ಬೆಂಗಳೂರು, ನ.8 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದ ವತಿಯಿಂದ ಸೋಮವಾರ ಅದ್ದೂರಿ ಕನ್ನಡ ರಾಜ್ಯೋತ್ಸವ’ ಹಾಗೂ ನಗರ ದೇವತೆ ಅಣ್ಣಮ್ಮದೇವಿ ಉತ್ಸವ ಮತ್ತು ಸಾಧಕರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ ಪ್ರಧಾನ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ನಗರ ದೇವತೆ ಅಣ್ಣಮ್ಮ ದೇವಿಗೆ ಪುಷ್ಪ ನಮನವನ್ನು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಕರ್ನಾಟಕ ರಾಜ್ಯ ಸರ್ಕಾರಿನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದರವರು, ನಿರ್ದೇಶಕರಾದ ರಾಜೇಂದ್ರಸಿಂಗ್ ಬಾಬು, ಹಿರಿಯ ಹಾಸ್ಯ ನಟ ದೊಡ್ಡಣ್ಣ, ವಿಶೇಷ ಆಯುಕ್ತ ರಂಗಪ್ಪ, ಪ್ರಧಾನ ಕಾರ್ಯದರ್ಶಿ ಎ.ಅಮೃತ್ ರಾಜ್ ರವರು ನೇರವೇರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಹೋರಾಟಗಳಿಂದ ಕನ್ನಡ ಭಾಷೆ ಶಿಕ್ಷಣಕ್ಕೆ ಕಡ್ಡಾಯ ಮಾಡುವಂತಾಯಿತು. ಬಿಬಿಎಂಪಿಯಲ್ಲಿ ಕನ್ನಡ ಭಾಷೆಯಲ್ಲಿ ಆಡಳಿತ ನಡೆಸುತ್ತದೆ. ನಮ್ಮ ವಿಚಾರವನ್ನು ತಿಳಿಸಲು ಭಾಷೆ ಪ್ರಧಾನವಾಗಿರುತ್ತದೆ. ಸ್ಥಳೀಯ ಭಾಷೆಯಲ್ಲಿ ಮಾತನಾಡಿದಾಗ ಸಂಸ್ಕೃತಿ ಬಗ್ಗೆ ಅರಿವು ಮೂಡುತ್ತದೆ. ಕನ್ನಡ ಭಾಷೆ ಸುಂದರವಾದ ಭಾಷೆಯಾಗಿದೆ ಎಂದು ಹೇಳಿದರು.
ಮೂರು ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ ಒಂದು. ಕನ್ನಡ ಭಾಷೆ ಕಾವೇರಿ, ಗೋದಾವರಿ, ತ್ರಯಂಭಕೇಶ್ವರವರೆಗೆ ಇತ್ತು. ಕನ್ನಡ ಭಾಷೆ ಕಸ್ತೂರಿಯಂತೆ ಸಂಗೀತಮಯವಾಗಿದೆ, ಕಲಿಯುವುದು ಸುಲಭವಾಗಿದೆ.
ಪುನೀತ್ ನಗುಮೊಗದ ಒಡೆಯ, ಪುನೀತ್ ಕನ್ನಡ ಚಲನಚಿತ್ರ ರಂಗದ ರಾಜಕುಮಾರ ಎಂದು ಚಲನಚಿತ್ರ ನಟ ಡೊಡ್ಡಣ್ಣ ಹೇಳಿದರು.
ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿರವರು ಮಾತನಾಡುತ್ತಾ, ಪುನೀತ್ ರಾಜ್ ಕುಮಾರ್ ರವರ ಪುತ್ಥಳಿಯನ್ನ ಬಿ.ಬಿ.ಎಂ.ಪಿ.ಕೇಂದ್ರ ಕಛೇರಿಯಲ್ಲಿ ಸ್ಥಾಪಿಸಿ ರಾಜ್ಯ ಸರ್ಕಾರಿ ನೌಕರರು ಗೌರವ ಸಲ್ಲಿಸಿದ್ದಾರೆ. ಸರ್ಕಾರಿ ಮತ್ತು ಬಿಬಿಎಂಪಿ ನೌಕರರು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಆಡಳಿತ ಭಾಷೆಯಾಗಿ ಬಳಸುತ್ತಾರೆ ಎಂದು ಹೇಳಿದರು.
ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿಯನ್ನು ಕನ್ನಡ ಪರ ಹೋರಾಟಗಾರರುಗಳಾದ ಅಶ್ವಿನಿ, ಕೊ.ನಾ.ನಾಗರಾಜ್, ಅರುಣ ಬಾಲರಾಜ್, ಹಿರಿಯ ಚಿತ್ರನಟಿ ಜಯಲಕ್ಷ್ಮೀ, ಹಿನ್ನೆಲೆ ಗಾಯಕ ಶಶಿಧರ ಕೋಟೆ, ಎಸಿಪಿ ರವಿಕುಮಾರ್, ಪತ್ರಕರ್ತರುಗಳಾದ ಕೆರೆ ಮಂಜುನಾಥ್ ಅವಿನಾಶ್, ಸೋಮಣ್ಣ ಮಾಚಿಮಾಡ, ಅರವಿಂದ್ ಸಾಗರ್, ನಾಗಪ್ಪರವರಿಗೆ ಮತ್ತು ಬಿಬಿಎಂಪಿ ಉಪ ಲೆಕ್ಕ ನಿಯಂತ್ರಕರಾದ ಪ್ರಕಾಶ್ ಸೇರಿದಂತೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಬಿಬಿಎಂಪಿ ಅಧಿಕಾರಿ ಹಾಗೂ ನೌಕರರಿಗೆ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.