ಬೆಂಗಳೂರು, ಡಿ.22 www.bengaluruwire.com : ಚೈನಾದಲ್ಲಿ ಕೋವಿಡ್ ರುದ್ರ ನರ್ತನ ಮತ್ತೊಮ್ಮೆ ಹೆಚ್ಚುತ್ತಿದೆ. ಮತ್ತೊಂದೆಡೆ ರಾಜಧಾನಿ ಬೆಂಗಳೂರಿನಲ್ಲಿ ಸ್ಟ್ರಾಂಡ್ ಲೈಫ್ ಸೈನ್ಸ್ ಎಂಬ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕೃತ ಪ್ರಯೋಗಾಲಯವು ನವೆಂಬರ್ ತಿಂಗಳಿನಲ್ಲಿ ಕರೋನಾ ಸೋಂಕಿನ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷಣೆ (Genome sequencing) ಕುರಿತು ಪರೀಕ್ಷೆಗೊಳಪಡಿಸಿದ್ದು, ಕರೋನಾ ವೈರಸ್ ಓಮಿಕ್ರಾನ್ ನ ಉಪತಳಿ ಎಕ್ಸ ಬಿಬಿ (XBB) ಹಾಗೂ ಅದರ ಹೆಚ್ಚುವರಿ ಉಪತಳಿ ಏರಿಕೆಯಾಗುತ್ತಿರುವುದನ್ನು ಪತ್ತೆಹಚ್ಚಿದೆ.
ಬೆಂಗಳೂರಿನಲ್ಲಿ ತ್ಯಾಜ್ಯ ನೀರು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಮತ್ತು ಮತ್ತಿತರ ಮೂಲಗಳಿಂದ ಪಡೆದ ಮಾದರಿಗಳನ್ನು ಪ್ರಯೋಗಾಲಯದಲ್ಲಿ ವೈರಾಣು ಸಂರಚನೆ ವಿಶ್ಲೇಷಣೆಗೆ ಒಳಪಡಿಸಿದಾಗ ಎಕ್ಸ್ ಬಿಬಿ ರೂಪಾಂತರ ತಳಿಗಳು ಹಾಗೂ ಅದರ ಉಪತಳಿಗಳು ನವೆಂಬರ್ ಒಂದೇ ತಿಂಗಳಿನಲ್ಲಿ ಶೇ.16ರಿಂದ 57 ರಷ್ಟು ಏರಿಕೆಯಾಗಿರುವುದು ಕಂಡುಬಂದಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಓಮೈಕ್ರಾನ್ ನ ಉಪತಳಿ ಎಕ್ಸ್ ಬಿಬಿಯ ಆರು ರೂಪಾಂತರ ವಂಶವಳಿಗಳು ಸೃಷ್ಟಿಯಾಗಿದ್ದು ಅವುಗಳನ್ನು ಎಕ್ಸ್ ಬಿಬಿ.1 (XBB.1) ಎಕ್ಸ್ ಬಿಬಿ.2 (XBB.2), ಎಕ್ಸ್ ಬಿಬಿ.3 ( XBB.3), ಎಕ್ಸ್ ಬಿಬಿ.3.1 ( XBB.3.1), ಎಕ್ಸ್ ಬಿಬಿ.4 (XBB.4) ಹಾಗೂ ಎಕ್ಸ್ ಬಿಬಿ.5 (XBB.5) ಎಂದು ಗುರುತಿಸಲಾಗಿದೆ. ಆ ಪೈಕಿ ಶೇ.50.4ರಷ್ಟು ಎಕ್ಸ್ ಬಿಬಿ.3, ಎಕ್ಸ್ ಬಿಬಿ ಶೇ.22ರಷ್ಟು, ಎಕ್ಸ್ ಬಿಬಿ.1 ಶೇ.14.5ರಷ್ಟು ಹಾಗೂ ಎಕ್ಸ್ ಬಿಬಿ.2 ರೂಪಾಂತರ ತಳಿ ಶೇ.9.7ರಷ್ಟು ಇರುವುದನ್ನು ಸ್ಟ್ರಾಂಡ್ ಲೈಫ್ ಸೈನ್ಸ್ ಪ್ರಯೋಗಾಲದ ವರದಿಗಳಲ್ಲಿ ಹೇಳಲಾಗಿದೆ.
ಚೈನಾದಲ್ಲಿ ಕಂಡುಬಂದ ಬಿಎಫ್.7 ಬೆಂಗಳೂರಿನಲ್ಲಿ ಕಂಡು ಬಂದಿಲ್ಲ :
ಇದೇ ವೇಳೆ ಓಮಿಕ್ರಾನ್ ನ ಬಿಎ.2.75 (BA.2.75) ಶೇ.15ರಷ್ಟು, ಬಿ.ಎ.2 (BA.2) ಶೇ.3ರಷ್ಟು, ಬಿ.ಎ.3 (BA.3) ಶೇ.2ರಷ್ಟು ಇಳಿಕೆಯಾಗುತ್ತಿರುವುದನ್ನು ಗಮನಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಾಮಾಣಿಕೃತವಾದ ಪ್ರಯೋಗಾಲಯವಾದ ಸ್ಟ್ರಾಂಡ್ ಲೈಫ್ ಸೈನ್ಸ್ ಬಿಕ್ಯೂ.1 (BQ.1) ಹಾಗೂ ಸಿಎಚ್.1.1 (CH.1.1) ರೂಪಾಂತರ ತಳಿಯು ಬೆಂಗಳೂರಿನಲ್ಲಿ ಕಂಡು ಬಂದಿರುವುದನ್ನು ದೃಢಪಡಿಸಿದೆ. ಆದರೆ ಚೀನಾದಲ್ಲಿ ಕರೋನಾ ಸೋಂಕು ಉಲ್ಭಣಗೊಳ್ಳಲು ಕಾರಣವಾದ ಓಮಿಕ್ರಾನ್ ನ ಉಪತಳಿಯಾದ ಬಿಎಫ್.7 ನವೆಂಬರ್ ತಿಂಗಳಿನಲ್ಲಿ ನಮ್ಮಲ್ಲಿ ಕಂಡು ಬಂದಿಲ್ಲ ಎಂದು ತಿಳಿಸಿದೆ.
ಕಳೆದ ಒಂದು ವರ್ಷದಿಂದ ಕೋವಿಡ್ ಸೋಂಕಿನ ರೂಪಾಂತರ ತಳಿ ಓವಿಕ್ರಾನ್ ಕಾಣುತ್ತಿದ್ದೇವೆ. ಅದರಲ್ಲಿ ಬಿಎ.2, ಬಿಎ4, ಬಿಎ.5 ಸೋಂಕು ಹರಡುವ ಸ್ವಭಾವ ಜಾಸ್ತಿಯಿದೆ. ಆದರೂ ಇದರಿಂದ ಸಾಯುವ ಸಂದರ್ಭ ಅಥವಾ ಆಸ್ಪತ್ರೆ ಸೇರುವ ಸಂದರ್ಭ ಬಂದಿಲ್ಲ. ಆದರೆ ಓಮಿಕ್ರಾನ್ ನ ಬಿಎ.2.75 (BA.2.75), ಬಿಕ್ಯೂ.1 (BQ.1), ಎಕ್ಸ್ ಬಿಬಿ (XBB) ಹೊಸ ಉಪತಳಿಗಳು 3-4 ತಿಂಗಳಿನಿಂದ ದೇಶದಲ್ಲಿ ಕಂಡು ಬರುತ್ತಿದೆ. ಈಗ ಎಕ್ಸ್ ಬಿಬಿ ಉಪತಳಿಗಳು ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಸಂಶೋಧನೆ ನಡೆಯುತ್ತಿದೆ.
“ಬೆಂಗಳೂರಿನಲ್ಲಿ ಓಮಿಕ್ರಾನ್ ನ ಹೊಸ ರೂಪಾಂತರ ತಳಿಗಳು ಕಂಡು ಬರುತ್ತಲೇ ಇರುತ್ತದೆ. ಇದಕ್ಕೆ ವೈದ್ಯಕೀಯ ಮಹತ್ವವಿಲ್ಲ. ಎರಡು ಡೋಸ್ ತೆಗೆದುಕೊಂಡ ನಾಗರೀಕರು ಮುನ್ನೆಚ್ಚರಿಕೆ ಡೋಸ್ ಅಗತ್ಯವಾಗಿ ತೆಗೆದುಕೊಳ್ಳಲಿ. ಬಿಬಿಎಂಪಿ ಬಳಿ ಅಗತ್ಯವಿರುವಷ್ಟು ಡೋಸ್ ಗಳು ಲಭ್ಯವಿದೆ. ಚೈನಾ ಸೇರಿದಂತೆ ಮತ್ತಿತರ ದೇಶಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನೀಡುವ ಸೂಚನೆಗಳನ್ನು ತಪ್ಪದೇ ಬೆಂಗಳೂರಿನಲ್ಲಿ ಜಾರಿಗೆ ತರುತ್ತೇವೆ.”
- ಡಾ.ತ್ರಿಲೋಕ್ ಚಂದ್ರ, ಬಿಬಿಎಂಪಿ ವಿಶೇಷ ಆಯುಕ್ತರು (ಆರೋಗ್ಯ)
ಎಷ್ಟು ಪ್ರಿಕಾಷನರಿ ಡೋಸ್ ಗಳು ಬಿಬಿಎಂಪಿ ಬಳಿ ಲಭ್ಯವಿದೆ ಹಾಗೂ ಹೀಗೆ ಲಭ್ಯವಿರುವ ಬಹಳಷ್ಟು ಡೋಸ್ ಗಳು ತನ್ನ ಎಕ್ಸ್ ಪೈರಿ ಆಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ ಈ ಬಗ್ಗೆ ಏನು ಹೇಳುತ್ತೀರಾ ಎಂದು ಬೆಂಗಳೂರು ವೈರ್ ಪ್ರಶ್ನೆಗೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ತ್ರಿಲೋಕ್ ಚಂದ್ರ ಅವರು ಸೂಕ್ತ ರೀತಿ ಉತ್ತರಿಸಲಿಲ್ಲ.
ಹಳೆಯ ಮಾದರಿ ವೈರಾಣು ಆಧಾರಿತ ಲಸಿಕೆ ಕೆಲಸ ಮಾಡುತ್ತಾ? :
“ಕೋವಿಡ್ ಸೋಂಕಿನ ಎರಡು ತಳಿಗಳು ಶರೀರದ ಒಳಗೆ ಹೋಗಿ ಜೀವಾಂಶದಲ್ಲಿ ಮೂರನೇ ಹೊಸ ತಳಿ (recombinant Linages) ಅಂದರೆ ಮರು ಸಂಯೋಜಕ ವಂಶಾವಳಿಯ ಹೊಸ ಮಾದರಿ ವೈರಸ್ ಸೃಷ್ಟಿಯಾಗುತ್ತಿದೆ. ಇದನ್ನು ಬಿಟ್ಟು ಕರೋನಾ ಸೋಂಕಿನಿಂದ ಪ್ರತಿಕಾಯ ವರ್ಧಿತ ರೋಗಗಳು (Antybody enhanced disease) ಕಂಡು ಬರುತ್ತಿದೆ. ಚೀನಾದ ವೂಹಾನ್ ನಲ್ಲಿ 2019ರಲ್ಲಿ ಕಂಡು ಬಂದ ಮೊಟ್ಟ ಮೊದಲ ಕರೋನಾ ಸೋಂಕಿನ ವೈರಾಣು ಡಿ.614.ಜಿ ಆಧಾರದ ಮೇಲೆಯೇ ಜಗತ್ತಿನ ಎಲ್ಲೆಡೆ ಕೋವಿಡ್ ಲಸಿಕೆಯನ್ನು ತಯಾರಿಸಲಾಗುತ್ತಿದೆ. ಆದರೆ ಈ ಲಸಿಕೆಗಳು ಹಳೆಯ ಕರೋನಾ ಸೋಂಕಿನ ತಳಿಯ ಆಧಾರದ ಮೇಲೆ ತಯಾರಿಸಲ್ಪಟ್ಟಿದೆ. ಬರುವ ದಿನಗಳಲ್ಲಿ ಈ ಲಸಿಕೆಯು ರೋಗನಿರೋಧಕ ಶಕ್ತಿಯು ಮುಂದಿನ ಹೊಸ ಮಾದರಿಯ ಉಪತಳಿಗೆ ಕೆಲಸ ಮಾಡುತ್ತಾ? ಅಥವಾ ಇಲ್ಲವಾ? ಎಂಬ ವಿಚಾರ ಮುಂದಿನ ಒಂದೂವರೆ ವರ್ಷ ಬಹುಮುಖ್ಯವಾಗಿರುತ್ತದೆ” ಎಂದು ರಾಜ್ಯದ ವೈರಾಣು ಸಂರಚನೆ ವಿಶ್ಲೇಷಣಾ ಸಮಿತಿ ಸದಸ್ಯ ಡಾ.ವಿಶಾಲ್ ರಾವ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ತ್ಯಾಜ್ಯ ನೀರು, ಸ್ಥಳೀಯ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಣ್ಗಾವಲು ನಡೆಸಬೇಕಾದ ಅಗತ್ಯವಿದೆ. ಬರುವ ಎರಡು ವರ್ಷಗಳಲ್ಲಿ ಕೆಮ್ಮು, ನೆಗಡಿ ಬಂದಂತೆ ಕೋವಿಡ್ ಜೊತೆ ಸಹ ಜೀವನ ನಡೆಸುವ ಅಗತ್ಯವಿದೆ. ಅದು ಬಿಟ್ಟು ಬೇರೆ ಉಪಾಯವಿಲ್ಲ. ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಂದ ನರಳುತ್ತಿರುವ ಹೈರಿಸ್ಕ್ ವರ್ಗದವರು ಮುನ್ನಚ್ಚರಿಕೆ ಕ್ರಮವಾಗಿ ಮೂರನೇ ಲಸಿಕೆ ತೆಗೆದುಕೊಳ್ಳದಿದ್ದವರು ಕೂಡಲೇ ಮುನ್ನಚ್ಚರಿಕಾ ಲಸಿಕೆ (Pre Cautionary Dose) ತೆಗೆದುಕೊಳ್ಳಬೇಕು.” ಎಂದು ಅವರು ಮನವಿ ಮಾಡಿದ್ದಾರೆ.
ಕೋವಿಡ್ ಕಣ್ಗಾವಲು ಪ್ರಮಾಣ ಹೆಚ್ಚಳವಾಗಬೇಕು :
ಅಂತರರಾಷ್ಟ್ರೀಯ ಮಟ್ಟದಲ್ಲಿ ನಾಲ್ಕನೇ ಡೋಸ್ ಲಸಿಕೆ ಪ್ರಯೋಗ ಪ್ರಯೋಜನವಿಲ್ಲ ಎಂದು ಹಲವು ವರದಿಗಳು ತಿಳಿಸಿವೆ. ಮಾನವನ ದೇಹದಲ್ಲಿ ಟ್ರಾನ್ಸ್ ಮೆಂಬ್ರೇನ್ ಪ್ರೊಟಿನ್ ನಿಂದ ಮಾಡಲ್ಪಟ್ಟ ಅನುವಂಶಿಕ ಧಾತುವನ್ನು (TMTRSS Protin) ಕೋವಿಡ್ ನ ತಳಿಯಾದ ಓಮಿಕ್ರಾನ್ ಬಳಸುತ್ತಿಲ್ಲ. ಹಾಗಾಗಿ ರೋಗಿಗಳ ಗಂಟಲಿನಲ್ಲೇ ಈ ವೈರಾಣು ಉಳಿಯು ತ್ತಿದ್ದು, ಶ್ವಾಸಕೋಶಕ್ಕೆ ಹೋಗುತ್ತಿಲ್ಲ. ಹೀಗಾಗಿ ಜಗತ್ತಿನಲ್ಲಿ ಕರೋನಾ ಸೋಂಕು ಹೆಚ್ಚಾದರೂ ಸಾವಿನೋವಿನ ಸಂಖ್ಯೆ ಹೆಚ್ಚಾಗುತ್ತಿಲ್ಲ. ಹೀಗಿದ್ದರೂ ಜನರು ಮಾಸ್ಕ್ ಹಾಕ್ಕೊಂಡು ಓಡಾಡಿ ತಮ್ಮ ದಿನನಿತ್ಯ ಕೆಲಸ ಕಾರ್ಯ ಮಾಡಿಕೊಳ್ಳಬಹುದು. ರಾಜ್ಯದಲ್ಲಿ ವೈರಾಣು ಸಂರಚನೆ ವಿಶ್ಲೇಷಣೆ ಹೆಚ್ಚಾಗಬೇಕು. ಕೋವಿಡ್ ಕಣ್ಗಾವಲು ಪ್ರಮಾಣವು ಏರಿಕೆಯಾಗಬೇಕಿದೆ. ಕರೋನಾ ಸೋಂಕು ಮುಂದಿನ ಒಂದೂವರೆ ವರ್ಷದ ತನಕ ಜನ ಸಾಮಾನ್ಯರು ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್ ಲಸಿಕೆ :
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1,222 (ಡಿ.21ರವರೆಗೆ) ಕೋವಿಡ್ ಪ್ರಕರಣಗಳು ಸಕ್ರಿಯವಾಗಿದೆ. ನಗರದಲ್ಲಿ ಇದುವರೆಗೆ 96.79 ಲಕ್ಷ ಕೋವಿಡ್ ಮೊದಲ ಡೋಸೆಜ್ ಪಡೆದುಕೊಂಡಿದ್ದರೆ, 94.84 ಲಕ್ಷ ಎರಡನೇ ಡೋಸೆಜ್ ಹಾಗೂ ಕೇವಲ 13.31 ಲಕ್ಷ ಮಂದಿ ಮುನ್ನಚ್ಚರಿಕೆಯ ಮೂರನೇ ಡೋಸ್ ಪಡೆದಿದ್ದಾರೆ. ಮೂರನೇ ಡೋಸ್ ಪಡೆದವರ ಸಂಖ್ಯೆ ಸಾಕಷ್ಟು ಕಡಿಮೆಯಿದೆ. ವಿದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಹಿನ್ನೆಲಯಲ್ಲಿ ಪುನಃ ನಗರದಲ್ಲಿ ಕೋವಿಡ್ ಮೂರನೇ ಡೋಸೆಜ್ ಹಾಕಿಸಿಕೊಳ್ಳಲು ಜನರು ಮುಂದು ಬರುತ್ತಾರೆಂದು ನಿರೀಕ್ಷಿಸಲಾಗಿದೆ.