ಚಿಕ್ಕಮಗಳೂರು, ಸೆ.10 www.bengaluruwire.com : ಕಾಫಿ ನಾಡು ಚಿಕ್ಕಮಗಳೂರಿನ ಗಿರಿ-ಪರ್ವತ ಶ್ರೇಣಿಗಳ ಸಾಲುಗಳೆಲ್ಲಾ ನೀಲಿ ನೇರಳೆಯ ರೂಪ ಪಡೆದುಕೊಂಡಿದೆ. ಇಲ್ಲಿನ ಬೆಟ್ಟ ಗುಡ್ಡಗಳೆಲ್ಲಾ ಕಳೆದ ಎರಡು ಮೂರು ವಾರಗಳಿಂದ ನೀಲಿ- ನೇರಳೆ (Blueish Purple) ಬಣ್ಣದಿಂದ ಕಂಗೊಳಿಸುತ್ತಿದೆ. ಅರೆ ಇದೇನ್ ವಿಶೇಷ ಅಂತಿರಾ 12 ವರ್ಷಕೊಮ್ಮೆ ಅರಳೋ ನೀಲ ಕುರಂಜಿ ಹೂವು (Kurinji Flower) ಚಿಕ್ಕಮಗಳೂರಿನ ಗಿರಿ ಕಂದರವನ್ನು ಭೂ ಲೋಕದ ಸ್ವರ್ಗವನ್ನಾಗಿಸಿದೆ.
ಒಂದೆಡೆ ಎಡಬಿಡದೆ ಸುರಿಯುತ್ತಿರುವ ಮಳೆ ಮತ್ತೊಂದೆಡೆ ಹಿಮದಿಂದ ಮುಚ್ಚಿಹೋದ ಬೆಟ್ಟಗಳು ಮಧ್ಯೆ ಮಧ್ಯೆ ನೀಲಿ ನೇರಳೆ ಬಣ್ಣದ ಕುರಂಜಿ ಹೂಗಳಿಂದ ತುಂಬಿದ್ದು, ಅಲ್ಲಿನ ಪರಿಸರಕ್ಕೆ ಮೆರಗು ನೀಡಿದೆ. ರಸ್ತೆಯ ಇಕ್ಕೆಲಗಳಲ್ಲಿ ಈ ಹೂವುಗಳು ಅರಳಿ ನಿಂತಿದೆ.ಅಲ್ಲದೆ ಪ್ರಕೃತಿ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಪ್ರಕೃತಿ ಪ್ರಿಯರು, ಪ್ರವಾಸಿಗರಂತೂ ಇಂತಹ ಕಾಲಕ್ಕಾಗಿಯೇ ಎದುರು ನೋಡುತ್ತಿರುತ್ತಾರೆ. 12 ವರ್ಷಗಳಿಗೊಮ್ಮೆ ಅರಳೋ ಈ ನೀಲಿ ನೇರಳೆ ಹೂವು ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ. ಕಣ್ಣು ಹಾಯಿಸಿದಲೆಲ್ಲಾ ಕಾಣೋ ಅಪರೂಪದ ನೀಲಿ ಕುರಂಜಿ ನೋಡುಗರ ಕಣ್ಮನ ಸೆಳೆಯೋದ್ರ ಜೊತೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.
ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯ ಭದ್ರಾ ರಕ್ಷಿತಾರಣ್ಯದ ಶೋಲಾ ಹುಲ್ಲುಗಾವಲು ಪ್ರದೇಶದಲ್ಲಿ ಅರಳೋ ಈ ಹೂವು ಕಾಫಿನಾಡಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಅರಳಿ ನಿಂತಿದೆ. ಮುಳ್ಳಯ್ಯನಗಿರಿ, ಮಲ್ಲಂದೂರಿನ ಕಲ್ಲುಬಂಡೆಗುಡ್ಡ ಸುತ್ತಲೂ ಹುಲುಸಾಗಿ ಅರಳಿ ನಿಂತಿದೆ. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಓಡಾಡೋ ಪ್ರವಾಸಿಗರಂತೂ ಪ್ರಕೃತಿ ಈ ವೈಭವನ್ನು ಕಣ್ಣು ತುಂಬಿಕೊಂಡು ಸಖತ್ ಥ್ರಿಲ್ ಆಗಿದ್ದಾರೆ. ಈ ನೀಲಿ ಕುರಂಜಿ ಹೂವು ಪಶ್ವಿಮಘಟ್ಟ ಸಂರಕ್ಷಿತ ಪ್ರದೇಶವಾಗಿರುವ ಕಾರಣ ಈ ಹೂವು ಇನ್ನೂ ಜೀವಂತವಾಗಿದೆ. ಹೀಗಾಗಿ ಈ ಅಪರೂಪದ ಹೂವು ಪ್ರತಿ 12 ವರ್ಷಕೊಮ್ಮೆ ಕಾಫಿನಾಡನ್ನ ಭೂರಮೆಯ ಮರೆಗನ್ನು ಹೆಚ್ಚಿಸುತ್ತಾ ಬಂದಿದೆ.
ಕುರಂಜಿ ಹೂವಿನ ಧಾರ್ಮಿಕ ಐತಿಹ್ಯ :
ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವೆಳ್ಳಿನ ಮದುವೆಯಾಗುವಾಗ ಈ ಹೂವಿನ ಮಾಲೆ ಹಾಕಿದ್ದರು. ಈ ನೀಲಿ ಪುಷ್ಪವನ್ನು ಪ್ರೇಮದ ಸಂಕೇತವಾಗಿ ಪ್ರೇಮದ ಹೂ ಅಂತಲೂ ಕೇರಳ, ತಮಿಳುನಾಡಿಗರು ಕರೆಯುತ್ತಾರೆ. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯ ದೇವರಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳುತ್ತದೆ. ಗುರ್ಗಿ ಹೂವಿನಲ್ಲಿ ನಾನಾ ವಿಧಗಳಿದ್ದು, 5, 7, 12, 14 ವರ್ಷಗಳಿಗೆ ಅರಳೋ ಪ್ರಭೇದ ಹೂವುಗಳೂ ಇವೆ. ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳಿರುವ ಕಾರಣಕ್ಕೆ ನಾನಾ ಖಾಯಿಲೆಗಳಿಗೆ ಚಿಕಿತ್ಸೆಗಾಗಿ ಬಳಸುತ್ತಾರೆ. ಸದ್ಯಕ್ಕೆ ಕಾಫಿನಾಡಿನ ಗಿರಿ-ಶಿಖರಗಳಲ್ಲಿ ಅರಳಿ ನಿಂತಿರೋ, ಮತ್ತಷ್ಟು ಅರಳುವ ಸನಿಹದಲ್ಲಿದ್ದು ಬೆಟ್ಟಗುಡ್ಡಗಳ ಸೌಂದರ್ಯವನ್ನೆ ಬದಲಿಸಿ, ನೋಡುಗರ ಕಣ್ಮನದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡುತ್ತಿದೆ.
ಒಟ್ಟಾರೆ, ಪ್ರಕೃತಿಯ ಒಡಲಾಳದಲ್ಲಿ ಇನ್ನೆಷ್ಟು ಸೌಂದರ್ಯದ ರಾಶಿ ಮನೆ ಮಾಡಿದ್ಯೊ ಬಲ್ಲೋರ್ಯಾರು ಇಲ್ಲ. ಕಾಫಿನಾಡಲ್ಲಿ ಒಂದೊಂದು ಕಾಲದಲ್ಲೂ ಒಂದೊಂದು ರೀತಿಯ ಸೌಂದರ್ಯ ಮನೆ ಮಾಡಿರುತ್ತೆ. ಈವರೆಗೆ ಹಸಿರಿನಿಂದ ಕಂಗೊಳಿಸೋ ಬೆಟ್ಟಗುಡ್ಡಗಳನ್ನ ನೋಡಿದವರಿಗೆ ಕೆಲವು ದಿನಗಳ ಕಾಲ ನೀಲಿ ಬೆಟ್ಟಗಳನ್ನ ನೋಡುವ ಅವಕಾಶ ಲಭ್ಯವಾಗಿದೆ. ಸಾಮಾನ್ಯವಾಗಿ ಆಗಸ್ಟ್ ನಿಂದ ನವೆಂಬರ್ ವರೆಗೆ ಕುರುವಂಜಿ ಹೂಗಳು ಅರಳುವ ಸಂದರ್ಭವಾಗಿರುತ್ತದೆ.
ಕುರಂಜಿ ಹೂವಿನ ವೈಜ್ಞಾನಿಕ ಹಿನ್ನಲೆ :
ನೀಲಿ-ನೇರಳೆ ಕುರಂಜಿ ಒಂದು ಜಾತಿಯ ಹೂವು. ಇದು ದಕ್ಷಿಣ ಭಾರತದಲ್ಲಿರುವ ನೀಲಗಿರಿ ಬೆಟ್ಟದಲ್ಲಿರುವ ಶೋಲಾ ಕಾಡಿನಲ್ಲಿ ಕಂಡು ಬರುತ್ತದೆ. ಇದರ ವೈಜ್ಞಾನಿಕ ಹೆಸರು ಸ್ಟ್ರೊಬಿಲಂಥೆಸ್ ಕುಂತಿಯಾನ. ಈ ಹೂವು ಅರಳಿದಾಗ ಇದು ನೀಲಿ ಬಣ್ಣದಲ್ಲಿರುತ್ತದೆ. ಈ ಹೂವು ಹನ್ನೆರಡು ವರ್ಷಗಳಿಗೊಮ್ಮೆ ಅರಳುತ್ತದೆ. ಈ ಒಂದು ಗಿಡ ಸ್ಟ್ರೊಬಿಲಂತಸ್ ಜಾತಿಗೆ ಸೇರಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಕ್ರಿಶ್ಚಿಯನ್ ಗಾಟ್ಫ್ರೈಡ್ ಡೇನಿಯಲ್ ನೀಸ್ ವಾನ್ ಎಸೆನ್ಬೆಕ್ ಎಂಬ ವ್ಯಕ್ತಿ ಈ ಹೂವನ್ನು ಮೊದಲು ಗುರುತಿಸಿದ್ದರು. ಈ ಕುರುಂಜಿ ಹೂವು 250 ಜಾತಿಗಳಲ್ಲಿ ಕಂಡುಬರುತ್ತದೆ. ಅದರಲ್ಲಿ 46 ಜಾತಿಯ ಹೂವುಗಳು ನಮ್ಮ ಭಾರತ ದೇಶದಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ಈ ಹೂವಿನ ಜಾತಿಯಲ್ಲಿ ಕೆಲವು ವಿಚಿತ್ರ ಜಾತಿಯ ಹೂವುಗಳಿವೆ, ಅವು ಹನ್ನೆರಡು ವರ್ಷಗಳ ಬದಲಿಗೆ ಹದಿನಾರು ವರ್ಷಗಳಿಗೊಮ್ಮೆ ಅರಳುತ್ತದೆ.
1,300 ರಿಂದ 2,400 ಪರ್ವತಗಳಲ್ಲಿ ಕಂಡು ಬರುವ ಹೂ :
ದೀರ್ಘ ಕಾಲಗಳಿಗೊಮ್ಮೆ ಅರಳುವ ಈ ರೀತಿಯ ಹೂಗಳನ್ನು ಪಿಲಿಟೆಸಿಯಲ್ಸ್ ಅಂದು ಕರೆಯುತ್ತಾರೆ. ಈ ಹೂವು 1300ರ ರಿಂದ 2400 ಪರ್ವತಗಳಲ್ಲಿ ಕಂಡು ಬರುತ್ತದೆ. ಕುರಂಜಿ ಗಿಡ ಮೂವತ್ತರಿಂದ ಅರವತ್ತು ಸೆಂಟಿ ಮೀಟರ್ ಉದ್ದ ಬೆಳೆಯುತ್ತದೆ. ಆದರೆ ಇದಕ್ಕೆ 180 ಸೆಂಟಿ ಮೀಟರ್ ಎತ್ತರ ಬೆಳೆಯುವ ಕ್ಷಮತೆ ಹೊಂದಿದೆ. ಕುರಂಜಿ ಹೂವುಗಳಿಂದ ಜೇನುಹುಳಗಳು ಸಂಗ್ರಹಿಸಿದ ಜೇನು ತುಪ್ಪ ಬಲು ರುಚಿ ಎನ್ನುತ್ತಾರೆ ಸ್ಥಳೀಯರು.
ಮತ್ಯಾಕೆ ತಡ, ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಪ್ರದೇಶದಲ್ಲಿನ ಪ್ರಕೃತಿ ವಿಸ್ಮಯ ಹಾಗೂ ಅಪರೂಪದ ನೀಲಿ ಸೌಂದರ್ಯವನ್ನು ಸವಿಯರಿ.