ಶೃಂಗೇರಿ, ಅ.5 www.bengaluruwire : ಕಾಶ್ಮೀರ ನಿಯಂತ್ರಣ ರೇಖೆ ತೀತ್ವಾಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಶಾರದಾ ಯಾತ್ರೆ ದೇವಸ್ಥಾನಕ್ಕಾಗಿ ವಿಜಯದಶಮಿಯ ದಿನವಾದ ಬುಧವಾರ ಇಲ್ಲಿ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಶೃಂಗೇರಿ ಶಾರದಾ ಪೀಠದ ಹಿರಿಯ ಶ್ರೀಗಳಾದ ಶ್ರೀ ಭಾರತೀ ತೀರ್ಥ ಸ್ವಾಮಿಜಿ ಹಾಗೂ ಕಿರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮಿಜಿಯವರು ಶಾರದಾ ಮೂರ್ತಿಯನ್ನು ಕಾಶ್ಮೀರ ಉಳಿಸಿ ಶಾರದಾ ಸಮಿತಿಯವರಿಗೆ ಆಶೀರ್ವದಿಸಿ ಹಸ್ತಾಂತರಿಸಿದರು.
ವಿಜಯದಶಮಿಯ ಶುಭದಿನ ದಂದು ಬೆಳಗ್ಗೆ ಶೃಂಗೇರಿಯಲ್ಲಿ ನಡೆದ ಪವಿತ್ರ ಕಾರ್ಯಕ್ರಮದಲ್ಲಿ 100 ಕೆಜಿ ತೂಕದ ಈ 3 ಅಡಿ ತೂಕದ ಸುಂದರ ಶಾರದಾ ದೇವಿಯ ಮೂರ್ತಿಗೆ ಉಭಯ ಶ್ರೀಗಳು ಪೂಜೆ ನೆರವೇರಿಸಿದರು. ಬಳಿಕ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು, ಬಳಿಕ ಸೇವ್ ಶಾರದಾ ಸಮಿತಿ ಅಧ್ಯಕ್ಷ ರವೀಂದರ್ ಪಂಡಿತ ಅವರ ನೇತೃತ್ವದ ನಿಯೋಗಕ್ಕೆ ಮೂರ್ತಿಯನ್ನು ನೀಡಿದರು. ಮುಂದಿನ ವರ್ಷದ ಆರಂಭದಲ್ಲಿ ತೀತ್ವಾಲ್ ಗೆ ಈ ಮೂರ್ತಿಯನ್ನು ಯಾತ್ರೆಯಲ್ಲಿ ಕೊಂಡೊಯ್ದು, ಅಲ್ಲಿನ ಹೊಸ ಶಾರದಾ ಯಾತ್ರಾ ದೇವಸ್ಥಾನದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಪಂಚಲೋಹದ ಶಾರದಾ ವಿಗ್ರಹ, ಅದರ ಪೀಠ ಹಾಗೂ ಪ್ರಭಾವಳಿ ಸೇರಿದಂತೆ ಒಟ್ಟು 400 ಕೆಜಿ ತೂಕವನ್ನು ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾರದಾ ಉಳಿಸಿ ಸಮಿತಿ ಸಂಸ್ಥಾಪಕ ರವೀಂದರ್ ಪಂಡಿತ್, 1947 ರ ತೀತ್ವಾಲ್‌ನಲ್ಲಿ ಕಳೆದುಹೋದ ಪರಂಪರೆಯನ್ನು ಮರಳಿ ಪಡೆಯಲು ಶೃಂಗೇರಿ ಮಠವು ತಮ್ಮ ಸಮಿತಿಗೆ ಬೆಂಬಲ ನೀಡಿದಕ್ಕಾಗಿ ತಾವು ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.
ಇದೊಂದು ಐತಿಹಾಸಿಕ ಕ್ಷಣ :
“1947 ರಲ್ಲಿ ತೀತ್ವಾಲ್‌ನಲ್ಲಿ ದಾಳಿಯ ಸಮಯದಲ್ಲಿ ಇಲ್ಲಿನ ಧರ್ಮಶಾಲಾ ಮತ್ತು ಸಿಖ್ ಗುರುದ್ವಾರ ಸಂಪೂರ್ಣವಾಗಿ ದಹಿಸಲ್ಪಟ್ಟಿತ್ತು. 2021 ರ ಸೆಪ್ಟೆಂಬರ್‌ನಲ್ಲಿ ನಮ್ಮ ವಾರ್ಷಿಕ ಯಾತ್ರೆಯಲ್ಲಿ ನಾವು ಸ್ಥಳೀಯರಿಂದ ದೇವಸ್ಥಾನಕ್ಕೆ ಭೂಮಿಯನ್ನು ಪಡೆದುಕೊಂಡಿದ್ದೆವು. ಸ್ವಾತಂತ್ರ್ಯ ಪೂರ್ವದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಶಾರದಾ ಪೀಠವು ಸೇರ್ಪಡೆಯಾಗಿತ್ತು. ಹಾಗಾಗಿ ಅಧಿಕೃತ ಚಾರ್ರಿ ಮುಬಾರಕ್, ಆ ದಿನಗಳಲ್ಲಿ ತೀತ್ವಾಲ್‌ನಿಂದ ಚಿಲ್ಹಾನಾ ಮೂಲಕ ಆಗ ಶಾರದಾ ಪೀಠಕ್ಕೆ ಹೋಗುತ್ತಿದ್ದರು.” ಎಂದು ತಿಳಿಸಿದರು.
ಈಗ ತೀತ್ವಾಲ್ ನಲ್ಲಿಯೇ ಶಾರದಾ ಯಾತ್ರೆಯ ಪರಿಕ್ರಮ ಪ್ರಾರಂಭವಾಗುವ ಸ್ಥಳದಲ್ಲಿಯೇ ಶಾರದಾ ದೇವಿ ದೇವಸ್ಥಾನ ನಿರ್ಮಿಸುತ್ತಿದ್ದು, ಆ ದೇವಸ್ಥಾನಕ್ಕೆ ಶೃಂಗೇರಿ ಪೀಠದಿಂದ ಪಂಚಲೋಹದ ವಿಗ್ರಹ ಪಡೆಯುತ್ತಿರುವುದು ಒಂದು ಐತಿಹಾಸಿಕ ಕ್ಷಣವಾಗಿದೆ ಎಂದು ರವೀಂದರ್ ಪಂಡಿತ ಹೇಳಿದರು.
ಪಾರಂಪರಿಕ ದೇವಾಲಯದ ಕಾಮಗಾರಿಯು ಈ ನವೆಂಬರ್‌ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಹಾಗೂ ಪ್ರತಿಷ್ಠಾಪನೆ ಮತ್ತು ಅಂತಿಮ ಉದ್ಘಾಟನೆಗಾಗಿ ಮೂರ್ತಿಯನ್ನು ಮುಂದಿನ ವರ್ಷದ ಆರಂಭದಲ್ಲಿ ತೀತ್ವಾಲ್‌ಗೆ ಕೊಂಡೊಯ್ಯಲಾಗುತ್ತದೆ. ಏತನ್ಮಧ್ಯೆ, ಸಮಿತಿಯು ಸಿಖ್ ಗುರುದ್ವಾರವನ್ನು ನಿರ್ಮಿಸುತ್ತಿದೆ. ಅದರ ಕೆಲಸವು ಬಹುತೇಕ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಮುಂದಿನ ವರ್ಷ ನೂತನ ದೇವಸ್ಥಾನದ ಕುಂಭಾಭಿಷೇಕ :
ಶೃಂಗೇರಿ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ವಿ.ಆರ್.ಗೌರಿಶಂಕರ ಅವರು ಮಾತನಾಡಿ, ಹೊಸ ಶಾರದಾ ದೇವಿ ದೇವಸ್ಥಾನ ನಿರ್ಮಾಣವಾಗುತ್ತಿರುವುದು ಸನಾತನ ಧರ್ಮದ ಅನುಯಾಯಿಗಳಿಗೆ ಹೆಮ್ಮೆಯ ವಿಚಾರವಾಗಿದೆ. ಸನಾತನ ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬರು ಈ ಪ್ರಮುಖ ಯೋಜನೆಗೆ ಬೆಂಬಲ ನೀಡಬೇಕಾಗಿರುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. 1200 ವರ್ಷಗಳ ಹಿಂದೆ ಆದಿ ಶಂಕರಾಚಾರ್ಯರು ಈಗಿನ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶ್ರೀ ಶಾರದಾ ಸರ್ವಜ್ಞ ಪೀಠಕ್ಕೆ ಭೇಟಿ ನೀಡಿ ಅವರೋಹಣ ನಡೆಸಿದರು. ಹಿಂದುಗಳ ಪವಿತ್ರ ಸ್ಥಳವಾದ ಶ್ರೀ ಸರ್ವಜ್ಞ ಪೀಠಕ್ಕೆ ನಿರಂತರವಾಗಿ ಯಾತ್ರೆ ಆರಂಭಿಸುವ ಬಗ್ಗೆ ಪ್ರಯತ್ನಗಳು ನಡೆದಿದೆ. ಶೃಂಗೇರಿ ಜಗದ್ಗುರುಗಳ ಆಶೀರ್ವಾದಿಂದ ಮುಂದಿನ ವರ್ಷ ನೂತನ ದೇವಸ್ಥಾನದ ಕುಂಭಾಭಿಷೇಕ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದ್ದಾರೆ.
ಶಾರದಾ ಯಾತ್ರೆ ಪುನಃ ಆರಂಭಿಸುವ ಉದ್ದೇಶ :
ಕಾಶ್ಮೀರದ ಶಾರದಾ ಸಂರಕ್ಷಣಾ ಸಮಿತಿಯ ಸಂಚಾಲಕ ಹಾಗೂ ಹಿರಿಯ ಪತ್ರಕರ್ತ ಮಂಜುನಾಥ ಶರ್ಮ ಮಾತನಾಡಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇದ್ದ ಐತಿಹಾಸಿಕ ಶ್ರೀ ಶಾರದಾ ದೇವಿ ದೇವಸ್ಥಾನ ಆಕ್ರಮಣಕಾರರ ದಾಳಿಗೆ ಭಗ್ನಗೊಂಡ ಬಳಿಕ, ಆ ತಾಯಿಗೆ ನೆಲೆ ಇಲ್ಲದೆ ಪೂಜೆಯು ನಿಂತು ಹೋಗಿತ್ತು. ಹಾಗಾಗಿ ಅಲ್ಲಿನ ಪರಂಪರೆಯನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಗಡಿ ಗ್ರಾಮ ತೀತ್ವಾಲ್ ನಲ್ಲಿ ಶಾರದಾ ದೇವಸ್ಥಾನ ನಿರ್ಮಾಣ ಮಾಡುವ ಯೋಜನೆ ಬಗ್ಗೆ ಶೃಂಗೇರಿ ಮಠದ ಉಭಯ ಶ್ರೀಗಳು ಸಮ್ಮತಿ ಸೂಚಿಸಿ, ತಮ್ಮ ಬೆಂಬಲವನ್ನು ಘೋಷಿಸಿದರು. ಅದಾದ ಬಳಿಕ ಮಠದ ಭಕ್ತರು, ದೇವಿಯ ಅನುಯಾಯಿಗಳ ನೆರವಿನಿಂದ ಕೇವಲ 5 ತಿಂಗಳ ದಾಖಲೆ ಅವಧಿಯಲ್ಲಿ ದೇವಸ್ಥಾನದ ಕಲ್ಲಿನ ಕಟ್ಟಡದ ನಿರ್ಮಾಣ ಕಾಮಗಾರಿ ಮುಗಿಸಿ, ಮೇಲ್ಛಾವಣಿ ಕೆಲಸ ಭರದಿಂದ ನಡೆಯುತ್ತಿದೆ ಎಂದು ವಿವರಿಸಿದರು.
ದೇವಸ್ಥಾನ ಕಾಮಗಾರಿಗೆ ಸಣ್ಣ ಮೊತ್ತದ ದೇಣಿಗೆ ಸಂಗ್ರಹಕ್ಕೂ ಒತ್ತು :
ಈ ದೇವಸ್ಥಾನಕ್ಕೆ ನಾಲ್ಕು ಬಾಗಿಲುಗಳಿದ್ದು, ಇದು ಸನಾತನ ಧರ್ಮದಲ್ಲಿನ ನಾಲ್ಕು ವೇದಗಳ ಸಂಕೇತವಾಗಿದೆ. ವಿಶೇಷವಾಗಿ ದಾನಿಗಳಿಂದಲೇ ನಿರ್ಮಾಣವಾಗುತ್ತಿರುವ ದೇವಸ್ಥಾನಕ್ಕೆ ಉದಾರ ದೇಣಿಗೆಯ ಅವಶ್ಯಕತೆಯಿದ್ದು, ವಿದ್ಯಾ ದೇವತೆ ಸರಸ್ವತಿ ಮಾತೆಗೆ ಒಂದು ದೇಗುಲ ನಿರ್ಮಿಸುವ ಸದುದ್ದೇಶವಿದೆ. ಹೀಗಾಗಿ ದೊಡ್ಡ ಮೊತ್ತದ ಜೊತೆಗೆ ಸಣ್ಣ ದೇಣಿಗೆ ಮಾಡಲು ಒತ್ತು ನೀಡಲಾಗಿದೆ. ತೀತ್ವಾಲ್ ಶಾರದಾ ದೇವಿ ದೇವಸ್ಥಾನದಲ್ಲಿ ಇನ್ನು ಮರದ ಬಾಗಿಲು ಕೆಲಸ, ಅರ್ಚಕರಿಗೆ ಮನೆ, ಯಾತ್ರಿಗಳಿಗೆ ಧರ್ಮಶಾಲೆ, ನೈವೇದ್ಯ ಸಿದ್ಧತೆಗೆ ಪಾಕಶಾಲೆ ಇತ್ಯಾದಿ ಕೆಲಸಗಳು ಬಾಕಿಯಿದೆ. ಈಗಲೂ ದಾನಿಗಳು ಮುಂದೆ ಬಂದು ಶಾರದಾ ದೇವಸ್ಥಾನ ನಿರ್ಮಾಣಕ್ಕೆ ಕಾಣಿಕೆ ಸಲ್ಲಿಸಬಹುದು ಎಂದು ಮಂಜುನಾಥ್ ಶರ್ಮ ವಿನಂತಿಸಿದ್ದಾರೆ.