ಬೆಂಗಳೂರು, ನ.29 www.bengaluruwire.com : ಮತದಾರರ ವೈಯುಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಪ್ರಕರಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಲೋಪದ ಹಿನ್ನಲೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ವರ್ಗಾವಣೆ ಮಾಡಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಸಂಕ್ಷಿಪ್ತ ಪತ್ರದಲ್ಲಿ ಸಂಘದ ರಾಜ್ಯಾಧ್ಯಕ್ಷ ಹಾಗೂ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷರಾದ ಅಮೃತ್ ರಾಜ್, ಬಿಬಿಎಂಪಿಯಲ್ಲಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಮುಖ್ಯ ಆಯುಕ್ತರನ್ನು ವರ್ಗಾವಣೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿರುವುದು ತಿಳಿದು ಬಂದಿದೆ. ಇದನ್ನು ಸಂಘವು ಖಂಡಿಸುತ್ತದೆ.
ಒಂದು ವೇಳೆ ತುಷಾರ್ ಗಿರಿನಾಥ್ ಅವರನ್ನು ಬೇರೆಡೆ ವರ್ಗಾವಣೆ ಮಾಡಿದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಹಾನಗರ ಪಾಲಿಕೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಲಸ ಕಾರ್ಯಗಳನ್ನು ಸ್ಧಗಿತ ಮಾಡಿ ನ್ಯಾಯಯುತ ಬೇಡಿಕೆಗಾಗಿ ಹೋರಾಟ ಮಾಡಲಾಗುವುದು ಎಂದು ಅಮೃತ್ ರಾಜ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಈಗಾಗಲೇ ಚಿಲುಮೆ ಮತದಾರರ ವೈಯುಕ್ತಿಕ ಮಾಹಿತಿ ಕಳವು, ಮತದಾರರ ಪಟ್ಟಿ ಪರಿಷ್ಕರಣೆಯ ಲೋಪದ ಹಿನ್ನಲೆಯಲ್ಲಿ ಈಗಾಗಲೇ ಇಬ್ಬರು ಐಎಎಸ್ ಅಧಿಕಾರಿಗಳನ್ನು ಕೇಂದ್ರ ಚುನಾವಣಾ ಆಯೋಗ ಅಮಾನತು ಮಾಡಿದೆ. ಈ ಆದೇಶವನ್ನು ಕೂಡಲೇ ರದ್ದು ಮಾಡಬೇಕು. ಅಲ್ಲದೆ ಬಿಬಿಎಂಪಿಯ 4 ಕಂದಾಯ ಅಧಿಕಾರಿಗಳನ್ನು ಅಮಾನತುಪಡಿಸಿ ಬಂಧಿಸಿರುವುದು ಕಾನೂನು ಬಾಹಿರವಾಗಿರುತ್ತದೆ. ಚಿಲುಮೆ ಅಕ್ರಮ ಪ್ರಕರಣವನ್ನು ಜನಪ್ರತಿನಿಧಿ ಕಾಯ್ದೆ (RP ACT) ಅಡಿಯಲ್ಲಿ ಮಾತ್ರ ತನಿಖೆ ಮಾಡಬೇಕೆಂದು ಕೋರಿದ್ದಾರೆ.
ಚಿಲುಮೆ ಸಂಸ್ಥೆಯವರು ಎಸಗಿರುವ ಪ್ರಕರಣವು ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಬರುವುದರಿಂದ, ಉನ್ನತಾಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳನ್ನು ಜನಪ್ರತಿನಿಧಿ ಕಾಯ್ದೆ ಅಡಿಯಲ್ಲಿ ತನಿಖೆ ಮಾಡಿಸಲು ಸೂಚನೆ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ ಅಮೃತ್ ರಾಜ್ ಹೇಳಿದ್ದೇನು? :
ಇದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ಬಿಬಿಎಂಪಿ ನೀಡಿರುವ ದೂರಿನ ಅನ್ವಯ ಕಂದಾಯ ಅಧಿಕಾರಿಗಳನ್ನು ಜನಪ್ರತಿನಿಧಿ ಕಾಯ್ದೆ ಪ್ರಕಾರ ಏಕಾ ಏಕಿ ಬಂಧಿಸಿರುವುದು ಸರಿಯಲ್ಲ. ಬದಲಿಗೆ ಅಕ್ರಮ ಎಸಗಿದೆ ಎನ್ನಲಾದ ಚಿಲುಮೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಹಾಗೂ ಚುನಾವಣಾ ಆಯೋಗವು ನಡೆಸುವ ತನಿಖೆಗೆ ಸಿದ್ಧವಿದ್ದಾರೆ. ಆದರೆ ಅವರಿಗೆ ಮಾನಸಿಕ ಹಿಂಸೆ ನೀಡಬಾರದು.
ಯಾವುದಾದರೂ ಒಂದು ಸಂಸ್ಥೆಯಿಂದ ತನಿಖೆ ಮಾಡಲಿ. ಎರಡು ಮೂರು ಪೊಲೀಸ್ ಠಾಣೆಗಳು ಅಥವಾ ವಿವಿಧ ಸಂಸ್ಥೆಗಳು ಭಾಗಿಯಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಮಾನಸಿಕ ಹಿಂಸೆ ನೀಡಬಾರದು. ಜನಪ್ರತಿನಿಧಿ ಕಾಯ್ದೆಯಡಿ ಬಿಬಿಎಂಪಿಯು ದೂರು ದಾಖಲಿಸಲು ಸಾಧ್ಯವಿಲ್ಲ. ಅದರ ಬದಲು ಮುಖ್ಯ ಚುನಾವಣಾಧಿಕಾರಿ ಈ ಬಗ್ಗೆ ದೂರು ದಾಖಲಿಸಬೇಕು. ಈ ವಿಚಾರದಲ್ಲಿ ತಾಂತ್ರಿಕ ಲೋಪ ಕಂಡು ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಕಂದಾಯ ಉಪ ಆಯುಕ್ತರಾದ ಲಕ್ಷ್ಮೀದೇವಿ, ಅಧಿಕಾರಿಗಳಾದ ಕೆ.ಜಿ.ರವಿ, ಶಾಂತೇಶ್, ಸಂಘದ ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಸಾಯಿಶಂಕರ್, ರಾಮಚಂದ್ರ, ಕೆ.ಮಂಜೇಗೌಡ, ಸಂತೋಷ್ ಕುಮಾರ್ ನಾಯಕ್, ರುದ್ರೇಶ್, ನರಸಿಂಹ, ಬಾಬಣ್ಣ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.