ಸಾಲಿಗ್ರಾಮ, ಜ.16 www.bengaluruwire.com : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮ ಶ್ರೀ ಗುರುನರಸಿಂಹ ಕ್ಷೇತ್ರದ ವೈಭವದ ಸಾಲಿಗ್ರಾಮ ಹಬ್ಬ-2023ರ ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ದೊರತಿದೆ. ಸೋಮವಾರ ಬೆಳಗ್ಗೆ 10.15ಕ್ಕೆ ರಥೋರೋಹಣಕ್ಕೆ ಚಾಲನೆ ದೊರೆಯಿತು.
ರಥಬೀದಿಯಲ್ಲಿ ಬೆಳಗ್ಗೆ 10.15ಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ಶ್ರೀ ಗುರುನರಸಿಂಹ ದೇವರ ವಾರ್ಷಿಕ ಬ್ರಹ್ಮರಥೋತ್ಸವಕ್ಕೆ ಚಾಲನೆ ದೊರೆಯಿತು. ನಂತರ ದೇವರ ಉತ್ಸವಮೂರ್ತಿಯನ್ನು ಹೊತ್ತ ರಥ ಗುರುನರಸಿಂಹ ದೇವಸ್ಥಾನದ ಎದುರಿನ ಶ್ರೀ ಆಂಜನೇಯ ದೇವಸ್ಥಾನದ ವರೆಗೆ ರಥೋರೋಹಣ ನಡೆಯಿತು. ಸಂಜೆ 6ಕ್ಕೆ ರಥಾವರೋಹಣ, ಓಲಗಮಂಟಪ ಸೇವೆ, ಅಷ್ಟಾವಧಾನ ಸೇವೆ, ದಿ|| ಪಾರಂಪಳ್ಳಿ ರಾಮಚಂದ್ರ ಐತಾಳರ ಶಿಷ್ಯ ವೃಂದದವರಿಂದ“ಭಕ್ತಿ ಲಹರಿ” (ಸಂಗೀತ ಸೇವೆ), ಮಹಾಮಂಗಳಾರತಿ, ಭೂತಬಲಿ, ಶಯನೋತ್ಸವ, ಪಾನಕ ಪನಿವಾರ ವಿತರಣೆ ನಡೆಯಲಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.
ಬೆಳಗ್ಗೆ 5.30ರಿಂದ ಗುರುನರಸಿಂಹ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದಲ್ಲಿನ ಬೇರೆ ಬೇರೆ ಸ್ಥಳಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆಯುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಶ್ರೀ ಗುರುನರಸಿಂಹ ಬ್ರಹ್ಮರಥೋತ್ಸವ ಹಲವು ದಶಕಗಳಿಂದ ವೈಭವಯುತವಾಗಿ ನಡೆದುಕೊಂಡು ಬರುತ್ತಿದೆ. ಕೋಟ ಗ್ರಾಮದ ಸುತ್ತಲಿನ 14 ಹಾಗೂ ಆಸುಪಾಸಿನ ಗ್ರಾಮಗಳ ಭಕ್ತರಲ್ಲದೆ, ದೇಶ ವಿದೇಶಗಳು ಹಾಗೂ ವಿವಿಧ ರಾಜ್ಯಗಳಲ್ಲಿರುವ ಶ್ರೀ ಗುರುನರಸಿಂಹನ ಭಕ್ತರು ಬ್ರಹ್ಮರಥೋತ್ಸವದಂದು ಒಂದೆಡೆ ಸೇರಿ, ಸಾಲಿಗ್ರಾಮ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಪಡುತ್ತಾರೆ.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರಗಳು ಹೀಗಿವೆ :
ಸಾಲಿಗ್ರಾಮಶ್ರೀ ಗುರುನರಸಿಂಹ ಸಹಿತ ಆಂಜನೇಯ ದೇವಸ್ಥಾನ ಸಾಂಸ್ಕಂತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ
ಜ. 16 ಸೋಮವಾರ ಯುವವೇದಿಕೆ ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯವರ ವಾರ್ಷಿಕೋತ್ಸವ ಮತ್ತು ನಗೆ ನಾಟಕ “ನಾನು ಇದ್ದೇನೆ”, ಜ.17ಮಂಗಳವಾರ ಶ್ರೀಗುರು ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ಪೌರಾಣಕ ಪ್ರಸಂಗ, ಜ.18 ಬುಧವಾರ ಶ್ರೀಗು ರುಪ್ರೆಂಡ್ಸ್ ರಥಬೀದಿ ಸಾಲಿಗ್ರಾಮ ಇವರ ವಾರ್ಷಿಕೋತ್ಸವ, ಸಾಂಸ್ಕಂತಿಕ ರಸ ಸಂಜೆ ಮತ್ತು ಮೂರು ಮುತ್ತು ಕಲಾವಿದರಿಂದ ಹಾಸ್ಯಮಯ ನಾಟಕ ಪ್ರದರ್ಶಿತವಾಗಲಿದೆ.
ಜ.19ರ ಗುರುವಾರ ಆರಾಧನಾ ಮೆಲೋಡಿಸ್ ಸಾಲಿಗ್ರಾಮ ಇವರಿಂದ ಸಂಗೀತ ರಸಸಂಜೆ, ಜ.20 ಶುಕ್ರವಾರ ಸಾಲಿಗ್ರಾಮದ ಶ್ರೀ ಗುರುನರಸಿಂಹ ಸಾಂಸ್ಕೃತಿಕ ಕಲಾವೇದಿಕೆ ಇವರಿಂದ “ಕಲಾಂಜಲಿ” ಎಂಬವೈವಿಧ್ಯಮಯ ಕಾರ್ಯಕ್ರಮ ನೆರವೇರಲಿದೆ. ಜ.21 ಶನಿವಾರ ಉಡುಪಿಯ ಕುಂಜಿಬೆಟ್ಟು ಇವರಿಂದ ಯಕ್ಷಗಾನ ಕಲಾಕೇಂದ್ರದಿಂದ ಯಕ್ಷಗಾನ ಪ್ರದರ್ಶನವಿರಲಿದೆ.
ಧಾರ್ಮಿಕ ಕಾರ್ಯಕ್ರಮ :
ಜ.17ನೇ ಮಂಗಳವಾರ ಬೆಳಗ್ಗೆ 8ಕ್ಕೆ ಪ್ರಭೋದೋತ್ಸವ, (ಶ್ರೀದೇವರ ದರ್ಶನದ ಸಮಯ ಬೆಳಗ್ಗೆ 8.30 ರಿಂದ) ಸೇವೆ, ಕೋಟ ವಾಸುದೇವ ಸೋಮಯಾಜಿಯವರ ಸ್ಮರಣಾರ್ಥ ಅವರ ಪತ್ನಿ ಮತ್ತು ಮತ್ತರಿಂದ ಸಂಜೆ ಓಕುಳಿ ಸೇವೆ, ರಜತ ರಥೋತ್ಸವ, ಅವಭೂತ ಸ್ನಾನ (ಕೋಟ ಹಂದೆ ಶ್ರೀ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದಲ್ಲಿ) ಅಷ್ಟಾವಧಾನ ಸೇವೆ, ಕಟ್ಟೆಓಲಗ, ಪುರಮೆರವಣಿಗೆ, ಧ್ವಜಾವರೋಹಣ, ವಸಂತಾರಾಧನೆ, ಮಂತ್ರಾಕ್ಷತೆ, ಜ.18ನೇ ಬುಧವಾರ ಸಂಪ್ರೋಕ್ಷಣೆ, ಗಣಹೋಮ, ಬೆಳಿಗ್ಗೆ 10.50ಕ್ಕೆ ಮೀನ ಲಗ್ನದಲ್ಲಿ ಅತಿಥಿಗೃಹ ನಿರ್ಮಾಣ ನಿವೇಶನದಲ್ಲಿ ಭೂಮಿ ಪೂಜೆ ನಡೆಯಲಿದೆ.
ಗುರುನರಸಿಂಹ ದೇವಸ್ಥಾನದ ಇತಿಹಾಸ ಮತ್ತು ವೈಶಿಷ್ಟ್ಯತೆ :
ಗುರುನರಸಿಂಹ ದೇಗುಲವು ಕೂಟ ಬ್ರಾಹ್ಮಣರ ಆಡಳಿತವನ್ನು ಹೊಂದಿದ ಏಕೈಕ ದೇವಸ್ಥಾನವಾಗಿದೆ. ಕೋಟ ಸುತ್ತಲಿನ 14 ಹಾಗೂ ಆಸುಪಾಸಿನ ಗ್ರಾಮಗಳನ್ನೊಳಗೊಂಡ ಕೋಟ ಮಹಾಜಗತ್ತು ಅಥವಾ ಕೂಟ ಮಹಾಜಗತ್ತು ಎನ್ನುವುದಾಗಿ ಹಾಗೂ ಇಲ್ಲಿ ವಾಸಿಸುವ ಬ್ರಾಹ್ಮಣರನ್ನು ಕೂಟ ಮತಸ್ಥ ಬ್ರಾಹ್ಮಣರೆಂದು ಕರೆಯಲಾಗುತ್ತದೆ. ಇವರೆಲ್ಲರಿಗೂ ಪ್ರತ್ಯೇಕವಾದ ಮಠ ಅಥವಾ ಮಠಾಧೀಶ ಗುರು ಪರಂಪರೆ ಇಲ್ಲ. ಇವರು ಗುರುನರಸಿಂಹನನ್ನೇ ಗುರುವಾಗಿ, ಕುಲದೇವರಾಗಿ ನಂಬಿಕೊಂಡು ಬಂದವರು ಮತ್ತು ಗುರುವಿಗೆ ಸಲ್ಲಿಸಬೇಕಾದ ಗುರುಕಾಣಿಕೆ, ಹರಿಕೆ ಸೇವೆಗಳನ್ನು ನರಸಿಂಹನಿಗೆ ಸಲ್ಲಿಸುವವರು.
ಪ್ರಸಿದ್ಧ ನರಸಿಂಹ ಕ್ಷೇತ್ರಗಳಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮ ಶ್ರೀ ಗುರುನರಸಿಂಹ ಕ್ಷೇತ್ರವು ಒಂದಾಗಿದೆ. ಯೋಗಾನಂದ ಶ್ರೀ ಗುರುನರಸಿಂಹನೆಂದು ಕರೆಯಲ್ಪಡುತ್ತಿರುವ ಇಲ್ಲಿನ ಶ್ರೀ ದೇವರ ಮೂರ್ತಿಯು ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾಗಿದ್ದು, ಆದಿಯಲ್ಲಿ ಶ್ರಿ ಮಹಾಗಣಪತಿ ಯಂತ್ರ ಸ್ಥಾಪಿಸಿ ಅದರ ಮೇಲೆ ಕಮಲಪತ್ರದ ಮೇಲೆ ಶ್ರೀನರಸಿಂಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀದೇವರ ವಿಗ್ರಹವು ಅರ್ಧಯೋಗ ಪಟ್ಟಾನ್ವಿತವಾಗಿದ್ದು ಇದನ್ನು ಯೋಗನರಸಿಂಹನೆಂದು ಲಕ್ಷಿತ್ರ್ಮಯು ಹೃದಯ ಭಾಗದಲ್ಲಿ ಅಂತರ್ಗತವಾಗಿರುವುದರಿಂದ ಶ್ರೀಲಕ್ಷಿತ್ರ್ಮೕನರಸಿಂಹನೆಂದು ಕರೆಯುತ್ತಾರೆ. ಸ್ವಯಂ ವ್ಯಕ್ತವಾದ ಮಹಾ ವಿಷ್ಣುವಿನ ಅಷ್ಠ ಕ್ಷೇತ್ರಗಳಲ್ಲಿಇದು ಒಂದಾಗಿದ್ದು ಶ್ರೀದೇವರ ವಿಗ್ರಹವು ಎಂಟನೇ ಶತಮಾನದ್ದಾಗಿರಬಹುದೆಂದು ಗುರುತಿಸಲಾಗಿದೆ.
ದೇವಳವು ಚರ್ತುರಶ್ವ ಸಿಂಹ ಆಯದಲ್ಲಿದ್ದು ಪ್ರಧಾನ ದೇವರು ನರಸಿಂಹ, ದಕ್ಷಿಣ ಪೌಳಿಯ ಪಶ್ಚಿಮ ಮೂಲೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ವಿಗ್ರಹ, ಉತ್ತರ ಪೌಳಿಯ ಪಶ್ಚಿಮ ಮೂಲೆಯಲ್ಲಿ ಗಣಪತಿ ವಿಗ್ರಹದಿಂದ ಕಂಗೊಳಿಸುತ್ತಿದ್ದರೆ, ನರಸಿಂಹನಿಗೆ ಎದುರಾಗಿ ರಥಬೀದಿ ಪಶ್ಚಿಮ ತುದಿಯಲ್ಲಿ ಆಂಜನೇಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ಹೊರಪೌಳಿಯ ನೈರುತ್ಯ ದಿಕ್ಕಿನಲ್ಲಿ ಶಂಖ ತೀರ್ಥ ಸರೋವರದ ದಡದಲ್ಲಿ ನಾಗನ ದೇವರನ್ನು ಸ್ಥಾಪಿಸಲಾಗಿದೆ. ಶ್ರೀ ಯೋಗಾನಂದ ನರಸಿಂಹಮೂರ್ತಿಯು ಪಶ್ಚಿಮಾಭಿಮುಖವಾಗಿದ್ದು ದ್ವಿಭುಜವಾಗಿದೆ. ಬಲಗೈಯಲ್ಲಿ ಚಕ್ರವೂ, ಎಡಗೈಯಲ್ಲಿ ಶಂಖವೂ ಧರಿಸಲ್ಪಟ್ಟದ್ದರಿಂದ ದೇವಳದ ಎಡಬಲಗಳಲ್ಲಿ ಶಂಖ ತೀರ್ಥ ಮತ್ತು ಚಕ್ರತೀರ್ಥ ಸರೋವರಗಳಿವೆ. ಇವುಗಳ ತೀರ್ಥಸ್ನಾನ ಹಾಗೂ ನರಸಿಂಹ ಆರಾಧನೆಯಿಂದ ಬ್ರಹ್ಮಹತ್ಯಾದಿ ಸರ್ವ ದೋಷಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಜನಜನಿತವಾಗಿದೆ.
ಹಿಂದೆ ನರಸಿಂಹನ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಸ್ಥಾಪಿಸಲಾಗಿತ್ತು. ಆಗ ನರಸಿಂಹನ ಉಗ್ರತೆಯಿಂದ ಪೂರ್ವದಿಕ್ಕಿನ ಗದ್ದೆಗಳಲ್ಲಿ ಬೆಳೆದ ಕೃಷಿ ಭಸ್ಮವಾಗುತ್ತಿತ್ತು. ಇದರಿಂದ ಮೂರ್ತಿಯನ್ನು ಪಶ್ಚಿಮಾಭಿಮುಖವಾಗಿ ಅಂದರೆ ಅರಬ್ಬಿಸಮುದ್ರದ ಕಡೆ ಮುಖ ಮಾಡಿ ಸ್ಥಾಪಿಸಲಾಯಿತು. ಪಶ್ಚಿಮಬದಿಯ ಕೃಷಿಯ ಹಾನಿ ತಪ್ಪಿಸಲು ಬ್ರಹ್ಮಾವರದ ಕುಕ್ಕುಡೆಗುಂಡಿಯಲ್ಲಿದ್ದ ಆಂಜನೇಯನ ವಿಗ್ರಹವನ್ನು ತಂದು ನರಸಿಂಹ ವಿಗ್ರಹದ ನೇರವಾಗಿ ಎದುರಿನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದರು ಎನ್ನುವ ಇತಿಹಾಸವಿದೆ. ಅಂದಿನಿಂದ ನರಸಿಂಹನ ಉರಿಯನ್ನು ಸಹಿಸಲು ಸಾಧ್ಯವಾಗುವಂತೆ ಈ ಆಂಜನೇಯನ ವಿಗ್ರಹಕ್ಕೆ ಚಂದ್ರ (ಸಿಂಧೂರ) ಬೆಣ್ಣೆಯನ್ನು ಲೇಪಿಸಲಾಗುತ್ತಿದೆ. ಹಾಗೂ ಅಂದು ಸ್ಥಾಪಿಸಿದ ನಂದಾದೀಪಗಳಲ್ಲಿ ನಿರಂತರವಾಗಿ ದೀಪವು ಉರಿಯುತ್ತಿದ್ದು ದೂರ ಪ್ರಯಾಣ ಬೆಳೆಸುವರು ಸುಖ ಪ್ರಯಾಣಕ್ಕಾಗಿ ಮತ್ತು ಭಕ್ತಾದಿಗಳು ಎಣ್ಣೆಯನ್ನು ನಂದಾದೀಪಕ್ಕೆ ಹರಕೆ ರೂಪದಲ್ಲಿ ಹಾಕಿ ಪ್ರಾರ್ಥಿಸುವ ಸಂಪ್ರದಾಯ ಇಟ್ಟುಕೊಂಡಿರುತ್ತಾರೆ. ಭಕ್ತರು ಇಷ್ಟಾರ್ಥ ಪ್ರಾಪ್ತಿಗಾಗಿ ಪೂರ್ಣಾಲಂಕಾರ, ರಂಗಪೂಜೆ, ಸುಂದರಕಾಂಡ ಪಾರಾಯಣ ಸೇವೆ ಸಲ್ಲಿಸುತ್ತಾರೆ