ಬೆಂಗಳೂರು, ಸೆ.20 www.bengaluruwire.com : ಕಾರ್ಮಿಕ ಇಲಾಖೆ ಮತ್ತು ಅಧೀನದಲ್ಲಿ ಬರುವ ಇತರೆ ಮಂಡಳಿಗಳ ನೋಂದಣಿ ನವೀಕರ ಹಾಗೂ ವಿವಿಧ ಸೌಲಭ್ಯಗಳನ್ನು ವಿತರಿಸಲು ನೂತನ ತಂತ್ರಾಂಶವನ್ನು ರೂಪಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಉದ್ಘಾಟಿಸಿದರು.
ವಿಧಾನಸೌಧದ ಬ್ಯಾಂಕ್ವಿಟ್ ಹಾಲ್ ನಲ್ಲಿ ಈ ನೂತನ ತಂತ್ರಾಂಶಕ್ಕೆ ಚಾಲನೆ, ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿತರಣಾ ಯೋಜನೆಯ ಪ್ರಾರಂಭ ಹಾಗೂ ಕಟ್ಟಡ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಬೆಂಗಳೂರ ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರಿಗೆ ನೀಡುತ್ತಿದ್ದ ಬಸ್ ಪಾಸ್ ಸೌಲಭ್ಯವನ್ನು ರಾಜ್ಯಾದ್ಯಂತ ಇಂದಿನಿಂದ ವಿಸ್ತರಿಸಲಾಗುತ್ತಿದೆ ಎಂದರು.
ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರವಾದುದು. ಸರ್ಕಾರದ ಬಳಿ ಎಷ್ಟೇ ಹಣವಿದ್ದರೂ, ಕಾರ್ಮಿಕ ಬೆವರು ಹರಿಸಿ ಕಾಮಗಾರಿ ನಡೆಸಿದರಷ್ಟೇ ಆ ಕೆಲಸ ಕಾರ್ಯಗತವಾಗುವುದು. ಕೇವಲ ಹಣವಿದ್ದರೆ ಕೆಲಸ ತನ್ನಿಂದತಾನೇ ಅನುಷ್ಟಾನವಾಗದು. ಇಂತಹ ಕಾರ್ಮಿಕರ ನೆರವಿಗೆ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಕಾರ್ಮಿಕ ಇಲಾಖೆಯ ಮೂಲಕ ಜಾರಿಗೆ ತರಲಾಗುತ್ತಿದೆ. ಕಾರ್ಮಿಕರಿಗೆ ವಿವಿಧ ಧನ ಸಹಾಯದ ಸೌಲಭ್ಯಗಳನ್ನು ತಲುಪಿಸಲು Kbocwwb labour ಆಂಡ್ರಾಯ್ಡ್ ಆಪ್ ಅನುಕೂಲಕಾರಿಯಾಗಿದೆ ಎಂದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಇದುವರೆಗೆ 37 ಲಕ್ಷ ಕಟ್ಟಡ ಕಾರ್ಮಿಕರು ನೋಂದಾಯಿತರಾಗಿದ್ದಾರೆ. ಇವರುಗಳಿಗೆ ಸದ್ಯ ಶೈಕ್ಷಣಿಕ ಸಹಾಯಧನ ಹೊರತುಪಡಿಸಿ ಮದುವೆ ಸಹಾಯಧನ, ವೈದ್ಯಕೀಯ, ಪಿಂಚಣಿ ಸೌಲಭ್ಯ, ಮಹಿಳಾ ಕಟ್ಟಡ ಕಾರ್ಮಿಕರಿಗೆ ಹೆರಿಗೆ ಸಹಾಯಧನ ಮತ್ತು ತಾಯಿ ಮಗು ಸಹಾಯಹಸ್ತ ಯೋಜನೆ ಸೇರಿದಂತೆ 19 ಸೌಲಭ್ಯಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಭೌತಿಕವಾಗಿ ಹಾಕಲಾಗುತ್ತಿತ್ತು.
ನೂತನ ತಂತ್ರಾಂಶವು ಕಟ್ಟಡ ಕಾರ್ಮಿಕರಿಗೆ ತ್ವರಿತವಾಗಿ ಸೇವೆಯನ್ನು ನೀಡುವ ಸಲುವಾಗಿ ಹಾಗೂ ಸಹಾಧನವು ನೇರವಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ (DBT) ತಲುಪಿಸಲು ಈ ಹೊಸ ಸಾಫ್ಟ್ ವೇರ್ ನಿಂದ ಸಾಧ್ಯವಾಗಲಿದೆ. ಅಲ್ಲದೆ ಒಬ್ಬ ಫಲಾನುಭವಿಯು ಒಂದೇ ಸೌಲಭ್ಯವನ್ನು ಎರಡೆರಡು ಬಾರಿ ಪಡೆಯುವುದನ್ನು ತಪ್ಪಿಸುತ್ತದೆ. ಈ ಎಲ್ಲಾ ಅವಕಾಶಗಳು ಹಳೆಯ ಸೇವಾಸಿಂಧು ತಂತ್ರಾಂಶದಲ್ಲಿ ಲಭ್ಯವಿರಲಿಲ್ಲ. ಹೊಸ ಸಾಫ್ಟ್ ವೇರ್ ಈ ಎಲ್ಲಾ ಅನುಕೂಲಗಳಿವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾರ್ಮಿಕ ಇಲಾಖೆಯ ಅಧೀನದಲ್ಲಿರುವ ಇತರೆ ಮಂಡಳಿಗಳಾದ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕಾರ್ಖಾನೆಗಳು, ಬಾಯ್ಲರ್ ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಗಳ ಅಡಿಯಲ್ಲಿ ನೋಂದಣಿ, ನವೀಕರಣ ಮತ್ತು ವಿವಿಧ ಸೌಲಭ್ಯಗಳನ್ನು ವಿತರಿಸಲು ಈ ನೂತನ ತಂತ್ರಾಂಶವನ್ನು ರೂಪಿಸಲಾಗಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ 2021-22ನೇ ಸಾಲಿನಲ್ಲಿ 4.19 ಲಕ್ಷ ಫಲಾನುಭವಿಗಳ ಖಾತೆಗೆ 654 ಕೋಟಿ ರೂ.ಗಳ ಶೈಕ್ಷಣಿಕ ಸಹಾಯ ಧನವನ್ನು ನೇರ ನಗದು ರೂಪದಲ್ಲಿ ನೀಡಲಾಗಿದೆ. ಇದೇ ಮೊದರಿಯಲ್ಲಿ ಮಂಡಳಿಯು ಉಳಿದ ಸೇವೆಗಳಲ್ಲಿ ಡಿಬಿಟಿ ಮುಖಾಂತರ ಹಣವನ್ನು ಹಸ್ತಾಂತರಿಸಲಿದೆ ಎಂದರು.
ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಬಿಎಂಟಿಸಿ ವ್ಯಾಪ್ತಿಯಿಂದ ರಿಯಾಯಿತಿ ಬಸ್ ಪಾಸ್ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಏ.16ರಂದು ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿತ್ತು. ಇಂದಿನಿಂದ ಈ ಯೋಜನೆ ಜಾರಿಗೆ ಬಂದಿದ್ದು ಅರ್ಹ ಕಾರ್ಮಿಕರು ತಮ್ಮ ವಾಸ ಸ್ಥಳ ಅಥವಾ ಕೆಲಸ ನಿರ್ವಹಿಸುವ ಸ್ಥಳದಿಂದ 45 ಕಿ.ಮೀ ವ್ಯಾಪ್ತಿಯಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಕೂಲವಾಗುತ್ತದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೆಎಸ್ ಆರ್ ಟಿಸಿ (KSRTC) ಬಸ್ ಪಾಸ್ ಗಳನ್ನು ಬೆಂಗಳೂರು-ಒನ್, ಕರ್ನಾಟಕ-ಒನ್ ಮತ್ತು ಗ್ರಾಮ-ಒನ್ ಕೇಂದ್ರಗಳ ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದಾಗಿರುತ್ತದೆ. ಮಂಡಳಿಯ ಫಲಾನುಭವಿಗಳಿಗೆ ವಿತರಿಸಲಾಗುವ ಬಸ್ ಪಾಸ್ ಗಳು ತ್ರೈಮಾಸಿಕ ಅವಧಿಯದಾಗಿದ್ದು, ಅವಧಿ ಮುಕ್ತಾಯದ ನಂತರ ಪುನಃ ಅರ್ಜಿ ಸಲ್ಲಿಸಿ ನವೀಕರಿಸಿಕೊಳ್ಳಬಹುದು ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
“2013ರಿಂದ 2018ರವರೆಗೆ 278 ಕೋಟಿ ರೂ. ಮಾತ್ರ ವ್ಯಯಿಸಲಾಗಿತ್ತು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶ್ರಮಿಕರ ಕಲ್ಯಾಣಕ್ಕಾಗಿ 1619 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಇದು ರಾಜ್ಯದ ಕಾರ್ಮಿಕ ಇಲಾಖೆಯ ಇತಿಹಾಸದಲ್ಲೇ ಒಂದು ದಾಖಲೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ದೇಶದಲ್ಲೇ ಮೊದಲು ಎಂಬಂತಹ ಮೂರು ಹೊಸ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ”
-ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವರು
ಮಂಡಳಿಯ ನೋಂದಾಯಿತ ಕಾರ್ಮಿಕರು ಯಾವುದೇ ಜಿಲ್ಲೆಯಲ್ಲಿ ನೋಂದಣಿಯಾಗಿದ್ದರೂ ಸಹ ಅವರು ಇಚ್ಛಿಸುವ ಸ್ಥಳದಿಂದ ಬಸ್ ಪಾಸನ್ನು ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತೆ.
2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರ ಮಕ್ಕಳು 600 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹಧನ ನೀಡಲು ನಿರ್ಣಯಿಸಲಾಗಿತ್ತು. ಕ್ಷೇತ್ರ ಮಟ್ಟದ ಅಧಿಕಾರಿಗಳ ಕಚೇರಿಯಿಂದ ಒಟ್ಟು 2,491 ಅರ್ಜಿಗಳು ಸ್ವೀಕೃತಗೊಂಡಿದೆ. ಆ ಪೈಕಿ 2,307 ಅರ್ಜಿಗಳಿಗೆ ಪ್ರೋತ್ಸಾಹಧನ ಪಡೆಯಲು ಅರ್ಹರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೆಎಸ್ಆರ್ಟಿಸಿ ಅಧ್ಯಕ್ಷ ಮತ್ತು ಶಾಸಕ ಕೆ. ಚಂದ್ರಪ್ಪ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ಇಲಾಖೆ ಆಯುಕ್ತ ಅಕ್ರಂ ಪಾಷ, ಕಲ್ಯಾಣ ಕರ್ನಾಟಕ ಮಂಡಳಿಯ ಡಾ.ರಾಜ್ ಕುಮಾರ್, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಮತ್ತು ಕಾರ್ಯದರ್ಶಿ ಗುರು ಪ್ರಸಾದ್ ಎಂ.ಪಿ, ಜಂಟಿ ಕಾರ್ಯದರ್ಶಿ ಶಿವಪುತ್ರ, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.