ಬೆಂಗಳೂರು, ಡಿ.14 www.bengaluruwire.com : ರಾಜ್ಯದ ಸಕ್ಕರೆ ಇಲಾಖೆ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಸಕ್ಕರೆ ಇಲಾಖೆ ಆಯುಕ್ತ ಶಿವಾನಂದ್ ಹೆಚ್. ಕಲಕೇರಿ ನೇತೃತ್ವದಲ್ಲಿ ರೈತರು ಕಬ್ಬು ಮಾರಾಟ ಮಾಡುವ ಸಕ್ಕರೆ ಕಾರ್ಖಾನೆಗಳಲ್ಲಿ ತೂಕ ಮತ್ತು ಅಳತೆಯ ವ್ಯತ್ಯಾಸ ಪತ್ತೆ ಹಚ್ಚಲು ರಾಜ್ಯದಾದ್ಯಂತ 21 ಸಕ್ಕರೆ ಕಾರ್ಖಾನೆಗಳ ಮೇಲೆ ಏಕ ಕಾಲಕ್ಕೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬುಧವಾರ ಬೆಳಗ್ಗೆ 7 ಗಂಟೆಗೆ ಸರಿಯಾಗಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಏಕಾ ಏಕಿ ದಾಳಿಯಿಂದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಗಾಬರಿಗೊಂಡಿದ್ದಾರೆ. ಕೆಲವೊಂದು ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ವ್ಯತ್ಯಾಸ ಕಂಡುಬಂದಿದ್ದು ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿಯುತ್ತಿದೆ ಎಂದು ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಗಾವಿಯಲ್ಲಿನ 8, ಬಿಜಾಪುರ ಮತ್ತು ಬಾಗಲಕೋಟೆಯ ತಲಾ 4 ಕಾರ್ಖಾನೆಗಳು, ಬೀದರ್ ಮತ್ತು ಗುಲ್ಬರ್ಗದ ತಲಾ ಎರಡು ಕಾರ್ಖಾನೆ ಹಾಗೂ ಕಾರವಾರದ ಒಂದು ಸಕ್ಕರೆ ಕಾರ್ಖಾನೆ ಮೇಲೆ ಈ ದಾಳಿ ನಡೆಸಲಾಗಿದೆ. ಪ್ರಥಮ ಹಂತದಲ್ಲಿ 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ಮಾಡಿದ್ದು, ಈ ಸಾಲಿನ ಕಬ್ಬು ಕಟಾವು ಹಂಗಾಮು ಮುಗಿಯುವವರೆಗೂ ನಿರಂತರವಾಗಿ ಗೌಪ್ಯತೆಯ ಮೂಲಕ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಲು ಸರಕಾರದಿಂದ ತೀರ್ಮಾನಿಸಲಾಗಿದೆ.
ಹಲವು ರೈತ ಸಂಘಟನೆಗಳು ತೂಕದಲ್ಲಿ ವ್ಯತ್ಯಾಸ ಕಂಡುಬರುವ ಕುರಿತು ತನಿಖೆ ನಡೆಸುವಂತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಇವರ ಬಳಿ ಒತ್ತಾಯಿಸಿದ್ದರು. ಈ ಬಗ್ಗೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುವುದಾಗಿ ಸಚಿವರು ಭರವಸೆ ನೀಡಿದ್ದರು. ಈ ಹಿನ್ನಲೆಯಲ್ಲಿ ನಡೆದಿರುವ ದಾಳಿಯು ಅಳತೆ ಮತ್ತು ತೂಕದಲ್ಲಿ ಮೋಸ ಮಾಡುತ್ತಿದ್ದ ಸಕ್ಕರೆ ಕಾರ್ಖಾನೆಗಳಿಗೆ ಸಖತ್ ಶಾಕ್ ನೀಡಿದೆ.
ಇಂದು ರಾಜ್ಯದಾದ್ಯಂತ ಏಕ ಕಾಲಕ್ಕೆ ನಡೆದ ದಾಳಿಯಲ್ಲಿ ಸಕ್ಕರೆ ಇಲಾಖೆಯ ಅಧಿಕಾರಿಗಳು, ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳು, ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.