ಬೆಂಗಳೂರು, ಡಿ.2 www.bengaluruwire.com : ರೇಷ್ಮೆ ಸೀರೆಗಳ ಮೇಲೆ ಕ್ಯೋ- ಯುಜೇನ್ ಡೈಯಿಂಗ್ ವಿಧಾನದಲ್ಲಿ ನೈಸರ್ಗಿಕ ಬಣ್ಣಗಳ ಜೊತೆಗೆ ಚಿನ್ನದ ಬಣ್ಣದ ಲೇಪನ ಹಾಗೂ ಆಕರ್ಷಕ ಎಂಬ್ರಾಯ್ಡರಿ ವಿನ್ಯಾಸದ ಸೀರೆಗಳು ಅತ್ಯಾಕರ್ಷಕವಾಗಿದ್ದು ಕಲಾಸಕ್ತರು ಹಾಗೂ ಮಹಿಳೆಯನ್ನು ಕೈಬೀಸಿ ಕರೆಯುತ್ತಿದೆ.
ಭಾರತ ಮತ್ತು ಜಪಾನ್ ನ ಸಾಂಪ್ರದಾಯಿಕ ಕಲೆಯನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಜಪಾನಿನ 17 ನೇ ಶತಮಾನದ ಅಂತ್ಯದ ವೇಳೆಗೆ ಕ್ಯೋಟೋದಲ್ಲಿ ಅಭಿವೃದ್ಧಿಪಡಿಸಲಾದ ಡೈಯಿಂಗ್ ತಂತ್ರವಾದ ಕ್ಯೋ- ಯುಜೇನ್ ಡೈಯಿಂಗ್ ವಿಧಾನದಲ್ಲಿ ರೇಷ್ಮೆ ಸೀರೆಗಳ ಮೇಲೆ ಇಂತಹ ಕುಸುರಿ ಕಲೆಯ ಪ್ರದರ್ಶನವನ್ನು ಯಲಹಂಕದ ಆಫ್ಟರ್ ದಿ ರೈನ್ ಸ್ಥಳದಲ್ಲಿ ಏರ್ಪಡಿಸಲಾಗಿದೆ.
ಡಿ.2 ಹಾಗೂ 3 ರಂದು ಜಪಾನ್ ಸಂಸ್ಕೃತಿಯ ಈ ಅಪರೂಪದ ಪ್ರದರ್ಶನ ಜಪಾನಿಗರು ಹಾಗೂ ಜನತಾಂತ್ರಿಕರಿಕರಿಗಾಗಿ ಆಯೋಜಿಸಲಾಗಿದೆ. ಕ್ಯೂಟೋ ಕೋ ಆಪರೇಟಿವ್ ಅಸೋಸಿಯೇಷನ್ ಆಫ್ ಕೌಗಿಸೆನ್ಶೋ ಅಧ್ಯಕ್ಷ ಸುಸುಮು ಟೆಕೆಹನಾ ರೇಷ್ಮೆ ಸೀರೆಗಳ ಮೇಲೆ ಚಿನ್ನದ ಬಣ್ಣ ಸೇರಿದಂತೆ ಇತರ ನೈಸರ್ಗಿಕ ಬಣ್ಣಗಳನ್ನು ಬಳಸಿ ಜಪಾನಿನ ಅಪರೂಪದ ಕಲೆಯನ್ನು ಅನಾವರಣಗೊಳಿಸಿದ್ದಾರೆ. ಒಂದೊಂದು ಸೀರೆಯ ಬೆಲೆ ಕೇಳಿದರೆ ನಿಮ್ಮ ಹುಬ್ಬೇರದೆ ಇರದು. ಬರೋಬ್ಬರಿ 3 ರಿಂದ 5 ಲಕ್ಷ ರೂ.ಗಳಷ್ಟು ದುಬಾರಿಯಾಗಿದೆ.
ಜಪಾನಿನ ನಾಲ್ಕು ಋತುಮಾನದ ಸೌಂದರ್ಯವನ್ನು ಈ ಕ್ಯೋ- ಯುಜೇನ್ ಡೈಯಿಂಗ್ ವಿಧಾನವನ್ನು ಬಳಸಿ ಸೀರೆಯ ಮೇಲೆ ಅಪೂರ್ವ ಕಲಾ ಸೌಂದರ್ಯವನ್ನು ಸೃಷ್ಟಿಸಬಹುದಾಗಿದೆ. ಈ ಡೈಯಿಂಗ್ ವಿಧಾನದಲ್ಲಿ ಕುಶಲಕರ್ಮಿಗಳು ಬಹಳ ಎಚ್ಚರಿಕೆಯಿಂದ ತಮ್ಮ ಕುಂಚದ ಮೂಲಕ ಕಲಾ ಲೋಕವನ್ನು ಸೃಷ್ಟಿಸುವರು.
1603 ರಿಂದ 1868ರ ಇಸವಿಯ ಅವಧಿಯಲ್ಲಿ ಜಪಾನ್ ನ ಟೊಕುಗವಾ ಕುಟುಂಬ ಜಪಾನ್ ನಲ್ಲಿ ಆಳ್ವಿಕೆ ನಡೆಸಿತ್ತು. ಈ ಅವಧಿಯನ್ನು ಎಡೋ ಯುಗವೆಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಕ್ಯೋ-ಯುಜೆನ್ ಡೈಯಿಂಗ್ ಕಲಾ ವಿಧಾನ ಬಳಕೆ ಚಾಲ್ತಿಗೆ ಬಂತು. ಯುಜೆನ್ ಡೈಯಿಂಗ್ ಅನ್ನು ಅಭಿವೃದ್ಧಿಪಡಿಸುವವರೆಗೆ, ಬಟ್ಟೆಗೆ ಬಣ್ಣ ಮತ್ತು ಮಾದರಿಗಳನ್ನು ಸೇರಿಸಲು ಸೀಮಿತ ವಿಧಾನಗಳು ಮಾತ್ರ ಜಾರಿಯಲ್ಲಿದ್ದವು.