ಬೆಳಗಾವಿ, ಡಿ.23 www.bengaluruwire.com : ಕುಡಿಯುವ ನೀರು ಮತ್ತು ಅಂತರ್ಜಲ ಕುಸಿತ ಸಮಸ್ಯೆ ಎದುರಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರಿಗೆ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ.
ಎತ್ತಿನಹೊಳೆ ತಿರುವು ಯೋಜನೆಯ ಮೊದಲ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಯೋಜಿಸಲಾಗಿದೆ. ಅದೇ ರೀತಿ ಎರಡನೇ ಹಂತದಲ್ಲಿ ಕೈಗೆತ್ತಿಕೊಂಡಿರುವ 260 ಕಿ.ಮೀ ಉದ್ದ ಗುರುತ್ವಾಕರ್ಷಣೆ ಆಧಾರಿತ ಕಾಲುವೆ ನಿರ್ಮಾಣ ಕಾರ್ಯ ಶೇ.70ರಷ್ಟು ಪೂರ್ಣಗೊಂಡಿದೆ ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಒಂದನೇ ಹಂತದಲ್ಲಿ ಏತ ಕಾಮಗಾರಿಗಳನ್ನು ಹಾಗೂ ವಿದ್ಯುತ್ ಕಾಮಗಾರಿಗಳನ್ನು 7 ಪ್ಯಾಕೇಜ್ ಗಳಾಗಿ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಕೈಗೊಂಡಿರುವ ಲಿಫ್ಟ್ ಕಾಂಪೊನೆಂಟ್ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಯೋಜಿಸಲಾಗಿದೆ.
260 ಕಿ.ಮೀ ಕಾಲುವೆ ಪೈಕಿ 170 ಕಿ.ಮೀ ಕಾಮಗಾರಿ ಪೂರ್ಣ :
ಅಲ್ಲದೆ ಎರಡನೇ ಹಂತದಲ್ಲಿ ಕೈಗೆತ್ತಿಕೊಂಡಿರುವ 260 ಕಿ.ಮೀ ಉದ್ದದ ಗುರುತ್ವಾಕರ್ಷಣೆ ಆಧಾರಿತ ಕಾಲುವೆ ನಿರ್ಮಾಣ ಕಾಮಗಾರಿಯ ಪೈಕಿ ಶೇ.70ರಷ್ಟು ಪೂರ್ಣಗೊಂಡಿದ್ದು, ಮುಂದಿನ ವರ್ಷದ ಮಾರ್ಚ್ 2023ಕ್ಕೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಭೈರಗೊಂಡ್ಲು ಜಲಾಶಯಕ್ಕಿಂತ ಮೊದಲು ಕವಲೊಡೆಯುವ ಟಿ.ಜಿ ಹಳ್ಳಿ, ರಾಮನಗರ ಫೀಡರ್, ಮಧುಗಿರಿ ಫೀಡರ್ ಮತ್ತು ಗೌರಿಬಿದನೂರು ಫೀಡರ್ ಗಳ ನಿರ್ಮಾಣ ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿರುತ್ತದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಶ್ರವಣಬೆಳಗೊಳ ಶಾಸಕ ಸಿ.ಎಸ್.ಬಾಲಕೃಷ್ಣ ಎತ್ತಿನಹೊಳೆ ಯೋಜನೆ ಕುರಿತಂತೆ ಕೇಳಿದ ಚುಕ್ಕೆ ಗುರಿತಿಲ್ಲದ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಬಿ.ಗೋವಿಂದ ಕಾರಜೋಳ ಈ ಉತ್ತರ ನೀಡಿದ್ದಾರೆ.
ಎತ್ತಿನಹೊಳೆ ತಿರುವು ಯೋಜನೆಯಲ್ಲಿ ವಿವಿಧ ಹಂತದಲ್ಲಿರುವ ಫೀಡರ್ ಗಳ ಕಾಮಗಾರಿಯು ಈ ಕೆಳಕಂಡಂತಿದೆ :
1) 260 ಕಿ.ಮೀ ಉದ್ದದ ಗುರುತ್ವಾಕರ್ಷಣೆ ಕಾಲುವೆ ಪೈಕಿ 170 ಕಿ.ಮೀ ಕಾಮಗಾರಿಯು ಬಹುತೇಕ ಪೂರ್ಣಗೊಂಡಿರುತ್ತದೆ.
2) ಟಿ.ಜಿ.ಹಳ್ಳಿ ಮತ್ತು ರಾಮನಗರ ಫೀಡರ್ ಕಾಲುವೆಯ ಒಟ್ಟು 52.89 ಕಿ.ಮೀ ಉದ್ದದ ಪೈಕಿ, ಈವರೆಗೆ 42.30 ಕಿ.ಮೀ ಪೈಪ್ ಲೈನ್ ನಿರ್ಮಿಸುವ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
3) ಮಧುಗಿರಿ ಫೀಡರ್ ಕಾಲುವೆ ಒಟ್ಟು 120.48 ಕಿ.ಮೀ ಉದ್ದದ ಪೈಕಿ ಈವರೆಗೆ 98 ಕಿ.ಮೀ ಪೈಪ್ ಲೈನ್ ನಿರ್ಮಾಣ ಮಾಡುವ ಕಾಮಗಾರಿಯು ಪೂರ್ಣಗೊಂಡಿದೆ. ಬಾಕಿ ಕಾಮಗಾರಿಯು ನಡೆಯುತ್ತಿದೆ.
4) ಗೌರಿಬಿದನೂರು ಫೀಡರ್ ಕಾಲುವೆಯ ಒಟ್ಟು 81.60 ಕಿ.ಮೀ ಉದ್ದದ ಪೈಕಿ 73 ಕಿ.ಮೀ ಪೈಪ್ ಲೈನ್ ನಿರ್ಮಿಸುವ ಕಾರ್ಯ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯು ಕೈಗೊಳ್ಳಲಾಗುತ್ತಿದೆ.
ಭೈರಗೊಂಡ್ಲು ಜಲಾಶಯಕ್ಕಿಂತ ಮೊದಲು ಕವಲೊಡೆಯುವ 254.97 ಕಿ.ಮೀ ಉದ್ದದ ಪೂರಕ ಕಾಲುವೆ ನಿರ್ಮಾಣ ಕಾಮಗಾರಿಯು ಶೇ.85ರಷ್ಟು ಪೂರ್ಣಗೊಂಡಿದೆ. ಇದು ಜೂನ್ 2023ಕ್ಕೆ ಪೂರ್ಣಗೊಳ್ಳಲಿದೆ. ಭೈರಗೊಂಡ್ಲು ಜಲಾಶಯದ ಸಂಗ್ರಹಣಾ ಸಾಮರ್ಥ್ಯವನ್ನು 1.5 ರಿಂದ 2 ಟಿಎಂಸಿಗೆ ಸೀಮಿತಗೊಳಿಸಿ 23,251 ಕೋಟಿ ರೂ. ಮೊತ್ತದ ಪುನರ್ ಪರಿಷ್ಕ್ರತ ಯೋಜನಾ ವರದಿಗೆ ಅನುಮೋದನೆ ನೀಡಲು ಜಲಸಂಪನ್ಮೂಲ ಇಲಾಖೆ ಕ್ರಮ ಕೈಗೊಂಡಿದೆ.
ಎತ್ತಿನಹೊಳೆ ತಿರುವು ಯೋಜನೆ ವಿವರ :
ಎತ್ತಿನಹೊಳೆ ಮೂಲ ಅಂದಾಜಿನಡಿ ಲಿಫ್ಟ್ ಕಾಂಪೊನೆಂಟ್ ಅಡಿಯಲ್ಲಿ ಒಟ್ಟು 8 ಲಿಫ್ಟ್ ಯೋಜನೆ (ವಿದ್ಯುತ್ ಚಾಲಿತ ಬೃಹದಾಕಾರದ ಮೋಟರ್‌ಗಳನ್ನು ಅಳವಡಿಸಿ ದೊಡ್ಡಗಾತ್ರದ ಪೈಪ್‌ಗಳ ಮೂಲಕ ನೀರೆತ್ತುವುದು)ಗಳಿದೆ. ಇದರಿಂದ ವಾರ್ಷಿಕ 24.1 ಟಿಎಂಸಿ ನೀರನ್ನು 960 ಮೀಟರ್ ಎತ್ತರಕ್ಕೆ ಎತ್ತಿ ಅಲ್ಲಿಂದ 260 ಕಿ.ಮೀ ಉದ್ದದ ಗುರುತ್ವಾಕರ್ಷಣೆ ಕಾಲುವೆ ಮೂಲಕ ಕೊರಕಟಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಜಲಾಶಯವೊಂದಕ್ಕೆ ನೀರು ಹರಿಸಿ ತದನಂತರ ಆ ಜಲಾಶಯದಿಂದ ಲಿಫ್ಟ್ ಮುಖಾಂತರ ನೀರನ್ನು ಎತ್ತಿ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರಿನ ಉದ್ದೇಶಕ್ಕೆ ಹಾಗೂ ಕೆರೆ ತುಂಬಿಸಲು ಯೋಜಿಸಲಾಗಿದೆ.
ಎತ್ತಿನಹೊಳೆ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರದೇಶಗಳಿಗೆ ಸುರಕ್ಷಿತ ಕುಡಿಯುವ ನೀರನ್ನು ಪೂರೈಸುವ ಯೋಜನೆ ಇದಾಗಿದೆ. ಅಲ್ಲದೆ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗಗಳಲ್ಲಿ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಗೊಳ್ಳಲು ಈ ಭಾಗದ ಜನಪ್ರತಿನಿಧಿಗಳು ತೀವ್ರವಾಗಿ ಒತ್ತಾಯಿಸುತ್ತಿರುವುದರಿಂದ ಹಾಗೂ ಯೋಜನೆಯ ವಿವಿಧ ಹಂತಗಳಲ್ಲಿರುವ ಕಾಮಗಾರಿಗಳನ್ನು ಏಕ ಕಾಲದಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಿ ಕುಡಿಯುವ ನೀರು ಪೂರೈಸುವ ದೃಷ್ಟಿಯಿಂದ ಭೈರಗೊಂಡ್ಲು ಜಲಾಶಯದ ನಂತರ ನೀರನ್ನು ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪೂರೈಸುವ ಕಾಮಗಾರಿಗಳನ್ನು ಕೂಡ ಕೈಗೆತ್ತಿಕೊಳ್ಳಲು ಕ್ರಮವಹಿಸಲಾಗಿರುತ್ತದೆ ಎಂದು ಗೋವಿಂದ ಕಾರಜೋಳ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ.
ಪರಿಷ್ಕೃತ ಯೋಜನಾ ಮೊತ್ತ ಮೂಲ ಅಂದಾಜು ಮೊತ್ತಕ್ಕಿಂತ ಶೇ.179ರಷ್ಟು ಏರಿಕೆ :
2012ರಲ್ಲಿ ಎತ್ತಿನಹೊಳೆ ಯೋಜನೆ ಪ್ರಾರಂಭವಾದಾಗಿನಿಂದ ಈತನಕ ಯೋಜನೆಯ ಮೊತ್ತ ಶೇ.179ರಷ್ಟು ಹೆಚ್ಚಾಗಿದೆ. ಯೋಜನೆ ಜಾರಿಯ ಪ್ರಾರಂಭದಲ್ಲಿ 8,323 ಕೋಟಿ ರೂ. ಇದ್ದ ಯೋಜನಾ ಅಂದಾಜು ಮೊತ್ತ, 2014ರ ಇಸವಿಯಲ್ಲಿ 12,912.36 ಕೋಟಿ ರೂ.ಗೆ ಪರಿಷ್ಕೃತಗೊಂಡಿತ್ತು. ಡಿ.9ರಂದು ರಾಜ್ಯ ಸಚಿವ ಸಂಪುಟದಲ್ಲಿ ಎತ್ತಿನಹೊಳೆ ತಿರುವು ಯೋಜನೆಯ ಪರಿಷ್ಕೃತ ಯೋಜನಾ ಮೊತ್ತವನ್ನು 23,251 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ.