ಬೆಂಗಳೂರು, ಅ.4 www.bengaluruwire.com : ಕೇಂದ್ರ ಸರ್ಕಾರದ 2020ರ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ವಾರ್ತಾ ಇಲಾಖೆ ನಿರ್ಮಿಸಿದ್ದ ‘ನಾದದ ನವನೀತ ಡಾ.ಪಂಡಿತ್ ವೆಂಕಟೇಶ್ ಕುಮಾರ್’ ಸಾಕ್ಷಚಿತ್ರದ ರಜತ ಕಮಲ ಪ್ರಶಸ್ತಿ ಕುರಿತಂತೆ ಎದ್ದಿರುವ ವಿವಾದಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಹಾಗೂ ಈ ಸಾಕ್ಷ್ಯಾಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ ತೆರೆ ಎಳೆದಿದ್ದಾರೆ.
ಈ ಕುರಿತಂತೆ ಅನಗತ್ಯ ವಿವಾದಗಳ ಬಗ್ಗೆ ಸ್ಪಷ್ಟಪಡಿಸುತ್ತಾ,
‘ಅ.30ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ವಾರ್ತಾ ಇಲಾಖೆಯ ಪ್ರತಿನಿಧಿಗೆ ನಿರ್ಮಾಪಕ ಪ್ರಶಸ್ತಿ ಹಾಗೂ ಸಾಕ್ಷ್ಯಾಚಿತ್ರದ ನಿರ್ದೇಶಕರಾದ ತಮಗೆ ನಿರ್ದೇಶಕ ಪ್ರಶಸ್ತಿ ಪದಕಗಳನ್ನು ವಿತರಿಸಿ ಗೌರವಿಸಿದ್ದರು. ತಮಗೆ ದೆಹಲಿಯಲ್ಲಿ ಸ್ವಲ್ಪ ಕೆಲಸವಿದ್ದ ಕಾರಣ ಅಲ್ಲೆ ಉಳಿದುಕೊಂಡಿದ್ದೆ. ಹಾಗಾಗಿ ವಾರ್ತಾ ಇಲಾಖೆ ಅ.1ರಂದು ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಈ ಕುರಿತಂತೆ ಕೆಲವು ಅಪಸ್ವರಗಳು ಕೇಳಿಬಂದಿದ್ದವು. ಇದೊಂದು ಅನಗತ್ಯ ವಿವಾದವಾಗಿದೆ. ಇದನ್ನು ನಿಯಂತ್ರಿಸಬಹುದಾಗಿತ್ತು. ‘ನಾದದ ನವನೀತ ಡಾ.ಪಂಡಿತ್ ವೆಂಕಟೇಶ್ ಕುಮಾರ್’ ಸಾಕ್ಷಚಿತ್ರ ನಿರ್ಮಾಣಕ್ಕೆ ವಾರ್ತಾ ಇಲಾಖೆ ಜೊತೆಗೆ ನಾನು ಕೈಜೋಡಿದ್ದು ಎಷ್ಟರಮಟ್ಟಿಗೆ ನಿಜವೋ, ನನ್ನ ಜೊತೆಗೆ ವಾರ್ತಾ ಇಲಾಖೆ ಕೈಜೋಡಿಸಿದ್ದು ಅಷ್ಟೇ ನಿಜವಾಗಿದೆ. ನಾವಿಬ್ಬರೂ ಈ ಚಿತ್ರದ ಸೃಷ್ಟಿಗೆ ಕಾರಣರಾಗಿದ್ದೇವೆ.’
‘ನಮ್ಮ ನಡುವೆ ಯಾವುದೇ ಭಿನ್ನಾಪ್ರಾಯವಾಗಲಿ, ಒಡಕಾಗಲಿ ಅಥವಾ ವೈಮನಸ್ಯವಾಗಲಿ ಇಲ್ಲ. ಈ ಕುರಿತಂತೆ ಇನ್ನು ಯಾವುದೇ ವಿವಾದ ಹುಟ್ಟಿಕೊಳ್ಳದೆ ಇರಲಿ. ಇದು ಕರ್ನಾಟಕಕ್ಕೆ ಸಂದ ಗೌರವ. ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯ. ಇದನ್ನು ಸಂಭ್ರಮಿಸೋಣ.’ ಎಂದು ಈ ವಿವಾದವನ್ನು ಮುಂದುವರೆಸದಂತೆ ಮನವಿ ಮಾಡಿದ್ದಾರೆ.
ವಾರ್ತಾ ಇಲಾಖೆ ಪ್ರಶಸ್ತಿ ಸ್ವೀಕಾರ ನಂತರ ಅ.1ರಂದು ಸಂಜೆ ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಹರ್ಷ.ಪಿ.ಎಸ್ ಪತ್ರಿಕಾಗೋಷ್ಠಿ ಕರೆದು ಇಲಾಖೆಯ ಪರವಾಗಿ ‘ನಾದದ ನವನೀತ ಡಾ.ಪಂಡಿತ್ ವೆಂಕಟೇಶ್ ಕುಮಾರ್’ ಸಾಕ್ಷಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಚಿತ್ರತಂಡಕ್ಕೆ ಹಾಗೂ ವಾರ್ತಾ ಇಲಾಖೆಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದರು.
ಆದರೆ ಸಾಮಾಜಿಕ ಮಾಧ್ಯಮದಲ್ಲಿ ‘ನಾದ ನವನೀತ’ ಸಾಕ್ಷ್ಯಾಚಿತ್ರದ ಖ್ಯಾತ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರನ್ನು ವಾರ್ತಾ ಇಲಾಖೆ ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಗೆ ಅಹ್ವಾನಿಸದೆ ಅವರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಹಾಗಾಗಿ ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳು ಕಾಸರವಳ್ಳಿಯವರ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.