ಬೆಂಗಳೂರು, ನ.7 www.bengaluruwire.com : ವಿದೇಶದಿಂದ ವಾಮಮಾರ್ಗದಲ್ಲಿ ಚಿನ್ನ ಕಳ್ಳಸಾಗಾಣಿಕೆ ಮಾಡುವ ದುಷ್ಕರ್ಮಿಗಳ ಕೃತ್ಯವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. (KIAL)ದಲ್ಲಿನ ಬೆಂಗಳೂರು ಏರ್ ಕಾರ್ಗೊ ಕಮಿಷನರೇಟ್ (Air Cargo Commissionarate) ನ ಸೀಮಾಸುಂಕ ಗುಪ್ತಚರ ಘಟಕ (Customs Intelligence Unit) ಬಯಲಿಗೆಳೆದಿದೆ. ಅವರಿಂದ 2.45 ಕೋಟಿ ರೂ. ಮೌಲ್ಯದ ಶುದ್ಧ ಚಿನ್ನದ ರಾಡ್ ಗಳನ್ನು ವಶಪಡಿಸಿಕೊಂಡಿದೆ.
ದುಬೈನಿಂದ ಆಮದಾಗಿ ಬಂದಿದ್ದ ವ್ಯಾಯಾಮ ಮಾಡುವ ಯಂತ್ರವನ್ನು 5HP ಟ್ರೆಡ್ ಮಿಲ್ ಸರಕೆಂದು ಘೋಷಿಸಲಾಗಿದ್ದ ರಫ್ತು ಹಾಗೂ ಆಮದುದಾರರ ಬಗ್ಗೆ ಅನುಮಾನ ಬಂದ ಹಿನ್ನಲೆಯಲ್ಲಿ ಆ ಟ್ರೆಡ್ ಮಿಲ್ಲನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದಾಗ ಕಳ್ಳಸಾಗಾಣಿಕೆದಾರರು ಟ್ರೆಡ್ ಮಿಲ್ ಯಂತ್ರದ ಒಳಗೆ 4.72 ಕೆಜಿ ತೂಕದ ಗಟ್ಟಿ ಚಿನ್ನದ ರಾಡ್ ಗಳನ್ನು ಅದರೊಳಗೆ ಬಚ್ಚಿಟ್ಟು ಸಾಗಿಸಿದ್ದನ್ನು ಕಸ್ಟಮ್ಸ್ ಗುಪ್ತಚರ ಘಟಕದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಈ ಸಂಬಂಧ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡು, ಆ ಸರಕನ್ನು ಆಮದು ಮಾಡಿಕೊಂಡ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಸೀಮಾಸುಂಕದ ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ.