇಶ್.ಎಲ್.ಎನ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಹರ್ಬಲ್ ಡಿಟಾಕ್ಸ್ ಟೀ :
ಚಿಕ್ಕಬಾಣಾವರ ಮೂಲದ ಸ್ಟಾರ್ಟಪ್ ಹೆಕ್ಟಾಪಿ (HEKTAPY) ಮಳಿಗೆಯು ಪರಿಶುದ್ಧ ಮಸಾಲೆ ಪದಾರ್ಥ, ಬಹುವಿಧ ಮೊಳಕೆಯ ಮಲ್ಟಿ ಮಿಲೆಟ್ ಸ್ಪ್ರೌಟ್ಸ್ ಹಾಗೂ ಹರ್ಬಲ್ ಡಿಟಾಕ್ಸ್ ಟೀ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಎಸ್ಪಾರ್ ಇಕೊ ವೆಂಚರ್ಸ್ ಮಳಿಗೆಯಲ್ಲಿ ಮರದಿಂದ ತಯಾರಿಸಿದ ಟೂತ್ ಬ್ರಶ್, ಬಿದಿರಿನ ಸ್ಟ್ರಾ, ಬ್ರಷ್, ಪೆನ್ ಕೊಂಡೊಯ್ಯುವ ಮರದ ಕೊಳವೆಗಳು, ಬಿದಿರಿನ ಇಯರ್ ಬಡ್ಸ್ ಹೀಗೆ ನಾನಾ ಉತ್ಪನ್ನಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ.
ಬೆಳದಿಂಗಳ ಆಶ್ರಯ ಟ್ರಸ್ಟ್ ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ ಬಟ್ಟೆ ಹೂವು, ನೋಡಲು ಥೇಟ್ ನಿಜವಾದ ಹೂವಿನಂತೆ ಭಾಸವಾಗುತ್ತೆ. ಮೇಳಕ್ಕೆ ಭೇಟಿ ನೀಡಿದವರನ್ನು ತನ್ನತ್ತ ಸೆಳೆಯುತ್ತಿದೆ.
ಸಿರಿಧಾನ್ಯ ಮೇಳದಲ್ಲಿ 300 ಮಳಿಗೆಗಳ ಸ್ಥಾಪನೆ :
ಸಿರಿಧಾನ್ಯ ಮೇಳದಲ್ಲಿ ಸಿರಿಧಾನ್ಯ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಪರಿಸರ ಸ್ನೇಹಿ ಉತ್ಪನ್ನ- ದೇಸಿ ಬೀಜ ಸಂರಕ್ಷಣೆ, ನವೀಕರಿಸಬಹುದಾದ ಶಕ್ತಿ, ಜಾಗತಿಕ ಮಹತ್ವವುಳ್ಳ ಉತ್ಪನ್ನಗಳು ಸೇರಿದಂತೆ 300 ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಕನ್ನಡದಲ್ಲಿ ರೈತ ಕಾರ್ಯಗಾರ, 15 ಸಿರಿಧಾನ್ಯ ಮತ್ತು ಆಹಾರ ಮಳಿಗೆಗಳಿದ್ದು, ಮೇಳದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ವೈವಿಧ್ಯಮಯ ತಿನಿಸುಗಳನ್ನು ಉಣಬಡಿಸುತ್ತಿದೆ.
ಉತ್ಪಾದಕರು – ಮಾರುಕಟ್ಟೆಗಾರರ ಸಭೆ :
ಸಿರಿಧಾನ್ಯ ಮೇಳದಲ್ಲಿ ವ್ಯಾಪಾರ ಒಫ್ಪಂದ, ರಫ್ತು ಸೇರಿದಂತೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಸುಗಮಗೊಳಿಸಲು ಭಾರತ ಹಾಗೂ ಇತರ ದೇಶಗಳಾದ್ಯಂತ ಸಗಟು ಹಾಗೂ ಬೃಹತ್ ಮಾರುಕಟ್ಟೆದಾರರು ನೇರವಾಗಿ ರೈತರು ಮತ್ತು ಉತ್ಪಾದಕರೊಂದಿಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.
ಇದಕ್ಕಾಗಿ ಉತ್ಪಾದಕರು – ಮಾರಾಟಗಾರರ ಸಭೆ ನಡೆಯುತ್ತಿದ್ದು, 200ಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ.
ಕರ್ನಾಟಕ ಪೆವಿಲಿಯನ್ ಸ್ಥಾಪನೆ :
ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ರಾಷ್ಟ್ರೀಯ ಹಾಗೂ ವಿಶ್ವ ಮಟ್ಟದಲ್ಲಿ ಪರಿಚಯಿಸಲು ಮೇಳದಲ್ಲಿ ಪ್ರತ್ಯೇಕ ಕರ್ನಾಟಕ ಪೆವಿಲಿಯನ್ ತೆರೆಯಲಾಗಿದೆ. ಇಲ್ಲಿ ಒಟ್ಟು 84 ಮಳಿಗೆಗಳನ್ನು ತೆರೆಯಲಾಗಿದೆ.
2021-22ನೇ ಸಾಲಿನಲ್ಲಿ 16.39 ಲಕ್ಷ ಹೆಕ್ಟೇರ್ ನಲ್ಲಿ ಸಿರಿಧಾನ್ಯ ಬೆಳೆ ಪ್ರದೇಶ :
2021-22ನೇ ಸಾಲಿನಲ್ಲಿ ರಾಜ್ಯದ ಸಿರಿಧಾನ್ಯ ಬೆಳೆಯುವ ಪ್ರದೇಶ 16.39 ಲಕ್ಷ ಹೆಕ್ಟೇರ್ ನಷ್ಟಾಗಿದೆ. ಅದರಲ್ಲಿ ರಾಗಿ – 8.46 ಲಕ್ಷ ಹೆಕ್ಟೇರ್, ಜೋಳ – 6.16, ಸಜ್ಜೆ – 1.48, ಕಿರುಧಾನ್ಯ/ಸಿರಿಧಾನ್ಯಗಳು – 0.29 ಲಕ್ಷ ಹೆಕ್ಟೇರ್ (ಹಾರಕ, ನವಣೆ, ಸಾಮೆ, ಊದಲು, ಕೊರಲು ಹಾಗೂ ಬರಗು) ಪ್ರದೇಶದಲ್ಲಿ ಇವುಗಳನ್ನು ಬೆಳೆಯಲಾಗಿದೆ.