ಬೆಂಗಳೂರು, ಅ.1 www.bengaluruwire.com : ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಕಟ್ಟ ಕಡೆಯ ಹಳ್ಳಿ ತೀತ್ವಾಲ್ ನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶಾರದಾ ದೇವಿಯ ದೇವಸ್ಥಾನಕ್ಕೆ, ಶೃಂಗೇರಿಯ ಶ್ರೀ ಶಾರದಾಪೀಠದಿಂದ ಪಂಚಲೋಹದ ಶಾರಾದಾ ದೇವಿಯ ವಿಗ್ರಹವನ್ನು, ಕಾಶ್ಮೀರ ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿ (Save Sharada Committee Kashmir)ಯ ನಿಯೋಗಕ್ಕೆ ಇದೇ ಅ.5ರ ವಿಜಯದಶಮಿಯ ದಿನ ಸಾಂಕೇತಿಕವಾಗಿ ಹಸ್ತಾಂತರಿಸಲಾಗುತ್ತಿದೆ.
ಶೃಂಗೇರಿಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಕಾಶ್ಮೀರದ ಗಡಿಭಾಗದ ತೀತ್ವಾಲ್ ನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶಾರದಾ ದೇವಿ ದೇವಸ್ಥಾನ ಸೇವ್ ಶಾರದಾ ಸಮಿತಿಯ ಅಧ್ಯಕ್ಷ ರವೀಂದ್ರ ಪಂಡಿತ್ ನೇತೃತ್ವದ ನಿಯೋಗಕ್ಕೆ ಸಾಂಕೇತಿಕವಾಗಿ ಹಸ್ತಾಂತರಿಸಿ ಆಶೀರ್ವಾದ ನೀಡಲಿದ್ದಾರೆ ಎಂದು ಸಮಿತಿ ಬೆಂಗಳೂರು ವೈರ್ ಗೆ ತಿಳಿಸಿದೆ.
“ಅ.5ರಂದು ಶೃಂಗೇರಿಯಲ್ಲಿ ಶ್ರೀ ಶಾರಾದಾ ಪೀಠದ ಜಗದ್ಗುರುಗಳು ಈ ಹಿಂದೆ ತಿಳಿಸಿದಂತೆ ಶ್ರೀ ಶಾರಾದಾ ದೇವಿಯ ಪಂಚಲೋಹದ ವಿಗ್ರಹ ಹಾಗೂ ಶ್ರೀ ಶಂಕರಾಚಾರ್ಯರ ಮೂರ್ತಿಗಳನ್ನು ಸಾಂಕೇತಿಕವಾಗಿ ಕಾಶ್ಮೀರ ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿಯ ನಿಯೋಗಕ್ಕೆ ಹಸ್ತಾಂತರಿಸಲಿದ್ದಾರೆ. ಈ ವಿಗ್ರಹಗಳನ್ನು ದೇವಸ್ಥಾನದ ಕಾಮಗಾರಿಗಳನ್ನು ಪೂರ್ಣವಾಗುವ ತನಕ ಶೃಂಗೇರಿ ಶಾರದಾಪೀಠದಲ್ಲಿಡಬೇಕಾ? ಅಥವಾ ಬೆಂಗಳೂರಿನಲ್ಲಿರುವ ಕಾಶ್ಮೀರ ಭವನದಲ್ಲಿಡಬೇಕಾ? ಎಂಬ ಬಗ್ಗೆ ನಿರ್ಧಾರವಾಗಿಲ್ಲ. ಜನವರಿ 15ರ ಸಂಕ್ರಮಣದ ನಂತರ ಈ ಮೂರ್ತಿಗಳನ್ನುಕಾಶ್ಮೀರಕ್ಕೆ ಕೊಂಡೊಯ್ಯಲಾಗುತ್ತದೆ. ಮುಂದಿನ ವರ್ಷದ ನವರಾತ್ರಿಯ ಮೊದಲ ದಿನ ದೇವಸ್ಥಾನವನ್ನು ಉದ್ಘಾಟನೆ ಮಾಡಲು ಚಿಂತನೆ ನಡೆಸಲಾಗಿದೆ” ಎಂದು ಸಮಿತಿಯ ಅಧ್ಯಕ್ಷರಾದ ರವೀಂದ್ರ ಪಂಡಿತ್ ಅವರು ಬೆಂಗಳೂರು ವೈರ್ ಗೆ ವಿವರಿಸಿದ್ದಾರೆ.
ಶ್ರೀ ಶಾರದಾ ದೇವಿಯ ಶಿಲೆಯಲ್ಲಿ ನಿರ್ಮಿಸುತ್ತಿರುವ ದೇವಸ್ಥಾನ ಕಾಮಗಾರಿ ಪರಿಸ್ಥಿತಿ ಅನುಕೂಲವಾಗಿದ್ದಲ್ಲಿ ಅಕ್ಟೋಬರ್ ವೇಳೆಗೆ ಪೂರ್ಣವಾಗಲಿದೆ ಎಂದು ಈ ಹಿಂದೆ ಬೆಂಗಳೂರಿನಲ್ಲಿ ಪ್ರತಿಕಾಗೋಷ್ಠಿ ನಡೆಸಿದ್ದ ಕಾಶ್ಮೀರ ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿ ತಿಳಿಸಿತ್ತು. ಆದರೆ ಈಗ ನವೆಂಬರ್ ವೇಳೆಗೆ ಶ್ರೀ ಶಾರದಾ ದೇವಿ ದೇವಸ್ಥಾನದ ಕಾಮಗಾರಿ ಪೂರ್ಣವಾಗಲಿದೆ ಎಂದವರು ಹೇಳಿದ್ದಾರೆ.
ಶ್ರೀ ಶಾರದಾ ದೇವಿ ದೇವಸ್ಥಾನ ಕಾಮಗಾರಿ ಶೇ.75ರಷ್ಟು ಪೂರ್ಣ :
“ತೀತ್ವಾಲ್ ನಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶಂಕರಾಚಾರ್ಯರು ನಿರ್ಮಿಸಿದ ನಾಲ್ಕು ಪೀಠಗಳನ್ನು ಪ್ರತಿನಿಧಿಸುವ 4 ದ್ವಾರಗಳನ್ನು ಹೊಂದಿರುವ ದೇವಸ್ಥಾನದ ಕಾಮಗಾರಿ ಶೇ.75ರಷ್ಟು ಪೂರ್ಣವಾಗಿದೆ. ಮುಖ್ಯ ದ್ವಾರಕ್ಕೆ ಉತ್ತಮ ಗುಣಮಟ್ಟದ ಬಾಗಿಲುಗಳನ್ನು ಅಳವಡಿಸಲಾಗಿದೆ. ಉಳಿದಂತೆ 3 ಬಾಗಿಲುಗಳನ್ನು ಅಳವಡಿಸುವ, ಗ್ರಾನೈಟ್ ನೆಲಹಾಸು, ಮೇಲ್ಛಾವಣಿ, ದೇವಸ್ಥಾನದ ಹೊರಗಿನ ಸೌಂದರ್ಯೀಕರಣ, ಗೇಟು ಮತ್ತು ಕಾಂಪೌಡ್ ನಿರ್ಮಾಣ ಕಾರ್ಯ ಬಾಕಿ ಉಳಿದಿದೆ. ದೇವಸ್ಥಾನದ ಪಕ್ಕದಲ್ಲಿ ಸಿಖ್ಖರ ಗುರುದ್ವಾರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಶಾರದಾ ದೇವಸ್ಥಾನದ ಕಾಮಗಾರಿ ನವೆಂಬರ್ ನಲ್ಲಿ ಪೂರ್ಣಗೊಳ್ಳಲಿದೆ” ಎಂದು ರವೀಂದ್ರ ಪಂಡಿತ್ ಅವರು ತಿಳಿಸಿದ್ದಾರೆ.
ಶ್ರೀ ಶಾರದಾ ದೇವಸ್ಥಾನಕ್ಕೆ ತೆರಳಲು ರಸ್ತೆ ನಿರ್ಮಿಸದ ಸ್ಥಳೀಯಾಡಳಿತ :
ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಸರ್ಕಾರಕ್ಕೆ ತೀತ್ವಾಲ್ ನಲ್ಲಿನ ಮುಖ್ಯರಸ್ತೆಯಿಂದ ಶಾರದಾ ದೇವಸ್ಥಾನದ ತನಕ 300 ಮೀಟರ್ ರಸ್ತೆ ನಿರ್ಮಿಸುವಂತೆ ಕಾಶ್ಮೀರ ಶಾರದಾ ಸರ್ವಜ್ಞ ಪೀಠ ಸಂರಕ್ಷಣಾ ಸಮಿತಿ ಹಲವು ಬಾರಿ ಮನವಿ ಸಲ್ಲಿಸಿತ್ತು. ಜಮ್ಮು ಮತ್ತು ಕಾಶ್ಮೀರ ಸರ್ಕಾರ 65 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಸಮಗ್ರ ಯೋಜನಾ ವರದಿಯನ್ನು ತಯಾರಿಸಿಟ್ಟಿದೆ. ಆದರೆ ಈತನಕ ರಸ್ತೆ ಕಾಮಗಾರಿ ಆರಂಭಿಸಿಲ್ಲ. ಜಗತ್ತಿನಾದ್ಯಂತ ಶ್ರೀ ಶಾರದಾ ದೇವಿಯ ದೇವಸ್ಥಾನ ನಿರ್ಮಾಣಕ್ಕೆ ಸಾಕಷ್ಟು ಬೆಂಬಲ ವ್ಯಕ್ತವಾದರೂ, ಸ್ಥಳೀಯ ಸರ್ಕಾರ ಮಾತ್ರ ತಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಸಮಿತಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನ ನಿರ್ಮಾಣಕ್ಕೆ 2ನೇ ಡಿಸೆಂಬರ್ 2021ರಂದು ಭೂಮಿ ಪೂಜೆ ನೆರವೇರಿಸಿ, ಈ ವರ್ಷದ 26ನೇ ಮಾರ್ಚ್ ನಿಂದ ವಾಸ್ತವವಾಗಿ ಶ್ರೀ ದೇವರ ದೇಗುಲ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಬೆಂಗಳೂರಿನ ಹೊರವಲಯದ ಸೀಗೇಹಳ್ಳಿಯಲ್ಲಿ 12*12 ಅಡಿ ವಿಸ್ತೀರ್ಣದ ದೇವಸ್ಥಾನಕ್ಕೆ ಅಗತ್ಯವಾದ ಕಲ್ಲಿನ ಕಂಬಗಳು, ಹಾಗೂ ಕಲ್ಲಿನ ಚಪ್ಪಡಿಗಳು ಹಾಗೂ ಕೆತ್ತನೆಯಾದ ಕಂಬಗಳನ್ನು ಇಲ್ಲಿಂದಲೇ ಟ್ರಕ್ ನಲ್ಲಿ ಹರಸಾಹಸ ಪಟ್ಟು ತೀತ್ವಾಲ್ ನ ದೇವಸ್ಥಾನ ನಿರ್ಮಾಣ ಸ್ಥಳಕ್ಕೆ ಕೊಂಡೊಯ್ಯಲಾಗಿತ್ತು. ಸಾಗಣೆಗೆ ಅನುಕೂಲವಾಗುವಂತೆ ಕಲ್ಲಿನ ನಿರ್ಮಾಣಗಳನ್ನು 6-7 ಅಡಿಗಳಾಗಿ ವಿಭಜಿಸಲಾಗಿತ್ತು.
ಪಿಒಕೆ ಕಾಶ್ಮೀರದಲ್ಲಿ ತೀರ್ಥಯಾತ್ರೆ ಉದ್ದೇಶ :
1947ರ ಪೂರ್ವದಲ್ಲಿ ಭಾರತ – ಪಾಕಿಸ್ತಾನ ವಿಭಜನೆಗೆ ಮುಂಚೆ ಶ್ರೀ ಶಾರದಾ ದೇವಿ ದೇವಸ್ಥಾನಕ್ಕೆ ಪ್ರತಿವರ್ಷ ಹಿಂದೂಗಳು ಯಾತ್ರೆ ಕೈಗೊಳ್ಳುತ್ತಿದ್ದರು. ವಿಭಜನೆಯ ಬಳಿಕ ದೇವಸ್ಥಾನ ಸಂಪೂರ್ಣವಾಗಿ ನಾಶವಾಗಿ ಭಾರತದಿಂದ ಭಕ್ತಾದಿಗಳು ತೆರಳುತ್ತಿದ್ದ ಯಾತ್ರೆಯು ನಿಂತು ಹೋಗಿತ್ತು. ಹೀಗಾಗಿ ಪುನಃ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಶ್ರೀ ಶಾರದಾ ದೇವಸ್ಥಾನವಿರುವ ಸ್ಥಳಕ್ಕೆ ಪುನಃ ಯಾತ್ರೆ ಆರಂಭಿಸಲು ಅನುವಾಗುವಂತೆ, ಈ ಹಿಂದೆ ತೀರ್ಥಯಾತ್ರೆ ಪ್ರಾರಂಭವಾಗುತ್ತಿದ್ದ ತೀತ್ವಾಲ್ ಪ್ರದೇಶದ ಆ ಬೇಸ್ ಕ್ಯಾಂಪ್ ನಲ್ಲಿಯೇ ಶಾರದಾ ದೇವಸ್ಥಾನ ನಿರ್ಮಿಸಲಾಗುತ್ತಿದೆ.