ಬೆಂಗಳೂರು, ಜ.20 www.bengaluruwire.com :
ರಾಜ್ಯ ಕೃಷಿ ಇಲಾಖೆಯಿಂದ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ 2023 ವಾಣಿಜ್ಯ ಮೇಳಕ್ಕೆ ಇಂದಿಲ್ಲಿ ಸಿರಿಧಾನ್ಯವನ್ನು ಒನಕೆಯಲ್ಲಿ ಕುಟ್ಟುವ ಮೂಲಕ ವಿಭಿನ್ನವಾಗಿ ಮೂರು ದಿನಗಳ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅತ್ಯಂತ ಕಡಿಮೆ ನೀರಿನಲ್ಲಿ ಸಿರಿಧಾನ್ಯ ಬೆಳೆಯುತ್ತದೆ. ಹಿಂದೆ ನೀರಾವರಿ ಸೌಲಭ್ಯ ಅಷ್ಟಾಗಿ ಇರದ ಸಂದರ್ಭದಲ್ಲಿ ಹವಾಮಾನಕ್ಕೆ ತಕ್ಕಂತೆ ಸಿರಿಧಾನ್ಯ ಬೆಳೆಯುತ್ತಿದ್ದರು. ಆಗ ಆಹಾರ ಒದಗಿಸಲು ಮಾತ್ರ ಬೆಳೆಯಲಾಗುತ್ತಿತ್ತು. ಹಸಿರುಕ್ರಾಂತಿ ನಂತರ ವಿಶ್ವವಿದ್ಯಾಲಯದಲ್ಲಿ ಹೊಸ ತಳಿ ಬರುತ್ತಿದೆ. ಹೀಗಾಗಿ ಸಿರಿಧಾನ್ಯ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ವಾಣಿಜ್ಯ ಬೆಳೆ, ಆಹಾರ ಬೆಳೆ ಬೆಳೆಯಲಾಗುತ್ತಿದೆ. ಇವುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಏರುಪೇರಾದರೆ ಭವಿಷ್ಯದಲ್ಲಿ ಆಹಾರದ ಕೊರತೆ ಕಂಡು ಬರಬಹುದು.
ಮನುಷ್ಯನ ದೇಹದ ಅಗತ್ಯಕ್ಕೆ ತಕ್ಕಂತೆ ಪೋಷಕಾಂಶಗಳನ್ನು ನಿಖರವಾಗಿ ಅಳೆದು ಅದಕ್ಕೆ ತಕ್ಕಂತೆ ರೈತರು ಆಹಾರ ಬೆಳೆ ಬೆಳೆಯಬೇಕು. ಅಡಿಕೆ ಬೆಳೆ ಏಳೆಂಟು ವರ್ಷದಲ್ಲಿ ಹೆಚ್ಚಿದಕ್ಕಿಂತ, ಕಳೆದ ಎರಡೂವರೆ ವರ್ಷದಲ್ಲಿ ಸಿರಿಧಾನ್ಯ ಬೆಳೆಯುವ ಪ್ರದೇಶ ಹೆಚ್ಚಳವಾಗಿದೆ. ರಾಜ್ಯದಲ್ಲಿ ಜೋಳ, ರಾಗಿ ಬೆಳೆ ಹೆಚ್ಚು ಬಳಕೆಯಾಗುತ್ತಿದೆ. ಮೊದಲು ಬಡವರಿಗೆ ಅಕ್ಕಿ ಸಿಗುತ್ತಿರಲಿಲ್ಲ. ಈಗ ನೀರಾವರಿಯಿಂದ ಹೊಸ ಹೊಸ ತಳಿ ಅಕ್ಕಿ ಬಂದಿದ್ದರಿಂದ ಭತ್ತ ಹೆಚ್ಚಾಗಿ ಬಳಕೆಯಾಗುತ್ತಿದೆ. ಕಳೆದ ಮೂರು ವರ್ಷದಿಂದ ಜೋಳ ಹಾಗೂ ರಾಗಿ ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುತ್ತಿದೆ.
ರಾಗಿ, ಜೋಳಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿ ರಾಜ್ಯ ಸರ್ಕಾರ ರೈತರಿಂದ ಖರೀದಿ ಮಾಡಿದೆ. ಕನಿಷ್ಠ ಬೆಂಬಲ ಬೆಲೆ ನೀಡಿ ಪ್ರೋತ್ಸಾಹ ನೀಡುತ್ತಿದೆ.
ಸಿರಿಧಾನ್ಯ ಹೆಚ್ಚು ಹೆಚ್ಚು ಬೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ಹವಾಮಾನ ಬದಲಾವಣೆ ರೀತಿ ಅನುಗುಣವಾಗಿ ನಮ್ಮ ಕೃಷಿ ಪದ್ಧತಿ ಬದಲಾವಣೆ ತರಲು ಕೃಷಿ ವಿಶ್ವವಿದ್ಯಾಲಯಗಳ ಪಾತ್ರ ಮಹತ್ತರವಾಗಿದೆ. ಹಳೆಯ ಸಂಶೋಧನೆ ಜಾಡನ್ನು ಬಿಟ್ಟು, ಮಾರುಕಟ್ಟೆಯಲ್ಲಿ ನಕಲಿ ಬೀಜಗಳು, ಮಣ್ಣಿನ ಸವಕಳಿ ಇತ್ಯಾದಿ ಕೃಷಿಯಲ್ಲಿನ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸಂಶೋಧನೆ, ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಿದೆ.
ವಿಶ್ವವಿದ್ಯಾಲಯಗಳ ತಜ್ಞರು ಒಳಗೆ ಕೂತು ಸಂಶೋಧನೆ ಮಾಡುವುದರ ಜೊತೆಗೆ ರೈತರ ಹೊಲವನ್ನೇ ನಿಮ್ಮ ಕ್ಯಾಂಪಸ್ ಮಾಡಿಕೊಳ್ಳಿ. ರೈತರ ಕಷ್ಟ, ಸಮಸ್ಯೆ, ಸವಾಲುಗಳನ್ನು ಖುದ್ದು ನೋಡಿ, ರೈತರ ಅನಿಶ್ಚಿತತೆಯ ಬದುಕಿಗೆ ನಿಶ್ಚಿತ ಜೀವನ ನಡೆಸಲು ನೀವು ಕೊಡುಗೆ ನೀಡಲು ಸಾಧ್ಯತೆಯಿದೆ.
ಬೇರೆ ದೇಶಗಳಲ್ಲಿ ಮುಂದಿನ ಕಳೆದ 10 ವರ್ಷದಲ್ಲಿನ ಮಳೆ ಬಿದ್ದಿರುವ ಮಾಹಿತಿ, ಕೃಷಿ ಮಾರುಕಟ್ಟೆ ಸ್ಥಿತಿಗತಿ, ಇತ್ಯಾದಿಗಳ ಬಗ್ಗೆ ಓಟ್ ಲುಕ್ ವರದಿಯನ್ನು ವೈಜ್ಞಾನಿಕವಾಗಿ ಒದಗಿಸುವಂತೆ ಮುನ್ನೋಟ ಮಾಹಿತಿಯನ್ನು ಕೃಷಿ ಬೆಲೆ ಆಯೋಗ ತಯಾರಿಸಬೇಕು ಎಂದು ಸೂಚಿಸಿದರು.
ಗ್ರಾಮೀಣ ಆರ್ಥಿಕತೆ ಬದಲಾಗಬೇಕಾದರೆ ಗ್ರಾಮೀಣ ಸಾಲ ನೀಡಿಕೆ ವ್ಯವಸ್ಥೆ ಬದಲಾಗಬೇಕಿದೆ. ಇವತ್ತಿನವರೆಗೆ ಭೂಮಿ ಸಾಲ ನೀಡಿಕೆ ವ್ಯವಸ್ಥೆಯನ್ನು ಸರಿಯಾಗಿ ಜಾರಿಗೆ ತಂದಿಲ್ಲ. ಈ ನಿಟ್ಟಿನಲ್ಲಿ ವೈಜ್ಞಾನಿಕ ವ್ಯವಸ್ಥೆ ರೂಪಿಸಬೇಕು. ಸಾಲ ನೀಡಿಕೆ ಪ್ರಮಾಣ ಹೆಚ್ಚಳ ಮಾಡಬೇಕು. ಈನಿಟ್ಟಿನಲ್ಲಿ ಹಣಕಾಸು ಮತ್ತು ಕೃಷಿ ಸಚಿವರು ಸೂಕ್ತ ಕೈಗೊಳ್ಳಬೇಕು ಎಂದು ಬೊಮ್ಮಾಯಿ ಹೇಳಿದರು.
ಈ ವರ್ಷ 33 ಲಕ್ಷ ಜನರಿಗೆ ಹಾಗೂ ಅದರಲ್ಲಿ 3 ಲಕ್ಷ ಹೊಸ ರೈತರಿಗೆ ಹೊಸದಾಗಿ ರಾಜ್ಯ ಸರ್ಕಾರ ಸಾಲ ನೀಡಿದೆ. ಇದೊಂದು ದಾಖಲೆ. ಹಿಂದಿನ ಸರ್ಕಾರ 10 ಎಚ್ ಪಿ ವರೆಗಿನ ಉಚಿತ ವಿದ್ಯುತ್ ಗಳಿಗೆ ದರ ವಿಧಿಸಲು ಪ್ರಸ್ತಾವನೆ ಇಟ್ಟಿತ್ತು. ನಮ್ಮ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
30 ವರ್ಷಗಳಿಂದ ಸಿರಿಧಾನ್ಯ ಆಹಾರ ಬಳಕೆ ಮಾಡುತ್ತಿದ್ದೇನೆ : ಸಿಎಂ
ನಾನು ಕಳೆದ ಮೂವತ್ತು ವರ್ಷಗಳಿಂದ ಸಿರಿಧಾನ್ಯಗಳ ಊಟ ಮಾಡುತ್ತಿದ್ದೇನೆ. ನಾನೂ ಕೂಡ ಸಿರಿಧಾನ್ಯಗಳ ರಾಯಭಾರಿ ಎಂದು ವೇದಿಕೆಯಿಂದ ಹೊರಟು ವಾಪಸ್ ಬಂದ ಸಿಎಂ ಬೊಮ್ಮಾಯಿ ಹೆಮ್ಮೆಯಿಂದ ರೈತರಿಗೆ ಹೇಳಿದರು.
ಕೇಂದ್ರ ಕೃಷಿ ಸಚಿವೆ ಶೋಭ ಕರಂದ್ಲಾಜೆ ಮಾತನಾಡಿ, 2023ರ ವರ್ಷ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಆಚರಿಸಲಾಗುತ್ತಿದೆ. ನಮ್ಮಲ್ಲಿರುವ ಉತ್ತಮವಾದುದನ್ನು ವಿಶ್ವಕ್ಕೆ ನೀಡಬೇಕು ಅನ್ನುವುದು ಪ್ರಧಾನಮಂತ್ರಿಯವರ ಉದ್ದೇಶವಾಗಿದೆ. ಸಿರಿಧಾನ್ಯ ಗ್ಲುಟೆನ್ ರಹಿತ ಆಹಾರವಾಗುತ್ತಿದೆ. ಮೊದಲು ಸಜ್ಜೆ ಆಹಾರವನ್ನು ನೀಡಲಾಗುತ್ತಿತ್ತು. ಆನಂತರ ವಿದೇಶದಲ್ಲಿ ಹಂದಿಗೆ ಹಾಕುವ ಗೋಧಿಯನ್ನು ಎಲ್ಲೆಡೆ ಬಳಸಲಾಗುತ್ತಿದೆ.
ದೇಶದ ವಾರ್ಷಿಕ ಆಹಾರ ಉತ್ಪಾದನೆ 324 ಮಿ.ಮೆಟ್ರಿಕ್ ಟನ್ :
ನಮ್ಮ ದೇಶದಲ್ಲಿ ವಾರ್ಷಿಕ 314 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ನಮ್ಮ ದೇಶ ಬೆಳೆಯುತ್ತಿದೆ. ವಿಶ್ವದಲ್ಲೇ ಅತಿಹೆಚ್ಚು ಅಹಾರಧಾನ್ಯ ಬೆಳೆಯುವ 9ನೇ ರಾಷ್ಟ್ರವಾಗಿದೆ. 2023 ಸಿರಿಧಾನ್ಯಗಳ ವರ್ಷ ಎಂದು ವಿಶ್ವಸಂಸ್ಥೆ ನಮ್ಮ ದೇಶದ ಪ್ರಸ್ತಾವನೆ ಮೇರೆಗೆ ಘೋಷಣೆ ಮಾಡಿದೆ. ಸ್ವಾಮಿನಾಥನ್ ಆಯೋಗ 217 ಶಿಫರಸ್ಸುಗಳನ್ನು ಮೋದಿ ಸರ್ಕಾರ ಅನುಷ್ಠಾನ ಮಾಡಿದೆ. ಹಿಂದಿನ ಸರ್ಕಾರಕ್ಕೆ ಅದು ಸಾಧ್ಯವಾಗಿರಲಿಲ್ಲ ಎಂದು ಶೋಭ ಕರಂದ್ಲಾಜೆ ಹೇಳಿದರು.
ಹಣ್ಣು ತರಕಾರಿ, ಆಹಾರಧಾನ್ಯ ಗಳನ್ನು ಕೃಷಿ ಉತ್ಪನ್ನಗಳಿಗೆ ಪ್ರತ್ಯೇಕ ರಫ್ತು ಘಟಕವನ್ನು ಕೈಗಾರಿಕೆ ಇಲಾಖೆಯಲ್ಲಿ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದೆ. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದ್ದಾರೆ ಎಂದರು.
ಸಿರಿಧಾನ್ಯ ತಿಂದವರು ಬುಲೆಟ್ ರೀತಿ ಶಕ್ತಿವಂತರಾಗುವರು :
ಸಿರಿಧಾನ್ಯ ತಿಂದವರು ಬುಲೆಟ್ ರೀತಿ ಶಕ್ತಿವಂತರಾಗುತ್ತಾರೆ. 80ಕ್ಕೂ ಹೆಚ್ಚು ಹೋಟೆಲ್ ಗಳಲ್ಲಿ ಸಿರಿಧಾನ್ಯ ಆಹಾರ ಪೂರೈಕೆ ಬೆಂಗಳೂರಿನಲ್ಲಿ ಆಗುತ್ತಿದೆ. ಹಿಂದೆ ಸಿರಿಧಾನ್ಯ ಬಡವರ ಆಹಾರವಾಗಿತ್ತು. ಸಿರಿಧಾನ್ಯಗಳಲ್ಲಿ ಅತಿಹೆಚ್ಚು ಪೋಷಕಾಂಶವಿದೆ. ಹಲವು ರೋಗಗಳ ನಿಯಂತ್ರಣಕ್ಕೆ ಅನುಕೂಲವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟರು.
ಸಿರಿಧಾನ್ಯ ಗಳನ್ನು ಬೆಳೆಯಲು ಪ್ರತಿ ಹೆಕ್ಟೇರ್ ಗೆ ರೈತರಿಗೆ 10 ಸಾವಿರ ರೂ. ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ. ಪೀಜಾ ಬರ್ಗರ್, ಉಪ್ಪಿನಕಾಯಿ, ಇಡ್ಲಿ-ವಡೆ ಎಲ್ಲಾ ಸಿರಿಧಾನ್ಯದಲ್ಲಿ ತಯಾರಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವ ಅಗತ್ಯವಿದೆ. ಸರ್ಕಾರದ ಕೆಪೆಕ್ ಸಂಸ್ಥೆಯು ಸಿರಿಧಾನ್ಯ ಬೆಳೆಯುವ ರೈತರು, ಖರೀದಿದಾರರು, ಮಾರಾಟಗಾರರು, ರಫ್ತುದಾರರಿಗೆ ಸಹಕಾರ ನೀಡುತ್ತಿದೆ ಎಂದರು.
ಈ ವರ್ಷದ ಬಜೆಟ್ ನಲ್ಲಿ ರೈತಶಕ್ತಿ ಯೋಜನೆಯಲ್ಲಿ ಒಂದು ಎಕರೆಗೆ 10 ಲೀಟರ್ ಡೀಸೆಲ್ ಮಿತ್ತದ ಹಣವನ್ನು ಸದ್ಯದಲ್ಲೇ ರೈತರ ಖಾತೆಗೆ ನೇರವಾಗಿ ನೀಡುತ್ತೇವೆ. ರೈತರು ಹೆಚ್ಚು ಹೆಚ್ಚು ಸಿರಿಧಾನ್ಯ ಬೆಳೆ ಬೆಳೆಯಬೇಕು ಎಂದು ರೈತರಿಗೆ ಕರೆ ನೀಡಿದರು.
ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳೆ-2023 ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿದರು. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಕೈಲಾಶ್ ಚೌಧರಿ, ಸಂಸದ ಪಿ.ಸಿ.ಮೋಹನ್, ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ, ವಿಧಾನ ಪರಿಷತ್ ಸಚಿವ ಶರವಣ, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ, ಆಯುಕ್ತರಾದ ಶರತ್, ನಿರ್ದೇಶಕರಾದ ಡಾ.ಜಿ.ಟಿ.ಪುತ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.