ಬೆಂಗಳೂರು, ಡಿ.6 www.bengaluruwire.com : ವ್ಯಕ್ತಿಯೊಬ್ಬನನ್ನು ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ದೊಡ್ಡ ಇಟ್ಟಿಗೆಯಂತಹ ವಸ್ತುವಿನಿಂದ ಹೊಡೆದು ಸಾಯಿಸಿರುವ ಭಯಾನಕ ಕೃತ್ಯ ಕೆಪಿ ಅಗ್ರಹಾರದಲ್ಲಿ ನಡೆದಿದೆ. ಈ ಕುರಿತ ದೃಶ್ಯ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫಾರ್ವಡ್ ಆಗುತ್ತಿದೆ.
ಸುಮಾರು 26 ವರ್ಷದ ಬಾಳಪ್ಪ ಜಮಖಂಡಿ ಎಂಬ ವ್ಯಕ್ತಿಯನ್ನು ಗುಂಪೊಂದು ಹಿಡಿದು ನೆಲ್ಲಕ್ಕುರುಳಿಸುತ್ತಿರುವಂತೆಯೇ ಮಹಿಳೆಯೊಬ್ಬಳು ದೊಡ್ಡ ಇಟ್ಟಿಗೆಯನ್ನು ತಂದು ಅಪರಿಚಿತ ವ್ಯಕ್ತಿಯ ತಲೆಯ ಮೇಲೆ ಎತ್ತಿ ಹಾಕುತ್ತಿರುವ ದೃಶ್ಯವು 1.40 ನಿಮಿಷಗಳ ವಿಡಿಯೋದಲ್ಲಿ ಸೆರೆಯಾಗಿದೆ. ಕಳೆದ ಶನಿವಾರ ಮಧ್ಯರಾತ್ರಿಯಲ್ಲಿ ಈ ಘಟನೆ ನಡೆದಿದ್ದು, ಗುಂಪಿನಲ್ಲಿರುವವರು ಪರಸ್ಪರ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ಈ ಕುರಿತ ದೃಶ್ಯಗಳು ಟ್ವಿಟರ್ ನಲ್ಲಿ ಹರಿದಾಡುತ್ತಿದೆ.
ಮತ್ತೊಬ್ಬ ವ್ಯಕ್ತಿಯು ಕೂಡ ಕಲ್ಲನ್ನು ತಲೆಯ ಮೇಲೆ ಎತ್ತಿಹಾಕಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಹಲ್ಲೆಗೊಳಗಾದ ವ್ಯಕ್ತಿ ಕಿರುಚಾಡಿದ ನಂತರ ಅಕ್ಕಪಕ್ಕದ ಮನೆಯವರು ಹೊರಗೆ ಬರುತ್ತಿದ್ದಂತೆಯೇ ಈ ಗುಂಪಿನಲ್ಲಿದ್ದವರೆಲ್ಲ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ಪ್ರಕರಣದ ಬಗ್ಗೆ ಪೊಲೀಸರಿಗೆ ತಿಳಿಸಿ, ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಮೃತಪಟ್ಟನೆಂದು ಹೇಳಲಾಗಿದೆ.
ಹಲ್ಲೆ ನಡೆಸಿದ ಆರು ಮಂದಿ ಯಾರೆಂದು ಗುರುತು ಸಿಕ್ಕಿಲ್ಲ ಆರೋಪಿಗಳ ಪತ್ತೆಗಾಗಿ ಮೂರ ವಿಶೇಷ ತಂಡಗಳಿಂದ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.