ಬೆಂಗಳೂರು, ಆ.31 www.bengaluruwire.com : ನಟಿ ರಮ್ಯಾ ತಮ್ಮ ಅಭಿಮಾನಿಗಳಿಗೆ ಗಣೇಶನ ಹಬ್ಬದ ದಿನದಂದು ಗುಡ್ ನ್ಯೂಸ್ ನೀಡಿದ್ದಾರೆ. ಕನ್ನಡ ಚಿತ್ರರಂಗದ ಸುಂದರ ನಟಿ ರಮ್ಯಾ ಪುನಃ ಸಿನಿಮಾ ರಂಗಕ್ಕೆ ಪ್ರವೇಶ ನೀಡುತ್ತಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಅಭಿಮಾನಿಗಳಿಗೆ ಅಚ್ಚರಿ ನೀಡುವುದಾಗಿ ಈ ಹಿಂದೆ ಬರೆದುಕೊಂಡಿದ್ದರು. ಅದರಂತೆ ಈಗ ಚಿತ್ರ ನಟಿಯಾಗಿ ಅಲ್ಲ ಬದಲಿಗೆ ಚಿತ್ರದ ನಿರ್ಮಾಪಕಿಯ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ತಮ್ಮ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋ ಮೂಲಕ ಎರಡು ಚಿತ್ರಗಳನ್ನು ನಿರ್ಮಿಸಲು ಸಜ್ಜಾಗುತ್ತಿದ್ದೇವೆ. ಈ ಎರಡು ಚಿತ್ರಗಳು ಕೆ.ಆರ್.ಜಿ ಸಂಸ್ಥೆಯ ಚಿತ್ರಗಳ ವಿತರಣೆಯ ಮೂಲಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಅದರ ಜೊತೆಯಲ್ಲೇ ಒಟಿಟಿ ಫ್ಲಾಟ್ ಫಾರಮ್ ಗಳಿಗಾಗಿ ಸಿನಿಮಾ ಹಾಗೂ ವೆಬ್ ಸೀರಿಸ್ ನಿರ್ಮಾಣ ಮಾಡಲು ಆಪಲ್ ಬಾಕ್ಸ್ ಸ್ಟಿಡಿಯೋಸ್ ಸಿದ್ದವಾಗುತ್ತಿದೆ ಎಂದು ರಮ್ಯ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿದ್ದಾರೆ.
ಏನಿದು ಆಪಲ್ ಬಾಕ್ಸ್?
‘ಅದೊಂದು ಸಾಧಾರಣವಾದ ಹಾಗೂ ಅಷ್ಟೆ ಉಪಯುಕ್ತವಾದ ಮರದ ಪೆಟ್ಟಿಗೆ. ನನ್ನ ಸಿನಿಪ್ರಯಾಣದ ಉದ್ದಕ್ಕೂ ಈ ಮರದ ಪೆಟ್ಟಿಗೆ ಜೊತೆಗಿದೆ. ಸೆಟ್ ನಲ್ಲಿ ಕೂರಲು ಕುರ್ಚಿಗಳಿಲ್ಲದಾಗ ಅಥವಾ ಕ್ಯಾಮರಾದ, ನಟರ ಎತ್ತರ ಹೆಚ್ಚಿಸಬೇಕಾದಾಗ ಈ ಆಪಲ್ ಬಾಕ್ಸ್ ನೆರವಿಗೆ ಬಂದಿದೆ. ಈ ಪೆಟ್ಟಿಗೆಯ ಸರಳತೆ ನನಗೆ ಸದಾ ಸ್ಪೂರ್ತಿಯಾಗಿ ನನ್ನನ್ನು ಪ್ರೇರೇಪಿಸಿದೆ’ ಎಂದು ತಿಳಿಸಿದ್ದಾರೆ.
ತಮ್ಮೆಲ್ಲಾ ಪ್ರಯತ್ನಗಳಲ್ಲಿ ಜೊತೆಗಿರುವ ತಮ್ಮ ಕುಟುಂಬದವರು, ಸ್ನೇಹಿತರು, ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಅಲ್ಲದೆ, ನಿರ್ಮಾಪಕರಾದ ವಿಜಯ್ ಕಿರಗಂದೂರು, ಜಯಣ್ಣ, ಯೋಗಿ ಜಿ ರಾಜ್ ಹಾಗೂ ಕಾರ್ತಿಕ್ ಗೌಡ ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.