ಬೆಂಗಳೂರು, ಡಿ.13 www.bengaluruwire.com : ನಗರದ ವಿ.ವಿ ಪುರಂನಲ್ಲಿರುವ ತಿಂಡಿ ಬೀದಿಯನ್ನು (Food Street) ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ವಿನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮಂಗಳವಾರ ಅಧಿಕೃತವಾಗಿ ಈ ಕಾಮಗಾರಿ ಕೈಗೊಳ್ಳಲು ಶಂಕುಸ್ಥಾಪನೆ ನಡೆಯಿತು.
ಸ್ಥಳೀಯ ಶಾಸಕರಾದ ಉದಯ್ ಬಿ. ಗರುಡಾಚಾರ್ ರವರ ಅಧ್ಯಕ್ಷತೆವಹಿಸಿದ್ದರು. ಬಿಬಿಎಂಪಿ ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ, ಜಂಟಿ ಆಯುಕ್ತ ಜಗದೀಶ್ ನಾಯಕ್ ಸೇರಿದಂತೆ ಮತ್ತಿತರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಜಯರಾಮ್ ರಾಯಪುರ ಪಾಲಿಕೆಯ ದಕ್ಷಿಣ ವಲಯದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿ.ವಿ ಪುರಂನಲ್ಲಿನ ತಿಂಡಿ ಬೀದಿಯನ್ನು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
ವಿವಿ ಪುರಂನ ತಿಂಡಿ ಬೀದಿಯಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒಗದಿಸುವ ನಿಟ್ಟಿನಲ್ಲಿ ಹಾಗೂ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಜ್ಜನ್ ರಾವ್ ವೃತ್ತ ಮತ್ತು ಮಿನರ್ವ ವೃತ್ತದ ನಡುವೆ ಇರುವ ಸುಮಾರು 209 ಮೀಟರ್ ಉದ್ದದ ರಸ್ತೆ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಜಯರಾಮ ರಾಯಪುರ ತಿಳಿಸಿದರು.
ಫುಡ್ ಸ್ಟ್ರೀಟ್ ನಲ್ಲಿ ಏನೇನು ಬರಲಿದೆ? :
ತಿಂಡಿ ಬೀದಿಯಲ್ಲಿ ವ್ಯವಸ್ಥಿತವಾಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಿರಲಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಲ್ಲಲ್ಲಿ ಆಸನಗಳನ್ನು ಹಾಕಲಾಗುತ್ತದೆ. ರಸ್ತೆಯ ಎರಡೂ ಬದಿ 900 ಮಿ.ಮೀ ಆರ್.ಸಿ.ಸಿ ಕಾಲುವೆ ನಿರ್ಮಾಣವಾಗಲಿದೆ. 6 ಕಡೆ ಕೈತೊಳೆಯುವ ವ್ಯವಸ್ಥೆ, ಎರಡೂ ಕಡೆ 300 ಮಿ.ಮೀ ನ ಚರಂಡಿ ನೀರಿನ ಪೈಪ್ ಲೈನ್ ಅಳವಡಿಕೆ, ಬೀದಿ ದೀಪಗಳ ಅಳವಡಿಕೆ ಮಾಡಲಾಗುತ್ತದೆ. ಎರಡೂ ಕಡೆ ಮಳಿಗೆಗಳ ಮುಂಭಾಗ ನೆರಳು ನೀಡುವ ಕೆನೊಪಿ ಹಾಕಲಾಗುತ್ತದೆ. ಹಸಿ ಕಸ/ಒಣ ಕಸ ಹಾಕಲು ಬಿನ್ ಗಳ ವ್ಯವಸ್ಥೆ, ಎರಡೂ ಕಡೆ ಡಕ್ಟ್ ಗಳ ಅಳವಡಿಕೆ, ಸುಂದರ ಸಸಿಗಳನ್ನು ನೆಡಲಾಗುತ್ತದೆ. ಬೀದಿ ನಾಟಕ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ರಸ್ತೆ ಮಾರ್ಗವನ್ನು 7 ಮೀಟರ್ ನಿಂದ 5 ಮೀಟರ್ ಗೆ ಇಳಿಕೆ ಮಾಡಿ ರಸ್ತೆಯ ಎರಡೂ ಬದಿ ಸುಮಾರು 3.5 ಮೀ. ಅಗಲದ ವಿಶಾಲವಾದ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.
ಕಮರ್ಷಿಯಲ್ ಸ್ಟ್ರೀಟ್ ಹಾಗೂ ಚರ್ಚ್ ಸ್ಟ್ರೀಟ್ ಗಿಂತ ಭಿನ್ನವಾಗಿ ತಿಂಡಿ ಬೀದಿಯನ್ನು ನಿರ್ಮಿಸಲಾಗುವುದು. ತಿಂಡಿ ಬೀದಿಯಲ್ಲಿ ಸಂಜೆ 6 ಗಂಟೆಯ ನಂತರ ವಾಹನಗಳ ಸಂಚಾರವನ್ನು ನಿಷೇಧಿಸಲಾಗುವುದು ಎಂದು ತಿಳಿಸಿದರು.
ಮುಂದಿನ 4 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಯೋಜನೆ:
ತಿಂಡಿ ಬೀದಿಯ ಅಭಿವೃದ್ಧಿಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ತಿಂಡಿ ಬೀದಿಯಲ್ಲಿ 39 ಮಳಿಗೆಗಳು ಹಾಗೂ ಬೀದಿ ವ್ಯಾಪಾರಿಗಳಿದ್ದು, ಈಗಾಗಲೇ ಎಲ್ಲಾ ವ್ಯಾಪಾರಿಗಳ ಜೊತೆ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ಮಾತನಾಡಲಾಗಿದೆ. ಕಾಮಗಾರಿಯ ವೇಳೆ ವ್ಯಾಪಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಕಾಮಗಾರಿ ನಡೆಸಿ ಮುಂದಿನ 4 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.