ನವದೆಹಲಿ, ಡಿ.9, www.bengaluruwire.com : ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ (ಉಡೇ ದೇಶ್ ಕಾ ಆಮ್ ನಾಗರೀಕ್) ಯೋಜನೆ 2016 ರಲ್ಲಿ ಜಾರಿಗೆ ಬಂದ ಆರು ವರ್ಷದಲ್ಲಿ ದೇಶದ್ಯಂತ ಈತನಕ 1.1 ಕೋಟಿ ವಿಮಾನ ಪ್ರಯಾಣ ಮಾಡಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, “2.15 ಲಕ್ಷಕ್ಕೂ ಹೆಚ್ಚು UDAN ವಿಮಾನಗಳು ಇಲ್ಲಿಯವರೆಗೆ ಕಾರ್ಯನಿರ್ವಹಿಸಿವೆ ಮತ್ತು 1.1 ಕೋಟಿ ಪ್ರಯಾಣಿಕರು UDAN ವಿಮಾನಗಳಲ್ಲಿ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಯು 2ನೇ ಶ್ರೇಣಿ ಮತ್ತು 3ನೇ ಶ್ರೇಣಿ ನಗರಗಳಿಗೆ ಕೈಗೆಟುಕುವ ದರದಲ್ಲಿ ವಿಮಾನ ಸಂಪರ್ಕವನ್ನು ಒದಗಿಸಲು ಸಮರ್ಥವಾಗಿದೆ ಮತ್ತು ಜನರು ಪ್ರಯಾಣಿಸುವ ಮಾರ್ಗವನ್ನು ಮಾರ್ಪಡಿಸಿದೆ. ಈ ಯೋಜನೆಯನ್ನು 21 ಅಕ್ಟೋಬರ್ 2016 ರಂದು ಜನರ ಆಕಾಂಕ್ಷೆಗಳನ್ನು ಪೂರೈಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು, ವಾಯುಯಾನ ಮೂಲಸೌಕರ್ಯ ಮತ್ತು 2 ಹಾಗೂ 3ನೇ ಶ್ರೇಣಿ ನಗರಗಳಲ್ಲಿ ವಾಯು ಸಂಪರ್ಕ ನೀಡುವುದು ಯೋಜನೆಯ ಉದ್ದೇಶವಾಗಿತ್ತು.
70 ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲಾಗಿದೆ :
29ನೇ ನವೆಂಬರ್ ವರೆಗೆ ಉಡಾನ್ ಯೋಜನೆಯಡಿಯಲ್ಲಿ ನಾಲ್ಕು ಸುತ್ತಿನ ಬಿಡ್ಡಿಂಗ್ ನಂತರ, 453 ಮಾರ್ಗಗಳು ಪ್ರಾರಂಭವಾಗಿವೆ. ಎರಡು ವಾಟರ್ ಏರೋಡ್ರೋಮ್ (ನದಿ, ಬಂದರು ಮತ್ತಿತರ ಕಡೆ ನೀರಿನ ಮೇಲೆ ವಿಮಾನ ಹಾರುವ ಮತ್ತು ಇಳಿಯುವ ಸ್ಥಳ) ಮತ್ತು ಒಂಬತ್ತು ಹೆಲಿಪೋರ್ಟ್‌ಗಳು ಸೇರಿದಂತೆ 70 ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲಾಗಿದೆ.
ಉಡಾನ್ ಯೋಜನೆ 10 ವರ್ಷಗಳ ಅವಧಿಗೆ ಅನ್ವಯ :
ಉಡಾನ್ ಯೋಜನೆಯು ಅದರ ಅಧಿಸೂಚನೆಯ ದಿನಾಂಕದಿಂದ 10 ವರ್ಷಗಳ ಅವಧಿಗೆ ಅನ್ವಯಿಸುತ್ತದೆ. ಕೇಂದ್ರ ಸರ್ಕಾರವು 1000 ಉಡಾನ್ ಮಾರ್ಗಗಳನ್ನು ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿದೆ ಮತ್ತು 2024 ರ ವೇಳೆಗೆ 100 ಸೇವೆಯಿಲ್ಲದ ಮತ್ತು ಕಡಿಮೆ ಸೇವೆಯನ್ನು ಹೊಂದಿರುವ ವಿಮಾನ ನಿಲ್ದಾಣಗಳು/ಹೆಲಿಪೋರ್ಟ್‌ಗಳು/ವಾಟರ್ ಏರೋಡ್ರೋಮ್‌ಗಳನ್ನು ಪುನರುಜ್ಜೀವನಗೊಳಿಸುವುದು/ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಅಸ್ತಿತ್ವದಲ್ಲಿರುವ ಸೇವೆಯಿಲ್ಲದ / ಕಡಿಮೆ ಸೇವೆ ನೀಡುವ ವಿಮಾನ ನಿಲ್ದಾಣಗಳು / ರಾಜ್ಯ ಸರ್ಕಾರಗಳ ಏರ್‌ಸ್ಟ್ರಿಪ್‌ಗಳು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ನಾಗರಿಕ ಎನ್‌ಕ್ಲೇವ್‌ಗಳ ಪುನರುಜ್ಜೀವನಕ್ಕಾಗಿ ಸರ್ಕಾರವು ₹ 4500 ಕೋಟಿ ಬಜೆಟ್‌ಗೆ ಅನುಮೋದನೆ ನೀಡಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI), ಅನುಷ್ಠಾನ ಏಜೆನ್ಸಿ, ಉಡಾನ್ ಅಡಿಯಲ್ಲಿ ಏರೋಡ್ರೋಮ್‌ಗಳ ಪುನರುಜ್ಜೀವನ ಅಥವಾ ಅಭಿವೃದ್ಧಿಯ ಪ್ರಗತಿಯ ಕುರಿತಂತೆ ಮೇಲ್ವಿಚಾರಣೆ ಮಾಡುತ್ತದೆ. ಇದಲ್ಲದೆ ನಾಗರೀಕ ವಿಮಾನಯಾನ ಸಚಿವಾಲಯವು ಕಾಲಕಾಲಕ್ಕೆ ತನ್ನ ಪಾಲದಾರರೊಂದಿಗೆ ಸಮಾಲೋಚಿಸಿ ಪರಿಶೀಲಿಸುತ್ತದೆ.