ಭಾರತದ ಹವಾಮಾನಕ್ಕೆ ತಕ್ಕಂತೆ ಆಯುರ್ವೇದದಲ್ಲಿ ಒಂದು ವರ್ಷವನ್ನು ಆರು ಋತುಗಳಾಗಿ ವಿಂಗಡಿಸಲಾಗಿದೆ. ವಸಂತ, ಗ್ರೀಷ್ಮ, ವರ್ಷ , ಶರದ್, ಹೇಮಂತ, ಶಿಶಿರ ಋತು, ಇವುಗಳಲ್ಲಿ ಶಿಶಿರ-ವಸಂತ-ಗ್ರೀಷ್ಮ ಋತುಗಳು ಆದಾನಕಾಲ(ಉತ್ತರಾಯಣ) ಹಾಗೂ ವರ್ಷ-ಶರದ್-ಹೇಮಂತ ಋತುಗಳು ವಿಸರ್ಗಾಕಾಲ(ದಕ್ಷಿಣಾಯನ). ಹೇಮಂತ-ಶಿಶಿರ ಋತುಗಳು ಚಳಿಗಾಲ – ಸಾಮಾನ್ಯವಾಗಿ ನವೆಂಬರ್‌ಮಧ್ಯದಿಂದ ಮಾರ್ಚ್‌ಮಧ್ಯದವರೆಗೆ ಇರುತ್ತದೆ. ಈ ಋತುವಿನಲ್ಲಿ ವಾತಾವರಣ ತಣ್ಣಗಿರುತ್ತದೆ ಮತ್ತು ಗಾಳಿಯ ತೀಕ್ಷ್ಣತೆ ಹೆಚ್ಚಿರುತ್ತದೆ.
ಆದ್ದರಿಂದ ಜೀರ್ಣ ಶಕ್ತಿಯೂ ಸಹ ಜಾಸ್ತಿಯಾಗಿರುತ್ತದೆ. ಹಾಗಾಗಿ ಸರಿಯಾದ ಆಹಾರವನ್ನು ನೀಡದೇ ಹೋದಲ್ಲಿ ಈ ವೃದ್ಧಿಯಾಗಿರುವ ಜೀರ್ಣ ಶಕ್ತಿ ಅನೇಕ ಶಾರೀರಿಕ ತೊಂದರೆಗಳಿಗೆ ಎಡೆಮಾಡಿಕೊಡುತ್ತದೆ. ಈ ಋತುವಿನಲ್ಲಿ ಹೇಳಿರುವ ಆಹಾರ – ವಿಹಾರಗಳನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳದೇ ಹೋದಲ್ಲಿ ನಂತರದ ಋತುಗಳಲ್ಲಿ ಅಥವಾ ಅದೇ ಋತುವಿನಲ್ಲಿ ವಾತ ಮತ್ತು ಕಫದ ತೊಂದರೆಗಳು ಉಂಟಾಗುತ್ತದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ (Winter Season) ಕಂಡುಬರುವ ಆರೋಗ್ಯ ಸಮಸ್ಯೆಗಳೆಂದರೆ, ಗಂಟಲು ಕೆರೆತ, ಗಂಟಲು ನೋವು, ನೆಗಡಿ – ಕೆಮ್ಮು, ಸೈನಸೈಟಿಸ್, ಕಿವಿಯ ಸೋಂಕಿನ ತೊಂದರೆಗಳು, ಮೈಗ್ರೇನ್ ತೊಂದರೆಗಳು, ನ್ಯುಮೋನಿಯಾ, ಬ್ರಾಂಕೈಟಿಸ್, ಅಸ್ತಮಾ ತೊಂದರೆಗಳು, ವಯಸ್ಸಾದವರಲ್ಲಿ ಮಂಡಿನೋವು,ಕೀಲು ನೋವು, ಚರ್ಮದ ತೊಂದರೆಗಳಂದರೆ – ಒಣಗಿದ ಚರ್ಮ, ಅತಿಯಾದ ಚರ್ಮದ ಕೆರೆತ, ಮೊದಲೇ ಸೋರಿಯಾಸಿಸ್ ಅಥವಾ ಅಟೋಪಿಕ್ ಡರ್ಮಟೈಟಿಸ್ ನಂತಹ ತೊಂದರೆಗಳಿಂದ ಬಳಲುತ್ತಿದ್ದರೆ ಅವು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.
ಆರೋಗ್ಯವನ್ನು ಕಾಪಾಡಿಕೊಳ್ಳಲು ಏನನ್ನು ಮಾಡಬೇಕು?
ಆಹಾರ –
• ಹುಳಿ, ಲವಣ, ಮಧುರ ಆಹಾರಗಳು. (ದಾಳಿಂಬೆ, ಕಿತ್ತಳೆಹಣ್ಣು, ಅನ್ನ, ಪಾಯಸ ಇತ್ಯಾದಿ)
• ಜಿಡ್ಡಿನ ಅಂಶವುಳ್ಳ ಪದಾರ್ಥಗಳು. (ತುಪ್ಪ, ಬೆಣ್ಣೆ, ಎಣ್ಣೆ, ಎಳ್ಳು, ಹಾಲು ಇತ್ಯಾದಿ)
• ನಿಧಾನವಾಗಿ ಜೀರ್ಣವಾಗುವ ಪದಾರ್ಥಗಳು. (ಮಾಂಸ, ಪನ್ನೀರ್, ಉದ್ದಿನ ಪದಾರ್ಥಗಳು)
• ಉಷ್ಣ ಪದಾರ್ಥಗಳು. (ಬಿಸಿ ಆಹಾರ, ದೇಹದ ಉಷ್ಣ ಹೆಚ್ಚಿಸುವ ಪದಾರ್ಥಗಳು)
• ಹಾಲಿನ ಪದಾರ್ಥಗಳು. (ಪಾಯಸ, ಪನ್ನೀರ್, ತುಪ್ಪ, ಬೆಣ್ಣೆ ಇತ್ಯಾದಿ)
• ಕಬ್ಬಿನ ಪದಾರ್ಥಗಳು. (ಬೆಲ್ಲ, ಜೋನಿ ಬೆಲ್ಲ, ಸಕ್ಕರೆ, ಕಲ್ಲು ಸಕ್ಕರೆ)
• ಅಕ್ಕಿ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳು. (ರೊಟ್ಟಿ, ದೋಸೆ, ಲಡ್ಡು)
• ಗೋಧಿ ಹಿಟ್ಟಿನಿಂದ ತಯಾರಿಸಲ್ಪಟ್ಟ ಆಹಾರಗಳು. (ಪಾಯಸ, ಲಡ್ಡು, ಮೋದಕ, ಚಪಾತಿ)
• ಮಾಂಸದ ರಸ(ಸೂಪ್). (ಪೌಷ್ಟಿಕಾಂಶವುಳ್ಳ ಪ್ರಾಣಿಯ ಮಾಂಸ, ಕೊಬ್ಬಿನಂಶವುಳ್ಳ ಪ್ರಾಣಿಯ ಮಾಂಸದ ರಸ)
ಈ ಆಹಾರಗಳನ್ನು ಹಸಿವೆಯನ್ನು ಗಮನದಲ್ಲಿರಿಸಿ ಸೇವಿಸಬೇಕು. ಒಮ್ಮೆ ಸೇವಿಸಿದ ಆಹಾರ ಜೀರ್ಣವಾದ ನಂತರವೇ ಪುನಃ ಆಹಾರ ಸೇವಿಸಬೇಕು. ಮತ್ತು ಈ ಋತುವಿನಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸದಿದ್ದರೆ ಶರೀರದ ಧಾತುಗಳಿಗೆ ಹಾನಿ ಉಂಟಾಗುತ್ತದೆ.
ವಿಹಾರ –
• ಪ್ರತಿನಿತ್ಯ ಎಳ್ಳೆಣ್ಣೆಯಿಂದ ಅಭ್ಯಂಗ ಮಾಡಿ – ಶರೀರದ ಅಂಗ ಮರ್ದನ ಮಾಡಿಸಿಕೊಳ್ಳಬೇಕು – ನಂತರ ಔಷಧೀಯ ಪುಡಿಗಳಿಂದ ಉತ್ಸಾದನ ಮಾಡಿಕೊಳ್ಳಬೇಕು.
• ನಿಯಮಿತವಾಗಿ ಮೂರ್ಧ್ನಿ ತೈಲ(ಎಣ್ಣೆ ಹಚ್ಚುವುದು, ಪಿಚು, ಬಸ್ತಿ, ಶಿರೋಧಾರಾ) ಅಭ್ಯಾಸ ಮಾಡಬೇಕು.
• ಎಳೆ ಬಿಸಿಲಿಗೆ ಮೈ ಒಡ್ಡಬೇಕು.
• ತಮ್ಮ ಶಕ್ತಿಯನ್ನು ಗಮನದಲ್ಲಿರಿಸಿಕೊಂಡು ವ್ಯಾಯಾಮ ಮಾಡಬಹುದು.
• ಪಾದಾಘಾತ ಮಾಡಿಸಿಕೊಳ್ಳಬಹುದು.
• ಹೆಚ್ಚು ಚಳಿಗಾಳಿಗೆ ಮೈಯನ್ನು ಒಡ್ಡಬಾರದು.
• ಬೆಚ್ಚಗಿರಿಸುವ ಬಟ್ಟೆಗಳನ್ನು(ಹತ್ತಿಯ ಬಟ್ಟೆ/ದಪ್ಪಗೆ ಹೆಣೆದಿರುವ ಬಟ್ಟೆಗಳು/ವುಲ್ಲನ್ ಬಟ್ಟೆಗಳು) ಧರಿಸಬೇಕು.
• ಮನೆಯೊಳಗೆ ನೇರವಾಗಿ ಗಾಳಿ ಬರುವುದನ್ನು ತಡೆಯಬೇಕು, ಮನೆಯ ವಾತಾವರಣ ಬೆಚ್ಚಗಿರಿಸಬೇಕು, ರೂಮ್ ಹೀಟರ್‌ಗಳನ್ನು ಮಿತವಾಗಿ ಬಳಸಬಹುದು.
• ಎಲ್ಲ ಕೆಲಸಗಳಿಗೂ ಬಿಸಿ ನೀರನ್ನು ಉಪಯೋಗಿಸಬಹುದು.
• ಕುಡಿಯುವುದಕ್ಕೆ ಹೆಚ್ಚು ಬಿಸಿ ಇರುವ ನೀರಿಗಿಂತ ಉಗುರು ಬೆಚ್ಚಗಿರುವ ನೀರನ್ನು ಉಪಯೋಗಿಸಬಹುದು.
ಈ ಮೇಲೆ ಹೇಳಿದ ವಿಷಯಗಳಲ್ಲಿ ಅಂಗ ಮರ್ದನ, ಉತ್ಸಾದನ, ಶಿರೋಪಿಚು-ಬಸ್ತಿ-ಧಾರಾ, ಪಾದಾಘಾತ ಇವುಗಳನ್ನು ಆಯುರ್ವೇದ ತಜ್ಞ ವೈದ್ಯರನ್ನು ಕಂಡು ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬಹುದು.
ಏನನ್ನು ಮಾಡಬಾರದು?
• ತಣ್ಣಗಿನ ವಸ್ತುಗಳನ್ನು ಸೇವಿಸುವುದು.(ಐಸ್‌ಕ್ರೀಮ್, ಫ್ರಿಡ್ಜ್‌ನಲ್ಲಿ ಇರಿಸಿದ ವಸ್ತುಗಳು, ಮೊಸರು)
• ಒಣ ಆಹಾರ ವಸ್ತುಗಳು. (ಬಿಸ್ಕೆಟ್, ರಸ್ಕ್, ಒಣಮೀನು – ಮಾಂಸ, ಬ್ರೆಡ್, ಕೇಕ್)
• ಚಳಿಗಾಳಿಗೆ ಮೈ ಒಡ್ಡುವುದು.
• ಹಸಿ ತರಕಾರಿ, ಹಸಿ ಮೊಳಕೆಕಾಳುಗಳು.
• ಊಟ ಮಾಡದೇ ಇರುವುದು.
ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಕೆಲ ಔಷಧಿಗಳು –
• ಗಂಟಲು ಕೆರೆತ/ನೋವು –
ಉಪ್ಪು ಬಿಸಿ ನೀರಿನಲ್ಲಿ ಗಂಟಲು ಮುಕ್ಕಳಿಸುವುದು.
ಬಿಸಿ ನೀರಿನ ಶಾಖ ತೆಗೆದು ಕೊಳ್ಳಬಹುದು.
ಕಾಳು ಮೆಣಸು ಕಲ್ಲುಪ್ಪುಗಳನ್ನು ಬಾಯಲ್ಲಿ ಇಟ್ಟುಕೊಳ್ಳಬಹುದು.
• ನೆಗಡಿ ಮತ್ತು ಕೆಮ್ಮು –
ಶುಂಠಿ, ಅರಿಶಿಣ, ಬೆಲ್ಲ, ಕಾಳುಮೆಣಸು ಹಾಕಿ ಕಷಾಯ ಮಾಡಿ ಸೇವಿಸಬಹುದು.
ದೊಡ್ಡಪತ್ರೆ ಎಲೆಯನ್ನು ಉಪ್ಪು ಅಥವಾ ಜೇನುತುಪ್ಪದೊಂದಿಗೆ ಸೇವಿಸಬಹುದು.
ಬಿಸಿ ನೀರಿನ ಶಾಖ/ಆವಿ ತೆಗೆದು ಕೊಳ್ಳಬಹುದು.
ತುಳಸಿ ಎಲೆಯ ರಸವನ್ನು ಜೇನುತುಪ್ಪದೊಟ್ಟಿಗೆ ತೆಗೆದುಕೊಳ್ಳಬಹುದು.
ಈರುಳ್ಳಿ ಮತ್ತು ಬೆಲ್ಲವನ್ನು ತಿನ್ನಬಹುದು.
ಜ್ವರ, ನ್ಯುಮೋನಿಯಾ, ಬ್ರಾಂಕೈಟಿಸ್, ಅಸ್ತಮಾ ತೊಂದರೆಗಳಿಗೆ ಅಧಿಕ ತಪಾಸಣೆಯ ಅಗತ್ಯವಿರುವುದರಿಂದ ವೈದ್ಯರನ್ನು ಕಾಣುವುದು ಸೂಕ್ತ.
• ಕಿವಿನೋವು –
ಬಿಸಿ ನೀರಿನ ಹಬೆ/ಆವಿ ತೆಗೆದು ಕೊಳ್ಳಬಹುದು.
ಕಿವಿಯ ಸುತ್ತ ಬಿಸಿ ಬಟ್ಟೆಯ ಶಾಖ ತೆಗೆದುಕೊಳ್ಳಬಹುದು.
ತಲೆಗೆ ಟೊಪ್ಪಿಯನ್ನು ಧರಿಸಬೇಕು.
ಉಪ್ಪು ಬಿಸಿನೀರಿನಲ್ಲಿ ಗಂಟಲು ಮುಕ್ಕಳಿಸುವುದು.
ಕಿವಿಯಿಂದ ಕೀವು/ನೀರು ಸೋರುವುದು, ಕಿವಿ ಕೇಳಿಸದೇ ಇರುವುದು ಈ ತೊಂದರೆಗಳು ಉಂಟಾದಲ್ಲಿ ವೈದ್ಯರನ್ನು ಭೇಟಿ ಮಾಡಬೇಕು.
• ಸೈನಸ್ ತಲೆನೋವು –
ಬಿಸಿ ನೀರಿನ ಶಾಖ/ಹಬೆ.
ಪಿಪ್ಪಲಿಯೊಂದಿಗೆ ಜೇನುತುಪ್ಪ.
• ಮೈಗ್ರೇನ್ ತಲೆನೋವು –
ಖಾರ- ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು.
ಹಸಿವೆಯನ್ನು ಗಮನದಲ್ಲಿಟ್ಟುಕೊಂಡು ಊಟ ಮಾಡಬೇಕು.
ಅಳಲೇಕಾಯಿ ಪುಡಿ ಅರ್ಧ ಚಮಚ ಬಿಸಿನೀರಿನೊಟ್ಟಿಗೆ ಸೇವಿಸಬಹುದು.
ಜೀರಿಗೆ ಮತ್ತು ಓಂ ಕಾಳು ಕಷಾಯ ಮಾಡಿ ಸೇವಿಸಬಹುದು.
• ಮಂಡಿನೋವು/ಕೀಲುನೋವು –
ಎಳ್ಳೆಣ್ಣೆಯಲ್ಲಿ ಅಭ್ಯಂಗ ಮಾಡಿ ಪ್ರತಿನಿತ್ಯ ಸ್ನಾನ ಮಾಡುವುದು.
ನಿಯಮಿತ ವ್ಯಾಯಾಮ ಮಾಡುವುದು.
ಕೀಲುಗಳು ಹಿಡಿದುಕೊಂಡಂತಾದಲ್ಲಿ – ಉಪ್ಪನ್ನು ಬಿಸಿಮಾಡಿ ದಪ್ಪ ಬಟ್ಟೆಯಲ್ಲಿ ಕಟ್ಟಿ ಶಾಖ ಕೊಡಬಹುದು.
ಕೀಲುಗಳಲ್ಲಿ ಊತ ಕಂಡುಬಂದಲ್ಲಿ ವೈದ್ಯರನ್ನು ಕಾಣೂವುದು ಸೂಕ್ತ.
• ಅತಿಯಾಗಿ ಒಣಗಿದ ಚರ್ಮ –
ಅಭ್ಯಂಗ ಮಾಡಿ ಸ್ನಾನ ಮಾಡುವುದು.
ಒಣಗಿದ ಹಿಮ್ಮಡಿ – ನಿಯಮಿತವಾಗಿ ಎಣ್ಣೆ ಹಚ್ಚಿ – ಬಿಸಿನೀರಿನಲ್ಲಿ 15-20 ನಿಮಿಷದವರೆಗೆ ಇಟ್ಟು ತೆಗೆಯಬಹುದು.
ಒಣಗಿದ ತುಟಿ – ತುಪ್ಪ/ಬೆಣ್ಣೆ/ಹಾಲಿನ ಕೆನೆ ಹಚ್ಚಬಹುದು.
• ಅತಿಯಾದ ಚರ್ಮದ ಕೆರೆತ –
ನೆಲನೆಲ್ಲಿ ಗಿಡದ ಕಷಾಯ ಮಾಡಿ ಸೇವಿಸಬಹುದು.
ದೊಡ್ಡ ಪತ್ರೆ ಎಲೆಯೊಂದಿಗೆ ಉಪ್ಪು/ಜೇನುತುಪ್ಪ ಸೇರಿಸಿ ಸೇವಿಸಬಹುದು.
ಬೇವಿನ ಎಲೆಯನ್ನು ಸ್ನಾನದ ಬಿಸಿ ನೀರಿಗೆ ಸೇರಿಸಿ ಸ್ನಾನ ಮಾಡಬಹುದು.
ಜೀರಿಗೆ ಕಷಾಯ ಸೇವಿಸಬಹುದು.
ಸೋರಿಯಾಸಿಸ್/ಅಟೋಪಿಕ್ ಡರ್ಮಾಟೈಟಿಸ್ ನಂತಹ ತೊಂದರೆಗಳಿಗೆ ಪಂಚಕರ್ಮ ಚಿಕಿತ್ಸೆಯ ಅಗತ್ಯವಿರುವುದರಿಂದ ವೈದ್ಯರನ್ನು ಕಾಣುವುದು ಸೂಕ್ತ.
ಮಕ್ಕಳ ಬಗ್ಗೆ ವಹಿಸಿ ವಿಶೇಷ ಕಾಳಜಿ :
ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಮತ್ತು ಶರೀರದ ಬಲ ಕಡಿಮೆ ಇರುವುದರಿಂದ ರೋಗಗಳು ಬೇಗನೆ ಹರಡುತ್ತವೆ. ಹಾಗಾಗಿ ಮಕ್ಕಳಿಗೆ ವಿಶೇಷವಾಗಿ ಗಮನ ನೀಡಬೇಕು.
ಬೆಚ್ಚಗಿನ ವಾತಾವರಣದಲ್ಲಿ ಇರಿಸಬೇಕು.
ಸ್ವೆಟರ್/ಟೋಪ್ಪಿ/ಕೈ-ಕಾಲು ಗವಸುಗಳನ್ನು ಹಾಕಬೇಕು.
ಎಲ್ಲ ಕೆಲಸಗಳಿಗೂ ಬಿಸಿನೀರನ್ನು ಉಪಯೋಗಿಸಬೇಕು.
ಹೊರಗಿನ ತಿಂಡಿ/ಬೇಕರಿ ತಿಂಡಿ/ ಫ್ರಿಡ್ಜ್‌ನಲ್ಲಿ ಇರಿಸಿದ ತಿಂಡಿಗಳನ್ನು ಕೊಡಬಾರದು.
ಹಣ್ಣು/ಬೇಯಿಸಿದ ತರಕಾರಿ-ಸೊಪ್ಪು/ತುಪ್ಪ/ಹಾಲು ಗಳನ್ನು ಕೊಡಬೇಕು.
ನಿಯಮಿತವಾಗಿ ಅಭ್ಯಂಗ ಮಾಡಿಸಿ ಸ್ನಾನ ಮಾಡಿಸಬೇಕು.
ಹಾಲು, ಅರಿಶಿಣ, ಬೆಲ್ಲದೊಂದಿಗೆ ಕೊಡಬಹುದು.
ಅಳಲೇಕಾಯಿಯನ್ನು ತುಪ್ಪದಲ್ಲಿ ತೇಯ್ದು ಕೊಡಬಹುದು.
–
- ಲೇಖನ ಬರಹಗಾರರು – ಡಾ.ಮಂಗಳ ಜ್ಯೋತ್ಸ್ನಾ ಜಿ.ಪಿ
ಮಕ್ಕಳ ತಜ್ಞರು ಮತ್ತು ಉಪನ್ಯಾಸಕರು, ಶ್ರೀ ಕಾಲಭೈರವೇಶ್ವರ ಸ್ವಾಮಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು