ಬೆಂಗಳೂರು, ಅ.08 www.bengaluruwire.com : ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIAL)ದ ಆವರಣದಲ್ಲಿ ಸ್ಥಾಪಿಸಿರುವ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ (Kempegowda Statue) ಅನಾವರಣ ಕಾರ್ಯಕ್ರಮ ನ.10ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಸಾರ್ವಜನಿಕ ಕಾರ್ಯಕ್ರಮದ ಸಂಬಂಧ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.
ಅಂದು ಮೋದಿಯವರು 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಹಾಗೂ ಕೆಂಪೇಗೌಡ ಥೀಮ್ ಪಾರ್ಕ್ ಉದ್ಘಾಟನೆಗೆ ಪ್ರಧಾನಿ ಮೋದಿ ಬರಲಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕೆಂಪೇಗೌಡರ ಪ್ರತಿಮೆಯ ಸಮೀಪವೇ ಇರುವ 25-30 ಎಕರೆ ಖಾಲಿ ಜಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಮೋದಿ ಅವರ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಜನರು ಬರಲಿದ್ದು, ಸೂಕ್ತ ಬಂದೋಬಸ್ತ್ ಮತ್ತು ವಾಹನ ನಿಲುಗಡೆ ಸೇರಿದಂತೆ ಸಕಲ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ನಗರದಲ್ಲಿ ಬೇರಾವುದೇ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ನಾಡಿನ ವಿವಿಧೆಡೆಯಿಂದ ಮೃತ್ತಿಕೆ(ಪವಿತ್ರ ಮಣ್ಣು) ಮತ್ತು ಪವಿತ್ರ ನದಿ, ಜಲಮೂಲದಿಂದ ಜಲ ಸಂಗ್ರಹ ಮಾಡಿ ತರಿಸುವುದು, ಕೆಂಪೇಗೌಡರ ಜೀವನ ಚರಿತ್ರೆ ಬಿಂಬಿಸುವ ವಿಡಿಯೋ ಮ್ಯಾಪಿಂಗ್ ಹಾಗೂ ನೃತ್ಯ ರೂಪಕ ಆಯೋಜಿಸಲು ಅನುಮತಿ ನೀಡಲಾಗಿದೆ.