ಬೆಂಗಳೂರು, ಸೆ.16 www.bengaluruwire.com : ಬಿಬಿಎಂಪಿ ಜಂಟಿ ಆಯುಕ್ತರ ಹುದ್ದೆಗಳಿಗೆ ಕೆಎಎಸ್ ಅಥವಾ ಐಎಎಸ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ನ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ಬೊಮ್ಮನಹಳ್ಳಿ ವಲಯದ ಪುಟ್ಟೇನಹಳ್ಳಿಯ ಸರ್ವೆ ನಂ.39ರಲ್ಲಿ ಅಕ್ರಮ ಖಾತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಸಹಾಯಕ ಕಂದಾಯ ಅಧಿಕಾರಿ ಎಸ್.ವಿ.ಮಂಜುನಾಥ್, ಕಂದಾಯ ಪರಿವೀಕ್ಷಕ ನರಸಿಂಹಮೂರ್ತಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಅವರು ಅಧಿವೇಶನದಲ್ಲಿ ತಿಳಿಸಿದರು.
ಇದೇ ವೇಳೆ ಸಭೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, “ಬೊಮ್ಮನಹಳ್ಳಿ ವಲಯವು ಹಣ ಮಾಡುವ ವಲಯವಾಗಿದೆ. ಬೆಂಗಳೂರು ನಗರ ಜಿಲ್ಲೆ, ದಕ್ಷಿಣ ತಾಲೂಕು ಪುಟ್ಟೇನಹಳ್ಳಿ ಗ್ರಾಮದಲ್ಲಿ ಪರಿವರ್ತನೆಗೊಂಡ ಏಕ ನಿವೇಶನಕ್ಕೆ ನಿಯಮಬಾಹಿರವಾಗಿ ಖಾತೆ ಮಾಡಿಕೊಡಲಾಗಿದೆ. ಖಾತೆ ಮಾಡಿಕೊಟ್ಟ ಬೊಮ್ಮನಹಳ್ಳಿ ವಲಯದ ಅಧಿಕಾರಿಗಳು ನಿವೃತ್ತರಾಗಿದ್ದಾರೆ. ಅವರ ವಿರುದ್ಧ ಹೇಗೆ ಕ್ರಮ ಕೈಗೊಳ್ಳಲಾಗುತ್ತದೆ” ಎಂಬ ಪ್ರಶ್ನಿಸಿದ್ದರು. ಅಲ್ಲದೆ ತಪ್ಪು ಮಾಡಿರುವ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಯಾವುದೇ ಹಗರಣವಾಗಲಿ ಎರಡು ವರ್ಷಗಳ ತನಕ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ನಿವೃತ್ತರಾಗಿದ್ದರೂ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಅವರಿಂದ ಬಿಬಿಎಂಪಿಗೆ ನಷ್ಟವಾಗಿದ್ದರೆ ಅದನ್ನು ವಸೂಲಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ಈ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಸಭೆಯಲ್ಲಿ ಉತ್ತರಿಸಿದ್ದಾರೆ.