ಗಬ್ಬೆದ್ದು ನಾರುತ್ತಿದ್ದ ಕಲಬುರಗಿ ಜಿಲ್ಲೆಯಲ್ಲಿಯ ಅಫಜಲಪೂರು ತಾಲೂಕಿನ ಗಾಣಗಾಪುರ ಶ್ರೀ ಗುರು ದತ್ತಾತ್ರೇಯ ಕ್ಷೇತ್ರದಲ್ಲಿನ ನದಿ ಸಂಗಮ ಸ್ಥಳವು ಕಳೆದ ಕೆಲವು ದಿನಗಳಿಂದ ಸ್ವಚ್ಛತೆಯ ಹಾದಿಯತ್ತ ಮರುಳುತ್ತಿದೆ.
ದೇಶದ ಹಲವು ರಾಜ್ಯಗಳಿಂದ ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತ ಗಣವು ಬರುವ ಶ್ರೀ ಕ್ಷೇತ್ರದಲ್ಲಿ ಸ್ವಚ್ಛತೆಯದ್ದೇ ಬಹುದೊಡ್ಡ ಸಮಸ್ಯೆಯಾಗಿತ್ತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಕಲಬುರುಗಿ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರಂತರವಾಗಿ ಸಭೆ, ಭಕ್ತರು, ವ್ಯಾಪಾರಸ್ಥರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಸ್ವಚ್ಛಗೊಳಿಸುವ ಕಾರ್ಯದಿಂದ ಈ ಸಂಗಮ ಪವಿತ್ರ ಕ್ಷೇತ್ರದಲ್ಲಿನ ಕಸ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳ ರಾಶಿಯು ಕಡಿಮೆಯಾಗುತ್ತಿದೆ. ಶೇ.70ರಷ್ಟು ಸ್ವಚ್ಛತೆ ಕಾರ್ಯವನ್ನು ಕೈಗೊಳ್ಳುವಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಯಶಸ್ವಿಯಾಗಿದೆ.
ಸಂಗಮ ಪುಣ್ಯ ಕ್ಷೇತ್ರದ ಹಿನ್ನಲೆ :
ಕಲ್ಯಾಣ ಕರ್ನಾಟಕದ ಭಾಗದಲ್ಲಿನ ಇತಿಹಾಸ ಪ್ರಸಿದ್ಧ ಗಾಣಗಾಪುರ ಶ್ರೀ ದತ್ತ ಸುಕ್ಷೇತ್ರ ದೇಶ ವ್ಯಾಪಿ ಭಕ್ತರಿಗೆ ಜನಜನಿತವಾದ ಪುಣ್ಯ ಸ್ಥಳವಾಗಿದೆ. ಈ ಕ್ಷೇತ್ರವು ಗಾಣಗಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದು, ಕಲಬುರಗಿ ಜಿಲ್ಲಾ ಕೇಂದ್ರದಿಂದ 40 ಕೀ ಮೀ ದೂರದಲ್ಲಿದೆ. ಈ ಸಂಗಮ ಕ್ಷೇತ್ರದಲ್ಲಿ ತ್ರೀಮೂರ್ತಿ ಸ್ವರೂಪಿಗಳಾದ ಶ್ರೀ ದತ್ತಾತ್ರೇಯವರು ನೆಲೆಸಿದ್ದಾರೆ ಎನ್ನುವುದಕ್ಕೆ ಅವರ ನಂತರ ಅವತಾರ ಪುರುಷರಾದ ನರಸಿಂಹ ಸರಸ್ವತಿಯವರು ಗಾಣಗಾಪುರದಲ್ಲಿ ನೆಲೆಸಿದ್ದಕ್ಕೆ, ಅವರ ಮಾಡಿದ ಅನೇಕ ಪವಾಡಗಳು ಸಾಕ್ಷಿಯಾಗಿವೆ. ಮುಖ್ಯವಾಗಿ ಭೀಮಾ ಹಾಗೂ ಅಮರ್ಜಾ ನದಿಗಳ ಸಂಗಮ ಕೇತ್ರಕ್ಕೆ ಬಹಳಷ್ಟು ಮಹತ್ವವಿದೆ. ಇಲ್ಲಿ ನರಸಿಂಹ ಸರಸ್ವತಿಯವರ ನಿರ್ಗುಣ ಪಾದುಕೆಗಳು ಹಾಗೂ ಅವರು ಮಾಡಿದ ಪವಾಡಗಳು ಇಂದಿಗೂ ಜನರ ಬಾಯಲ್ಲಿ ಅಚ್ಚಳಿಯದ ಹಾಗೆ ಇದೆ. ವಿಶೇಷವಾಗಿ ಗುರು ಪೂರ್ಣಿಮೆ, ದತ್ತ ಜಯಂತಿ ಹಾಗೂ ಪ್ರತಿ ಗುರುವಾರ ಲಕ್ಷಾಂತರ ಜನರು ಸಂಗಮ ಕ್ಷೇತ್ರಕ್ಕೆ ಭೇಟಿ ನೀಡಿ ಪುನೀತರಾಗುತ್ತಾರೆ.
ಭಕ್ತರ ನಿರ್ಲಕ್ಷ್ಯದಿಂದ ಪವಿತ್ರ ಸಂಗಮ ಪ್ರದೇಶ ಮಲಿನ :
ಭೀಮಾ–ಅಮರಜಾ ನದಿ ಸಂಗಮಗಳ ಮಧ್ಯೆ ಇರುವ ಈ ಪವಿತ್ರ ಕ್ಷೇತ್ರವು ಸದಾ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ. ಇಲ್ಲಿಗೆ ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಲಕ್ಷಾಂತರ ಭಕ್ತರು ಈ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ತಮ್ಮ ಪಾಪ ಪರಿಹಾರವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಸ್ನಾನ ಮಾಡುತ್ತಾರೆ. ಆದರೆ ಸ್ನಾನ ಮಾಡುವಾಗ ತಾವು ಉಟ್ಟ ಬಟ್ಟೆಯನ್ನು ನದಿಯಲ್ಲೆ ಬೀಡುತ್ತಿರುವುದರಿಂದ ನದಿ ಮಲೀನವಾಗುತ್ತಿದೆ. ಅದಲ್ಲದೆ ಸ್ನಾನ ಮಾಡಿದ ನಂತರ ನದಿಗೆ ಕಾಯಿ-ಕರ್ಪೂರ-ಹೂವುಗಳನ್ನು ಹಾಕುತ್ತಿರುವುದರಿಂದ ನದಿ ಮಲಿನವಾಗುತ್ತಿದೆ. ಈ ಕುರಿತು ಬರುವ ಭಕ್ತಾದಿಗಳಿಗೆ ಸಾಕಷ್ಟು ತಿಳುವಳಿಕೆ ನೀಡಿದರೂ ನದಿಯಲ್ಲಿ ಬೇಡದ ವಸ್ತುಗಳನ್ನು ಹಾಕಿ ಹಾಳುಗೆಡುವುತಿದ್ದಾರೆ.
ಸ್ವಚ್ಛತೆ ಪ್ರಾರಂಭಕ್ಕೆ ನಾಂದಿ :
ಈ ಪವಿತ್ರ ಕ್ಷೇತ್ರದಲ್ಲಿನ ನದಿಪಾತ್ರವನ್ನು ಹಾಗೂ ನದಿಯನ್ನು ಸ್ವಚ್ಛಗೊಳಿಸಿ, ಜನಜಾಗೃತಿ ಮೂಡಿಸಲು ನವೆಂಬರ್ 11ರಂದು ಕಲಬುರಗಿ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಸಂಯುಕ್ತಾಶ್ರಯದಲ್ಲಿ “ಜಲ ಜೀವನ್ ಮಿಷನ್” ಯೋಜನೆಯ ಐ.ಎಸ್.ಆರ್.ಎ ಮತ್ತು ಐ.ಎಸ್.ಎ ಸಂಸ್ಥೆಗಳ ಸಿಬ್ಬಂದಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಐಸ್ಎ ನಿರ್ದೇಶಕರಾದ ಶೀತಲ್ ಸಿಂಗ್ ರವರು ಅಫಜಲಪೂರ ತಾಲೂಕಿನ ಗಾಣಗಾಪೂರ ಪಂಚಾಯತ್ ಅಧೀನದಲ್ಲಿ ಬರುವ ಸ್ವಚ್ಛ ಸಂಕೀರ್ಣ ಘಟಕ ಹಾಗೂ ಸಂಗಮ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಕಂಡು ಬಂದ ಸ್ವಚ್ಛತೆಯಿಲ್ಲದ ಪರಿಸರದ ಕುರಿತು ಗಾಣಗಾಪೂರು ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಪ್ರತಿ ವಾರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಗಲೀಜು ಮಾಡುತ್ತಿದ್ದಾರೆ. ಇದರಿಂದ ಸ್ವಚ್ಛತೆ ಅರಿವು ಮೂಡಿಸಲು ಮತ್ತು ಸ್ವಚ್ಛತೆ ಕೈಗೊಳ್ಳಲು ತೊಂದರೆಯಾಗುತ್ತಿದೆ ಎಂಬ ವಿಷಯವನ್ನು ಆ ಅಧಿಕಾರಿಗಳ ಗಮನಕ್ಕೆ ತಂದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಐಎಸ್ಎ ನಿದೇರ್ಶಕರು ಐ.ಎಸ್.ಆರ್.ಎ ಮತ್ತು ಐ.ಎಸ್.ಎ ಸಂಸ್ಥೆಗಳ ಮತ್ತು ಎಸ್.ಬಿ.ಎಂ. ಸಿಬ್ಬಂದಿ ಜೊತೆ ಸಭೆ ನಡೆಸಿ ಒಂದು ತಿಂಗಳ ಒಳಗೆ ಸಂಗಮ ಕ್ಷೇತ್ರ ಸ್ವಚ್ಛತೆ ಮತ್ತು ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಂಡು ಸ್ವಚ್ಛತೆ ಕೈಗೊಳ್ಳುವಂತೆ ಸಭೆಯಲ್ಲಿ ಸೂಚನೆ ನೀಡಿದರು.
ಬಳಿಕ ನ.7ರಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹಾಗೂ ದೇವಸ್ಥಾನ ಸಮಿತಿ ಯವರೊಂದಿಗೆ ಮಾತನಾಡಿದರು. ತದನಂತರ ನ.11ರಂದು ಸಂಗಮ ದೇವಸ್ಥಾನದ ಆವರಣ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಪೂರ್ವಸಿಧ್ಧತೆಗಾಗಿ ಕ್ಷೇತ್ರ ವೀಕ್ಷಣೆಗಾಗಿ ತೆರಳಿದ ಸಂದರ್ಭದಲ್ಲಿ, ಪ್ರಥಮವಾಗಿ ರೂಪು ರೇಷೆಗಾಗಿ ಅಲ್ಲಿಯ ವಾತವಾರಣ ಹಾಗೂ ಚಟುವಟಿಕೆ ಕುರಿತು ವೀಕ್ಷಿಸಲಾಯಿತು. ನ.22 ರಂದು ಅಲ್ಲಿಯ ಸ್ವಚ್ಛತಾ ಸಿಬ್ಬಂದಿಯೊಂದಿಗೆ ಈ ತಂಡವು ಸಭೆ ನಡೆಸಿ ಅಲ್ಲಿನ ಸಾಧಕ ಬಾಧಕಗಳನ್ನು ಕೇಳಿ ತಿಳಿದುಕೊಂಡಿತು. ಸಂಗಮ ಕ್ಷೇತ್ರದಲ್ಲಿ ಯಾವ ಕ್ರಮಗಳನ್ನು ಕೈಗೊಂಡರೆ ಆ ಪ್ರದೇಶವು ಸ್ವಚ್ಛವಾಗುತ್ತದೆ ಎನ್ನುವ ಬಗ್ಗೆ ವಿಚಾರಿಸಿದಾಗ ಈ ಕೆಳಕಂಡ ಅಂಶಗಳತ್ತ ಗಮನಹಿಸಿದರೆ ಸಂಗಮ ಕ್ಷೇತ್ರ ನಿತ್ಯ ಸ್ವಚ್ಛತೆಯಿಂದ ಇರುತ್ತದೆ ಎಂಬ ಮಾಹಿತಿ ಲಭ್ಯವಾಯಿತು.
ಯಾವ ಕ್ರಮ ಕೈಗೊಂಡರೆ ಶ್ರೀಕ್ಷೇತ್ರ ಸ್ವಚ್ಛಗೊಳ್ಳುತ್ತದೆ? :
ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಪ್ರಚಾರ ಫಲಕಗಳನ್ನು ಕೈಗೊಳ್ಳಬೇಕು, ಕಸ ಹಾಕುವುದಕ್ಕೆ ಕಸದ ಬುಟ್ಟಿಗಳ ವ್ಯವಸ್ಥೆ ಮಾಡಬೇಕು, ನದಿಯಲ್ಲಿ ಬಿಡುವ ಬಟ್ಟೆಗಳನ್ನು ಸಿಮೆಂಟ್ ರಿಂಗ್ (ಗುಂಡಿಯಲ್ಲಿ)ನಲ್ಲಿ ಹಾಕುವ ವ್ಯವಸ್ಥೆ ಮಾಡಬೇಕು. ನದಿಯ ಎರಡು ಬದಿಗೆ ಇಬ್ಬರು ಸೆಕ್ಯುರಿಟಿ ಗಾರ್ಡ್ ಗಳನ್ನು ನಿರಂತರವಾಗಿ ನಿಯೋಜಿಸಬೇಕು. ಸಿಸಿ ಟಿವಿ ಕ್ಯಾಮರಾ ಅಳವಡಿಕೆ, ಧ್ವನಿ ವರ್ಧಕಗಳ ಮೂಲಕ ಮರಾಠಿ, ತೆಲಗು, ಕನ್ನಡ ಭಾಷೆಯ ಮೂಲಕ ನಿರಂತರವಾಗಿ ಸ್ವಚ್ಛತೆ ಕುರಿತು ಘೋಷಣೆ ಮಾಡಲು ಕ್ರಮ ಕೈಗೊಳ್ಳಬೇಕು. ಪಾರ್ಕಿಂಗ್ ಪ್ರದೇಶ ಮತ್ತು ನದಿಯ ದಂಡೆಯ ಸುತ್ತಮುತ್ತ ಮಲ ವಿಸರ್ಜನೆ, ಮೂತ್ರ ವಿಸರ್ಜನೆ ಮಾಡದಂತೆ ಕ್ರಮ ಕೈಗೊಳ್ಳಬೇಕು. ಈ ಸೂಚನೆಯನ್ನು ಉಲ್ಲಂಘಿಸುವವರಿಗೆ ಮುಲಾಜಿಲ್ಲದೆ ದಂಡ ವಿಧಿಸಬೇಕು.
ಬೀದಿ ವ್ಯಾಪಾರಿಗಳಿಗೆ ತಮ್ಮ ದಿನ ನಿತ್ಯದ ಕಸವನ್ನು ರಸ್ತೆಗೆ ಹಾಕದೆ ಕಸದ ಗುಂಡಿಗೆ ಕಸವನ್ನು ಹಾಕಲು ಸೂಚನೆ ನೀಡಬೇಕು. ಇಲ್ಲಿ ತರುವ ಶವದ ಅಸ್ಥಿಯನ್ನು ನದಿಯಲ್ಲಿ ವಿರ್ಸಜಿಸುವುದನ್ನು ನಿಷೇಧಿಸಿಬೇಕು ಹಾಗೂ ಇದನ್ನು ಇತರೆಡೆ ವಿಸರ್ಜಿಸಲು ವ್ಯವಸ್ಥೆ ಮಾಡಬೇಕು. ಭಕ್ತಾದಿಗಳಿಗೆ ಪಾದರಕ್ಷೆಗಳನ್ನು ಬಿಡಲು, ವಾಹನಗಳನ್ನು ನಿಲ್ಲಿಸಲು ಸೂಕ್ತ ಸ್ಥಳ ನಿಗಧಿಪಡಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶ್ರೀ ದತ್ತಕ್ಷೇತ್ರದಲ್ಲಿ ಸ್ವಚ್ಛೆ ಕಾಪಾಡುವ ಕುರಿತು ಬೀದಿ ವ್ಯಾಪಾರಿಗಳ ಸಭೆ ಕರೆದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ತಿಳುವಳಿಕೆ ಹೇಳುವುದು. ಮಾನಸಿಕ ಅಸ್ವಸ್ಥರಿಗೆ, ವೃಧ್ಧರಿಗೆ ವೃದ್ಧಾಶ್ರಮಕ್ಕೆ ಕಳಿಸುವ ವ್ಯವಸ್ಥೆ ಮಾಡಬೇಕು. ಹೊಳೆ ದಂಡೆಯಲ್ಲಿ ಹಾಗೂ ಪಾರ್ಕಿಂಗ್ ಏರಿಯಾದಲ್ಲಿ ಬೀದಿ ದೀಪ ಸೌಕರ್ಯ, ಸುಮಾರು 10 ರಿಂದ 15 ಘಟಕಗಳಿರುವ ಸಾರ್ವಜನಿಕ ಶೌಚಾಲಯ ನಿರ್ಮಾಣ, ಪ್ರತಿ ತಿಂಗಳು ಅಥವಾ ಅಗತ್ಯ ತಕ್ಕಂತೆ ದೇವಸ್ಥಾನದ ಸಮಿತಿ ಸಭೆ ಜರುಗಿಸಬೇಕು. ಇಷ್ಟೆಲ್ಲಾ ಸೌಕರ್ಯ, ವ್ಯವಸ್ಥೆಗಳಾದಲ್ಲಿ ಗಾಣಗಾಪುರ ಶ್ರೀ ದತ್ತ ಸುಕ್ಷೇತ್ರ ಈಗಾಗಲೇ ಪಡೆದಿರುವ ಪ್ರಸಿದ್ಧಿಗೆ ಸಾರ್ಥಕವಾಗುತ್ತದೆ ಎಂಬುದು ಸಭೆ ನಡೆಸಿದ ಬಳಿಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳಿಗೆ ಮನದಟ್ಟಾಯಿತು.
ಶ್ರೀಕ್ಷೇತ್ರದಲ್ಲಿ ಕಂಡು ಬಂದಿದೆ ಶೇ.70ರಷ್ಟು ಸ್ವಚ್ಛತೆ:
ನ.22ರಂದು ನಡೆಸಿದ ಸಭೆಯಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ದೇವಸ್ಥಾನದ ಕಮಿಟಿ ಸಿಬ್ಬಂದಿ ಸ್ಪಂದಿಸಿದ ಹಿನ್ನಲೆಯಲ್ಲಿ ಎಲ್ಲರೂ ಒಗ್ಗೂಡಿ ಡಿ.3ರಿಂದ ಪ್ರತಿ ಶುಕ್ರವಾರ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ‘ಸ್ವಚ್ಛ ಶುಕ್ರವಾರ’ ಕಾರ್ಯಕ್ರಮ ಆಯೋಜಿಸಿ ಸ್ವಚ್ಛತೆ ಮಾಡಲಾಯಿತು. ಅಲ್ಲದೆ ಡಿ.5ರಂದು ಬೀದಿ ವ್ಯಾಪಾರಿಗಳ ಸಭೆ ಕರೆದು ಸಂಗಮ ಕ್ಷೇತ್ರದ ಸ್ವಚ್ಛತೆಗೆ ಸಭೆ ನಡೆಸಲಾಯಿತು. ಇದರ ಜೊತೆಗೆ ಡಿ.12 ಹಾಗೂ 22ನೇ ತಾರೀಖಿನಂದು ಶ್ರೀಕ್ಷೇತ್ರದ ಸಂಗಮ ಸ್ಥಳದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಯಿತು. ಪ್ರಾರಂಭದಲ್ಲಿ ಅಲ್ಲಿನ ಸಾರ್ವಜನಿಕರು, ಗ್ರಾಮ ಪಂಚಾಯತಿ ಸದಸ್ಯರು ಸ್ವಚ್ಛತೆಗೆ ಸ್ಪಂದಿಸುತ್ತಿರಲಿಲ್ಲ. ಆದರೆ ತದನಂತರ ಕಲಬುರುಗಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆವತಿಯಿಂದ ಸ್ವಚ್ಛತೆ ಕಾರ್ಯ ಕೈಗೊಂಡಾಗ ಎಲ್ಲರೂ ಕೈ ಜೋಡಿಸಿದರು. ಬಳಿಕ ಇಲಾಖೆ ಕಡೆಯಿಂದ ಆ ಭಾಗದಲ್ಲಿ ಸ್ವಚ್ಛತೆ ಕುರಿತಂತೆ ಗೋಡೆ ಬರಹ ಬರೆಸಲಾಯಿತು. ಇದೆಲ್ಲ ಕಾರ್ಯಗಳನ್ನು ಕೈಗೊಂಡ ಕಾರಣ ಗಾಣಗಾಪುರ ಶ್ರೀ ದತ್ತ ಸಂಗಮ ಕ್ಷೇತ್ರದಲ್ಲಿ ಶೇ.70ರಷ್ಟು ಅರಿವು ಮೂಡಿದೆ. ಈ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಗಳು ಯಶಸ್ವಿಯಾಗಬೇಕಾದರೆ, ದೇವಸ್ಥಾನ ಸಮಿತಿಯವರು ಈ ಮೇಲಿನ ಅಂಶಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರಾದ ಡಾ.ಗಂಗಾಧರ್, ಐಸ್ಎ ನಿರ್ದೇಶಕರಾದ ಶೀತಲ್ ಸಿಂಗ್ ನೇತೃತ್ವದಲ್ಲಿ ಈ ಸ್ವಚ್ಛತೆ ಮತ್ತು ಅರಿವು ಮೂಡಿಸುವ ಕಾರ್ಯ ಗಾಣಗಾಪುರ ಸೇರಿದಂತೆ ರಾಜ್ಯದೆಲ್ಲೆಡೆ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಾಕಿಕೊಂಡು ಕೈಗೊಳ್ಳಲಾಗುತ್ತಿದೆ.