ಬೆಂಗಳೂರು, ಸೆ.4 (www.bengaluruwire.com) : ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC)ವು ತಿಳಿಸಿದೆ.
ಬಿಬಿಎಂಪಿ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆಯೊಂದಿಗೆ ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿಗ್ರಿ ಉಷ್ಣಾಂಶ ಇರಲಿದೆ ಎಂದು ಕೇಂದ್ರವು ತಿಳಿಸಿದೆ. ಹೀಗಾಗಿ ಭಾನುವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದ ಪ್ರವಾಹ ಸಂಭವಿಸಬಹುದಾದ ಅಥವಾ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯಿರುವ ಪ್ರದೇಶದ ಜನರು ಎಚ್ಚರಿಕೆವಹಿಸಬೇಕಾಗಿದೆ.
ಬಿಬಿಎಂಪಿಯ ಎಂಟು ವಲಯಗಳಲ್ಲಿ ತೇವಾಂಶದ ಪ್ರಮಾಣ ಪೂರ್ವ ವಲಯ (ಶೇ.94.60), ದಕ್ಷಿಣ ವಲಯ (ಶೇ.93.90), ಯಲಹಂಕ (ಶೇ.81.80), ದಾಸರಹಳ್ಳಿ ವಲಯ (ಶೇ.81.80), ಬೊಮ್ಮನಹಳ್ಳಿ ವಲಯ (ಶೇ.78.20), ಬಿಬಿಎಂಪಿ ಪಶ್ಚಿವ ವಲಯ (ಶೇ.72.90), ಮಹದೇವಪುರ (ಶೇ.74) ಹಾಗೂ ರಾಜರಾಜೇಶ್ವರಿ ನಗರ ವಲಯ (ಶೇ.71.80)ಗಳಲ್ಲಿ ಹೆಚ್ಚಾಗಿದ್ದು, ಮಳೆಯ ಸಾಧ್ಯತೆಯು ಅಧಿಕವಾಗಿದೆ.
ಭಾನುವಾರ ಆಗಿರುವ ಕಾರಣ ಹೆಚ್ಚಿನವರು ದೈನಂದಿನ ಕೆಲಸ ಕಾರ್ಯಗಳಿಗೆಂದು ಹೊರ ಹೋಗುವವರ ಪ್ರಮಾಣ ಕಡಿಮೆಯಿದೆ. ಆದರೂ ಮಳೆಯ ಸಂದರ್ಭದಲ್ಲಿ ಗುಡುಗು- ಸಿಡಿಲು ಬರುವಾಗ ಮರ, ಲೈಟ್ ಕಂಬ ಮತ್ತಿತರ ಕಡೆಗಳಲ್ಲಿ ನಿಲ್ಲದೆ ಸುರಕ್ಷಿತ ಸ್ಥಳದಲ್ಲಿ ನೆಲೆಸಿದರೆ ಉತ್ತಮ.
ಮಳೆಯ ಮುನ್ಸೂಚನೆಯು ಭಾನುವಾರದಿಂದ ಸೋಮವಾರ ಬೆಳಗ್ಗೆ 08:30 ಕ್ಕೆ ಕೊನೆಗೊಳ್ಳುವವರೆಗೆ ನೀಡಿರುವ ಮಾಹಿತಿಯಾಗಿದ್ದು, ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗಲಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಉತ್ತರ ಒಳನಾಡಿನ ಬಳ್ಳಾರಿ, ವಿಜಯನಗರ, ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಮತ್ತು ಉಳಿದ ಜಿಲ್ಲೆಗಳಲ್ಲಿ ಸಾಧಾರಣದಿಂದ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದು ಕೆಎಸ್ಎನ್ ಡಿಎಮ್ ಸಿ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದೆ.
ಮಲೆನಾಡು ಭಾಗದಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ. ಇನ್ನು ಕರಾವಳಿ ಭಾಗದಲ್ಲಿನ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.