ಮಡಿಕೇರಿ, ಡಿ.14 www.bengaluruwire.com : ಕೊಡವ ಕುಟುಂಬಗಳ 5 ಸಾವಿರಕ್ಕೂ ಅಧಿಕ ಮಂದಿಯು ಇದೇ ಡಿ.24ರಂದು ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದ ‘ಕೂರ್ಗ್ ಎತ್ನಿಕ್’ ರೆಸಾರ್ಟ್ ನಲ್ಲಿ ಸೇರುವ ಮೂಲಕ, ಗಿನ್ನೀಸ್ ಬುಕ್ ನಲ್ಲಿ ಈಗಾಗಲೇ ದಾಖಲಾಗಿರುವ 4,514 ಮಂದಿಯಿಂದ ‘ಅತಿದೊಡ್ಡ ಕೌಟುಂಬಿಕ ಸಮ್ಮಿಲನ’ (Largest Family Gathering) ದಾಖಲೆಯನ್ನು ಮುರಿಯಲು ಅಗತ್ಯ ಸಿದ್ಧತೆ ನಡೆದಿದೆ.
ಈ ಕುರಿತಂತೆ ಬೆಂಗಳೂರು ವೈರ್ ಗೆ ಮಾಹಿತಿ ನೀಡಿರುವ ತಮ್ಮ ‘ಕೊಡವ ಕ್ಲಾನ್ ಸಂಸ್ಥೆ’ (Kodava Clan)ಯ ಸಂಸ್ಥಾಪಕ ಕಿಶು ಉತ್ತಪ್ಪ ಅವರು, ತಮ್ಮ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಕೊಡವ ವಂಶಜರು ಒಂದೆಡೆ ಕೌಟುಂಬಿಕ ಸಮ್ಮಿಲನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಈಗಾಗಲೇ ದಾಖಲಾಗಿರುವ ಗಿನ್ನೀಸ್ ರೆಕಾರ್ಡ್ ಅನ್ನು ಮುರಿಯುವ ಕಾರ್ಯ ಕೈಗೊಳ್ಳುತ್ತೇವೆ. ಈ ಸಂದರ್ಭದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರತಿನಿಧಿಗಳು ಈ ಕಾರ್ಯಕ್ರಮವನ್ನು ವೀಕ್ಷಿಸಿ ಹೊಸ ದಾಖಲೆಯಾಗಿರುವುದನ್ನು ದಾಖಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ದೇಶದಲ್ಲೇ ಅತಿದೊಡ್ಡ ಕೊಡವ ಕುಟುಂಬಗಳ ಬೃಹತ್ ವಂಶವೃಕ್ಷ…! ಎಲ್ಲಿದೆ ಗೊತ್ತಾ?
‘ಕೊಡವ ಕ್ಲಾನ್ ಸಂಸ್ಥೆ’ಯು 2017ರಿಂದ ಕೊಡವರ ಎಲ್ಲಾ ಕುಟುಂಬಗಳ ವಂಶವೃಕ್ಷವನ್ನು ಒಂದಕ್ಕೊಂದು ಬೆಸೆಯುವ ಕೆಲಸವನ್ನು https://kodavaclan.com ವೆಬ್ ಸೈಟ್ ಮೂಲಕ ಮಾಡುತ್ತಾ ಬಂದಿದೆ. ಇದುವರೆಗೆ 751 ಕುಟುಂಬಗಳ 21 ಸಾವಿರಕ್ಕೂ ಅಧಿಕ ಮಂದಿಯ ವಂಶವೃಕ್ಷವನ್ನು ಈತನಕ ಜೋಡಿಸುವ ಕಾರ್ಯ ಕೈಗೂಡಿದೆ. ಇದಲ್ಲದೆ 18 ತೆಲೆಮಾರುಗಳ ವಂಶಾವಳಿಯ ಹೆಸರುಗಳನ್ನು ಪರಿಶೀಲಿದ್ದೇವೆ. ಈತನಕ 478 ವಂಶವೃಕ್ಷಗಳ ಮಾಹಿತಿ ತಮ್ಮ ಬಳಿಯಿದೆ ಎಂದು ಅವರು ತಿಳಿಸಿದ್ದಾರೆ.
ಕೊಡವ ಕುಟುಂಬಗಳು ಒಂದೆಡೆ ಸೇರುವ ‘ಕೂರ್ಗ್ ಎತ್ನಿಕ್’ ರೆಸಾರ್ಟ್ ನಲ್ಲಿ 50 ಸ್ಟಾಲ್ ಗಳನ್ನು ತೆರೆಯಾಗುತ್ತದೆ. ಈ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸ್ಪರ್ಧೆಗಳು, ಫ್ಯಾಷನ್ ಶೋ ಮತ್ತು ವಾಲಗತ್ತಾಟ್ ನಡೆಯಲಿದೆ. ಹಿರಿಯ ಕಲಾವಿದ ಮುಳ್ಳೇರ ಜಿಮ್ಮಿ ಅಯ್ಯಪ್ಪ ಅವರ ಸವಿನೆನಪಿನಲ್ಲಿ ಅವರ ಹಾಡುಗಳನ್ನು ವಿರಾಜಪೇಟೆ ತಂಡದವರು ಹಾಡಲಿದ್ದಾರೆ. ಅದೇ ರೀತಿ ಕೊಡವ ಸಾಹಿತಿಗಳು ಬರೆದ ಪುಸ್ತಕಗಳ ಮಾರಟಕ್ಕೂ ಪ್ರತ್ಯೇಕ ಸ್ಟಾಲ್ ಇರಲಿದೆ. ‘ಅತಿದೊಡ್ಡ ಕೌಟುಂಬಿಕ ಸಮ್ಮಿಲನ’ ಕಾರ್ಯಕ್ರಮ ಬೆಳಗ್ಗೆ 8.30 ಗಂಟೆಯಿಂದ ಹೆಸರು ನೋಂದಣಿ ಮೂಲಕ ಆರಂಭವಾಗಲಿದೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹೇಳಿದ್ದಾರೆ.