ಬೆಂಗಳೂರು, ಜ.4 www.bengaluruwire.com : ಹೊಸ ವರ್ಷದ ಆರಂಭದಲ್ಲೇ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷ ಜಯರಾಮ್, ಮಂಡಳಿಯ ಅಧಿಕಾರಿ, ನೌಕರರು ಬಿಲ್ ಹಣ ದುರುಪಯೋಗ ಹಿನ್ನಲೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಶ್ರೀನಿವಾಸ್ ಸೇರಿದಂತೆ ಎಲ್ಲಾ 13 ಜನರನ್ನು ಜ.3ರಂದು ಅಮಾನತು ಮಾಡಿ ಆದೇಶಿಸಿದ್ದಾರೆ.
ಬಿಡಬ್ಲ್ಯುಎಸ್ ಎಸ್ ಬಿಯ ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ನೈರುತ್ಯ ನಿರ್ವಹಣಾ ಉಪವಿಭಾಗಗಳಲ್ಲಿ ಮ್ಯಾನುಯಲ್ ಕ್ಯಾಷ್ ಕೌಂಟರ್ ಮೂಲಕ ನೀರಿನ ಬಿಲ್ ಪಾವತಿ ಮೂಲಕ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಈ 13 ಮಂದಿ ಭಾಗಿಯಾಗಿರುವುದು ಜಲಮಂಡಳಿಯ ಆಂತರಿಕ ತನಿಖೆಯಿಂದ ದೃಢಪಟ್ಟ ಹಿನ್ನಲೆಯಲ್ಲಿ ಮಂಡಳಿ ಅಧ್ಯಕ್ಷರು ಈ ಕ್ರಮ ಕೈಗೊಂಡಿದ್ದಾರೆ.
ಅಮಾನತು ಆದ ಅಧಿಕಾರಿಗಳು ಮತ್ತು ನೌಕರರು :
ಕಾರ್ಯನಿರ್ವಾಹಕ ಎಂಜಿನಿಯರ್ ಗಳಾದ ಆರ್.ಶ್ರೀನಿವಾಸ್, ಬಿ.ನಾಗೇಂದ್ರ, ವಿ.ಸ್ನೇಹಾ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ವಿಶ್ವನಾಥ್, ಸಚಿನ್ ಪಾಟೀಲ್, ಕಂದಾಯ ವ್ಯವಸ್ಥಾಪಕರಾದ ಸಿ.ನಾಗರಾಜು, ಭೀಮಾಶಂಕರ್, ಎನ್.ರುದ್ರೇಶ್, ಹಿರಿಯ ಸಹಾಯಕ ಸಿ.ಸೋಮಶೇಖರ್, ಹಿರಿಯ ಸಹಾಯಕಿ ಎಂ.ಗೀತಾ, ಸಹಾಯಕರಾದ ಜಿ.ಎಸ್.ಭರತ್ ಕುಮಾರ್, ರಾಮಪ್ಪ ಮಡಿವಾಳರ, ಸಹಾಯಕ ಕಲ್ಯಾಣಾಧಿಕಾರಿ ಎಸ್.ಯೋಗೇಶ್ ಅಮಾನತು ಆದವರಾಗಿದ್ದಾರೆ.
ಪ್ರಕರಣದ ಹಿನ್ನಲೆಯೇನು? :
ಬೆಂಗಳೂರು ಜಲಮಂಡಳಿ ಗ್ರಾಹಕರು ನಗದಾಗಿ ನಾಲ್ಕು ನಿರ್ವಹಣಾ ಉಪವಿಭಾಗಗಳಲ್ಲಿನ ಮ್ಯಾನುಯಲ್ ಕ್ಯಾಷ್ ಕೌಂಟರ್ ಮೂಲಕ ಪಾವತಿಸಿದ ಬಿಲ್ ಅನ್ನು ಸಜಲ ತಂತ್ರಾಂಶದಲ್ಲಿ ಸಹಾಯಕ ಕಾರ್ಯನಿರ್ವಾಹಕರ ಎಂಜಿನಿಯರ್, ಕಂದಾಯ ವ್ಯವಸ್ಥಾಪಕ, ಹಿರಿಯ ಜಲಪರಿವೀಕ್ಷಕರ ಲಾಗಿನ್ ಹಾಗೂ ಪಾಸ್ ವರ್ಡ್ ಬಳಸಿ ನಕಲಿ ಪಾವತಿಯನ್ನು ದಾಖಲು ಮಾಡಲಾಗಿತ್ತು. ಹಣ ಮಾತ್ರ ಮಂಡಳಿಗೆ ಪಾವತಿಯಾಗಿರಲಿಲ್ಲ. ಆ ಮೂಲಕ ಗ್ರಾಹಕರ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಅಂಶವು ಮಂಡಳಿಯು ನಡೆಸಿದ ಪ್ರಥಮ ಪರಿಶೋಧನೆ ಹಾಗೂ ತನಿಖೆಯಿಂದ ತಿಳಿದು ಬಂದಿದೆ.
ಸಹಾಯಕ ಲೆಕ್ಕ ನಿಯಂತ್ರಕ ಜಿ.ಶಂಕರಾಚಾರ್ಯ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ಪರಿಶೋಧನೆ ಕಾರ್ಯ ನಡೆಸಿ ವರದಿ ಸಲ್ಲಿಸಲು ಜಲಮಂಡಳಿ ಅಧ್ಯಕ್ಷರು ಸೂಚಿಸಿದ್ದರು. ಈ ತಂಡವು ಸಲ್ಲಿಸಿರುವ ವರದಿಯಲ್ಲಿ ಗುತ್ತಿಗೆ ನೌಕರರ ಜೊತೆಗೆ ಜಲಮಂಡಳಿ ನೌಕರರೂ ಭಾಗಿಯಾಗಿರುವುದು ಖಚಿತವಾಗಿತ್ತು. ಈ ಹಿನ್ನಲೆಯಲ್ಲಿ ಮಂಗಳವಾರ ಬಹಳ ದೀರ್ಘಾವಧಿಯವರೆಗೆ ಬಿಡಬ್ಲ್ಯುಎಸ್ ಎಸ್ ಬಿ ಅಧ್ಯಕ್ಷ ಜಯರಾಮ್ ಹಾಗೂ ಪ್ರಧಾನ ಆಡಳಿತಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಗುಪ್ತ ಸಭೆ ನಡೆಸಿ ಅಂತಿಮವಾಗಿ 13 ಮಂದಿಯನ್ನು ಅಮಾನತು ಮಾಡಿದ್ದಾರೆ.
ಸಜಲ ತಂತ್ರಾಂಶದಲ್ಲಿ ನೀರಿನ ಬಿಲ್ ಪಾವತಿಯ ವಿವರ ಹಾಗೂ ಹಣ ಸಂಗ್ರಹ, ಮಂಡಳಿ ಖಾತೆಗೆ ಅವುಗಳನ್ನು ವರ್ಗಾಯಿಸುವ ಜವಾಬ್ದಾರಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಕಂದಾಯ ವ್ಯವಸ್ಥಾಪಕರದ್ದಾಗಿತ್ತು. ಆದರೆ ಇವರ ಜೊತೆ ಕಾರ್ಯನಿರ್ವಾಹಕ ಎಂಜಿನಿಯರ್ ಗಳು ಜೊತೆಗೂಡಿ ತಮ್ಮ ಅಧಿಕಾರ ಹಾಗೂ ಗ್ರಾಹಕರ ಹಣ ದುರುಪಯೋಗಪಡಿಸಿಕೊಂಡು ಜಲಮಂಡಳಿಗೆ ಆರ್ಥಿಕ ನಷ್ಟ ಉಂಟುಮಾಡಿರುವುದು ಜಲಮಂಡಳಿ ಆಂತರಿಕ ತನಿಖೆಯಿಂದ ದೃಢಪಟ್ಟಿತ್ತು. ಇತ್ತೀಚಿನ ವರ್ಷಗಳಲ್ಲಿ ಒಂದೇ ಬಾರಿಗೆ ಇಷ್ಟು ಪ್ರಮಾಣದಲ್ಲಿ ನೌಕರರನ್ನು ಅಮಾನತು ಮಾಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ.