ಬೆಂಗಳೂರು, ಜ.18 www.bengaluruwire.com : ಗಾಳಿಪಟ ಹಾರಿಸಲು ಹೋಗಿ ಆಕಸ್ಮಿಕವಾಗಿ ಕೆಪಿಟಿಸಿಎಲ್ (KPTCL) ನ 66 ಕೆವಿ ಹೈಟೆನ್ಶನ್ ವಿದ್ಯುತ್ ತಂತಿ (High Tension Wire) ತಗಲಿ ಬಾಲಕ ಮೃತಪಟ್ಟ ಘಟನೆ ಆರ್ .ಟಿ. ನಗರ (RT Nagar)ದ ವಿಶ್ವೇಶ್ವರಯ್ಯ ಉದ್ಯಾನವನ ಬಳಿ ಸಂಭವಿಸಿದೆ.
ಅಬೂಬಕರ್ (11) ಎಂಬ ಬಾಲಕ ಮೃತಪಟ್ಟಿದ್ದು, ಈತ ಜನವರಿ 16 ರಂದು ಮದ್ಯಾಹ್ನ 3 ಗಂಟೆಗೆ ಗಾಳಿಪಟ ಹಾರಿಸುತ್ತಿದ್ದಾಗ ಕೆಪಿಟಿಸಿಎಲ್ ನ 66 ಕೆವಿ ಹೈಟೆನ್ಸನ್ ವಿದ್ಯುತ್ ತಂತಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣ ಈ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆ (Victoria Hospital) ಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಮೃತ ಪಟ್ಟಿದ್ದಾನೆ.
ಗಾಳಿಪಟ ವಿದ್ಯುತ್ ತಂತಿಗೆ ಸಿಕ್ಕಿ ಹಾಕಿಕೊಂಡಾಗ ಬಾಲಕ ಅದನ್ನು ಬಿಡಿಸಲು ಪಕ್ಕದ ಕಟ್ಟಡ ಏರಿದ್ದ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಪಿಟಿಸಿಎಲ್ ನ 66 ಕೆವಿ ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ. ಆಗ ಸ್ಥಳಕ್ಕೆ ಕೆಪಿಟಿಸಿಎಲ್ ಅಧಿಕಾರಿಗಳು ಭೇಟಿ ನೀಡಿದ್ದರು. ಈ ದುರ್ಘಟನೆಯು ತಮ್ಮ ನಿರ್ಲಕ್ಷ್ಯದಿಂದ ಸಂಭವಿಸಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.