ಬೆಂಗಳೂರು, ನ.10 www.bengaluruwire.com : ನಗರ ಸ್ಥಾಪಕರದ ಪ್ರತಿಮೆಯಲ್ಲೆ ಅತಿ ಎತ್ತರದ ಮೂರ್ತಿಯೆಂಬ ಹೆಗ್ಗಳಿಕೆಗೆ ಪಾತ್ರವಾದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಪಾಲಾಗಿದೆ.
ಈ ಸಂದರ್ಭದಲ್ಲಿ ಅಜಾನುಬಾಹು ಉಕ್ಕು ಮತ್ತು ಕಂಚಿನ ಪ್ರತಿಮೆ ನಿರ್ಮಿಸಿದ 97 ವರ್ಷದ ಶಿಲ್ಪಿ ರಾಮ್ ವಂಜಿ ಸುತಾರ್ ಅವರ ಜೊತೆ ಬೆಂಗಳೂರು ವೈರ್ ಮಾತಿಗಳಿದಾಗ ಅವರು ಹೇಳಿದ್ದಿಷ್ಟು : ಮೊದಲಿಗೆ ನಾಡಪ್ರಭು ಕೆಂಪೇಗೌಡರ ಚಿತ್ರವನ್ನು ಪ್ರತಿಮೆ ಮಾಡಲು ಅನುವಾಗುವಂತೆ ಸಿದ್ಧತೆ ಮಾಡಿಕೊಂಡೆವು. ಕೆಂಪೇಗೌಡರ ದಿಟ್ಟ ನಿಲುವನ್ನು ಪ್ರತಿಮೆ ರೂಪ ನೀಡಿ ವಿನ್ಯಾಸ ಮಾಡುವುದು ಸವಾಲಾಗಿತ್ತು. ಬೆಂಗಳೂರಿನ ಏರ್ ಪೋರ್ಟ್ ಸ್ಥಳದಲ್ಲಿ ಕೆಂಪೇಗೌಡ ಪ್ರತಿಮೆ ಒಳಮೈ ವಿನ್ಯಾಸವನ್ನು ಕಬ್ಬಿಣದಲ್ಲಿ ಮಾಡಲಾಯಿತು. ನೋಯ್ಡಾದಲ್ಲಿ ಪ್ರತಿಮೆಯ ಹೊರಮೈಯನ್ನು ಬಿಡಿ ಬಿಡಿಯಾಗಿ ಕಂಚಿನಲ್ಲಿ ನಿರ್ಮಿಸಿ ಪ್ರತಿಮೆ ಸ್ಥಳಕ್ಕೆ ತಂದು ಜೋಡಿಸಲಾಯಿತು. ಒಟ್ಟು 18 ತಿಂಗಳಲ್ಲಿ ಪ್ರತಿಮೆ ಕಾರ್ಯವನ್ನು ಸುಮಾರು 200 ಜನ ಶಿಲ್ಪಿಗಳ ತಂಡ ಮಾಡಿ ಮುಗಿಸಿದೆ.
108 ಅಡಿಯಲ್ಲಿ 90 ಅಡಿ ಮೂರ್ತಿ, 18 ಅಡಿ ಪೀಠ ಸೇರಿದಂತೆ 108 ಪ್ರತಿಮೆ ನಿರ್ಮಿಸಲಾಗಿದೆ. ಇದಕ್ಕಾಗಿ 98 ಟನ್ ಕಂಚನ್ನು ರಾಜಸ್ತಾನದ ಜಯಪುರ್, ಗುಜರಾತ್ ಮತ್ತಿತರ ಕಡೆಗಳಿಂದ ತಂದು ಪ್ರತಿಮೆ ಹೊರಮೈ ರಚನೆ ಮಾಡಿದೆವು. ಕೆಂಪೇಗೌಡ ಕೈಯಲ್ಲಿರುವ ಖಡ್ಗ 4 ಸಾವಿರ ಕೆಜಿ ತೂಕವನ್ನು ಹೊಂದಿದೆ. ಪ್ರತಿಮೆ ಒಳಮೈ ರಚನೆಗೆ ಬೆಂಗಳೂರಿನಲ್ಲೇ 218 ಟನ್ ಉಕ್ಕನ್ನು ಬಳಸಲಾಗಿದೆ. ಒಟ್ಟಾರೆಯಾಗಿ 64 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಿಸಲಾಗಿದೆ ಎಂದು ಹೇಳಿದರು.
ಪ್ರತಿಮೆ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿರುವ ರಾಮ್ ವಂಜಿ ಸುತಾರ್ ಅವರ ಮೊಮ್ಮಗ ಸಮೀರ್ ಅನಿಲ್ ಸುತಾರ್ ಬೆಂಗಳೂರು ವೈರ್ ಜೊತೆ ಮಾತನಾಡಿ, ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡುವ ಮುನ್ನ ಆ ರಾಜನ ಕುರಿತಂತೆ ಅಧ್ಯಯನ ಮಾಡಿದೆವು. ಆ ರಾಜ ಧರಿಸುತ್ತಿದ್ದ ಧಿರಿಸು, ರಾಜರ ಪೇಟ, ಖಡ್ಗ, ಪಾದರಕ್ಷೆ ವಿನ್ಯಾಸದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ ಪ್ರತಿಮೆ ಕುರಿತಂತೆ ಮೊದಲು 3 ಅಡಿ ಪ್ರತಿಮೆ ನಿರ್ಮಿಸಿ ಅದರ ತ್ರಿಡಿ ಡ್ರಾಯಿಂಗ್ ಮಾಡಿ ಆದಿಚುಂಚನಗಿರಿ ಮಠದ ಸ್ವಾಮೀಜಿ ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಚರ್ಚಿಸಿ ಆ ಪ್ರತಿಮೆನಲ್ಲಿ ಬದಲಾವಣೆ ಮಾಡುತ್ತಾ ಬಂದಿವಿ. ಆ ರೀತಿ 5-6 ರೀತಿ ಪ್ರತಿಮೆ ನಿರ್ಮಿಸಿ 108 ಅಡಿ ಎತ್ತರದ ಮೂರ್ತಿ ನಿರ್ಮಿಸಿದೆವು.
ನೀವು ಆ ಆಳೆತ್ತರದ ಪ್ರತಿಮೆಯಲ್ಲಿ ಕೆಂಪೇಗೌಡರ ಆಭರಣ, ಖತ್ತಿ, ಬಟ್ಟೆ ಹಾಗೂ ಬಟ್ಟೆಯ ಎಂಬ್ರಾಯ್ಡರಿ ಸ್ಟಿಚಿಂಗ್ ಕೂಡ ಬಹಳ ಸೂಕ್ಷ್ಮವಾಗಿ ನಿರ್ಮಿಸಲಾಗಿದೆ. ಕೆಂಪೇಗೌಡರ 90 ಅಡಿ ಎತ್ತರದ ಪ್ರತಿಮೆಯಲ್ಲಿ 10 ಅಡಿಯ 90 ತುಣಕುಗಳನ್ನು 9 ಭಾಗಗಳಲ್ಲಿ ಜೋಡಿಸಲಾಗಿದೆ. ನಿಖರವಾಗಿ ಮಾರ್ಕಿಂಗ್ ಮಾಡಿ ವಿನ್ಯಾಸ ಮಾಡಿ ನಂತರ ಬಿಡಿ ಭಾಗಗಳನ್ನು ಬಹಳ ಜಾಗರೂಕವಾಗಿ ಜೋಡಿಸಲಾಗಿದೆ. 2-3 ಡಿಗ್ರಿ ವ್ಯತ್ಯಸವಾಗಿದ್ದರೂ 108 ಅಡಿ ಎತ್ತರದ ಪ್ರತಿಮೆಯ ಸ್ವರೂಪಕ್ಕೆ ಚ್ಯುತಿಯಾಗುತ್ತಿತ್ತು ಎನ್ನುತ್ತಾರೆ ಅವರು.
ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದ ವೃತ್ತದಲ್ಲಿರುವ ಕೆಂಪೇಗೌಡರ ಪ್ರತಿಮೆಯಲ್ಲಿ ಖಡ್ಗ ಮತ್ತು ಗುರಾಣಿಯೊಂದಿಗೆ ನಾಡಪ್ರಭುಗಳ ಮೂರ್ತಿಯಿದೆ. ಆದರೆ ಕೆಐಎಎಲ್ ಏರ್ ಪೋರ್ಟ್ ಬಳಿಯ 108 ಅಡಿ ಎತ್ತರದ ಕಂಚಿನ ಪ್ರತಿಮೆಯಲ್ಲಿ ಕೆಂಪೇಗೌಡರು ಖಡ್ಗದೊಂದಿಗೆ ನಿಂತಿರುವ ಭಂಗಿಯಿದೆ. ಆದರೆ ಕೈಯಲ್ಲಿ ಗುರಾಣಿಯಿಲ್ಲ. ಇದೇ ರೀತಿ ಮೂರ್ತಿ ನಿರ್ಮಿಸುವಂತೆ ಕೆಂಪೇಗೌಡ ಪ್ರತಿಮೆ ನಿರ್ಮಾಣ ಸಮಿತಿ ಸೂಚಿಸಿತ್ತು ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
ಗುಜರಾತಿನಲ್ಲಿ ದೇಶದ ಅತಿದೊಡ್ಡ ಸರ್ದಾರ್ ವಲ್ಲಭಾಯ್ ಪಟೇಲ್ ಪ್ರತಿಮೆಯನ್ನು ಶಿಲ್ಪಿ ರಾಮ್ ವಂಜಿ ಸುತಾರ್ ಅವರ ತಂಡವೇ ನಿರ್ಮಿಸಿ ದಾಖಲೆ ನಿರ್ಮಿಸಿದ್ದರು. ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ರಾಮ್ ವಂಜಿ ಸುತಾರ್ ಪುತ್ರ ಅನಿಲ್ ರಾಮ್ ಸುತಾರ್ (65) ಹಾಗೂ ಮೊಮ್ಮಗ ಸಮೀರ್ ಅನಿಲ್ ಸುತಾರ್ (33) ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಒಟ್ಟು ಮೂರನೇ ತಲೆಮಾರಿನ ಶಿಲ್ಪಿಗಳು ದೇಶಾದ್ಯಂತ ದೊಡ್ಡ ದೊಡ್ಡ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ.
ದೇಶದ ಹಲವು ಕಡೆ ನಿರ್ಮಾಣವಾಗುತ್ತಿದೆ ಬೃಹತ್ ಪ್ರತಿಮೆಗಳು :
ಬೆಂಗಳೂರಿನ ನಂದಿಬೆಟ್ಟದ ಸಮೀಪದ ಸತ್ಯಶ್ರೀ ಸಾಯಿಬಾಬಾ ಆಶ್ರಮದಲ್ಲಿ 153 ಅಡಿ ಉದ್ದದ ಶಿವಾಜಿ ಪ್ರತಿಮೆ, ಹೈದರಾಬಾದ್ ನಲ್ಲಿ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ ಶಿವಾಜಿಯವರ ಪುತ್ರ ಸಾಂಬಾಜಿ ಮಹರಾಜರ 100 ಅಡಿ ಎತ್ತರದ ಪ್ರತಿಮೆ, ಮುಂಬೈನಲ್ಲಿ 350 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ, ಅರಬ್ಬೀ ಸಮುದ್ರದಲ್ಲಿ 400 ಅಡಿ ಎತ್ತರದ ಶಿವಾಜಿ ಮಹಾರಾಜರ ಮೂರ್ತಿಯನ್ನು ನಿರ್ಮಿಸುತ್ತಿದ್ದೇವೆ ಎಂದು ಶಿಲ್ಪಿ ಅನಿಲ್ ರಾಮ್ ಸುತಾರ್ ಬೆಂಗಳೂರು ವೈರ್ ಗೆ ಹೇಳಿದ್ದಾರೆ.
ಪ್ರತಿಮೆ ನಿರ್ಮಾಣ ಆರಂಭ ಆಗಿದ್ದು ಹೀಗೆ :
2020ರ ಜೂನ್ 27ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಂಪೇಗಡರ ಪ್ರತಿಮೆ ನಿರ್ಮಾಣ ಸ್ಥಳದಲ್ಲಿ ಭೂಮಿಪೂಜೆ ನೆರವೇರಿಸಿದ್ದರು. 09-02-2021 ರಂದು ರಾಮಸುತಾರ್ ಆರ್ಟ್ ಮತ್ತು ಕ್ರಿಯೇಷನ್ ಸಂಸ್ಥೆಗೆ ಮೂರ್ತಿ ನಿರ್ಮಾಣದ ಕಾರ್ಯಾದೇಶವನ್ನು ನೀಡಲಾಯಿತು. 04-07-2021ರಂದು ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಮೊದಲ ಹಂತದಲ್ಲಿ ಕೆಂಪೇಗೌಡರ ಪಾದರಕ್ಷೆಯನ್ನು ತರಲಾಯಿತು. ಹೀಗೆ ಹಂತ ಹಂತವಾಗಿ ಆಳೆತ್ತರದ ಮೂರ್ತಿ ನಿರ್ಮಾಣಗೊಂಡಿತು. 23 ಎಕರೆ ಜಾಗದಲ್ಲಿ 30 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿದೆ.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಸಚಿವರಾಗಿರುವ ಡಾ.ಸಿ.ಎನ್.ಅಶ್ವತ್ಥನಾರಾಯಣ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ತೊಡಗಿಕೊಂಡಿದ್ದರು ಎಂದು ಹೇಳಲು ಮೂವರು ಶಿಲ್ಪಿಗಳು ಮರೆಯಲಿಲ್ಲ.