ಬೆಂಗಳೂರು, ಅ.9 www.bengaluruwire.com : ಕನ್ನಡಿಗರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರ ನೆಚ್ಚಿನ ಚಿತ್ರ “ಗಂಧದಗುಡಿ” (Gandhadagudi) ಸಾಕ್ಷ್ಯಚಿತ್ರ ಅಕ್ಟೋಬರ್ 28ರಂದು ಬಿಡುಗಡೆಯಾಗಲಿದೆ. ಅದಕ್ಕೂ ಪೂರ್ವದಲ್ಲೇ ಭಾನುವಾರ (ಅ.9) ಪಿಆರ್ ಕೆ ಪ್ರೊಡಕ್ಷನ್ಸ್ (PRK Productions) ಅದರ ಟ್ರೇಲರ್ (Trailer) ಬಿಡುಗಡೆ ಮಾಡಿದೆ.
ಯೂಟ್ಯೂಬ್ (#youtube) ನಲ್ಲಿ ಈ ವಿಡಿಯೋ ಬಿಡುಗಡೆಯಾದ ಕೇವಲ ನಾಲ್ಕು ಗಂಟೆಗಳಲ್ಲೇ ಎರಡನೇ ಟ್ರೆಂಡಿಂಗ್ (#2Trending) ಸ್ಥಾನ ಪಡೆದಿದ್ದಲ್ಲದೇ ಆ ಟ್ರೇಲರ್ 11.22 ಲಕ್ಷ ವೀಕ್ಷಣೆಯಾಗಿತ್ತು.
ಈ ಕುರಿತಂತೆ ಮುಖ್ಯಮಂತ್ರಿಗಳು ಹಾಗೂ ಅಪ್ಪು ಅಭಿಮಾನಿಗಳೊಂದಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಸರಣಿ ಟ್ವೀಟ್ ಮಾಡಿದ್ದಾರೆ.
“ನಮಸ್ತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೆ. ಅಪ್ಪು ಅವರ ಹೃದಯಕ್ಕೆ ಹತ್ತಿರವಾದ ಯೋಜನೆಯಾದ #ಗಂಧದಗುಡಿ ಚಿತ್ರದ ಟ್ರೈಲರ್ ಅನ್ನು ನಾವು ಬಿಡುಗಡೆ ಮಾಡುತ್ತಿದ್ದೇವೆ. ಇಂದು ನಮಗೆ ಭಾವನಾತ್ಮಕ ದಿನವಾಗಿದೆ. ಅಪ್ಪು ಯಾವಾಗಲೂ ನಿಮ್ಮೊಂದಿಗಿನ ಆತ್ಮೀಯವಾಗಿ ಮಾತನಾಡುತ್ತಿದ್ದರು ಮತ್ತು ನಿಮ್ಮೊಂದಿಗೆ ವೈಯಕ್ತಿಕವಾಗಿ ಹಲವು ವಿಷಯಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಿದ್ದರು.” ಎಂದು ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
“ಅಪ್ಪು ಅವರು ಈಗ ನಮ್ಮ ಮಧ್ಯೆ ಇಲ್ಲ. ಆದರೆ ಅವರ ಜೀವನ ಮತ್ತು ಕೆಲಸವು ನಮಗೆ ‘ವಸುಧೈವ ಕುಟುಂಬಕಂ’ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ.”
“#GGMovie ಸಿನಿಮಾವನ್ನು ಆಚರಿಸುತ್ತದೆ ಮತ್ತು ನಮ್ಮ ನೆಲದ ಶ್ರೀಮಂತ ಪರಂಪರೆ, ಸಂಸ್ಕೃತಿ, ಪ್ರಕೃತಿ ಮತ್ತು ವೈವಿಧ್ಯತೆಗೆ ಕನ್ನಡಿ ಹಿಡಿದಿದೆ.” ಎಂದು ಅಶ್ವಿನಿ ಅಭಿಪ್ರಾಯಪಟ್ಟಿದ್ದಾರೆ.
ನಟ ಪುನೀತ್ ರಾಜಕುಮಾರ್ 2021 ಅಕ್ಟೋಬರ್ 29 ರಂದು ವಿಧಿವಶರಾಗಿದ್ದರು. ಅವರ ಮೊದಲ ವರ್ಷದ ಪುಣ್ಯ ಸ್ಮರಣೆಗೆ ಒಂದು ದಿನ ಮೊದಲು ‘ಗಂಧದಗುಡಿ’ ಸಾಕ್ಷ್ಯಚಿತ್ರ ಬಿಡುಗಡೆ ಮಾಡಲಾಗುವುದು ಎಂದು ಅವರ ಪತ್ನಿ ಅಶ್ವಿನಿ ರಾಜ್ ಕುಮಾರ್ ಈ ಹಿಂದೆ ಟ್ವಿಟರ್ (Twitter) ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದರು.
ಈ ಸಾಕ್ಷ್ಯಚಿತ್ರದ ಕುರಿತಂತೆ ವಿಶೇಷ ಪತ್ರವೊಂದನ್ನು ಕೂಡ ಬರೆದಿದ್ದು, ಸಾಕ್ಷ್ಯಚಿತ್ರದ ಬಗ್ಗೆ ಪುನೀತ್ ಅವರಿಗಿದ್ದ ಕನಸಿನ ಬಗ್ಗೆ, ಚಿತ್ರೀಕರಣಕ್ಕೆ ತೆರಳಿದ್ದಾಗ ಅಪ್ಪುಗೆ ಆದ ಅನುಭವಗಳು, ಕಾಡಿನ ಅದ್ಭುತಗಳ ಬಗ್ಗೆ ಪುನೀತ್ ಹೇಳುತ್ತಿದ್ದ ಮಾತುಗಳನ್ನು ಉಲ್ಲೇಖ ಮಾಡಿ ಈ ಪತ್ರದಲ್ಲಿ ಹೇಳಿಕೊಂಡಿದ್ದರು.
“ಅಪ್ಪು ಅವರ ಕೊನೆಯ ಚಿತ್ರ. ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ. ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ. ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ.” ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಟ್ವಿಟರ್ ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದರು.