ಬೆಂಗಳೂರು, ಜ.03 www.bengaluruwire.com : ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಅರ್ಧಕ್ಕೆ ನಿಂತಿದ್ದ 2.4 ಕಿ.ಮೀ ಉದ್ದದ ಈಜಿಪುರ ಮೇಲ್ಸೇತುವೆ (Ejipur Flyover) ಕಾಮಗಾರಿ ಮುಂದಿನ ವರ್ಷದ ವೇಳೆಗೆ ಸಂಪೂರ್ಣವಾಗಿ ಮುಗಿಯಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ಕೋರಮಂಗಲ ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.
ಮಂಗಳವಾರ ಕೋರಮಂಗಲದ ವಾರ್ಡ್ ಕಚೇರಿಯಲ್ಲಿ ಸ್ಥಳೀಯ ವಿವಿಧ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ನಿವಾಸಿಗಳೊಂದಿಗೆ ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತ ಜಗದೀಶ್ ನಾಯಕ್ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕೋರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಈಜಿಪುರ ಮುಖ್ಯರಸ್ತೆ –ಒಳವರ್ತುಲ ರಸ್ತೆ ಜಂಕ್ಷನ್ ನಿಂದ ಸೋನಿ ವರ್ಡ್ ಜಂಕ್ಷನ್ ಮಾರ್ಗವಾಗಿ ಕೇಂದ್ರಯ ಸದನ ಜಂಕ್ಷನ್ ವರೆಗೆ ಮೇಲ್ಸೇತುವೆ ನಿರ್ಮಾಣವಾಗುತ್ತಿರುವ ಬಾಕಿ ಕಾಮಗಾರಿಗೆ ನಿಯಮಾವಳಿಯಂತೆ ಟೆಂಡರ್ ಕರೆದು ಮುಂದಿನ ವರ್ಷದ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಕೋರಮಂಗಲ ನಿವಾಸಿಗಳಿಗೆ ತಿಳಿಸಿದರು.
ಇದೇ ವೇಳೆ ಕೋರಮಂಗಲ ಎಸ್.ಟಿ.ಬೆಡ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಂದ್ರ ಬಾಬು, ಹಿಂದೆ ಈಜಿಪುರ ಮೇಲ್ಸೇತುವೆ ಕಾಮಗಾರಿ ಕೈಗೊಂಡ ಸಿಂಪ್ಲೆಕ್ಸ್ ಸಂಸ್ಥೆಯು ಸೂಕ್ತ ರೀತಿ ಕಾಮಗಾರಿ ನಡೆಸದೆ ಅರ್ಧಕ್ಕೆ ನಿಲ್ಲಿಸಿದ್ದರಿಂದ ಈ ಭಾಗದಲ್ಲಾಗುತ್ತಿರುವ ಸಂಚಾರ ದಟ್ಟಣೆ ಹಾಗೂ ಅದರಿಂದ ಇಲ್ಲಿನ ನಾಗರೀಕರಿಗಾಗುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಅಧಿಕಾರಿಗಳ ಎದುರು ಬಿಚ್ಚಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಕೇಂದ್ರ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ವಿನಾಯಕ್ ಸೂಗೂರ್, ಈಜಿಪುರ ಮೇಲ್ಸೇತುವೆ ಕಾಮಗಾರಿ ಈತನಕ ಶೇ.40ರಷ್ಟು ಪೂರ್ಣವಾಗಿದೆ. ಉಳಿದ ಶೇ.60ರಷ್ಟು ಕಾಮಗಾರಿಗೆ ಬಾಕಿಯಿದ್ದು, 144 ಕೋಟಿ ರೂ. ಯೋಜನಾ ಮೊತ್ತದಲ್ಲಿ ಟೆಂಡರ್ ಅನ್ನು ಮುಂದಿನ ವಾರ ಕರೆಯಲಾಗುವುದು. ಈ ಹಿಂದೆ ಕರೆದ ಟೆಂಡರ್ ನಲ್ಲಿ ಎರಡು ಕಂಪನಿಗಳು ಪಾಲ್ಗೊಂಡಿದ್ದವು. ಆದರೆ ತಾಂತ್ರಿಕ ಮೌಲ್ಯಮಾಪನದ ವೇಳೆ ಅನರ್ಹರಾಗಿದ್ದವು. ಹಾಗಾಗಿ ಈ ಬಾರಿ ಸೂಕ್ತ ಕಂಪನಿ ಟೆಂಡರ್ ನಲ್ಲಿ ಭಾಗವಹಿಸುವ ವಿಶ್ವಾಸವಿದೆ. ಮುಂದಿನ ತಿಂಗಳ ಫೆಬ್ರವರಿ 15ರ ಒಳಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ. ಬಳಿಕ 12 ರಿಂದ 15 ತಿಂಗಳಲ್ಲಿ ಮೇಲ್ಸೇತುವೆ ನಿರ್ಮಾಣ ಯೋಜನೆ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.
ಮೇಲ್ಸೇತುವೆಗೆ ಭೂಸ್ವಾಧೀನ ಬಾಕಿ :
ಸಭೆಯ ಬಳಿಕ ಬೆಂಗಳೂರು ವೈರ್ ಜೊತೆ ಮಾತನಾಡಿದ ಕೋರಮಂಗಲ ಎಸ್.ಟಿ.ಬೆಡ್ ಕ್ಷೇಮಾಭಿವೃದ್ಧಿ ಸಂಘದ ರಾಜೇಂದ್ರಬಾಬು, ಈಜಿಪುರ ಮೇಲ್ಸೇತುವೆ ಯೋಜನೆಯಲ್ಲಿ 4 ಜಾಗಗಳಲ್ಲಿ ಭೂ ಸ್ವಾಧೀನ ಬಾಕಿಯಿದೆ. ಅದಕ್ಕಾಗಿ ಬಿಬಿಎಂಪಿಯು 35 ಕೋಟಿ ರೂ. ಹಣ ಮೀಸಲಿಟ್ಟಿದೆ. ಈಗಾಗಲೇ ಪೂರ್ವಿಕ ಮೊಬೈಲ್ ಕಂಪನಿ ಹತ್ತಿರ, ಸೆಂಟ್ ಜಾನ್ ಆಸ್ಪತ್ರೆ ಆಡಿಟೋರಿಯಮ್ ಹತ್ತಿರ, ಈಜಿಪುರ ಸಿಗ್ನಲ್ 4 ಸಣ್ಣ ಆಸ್ತಿಗಳನ್ನು ಬಿಬಿಎಂಪಿ ಭೂಸ್ವಾಧೀನಪಡಿಸಿಕೊಳ್ಳಲು ಟಿಡಿಆರ್ ಅಥವಾ ಹಣ ಪಾವತಿ ಬಿಬಿಎಂಪಿ ಸಿದ್ಧವಿದೆ. ಇದಕ್ಕಾಗಿ ಭೂಸ್ವಾಧೀನ ಅಧಿಕಾರಿಯನ್ನು ನೇಮಕ ಮಾಡಿದ್ದೇವೆ. ಒಟ್ಟಾರೆ ಈಜಿಪುರ ಫ್ಲೈ ಓವರ್ ಸಿವಿಲ್ ಕಾಮಗಾರಿ, ಸಂಚಾರ ನಿರ್ವಹಣೆ, ಭೂಸ್ವಾಧೀನ ಪ್ರಕ್ರಿಯೆಗಳು ಎಲ್ಲವೂ ಪರ್ಯಾಯವಾಗಿ ನಡೆಯಲಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾಗಿ ಅವರು ಹೇಳಿದರು.
ಸದ್ಯ ದೊಮ್ಮಲೂರು ರಿಂಗ್ ರಸ್ತೆಯಲ್ಲಿ ಎಂಬೆಸಿ ಗಾಲ್ಫ್ ಲಿಂಕ್ ಸಾಫ್ಟ್ ವೇರ್ ಪಾರ್ಕ್ ನಲ್ಲಿ ಸುಮಾರು 25 ಸಾವಿರ ಕೆಲಸ ಮಾಡುತ್ತಾರೆ. ಅಲ್ಲಿಗೆ ದಿನನಿತ್ಯ ಕೆಲಸಕ್ಕಾಗಿ ಜನರು ವಾಹನದಲ್ಲಿ ಬಂದು ಹೋಗುವುದರಿಂದ ಇಂದಿರಾ ನಗರದಿಂದ ಕೋರಮಂಗಲ ಒಳವರ್ತುಲ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಆದಷ್ಟು ಶೀಘ್ರವಾಗಿ ಯೋಜನೆ ಪೂರ್ಣಗೊಳಿಸಿದರೆ ಸ್ಥಳೀಯ ಹಾಗೂ ಸುತ್ತಮುತ್ತಲ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಈಜಿಪುರ ಫ್ಲೈಓವರ್ ವಿಳಂಬಗತಿಯ ಹಿನ್ನಲೆ :
ಈಜಿಪುರ ಜಂಕ್ಷನ್, ಸೋನಿ ವರ್ಡ್ ಜಂಕ್ಷನ್, ಕೇಂದ್ರೀಯ ಸದನ, ಕೋರಮಂಗಲ 8ನೇ ಮುಖ್ಯರಸ್ತೆ, ಕೋರಮಂಗಲ 60 ಅಡಿ ರಸ್ತೆಯ ವೃತ್ತ, 5ನೇ ಬ್ಲಾಕ್ 1-ಎ ಕ್ರಾಸ್ ಜಂಕ್ಷನ್ ಹಾಗೂ ಬಿಡಿಎ ಜಂಕ್ಷನ್ ಗಳಲ್ಲಿ ಸಿಗ್ನಲ್ ದಾಟಲು ಜನರು ಸಾಕಷ್ಟು ಹರಸಾಹಸ ಪಡುತ್ತಿದ್ದರು. ಹಾಗಾಗಿ ಈ ಭಾಗದಲ್ಲಿ 2.4 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿಯು ಯೋಜನೆ ರೂಪಿಸಿತ್ತು. ಅದರಂತೆ ಈ ಕಾಮಗಾರಿಯ ಗುತ್ತಿಗೆಯನ್ನು ಸಿಂಪ್ಲೆಕ್ಸ್ ಇನ್ ಫ್ರಾಸ್ಟ್ರೆಕ್ಚರ್ ಕಂಪನಿಯು ಪಡೆದುಕೊಂಡಿತ್ತು. 2017ರ ಮೇ 4ರಂದು ಕಾಮಗಾರಿ ಆರಂಭವಾಗಿ 2019ರ ನವೆಂಬರ್ 4ರ ವೇಳೆಗೆ ಕಾಮಗಾರಿ ಪೂರ್ಣವಾಗಬೇಕಿತ್ತು. ಆದರೆ ಈ ಕಾಮಗಾರಿಯು 5 ವರ್ಷವಾದರೂ ಪೂರ್ಣವಾಗಿಲ್ಲ. ಕಾಮಗಾರಿ ಕಾರಣಾಂತರಗಳಿಂದ ಸ್ಥಗಿತಗೊಂಡ ಮೇಲೆ ಈ ಯೋಜನೆ ಕುರಿತಂತೆ ಹೈಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ ನಡೆದು, ಪುನಃ ಹೊಸದಾಗಿ ಟೆಂಡರ್ ಕರೆಯಲು ಕೋರ್ಟ್ ಸಮ್ಮತಿ ಸೂಚಿಸಿದ ಬಳಿಕ ಇದೀಗ ಬಿಬಿಎಂಪಿಯು ಬಾಕಿ ಕಾಮಗಾರಿಗೆ ಹೊಸದಾಗಿ ಕಾಮಗಾರಿ ಕರೆಯಲು ಪ್ರಕ್ರಿಯೆ ನಡೆಸಿದೆ.
ಕೋರಮಂಗಲದಲ್ಲಿನ ಬಿಬಿಎಂಪಿ ಎಂಜಿನಿಯರಿಂಗ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಪಾಲಿಕೆ ದಕ್ಷಿಣ ವಲಯದ ಮುಖ್ಯ ಎಂಜಿನಿಯರ್ ಮೋಹನ್ ಕೃಷ್ಣ, ಕೋರಮಂಗಲ ಕ್ಷೇಮಾಭಿವೃದ್ಧಿ ಸಂಘದ ವಿವಿಧ ಬ್ಲಾಕ್ ಗಳ ಅಧ್ಯಕ್ಷರುಗಳಾದ ನಿತಿನ್, ಪಾರ್ವತಿ, ನೀರಜ್ ಶೆಟ್ಟಿ, ಜಾನ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.