ನವದೆಹಲಿ, ಡಿ.13 www.bengaluruwire.com : ಚೈನಾ ಬಿಟ್ಟರೆ ವಿಶ್ವದಲ್ಲೇ ಅತಿಹೆಚ್ಚು ಚಿನ್ನ ಬಳಕೆ ಹಾಗೂ ಆಮದನ್ನು ಭಾರತ ಮಾಡುತ್ತೆ. ಹಾಗಾಗಿ ಇಲ್ಲಿ ಚಿನ್ನದ ಆಮದಿನಂತೆ ಹಳದಿ ಲೋಹದ ಕಳ್ಳಸಾಗಾಣಿಕೆಯು ಅತಿಹೆಚ್ಚು. 2019ರಿಂದ 2022ರ ನವೆಂಬರ್ ವರೆಗೆ ದೇಶದಲ್ಲಿ 13,004 ಕಳ್ಳಸಾಗಣಿಕೆ ಪ್ರಕರಣವನ್ನು ಪತ್ತೆ ಹಚ್ಚಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಒಟ್ಟು 11,295 ಕೆಜಿ (11.2 ಟನ್) ಚಿನ್ನವನ್ನು ವಶಪಡಿಸಿಕೊಂಡಿದೆ.
ಕೋವಿಡ್ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳುವ ಮುನ್ನ ಅಂದರೆ 2019ರಲ್ಲಿ 4404 ಪ್ರಕರಣಗಳನ್ನು ಪತ್ತೆಹಚ್ಚಿದ ಡಿಆರ್ ಐ ಅಧಿಕಾರಿಗಳು ಆ ವರ್ಷ ಒಟ್ಟು 3673 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಕೋವಿಡ್ ಸೋಂಕು ವ್ಯಾಪಕವಾದ 2020 ಹಾಗೂ 2021ರ ಅವಧಿಯಲ್ಲಿ ಅಂತರರಾಷ್ಟ್ರೀಯ ವಾಯು ಮಾರ್ಗ ಸೇರಿದಂತೆ ಮತ್ತಿತರ ನಿರ್ಭಂಧಗಳಿದ್ದ ಕಾರಣ ಚಿನ್ನದ ಕಳ್ಳಸಾಗಾಣಿಕೆಯ ಪ್ರಮಾಣ ಕಡಿಮೆಯಾಗಿತ್ತು. ಆದರೆ ಸೋಂಕು ಕಡಿಮೆಯಾದಂತೆ ವಿಶ್ವದ ಹಲವು ಕಡೆಗಳಲ್ಲಿ ವಾಯುಮಾರ್ಗ, ಭೂಮಾರ್ಗ ಮತ್ತಿತರ ಕಡೆಗಳಲ್ಲಿ ನಿರ್ಬಂಧಗಳನ್ನು ಸಡಿಲ ಮಾಡಿದಂತೆ ಚಿನ್ನದ ಕಳ್ಳಸಾಗಾಣಿಕೆ ಪ್ರಮಾಣ ಪುನಃ ಹೆಚ್ಚಾಗಿರುವುದು ಕಂಡು ಬರುತ್ತಿದೆ.
ಹೀಗಾಗಿ 2022ರಲ್ಲಿ ನವೆಂಬರ್ ವೇಳೆಗೆ ದೇಶಾದ್ಯಂತ 3,588 ವಿವಿಧ ಮಾರ್ಗಗಳಲ್ಲಿ ಚಿನ್ನದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣಗಳನ್ನು ಡಿಆರ್ ಐ ನಿರ್ದೇಶನಾಲಯ ಪತ್ತೆಹಚ್ಚಿ ಒಟ್ಟು 3083 ಕೆಜಿ ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ 2019ರಿಂದ 2022ರ ನವೆಂಬರ್ ತನಕ ದೇಶಾದ್ಯಂತ 14 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಿನ್ನದ ಕಳ್ಳಸಾಗಾಣಿಕೆ ಮಾಡುತ್ತಿದ್ದ 13,004 ಪ್ರಕರಣಗಳನ್ನು ಪತ್ತೆಹಚ್ಚಿ ಕಳ್ಳಸಾಗಾಣಿಕೆದಾರರಿಂದ ಸಾವಿರಾರು ಕೋಟಿ ರೂ. ಬೆಲೆಬಾಳುವ ಒಟ್ಟು 11,295 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಂದಾಯ ಗುಪ್ತಚರ ನಿರ್ದೇಶನಾಲಯ ಪತ್ತೆಹಚ್ಚಿದ ಚಿನ್ನದ ಕಳ್ಳಸಾಗಾಣಿಕೆ ಪ್ರಕರಣ :
ವರ್ಷ | ಪ್ರಕರಣಗಳು | ವಶಪಡಿಸಿಕೊಂಡ ಚಿನ್ನ (ಕೆಜಿಗಳಲ್ಲಿ) |
2019 | 4404 | 3673.04336 |
2020 | 2567 | 2154.5812 |
2021 | 2445 | 2383.38128 |
2022 (upto November) | 3588 | 3083.61802 |
ಒಟ್ಟಾರೆ = | 13,004 | 11,294.62 |
ವಿಶ್ವ ಗೋಲ್ಡ್ ಕೌನ್ಸಿಲ್ (WGC) ಪ್ರಕಾರ, ದೇಶದಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು 7.5% ರಿಂದ 12.5% ಕ್ಕೆ ಹೆಚ್ಚಿಸಿರುವುದರಿಂದ ಕೋವಿಡ್ ಪೂರ್ವ ಅವಧಿಗೆ ಹೋಲಿಸಿದರೆ 2022 ರಲ್ಲಿ ಕಳ್ಳಸಾಗಣೆ 33% ರಷ್ಟು ಅಂದರೆ 160 ಟನ್‌ಗಳನ್ನು ಮುಟ್ಟಬಹುದು ಎಂದು ಅಂದಾಜಿಸಿದೆ.
ಈಶಾನ್ಯ ಕಳ್ಳಸಾಗಣೆ ಮಾರ್ಗ:
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದ ವರದಿಯಲ್ಲಿ 2021-21ನೇ ಇಸವಿಯಲ್ಲಿ ದೇಶಾದ್ಯಂತ ವಶಪಡಿಸಿಕೊಂಡ ಎಲ್ಲಾ ಚಿನ್ನದಲ್ಲಿ ಶೇ. 37ರಷ್ಟು ಕಳ್ಳಸಾಗಣಿಕೆ ಮಾಡಿದ ಚಿನ್ನವು ,ಮ್ಯಾನ್ಮಾರ್‌ನಿಂದ ಸಾಗಣೆಯಾಗಿತ್ತು ಎಂಬುದನ್ನು ತೋರಿಸಿದೆ. ಶೇ.20 ರಷ್ಟು ಪಶ್ಚಿಮ ಏಷ್ಯಾದಿಂದ ಹುಟ್ಟಿಕೊಂಡಿದೆ. ಒಟ್ಟಾರೆಯಾಗಿ, ಶೇ.73 ಕಳ್ಳಸಾಗಣೆ ಚಿನ್ನವನ್ನು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಮೂಲಕ ತರಲಾಗಿದೆ ಎಂದು ಅದು ಹೇಳಿದೆ.
ಚೀನಾದಿಂದ ಮ್ಯಾನ್ಮಾರ್‌ಗೆ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಕ್ರಮವಾಗಿ ಚೈನೀಸ್ ಮತ್ತು ಮಾಯನ್ಮಾರ್ ಗಡಿಯಲ್ಲಿರುವ ರುಯಿಲಿ ಮತ್ತು ಮ್ಯೂಸ್ ಪಟ್ಟಣಗಳ ಮೂಲಕ ತರಲಾಗುತ್ತದೆ ಎಂದು ಅನೇಕ ಅಂತರರಾಷ್ಟ್ರೀಯ ವರದಿಗಳು ಸೂಚಿಸುತ್ತವೆ. ಮ್ಯೂಸ್ ಈಶಾನ್ಯ ಮ್ಯಾನ್ಮಾರ್‌ನ ಶಾನ್ ರಾಜ್ಯದಲ್ಲಿದೆ ಮತ್ತು ರುಯಿಲಿ, ಚೀನಾದ ಯುನ್ನಾನ್ ಪ್ರಾಂತ್ಯದ ಡೆಹಾಂಗ್ ಡೈ ಪ್ರಿಫೆಕ್ಚರ್‌ನಲ್ಲಿದೆ.
ಸ್ಮಗ್ಲಿಂಗ್ ಮಾರ್ಗ ಬದಲಾವಣೆ ಮಧ್ಯಪ್ರಾಚ್ಯದಿಂದ ಮ್ಯಾನ್ಮಾರ್ ಗೆ ಶಿಫ್ಟ್ :
ಕಂದಾಯ ಗುಪ್ತಚರ ನಿರ್ದೇಶನಾಲಯ (DRI) 2019-20ನೇ ಇಸವಿಯಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಪ್ರಮಾಣದ ಚಿನ್ನದ ಕಳ್ಳಸಾಗಣೆ ಮಾಡಿದ ದೊಡ್ಡ ಮೂಲ ಪ್ರದೇಶವು ಮಧ್ಯಪ್ರಾಚ್ಯವಾಗಿದ್ದರೆ, 2020-21 ಮತ್ತು 2021-22ರಲ್ಲಿ ಮ್ಯಾನ್ಮಾರ್ ಮೂಲದಿಂದ ಬಂದದ್ದಾಗಿದೆ. 2019-20ರಲ್ಲಿ ಚಿನ್ನದ ಕಳ್ಳಸಾಗಾಣಿಕೆ ಪ್ರವೃತ್ತಿಯು 2020-21 ಹಾಗೂ 2021-22ರಲ್ಲಿ ಗಮನಾರ್ಹವಾಗಿ ಬದಲಾಗಿರುವುದನ್ನು ಡಿಆರ್ ಐ 2021-22ರ ವರದಿಯಲ್ಲಿ ಹೇಳಿದೆ.
ಕಳೆದ 10 ವರ್ಷಗಳಲ್ಲಿ, ಮಹಾರಾಷ್ಟ್ರವು ಭಾರತದಲ್ಲಿ ಹೆಚ್ಚಿನ ಚಿನ್ನವನ್ನು ಕಳ್ಳಸಾಗಣೆ ಮಾಡಿದೆ, ನಂತರದ ಸ್ಥಾನ ತಮಿಳುನಾಡು ಮತ್ತು ಕೇರಳ ರಾಜ್ಯದ್ದಾಗಿದೆ ಎಂದು ಡಿಆರ್ ಐ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಭಾರತ ಎಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ? :
ವಿದೇಶಿ ವಿನಿಮಯದ ಪ್ರಮುಖ ಹೊರಹರಿವಿನ ಪೈಕಿ ಚಿನ್ನದ ಆಮದು ಹೆಚ್ಚಿನ ಪಾಲು ಒಳಗೊಂಡಿದೆ. ಅಂತರರಾಷ್ಟ್ರೀಯ ಚಿನ್ನದ ಮಾರುಕಟ್ಟೆಗಳಿಂದ ಅಧಿಕೃತ ಮಾರ್ಗಗಳ ಮೂಲಕ ಚಿನ್ನದ ಆಮದು ಕೂಡ ಇತ್ತೀಚೆಗೆ ಹೆಚ್ಚುತ್ತಿದೆ. 2020-21ರಲ್ಲಿ 2.54 ಲಕ್ಷ ಕೋಟಿ ರೂ.ಗಳಿಂದ 2021-22ರಲ್ಲಿ 3.44 ಲಕ್ಷ ಕೋಟಿ ರೂ. ಮೌಲ್ಯದಷ್ಟು ಚಿನ್ನವನ್ನು ದೇಶಕ್ಕೆ ಆಮದು ಮಾಡಿಕೊಂಡಿರುವುದು ವರದಿಯಾಗಿದೆ.
ವಿಶ್ವ ಚಿನ್ನದ ಪರಿಷತ್ತು (World Gold Council) ಪ್ರಕಾರ, ಚೀನಾದ ನಂತರ ವಿಶ್ವದ ಎರಡನೇ ಅತಿ ದೊಡ್ಡ ಚಿನ್ನದ ಗ್ರಾಹಕ ಭಾರತವಾಗಿದೆ. ಇಲ್ಲಿ ವರ್ಷಕ್ಕೆ ಸುಮಾರು 900 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಚಿನ್ನದ ಗಟ್ಟಿ ಬಾರ್ ಮತ್ತು ಸಂಸ್ಕರಿಸಿದ ಚಿನ್ನವನ್ನು ಆಮದು ಮಾಡಿಕೊಳ್ಳುವ ಭಾರತದಲ್ಲಿ 2021ರಲ್ಲಿ ಚಿನ್ನದ ಬಳಕೆಯು 797.3 ಟನ್‌ಗಳಷ್ಟಿತ್ತು (ಕಳೆದ 5 ವರ್ಷಗಳಲ್ಲೇ ಅತ್ಯಧಿಕ). ಕಳೆದ ಐದು ವರ್ಷಗಳಲ್ಲಿ, ಚಿನ್ನದ ಡೋರ್ ಬಾರ್‌ಗಳ ಆಮದುಗಳು, ಭಾರತದಲ್ಲಿ ಹಳದಿ ಲೋಹದ ಒಟ್ಟು ಅಧಿಕೃತ ಆಮದುಗಳಲ್ಲಿ ಶೇ.30ರಷ್ಟು ಪಾಲನ್ನು ಪಡೆದಿದೆ.
ಕಸ್ಟಮ್ ಅಧಿಕಾರಿಗಳಿಗೆ ಚಳ್ಳಹಳ್ಳು ತಿನ್ನಿಸಲು ಕಳ್ಳರ ನಾನಾ ತಂತ್ರಗಾರಿಕೆ :
“ಇಂಧನ ಟ್ಯಾಂಕ್‌ಗಳು, ಡ್ಯಾಶ್‌ಬೋರ್ಡ್, ಎಸಿ ಫಿಲ್ಟರ್‌ಗಳು, ಸೀಟುಗಳು, ವೀಲ್ ಆಕ್ಸಲ್, ಚಾಸಿಸ್ ಕ್ಯಾವಿಟಿ ಮತ್ತು ಸ್ಪೇರ್ ಟೈರ್‌ಗಳಲ್ಲಿ ಚಿನ್ನವನ್ನು ಕದ್ದು ಕಳ್ಳಸಾಗಣೆ ಮಾಡಲಾಗುತ್ತದೆ. ಇದಕ್ಕಾಗಿ ಅಂತಹ ವಾಹನಗಳಲ್ಲಿ ವಿಶೇಷವಾಗಿ ನಿರ್ಮಿಸಲಾದ ಸ್ಥಳಗಳನ್ನು ಸಿದ್ಧಪಡಿಸಿ ಜೊತೆಗೆ ಮರೆಮಾಚಲು ಬಳಸಲಾಗುತ್ತದೆ” ಎಂದು ವರದಿ ಹೇಳಿದೆ.
ಗೋಲ್ಡ್ ಸ್ಮಗಲಿಂಗ್ ಪ್ಲೇನ್ ನಿಂದ ಭೂಮಾರ್ಗಕ್ಕೆ ಬದಲಾವಣೆ :
ಕೋವಿಡ್-ಸಂಬಂಧಿತ ನಿರ್ಬಂಧಗಳ ನಂತರ ಆರ್ಥಿಕ ಚಟುವಟಿಕೆಗಳು ಕ್ರಮೇಣ ಹೆಚ್ಚಾಗುವ ಹಂತದಲ್ಲಿ ಕಳ್ಳಸಾಗಣೆಯ ಪ್ರಮಾಣವು ಹೆಚ್ಚಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಇದು ಸೇರಿಸಲ್ಪಟ್ಟಿದೆ. ವಾಯು ಮಾರ್ಗದ ಮೂಲಕ ಚಿನ್ನದ ಕಳ್ಳಸಾಗಾಣಿಕೆಗೆ ಸಾಕಷ್ಟು ಕಣ್ಗಾವಲು ಇರಿಸಿದ್ದರಿಂದಾಗಿ, ಭೂ ಮಾರ್ಗಗಳ ಮೂಲಕ (ರಸ್ತೆ ಅಥವಾ ರೈಲು) ಚಿನ್ನದ ಕಳ್ಳಸಾಗಣೆ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿದ ಕಣ್ಗಾವಲಿನಿಂದಾಗಿ, ಪಶ್ಚಿಮ ಏಷ್ಯಾದಿಂದ, ವಿಮಾನದ ಬದಲಿಗೆ ಭೂ ಮಾರ್ಗದ ಮಾರ್ಗವನ್ನು ಬದಲಾಯಿಸಲು ಕಾರಣವಾಗಿದೆ ಎಂದು ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.
ಈಶಾನ್ಯ ಪ್ರದೇಶದಲ್ಲಿ ಐದು ದೇಶಗಳೊಂದಿಗೆ ಭೂಗಡಿ ಹಂಚಿಕೊಂಡಿದೆ :
ಭಾರತವು ಈಶಾನ್ಯ ಪ್ರದೇಶದಲ್ಲಿ ಮ್ಯಾನ್ಮಾರ್, ಬಾಂಗ್ಲಾದೇಶ, ಭೂತಾನ್, ನೇಪಾಳ ಮತ್ತು ಚೀನಾ ಈ ಐದು ದೇಶಗಳೊಂದಿಗೆ ಭೂ ಗಡಿಯನ್ನು ಹೊಂದಿದೆ. ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಮಣಿಪುರ ಮತ್ತು ಮಿಜೋರಾಂ ಎರಡು ಆಯಕಟ್ಟಿನ ರಾಜ್ಯಗಳಾಗಿವೆ. “ಮ್ಯಾನ್ಮಾರ್‌ನಿಂದ ಭಾರತಕ್ಕೆ ಚಿನ್ನವನ್ನು ಕಳ್ಳಸಾಗಣೆ ಮಾಡಲು ಎರಡು ಮಾರ್ಗಗಳಿವೆ. ಒಂದು ಮಾರ್ಗ ಮ್ಯೂಸ್-ಮ್ಯಾಂಡಲೆ-ಕಲೇವಾ-ಟೆಡಿಮ್-ಝೋಖವ್ತಾರ್ ಮತ್ತು ಮ್ಯೂಸ್-ಮಂಡಲೆ-ಕಲೇವಾ-ತಮು-ನಂಫಾಲಾಂಗ್-ಮೊರೆಹ್ ಗಳಾಗಿದೆ. ಹಿಂದಿನ ಚಿನ್ನದ ಕಳ್ಳಸಾಗಾಣಿಕೆ ಮಾರ್ಗವು ಭಾರತದ ಮಿಜೋರಾಂಗೆ ಸಂಪರ್ಕ ಹೊಂದಿತ್ತು. ಆದರೆ ನಂತರದ ಕಳ್ಳಸಾಗಾಣಿಕೆ ಮಾರ್ಗವು ಮಣಿಪುರಕ್ಕೆ ತೆರೆದುಕೊಂಡಿದೆ ಎಂದು ಡಿಐರ್ ಐ ವರದಿಯಲ್ಲಿ ಹೇಳಲಾಗಿದೆ.
ವರದಿಯಾಗದ ಚಿನ್ನದ ಕಳ್ಳಸಾಗಾಣಿಕೆ ಪ್ರಮಾಣವೇ ಹೆಚ್ಚು :
ಇತ್ತೀಚೆಗೆ, ಭಾರತದ ಹಣಕಾಸು ಸಚಿವರು ಹೆಚ್ಚಿನ ಚಿನ್ನದ ಆಮದು ಮತ್ತು ಕಳ್ಳಸಾಗಣೆ ನಡುವೆ ಪರಸ್ಪರ ಸಂಬಂಧವಿದೆಯೇ ಮತ್ತು ಕಳ್ಳಸಾಗಣೆ ಪತ್ತೆಯಲ್ಲಿ ಒಂದು ಮಾದರಿ ಹೊರಹೊಮ್ಮುತ್ತಿದೆಯೇ ಎಂದು ಅಧಿಕಾರಿಗಳು ಕಂಡುಹಿಡಿಯಬೇಕು ಎಂದು ಡಿ.5ರಂದು ನಡೆದ DRIನ 65 ನೇ ಸಂಸ್ಥಾಪನಾ ದಿನದಂದು ಹೇಳಿದ್ದರು. ಚಿನ್ನದ ಆಮದು ಹೆಚ್ಚಾದಾಗಲೆಲ್ಲಾ ಚಿನ್ನದ ಕಳ್ಳಸಾಗಣೆ ಕೂಡ ಸಾಮಾನ್ಯವಾಗಿ ಹೆಚ್ಚಾಗುತ್ತದೆ ಎಂದು ಗಮನಿಸಲಾಗಿದೆ. ಒಂದಂತೂ ನಿಜ, ಚಿನ್ನದ ಸ್ಮಗ್ಲಿಂಗ್ ವರದಿಯಾದ ಅಂಕಿಅಂಶಗಳಲ್ಲಿ ವಶಪಡಿಸಿಕೊಂಡ ಚಿನ್ನಕ್ಕಿಂತ ವಿವಿಧ ಸ್ಮಗ್ಲರ್ ಗಳು ಕಳ್ಳಸಾಗಾಣಿಕೆ ಮೂಲಕ ಸಾಗಿಸಿ ವರದಿಯಾಗದ ಚಿನ್ನದ ಪ್ರಮಾಣವೇ ಹೆಚ್ಚಿನದ್ದಾಗಿದೆ ಎನ್ನಲಾಗಿದೆ.