ಬೆಂಗಳೂರು, ಸೆ.30 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮೇಯರ್ ಆಡಳಿತವಿಲ್ಲದೆ ಎರಡು ವರ್ಷ ಆಗುತ್ತಾ ಬಂತು. ಯಾವಾಗ ಬಿಬಿಎಂಪಿ ಚುನಾವಣೆ (BBMP Election) ನಡೆಯುತ್ತೆ ಎಂದು ಸಾರ್ವಜನಿಕರು, ಪಾಲಿಕೆಯ 243 ವಾರ್ಡ್ ಗಳಲ್ಲಿನ ಕಾರ್ಪೊರೇಟರ್ ಆಕಾಂಕ್ಷಿಗಳಿಗೆ ಹೈಕೋರ್ಟ್ ಆದೇಶ ಖುಷಿ ಸುದ್ದಿಯನ್ನು ನೀಡಿದೆ. ಹೈಕೋರ್ಟ್ ಮುಂದಿನ ನ.30ರ ಒಳಗೆ ಹೊಸದಾಗಿ ಮೀಸಲಾತಿ ಪಟ್ಟಿ ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿ, ಡಿ.31ರ ಒಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಗಡುವು ನೀಡಿದೆ.
ಇದಲ್ಲದೆ ರಾಜ್ಯ ಸರ್ಕಾರ ಬಿಬಿಎಂಪಿಯ 243 ವಾರ್ಡ್ ಗಳಿಗೆ ಪ್ರಕಟಿಸಿರುವ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಹಾಗೂ ಮಹಿಳಾ ಮೀಸಲಾತಿ ಪಟ್ಟಿಯ ಅಧಿಸೂಚನೆಯನ್ನು ರದ್ದುಪಡಿಸಿ, ನ.30ರ ಒಳಗಾಗಿ ಹೊಸದಾಗಿ ಮೀಸಲಾತಿ ಪಟ್ಟಿ ಪ್ರಕಟಿಸುವಂತೆ ತಿಳಿಸಿದೆ.
ವಾರ್ಡ್ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ವಿಚಾರಣೆ ವೇಳೆ, ಒಬಿಸಿ ಸೇರಿಸಿ ಹೊಸ ಮೀಸಲಾತಿ ಪಟ್ಟಿಗೆ ಕಾಲಾವಕಾಶ ನೀಡುವಂತೆ ಸರ್ಕಾರ ಕೋರಿಕೆಯನ್ನು ಸಲ್ಲಿಸಿತ್ತು. ಹೊಸ ಮೀಸಲಾತಿ ಪಟ್ಟಿ ಪ್ರಕಟಕ್ಕೆ ಸರ್ಕಾರ 16 ವಾರಗಳ ಕಾಲಾವಕಾಶ ಕೋರಿ ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ಪ್ರಮಾಣಪತ್ರ ಸಲ್ಲಿಸಿತ್ತು. ಇದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಇಷ್ಟು ಸಮಯ ಕೇಳಿದರೆ ತಕ್ಷಣ ಚುನಾವಣೆಗೆ ಆದೇಶಿಸಬೇಕಾದೀತು ಎಂದು ನ್ಯಾ. ಹೇಮಂತ್ ಚಂದನ್ ಗೌಡರ್ ನೇತೃತ್ವದ ಏಕಸದಸ್ಯ ಪೀಠ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದರು. ಕೊನೆಗೆ ಈ ಆದೇಶ ಪ್ರಕಟಿಸಿದ್ದಾರೆ.
ಇದಲ್ಲದೆ ಚುನಾವಣಾ ಆಯೋಗದ ಪರ ವಕೀಲರಿಗೆ ನವೆಂಬರ್ 30ರ ಒಳಗಾಗಿ ಅಂತಿಮ ಚುನಾವಣಾ ಅಧಿಸೂಚನೆ ಹೊರಡಿಸುವಂತೆ ಮೌಖಕವಾಗಿ ಏಕಸದಸ್ಯ ನ್ಯಾಯಪೀಠ ತಿಳಿಸಿದೆ.
ಇಷ್ಟು ದಿನಗಳ ಕಾಲ ಒಂದಲ್ಲಾ ಒಂದು ಕುಂಟುನೆಪಗಳನ್ನು ಹೇಳುತ್ತಾ ಸುಪ್ರೀಂಕೋರ್ಟ್ (Supreme Court) ಮತ್ತು ಹೈಕೋರ್ಟ್ (Highcourt) ಗಳಲ್ಲಿ ಕಾಲಹರಣ ಮಾಡುತ್ತಿದ್ದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕೊನೆಗೂ ಅಂತಿಮ ಗಡುವು ನೀಡಿದೆ. ಬೆಂಗಳೂರಿನ ಜನತೆ, ನಾಗರೀಕರ ಸಂಘ ಸಂಸ್ಥೆಗಳು ಬೆಂಗಳೂರಿನ ಸ್ಥಳೀಯಾಡಳಿತಕ್ಕೆ ಈಗ ಚುನಾವಣೆಯಾಗುತ್ತೆ, ಆಗ ಚುನಾವಣೆಯಾಗುತ್ತೆ ಅಂತ ಕಾದು ಕಾದು ಹೈರಾಣಾಗಿದ್ದರು.
ಸುಪ್ರೀಂಕೋರ್ಟ್ ನಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಅಬ್ದುಲ್ ವಾಜೀದ್ ಮತ್ತು ಎಂ.ಶಿವರಾಜ್ ಎಂಬುವರು ಸಕಾಲಕ್ಕೆ ಪಾಲಿಕೆಗೆ ಚುನಾವಣೆ ನಡೆಸಲು ನಿರ್ದೇಶಿಸುವಂತೆ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿ ಸುಧೀರ್ಘ ಕಾನೂನು ಹೋರಾಟ ನಡೆಸಿದ್ದರು. ಈ ಮಧ್ಯೆ ವಾರ್ಡ್ ಪುನರ್ವಿಂಗಡಣೆ ಹಾಗೂ ವಾರ್ಡ್ ಹಿಂದುವರ್ಗಗಳ ಮೀಸಲಾತಿ ಕುರಿತಂತೆಯೂ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನಲ್ಲಿ ಬೇರೆ ಬೇರೆ ಅರ್ಜಿ ಸಲ್ಲಿಕೆಯಾಗಿತ್ತು. ಆ ಬಳಿಕ ಸುಪ್ರೀಂಕೋರ್ಟ್ ವಾರ್ಡ್ ಪುನರ್ವಿಂಗಡಣೆ ಹಾಗೂ ಮೀಸಲಾತಿ ಸಂಬಂಧ ಹೈಕೋರ್ಟ್ ನಲ್ಲಿಯೇ ಅರ್ಜಿ ವಿಲೇವಾರಿ ಮಾಡಿಕೊಳ್ಳುವಂತೆ ಸೂಚಿಸಿತ್ತು.
ಈ ಮಧ್ಯೆ ಹೈಕೋರ್ಟ್ ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಪ್ರಶ್ನಿಸಿದ್ದ ಶಾಸಕ ಜಮೀರ್ ಅಹ್ಮದ್, ಸೌಮ್ಯರೆಡ್ಡಿ, ಸತೀಶ್ ರೆಡ್ಡಿ ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು. ಇದೀಗ ಚುನಾವಣೆ ನಡೆಸಲು ಇರುವ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದ್ದು, ಹೊಸ ವರ್ಷ 2023ರ ಬರುವ ವೇಳೆಗಾಗಲೇ ಬಿಬಿಎಂಪಿಯಲ್ಲಿ 243 ವಾರ್ಡ್ ಗಳಿಗೆ ಹೊಸ ಕಾರ್ಪೊರೇಟರ್ ಗಳು ಆಯ್ಕೆಯಾಗಲಿದ್ದಾರೆ. ಹೈಕೋರ್ಟ್ ಈ ಖಡಕ್ ಆದೇಶದ ಹಿನ್ನಲೆಯಲ್ಲಿ ಕಾರ್ಪೊರೇಷನ್ ಚುನಾವಣೆಯ ಅಕಾಂಕ್ಷಿಗಳಲ್ಲಿ ಸಂತಸ ಮೂಡಿದೆ.
ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ – ಆರ್.ಅಶೋಕ್:
ಈ ಮಧ್ಯೆ ಹೈಕೋರ್ಟ್ ಆದೇಶ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್, “ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ದವಿದೆ. ಹೈಕೋರ್ಟ್ ಆದೇಶದ ಪ್ರತಿ ತಮಗೆ ಸಿಕ್ಕಿಲ್ಲ. ಆದರೂ ಡಿಸೆಂಬರ್ 31ರ ಒಳಗೆ ಚುನಾವಣೆ ನಡೆಸಲು ತಿಳಿಸಿದೆ. ಮೀಸಲಾತಿ ಸರಿಪಡಿಸಿ ನೂತನ ಮೀಸಲಾತಿ ಪಟ್ಟಿ ಹೊರಡಿಸುವಂತೆಯೂ ಹೇಳಿದೆ. ಈಗಾಗಲೇ ರಾಜ್ಯ ಸರ್ಕಾರ ಪ್ರಕಟಿಸಿರುವ ಮೀಸಲಾತಿ ಪರಿಷ್ಕರಣೆಗೆ ಪ್ರತ್ಯೇಕ ಸಮಿತಿ ರಚಿಸಬೇಕಾ? ಅಥವಾ ಅಧಿಕಾರಿಗಳಿಂದಲೇ ಹೊಸ ಪಟ್ಟಿ ತಯಾರಿಸಬೇಕಾ? ಎಂಬ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಚುನಾವಣೆ ನಡೆಸಲು ಬಿಬಿಎಂಪಿ ಸರ್ವಸಿದ್ದ – ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ :
ಇನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಬಿಬಿಎಂಪಿ ಚುನಾವಣೆ ನಡೆಸುವ ಸಂಬಂಧ ಈಗಾಗಲೇ 243 ವಾರ್ಡ್ ಪುನರ್ವಿಂಗಡಣೆ ಕಾರ್ಯ ಮುಗಿದಿದ್ದು, 243 ವಾರ್ಡ್ ಗಳ ಮತದಾರರ ಅಂತಿಮ ಪಟ್ಟಿಯನ್ನು ಬಿಬಿಎಂಪಿ ಪ್ರಕಟಿಸಿದೆ. ಉಳಿದಂತೆ ಹೈಕೋರ್ಟ್ ಆದೇಶದ ಅನ್ವಯ ಹೊಸದಾಗಿ ಮೀಸಲಾತಿ ಪಟ್ಟಿ ಪ್ರಕಟಿಸುವ ವಿಚಾರ ರಾಜ್ಯ ಸರ್ಕಾರಕ್ಕೆ ಸಂಬಂಧಿದೆ. ಸರ್ಕಾರ ಹೊಸದಾಗಿ ಮೀಸಲಾತಿ ಪಟ್ಟಿ ಪ್ರಕಟಿಸಿ, ಅದರಂತೆ ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದರೆ ಅದರಂತೆ ಪಾಲಿಕೆ ಚುನಾವಣೆ ನಡೆಸಲು ಬಿಬಿಎಂಪಿ ಸಿದ್ದವಿದೆ” ಎಂದು ಅವರು ಹೇಳಿದ್ದಾರೆ.
ರಾಜಧಾನಿಯಲ್ಲಿ 79.19 ಲಕ್ಷ ಮತದಾರರಿದ್ದಾರೆ :
ಪಾಲಿಕೆಯು ಸೆ.29ರಂದು ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ 243 ವಾರ್ಡ್ ಗಳಲ್ಲಿ ಒಟ್ಟು 79,19,563 ಮತದಾರರಿದ್ದು, ಆ ಪೈಕಿ 41,14,383 ಪುರುಷರು ಹಾಗೂ 38,03,747 ಮಹಿಳೆಯರು ಹಾಗೂ 1,433 ಇತರೆ ಮತದಾರರಿದ್ದಾರೆ.
ಹೈಕೋರ್ಟ್ ಶುಕ್ರವಾರ ನೀಡಿರುವ ಆದೇಶ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, “ಬಿಬಿಎಂಪಿ ಚುನಾವಣೆ ಮೀಸಲಾತಿ ಪಟ್ಟಿ ನ.30 ರ ಒಳಗೆ ಅಂತಿಮಗೊಳಿಸಿ, ಡಿ.31ರ ಒಳಗೆ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂಬ ಹೈಕೋರ್ಟ್ ಮಹತ್ವದ ಆದೇಶವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ”
ಬಿಎಂಎಂಪಿ ಚುನಾವಣೆ ಯಾವಾಗ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇದಕ್ಕೆ ಹೈಕೋರ್ಟ್ ನ.30 ರೊಳಗೆ ಮೀಸಲಾತಿಯನ್ನು ಪ್ರಕಟಿಸಬೇಕು. ಡಿ.31 ರೊಳಗೆ ಬಿಬಿಎಂಪಿ ಚುನಾವಣೆ ನಡೆಸಲು ಆದೇಶವನ್ನು ಮಾಡಿದೆ.