ಬೆಂಗಳೂರು, ಆ.30 www.bengaluruwire.com : ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಪ್ರತಿ ಲೀಟೃ ನ ಹಾಲಿನ ದರವನ್ನು ಏರಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಪುನಃ ಪ್ರಸ್ತಾವನೆ ಸಲ್ಲಿಸಿದೆ.
ಇದಕ್ಕೆ ಕೆಎಂಎಫ್ ಕೊಟ್ಟಿರುವ ಕಾರಣ ಖಾಸಗಿ ಸಂಸ್ಥೆಗಳು ಪ್ರತಿ ಲೀಟರ್ ಹಾಲನ್ನು 40 ರೂ. ಗಳಿಗೆ ಮಾರಾಟ ಮಾಡುತ್ತಿದೆ. ಆದರೆ ಕೆಎಂಎಫ್ ಹಾಲಿನ ದರ 37 ರೂ. ಇದೆ ಎಂದು ಸಮರ್ಥನೆ ಮಾಡಿಕೊಂಡಿದೆ.
ಈ ಕುರಿತಂತೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್, ‘ಕೆಎಂಎಫ್ ಹಾಲಿನ ದರಕ್ಕೆ ಹೋಲಿಸಿದರೆ ಖಾಸಗಿಯವರು ಪ್ರತಿ ಲೀಟರ್ ಹಾಲನ್ನು 40ರೂ. ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕೆಎಂಎಫ್ ಲೀಟರ್ ಗೆ 37ರೂ. ಗಳಿಗೆ ಗ್ರಾಹಕರಿಗೆ ನೀಡುತ್ತಿದ್ದೇವೆ. ಆದ್ದರಿಂದ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಹೇಳಿದ್ದಾರೆ.
‘ಹಾಲು ದರ ಏರಿಕೆ ಬಗ್ಗೆ ಕೆಎಂಎಫ್ ಅಧ್ಯಕ್ಷ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. 3 ರೂ. ದರ ಏರಿಕೆ ಮಾಡಿದಲ್ಲಿ ಆ ಹಣವನ್ನು ರೈತರಿಗೆ ವರ್ಗಾಯಿಸುವುದಾಗಿ ಹೇಳಿದ್ದಾರೆ. ಈ ವಿಚಾರದ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
‘ರಾಜ್ಯದಲ್ಲಿ ಹಾಲು ಪೂರೈಸುತ್ತಿರುವ ರೈತರಿಗೆ ಕೆಎಂಎಫ್, ಪ್ರೋತ್ಸಾಹ ಧನದ ಎರಡನೇ ಕಂತಾದ 1,250 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಮೂರನೇ ಕಂತಿನ ಹಣ ಶೀಘ್ರದಲ್ಲೇ ನೀಡಲಾಗುತ್ತದೆ. ಈ ಹಣವು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ರವಾನೆಯಾಗುತ್ತದೆ. 2019-20ನೇ ಸಾಲಿನ ಬಾಕಿ ಪ್ರೋತ್ಸಾಹ ಧನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ’ ಎಂದ ಕೆಎಂಎಫ್ ಎಂಡಿ ಬಿ.ಸಿ.ಸತೀಶ್ ವಿವರಿಸಿದ್ದಾರೆ.
ಈ ಹಿಂದೆ ಹಲವು ಬಾರಿ ಕೆಎಂಎಫ್ ಹಾಲಿನ ದರ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರೂ ದರ ಏರಿಕೆಗೆ ರಾಜ್ಯ ಸರ್ಕಾರ ಹಿಂದೇಟು ಹಾಕಿತ್ತು. ಈ ಬಾರಿಯಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದರ ಏರಿಕೆ ಪ್ರಸ್ತಾವನೆಗೆ ಹಸಿರು ನಿಶಾನೆ ತೋರುವರೆಂಬ ನಿರೀಕ್ಷೆಯನ್ನು ಕೆಎಂಎಫ್ ಹೊಂದಿದೆ.