ನಮ್ಮ ಸನಾತನ ಧರ್ಮದಲ್ಲಿ ಎಲ್ಲ ಹಬ್ಬಗಳಿಗೂ ತನ್ನದೇ ಆದ ಮಹತ್ವವಿದೆ. ಪ್ರತಿಯೊಂದು ಹಬ್ಬಗಳನ್ನು ಆಚರಿಸುವ ಕಾಲ, ಮಾಸ, ತಿಥಿ, ನಕ್ಷತ್ರಗಳಲ್ಲಿಯೇ ನಾವು ಹಬ್ಬಗಳನ್ನು ಆಚರಿಸುತ್ತೇವೆ ಮತ್ತು ಅದರ ವಿಧಾನಗಳ ಬಗ್ಗೆಯೂ ವೈಜ್ಞಾನಿಕ, ಐತಿಹಾಸಿಕ, ಐಕ್ಯತೆ ಮೂಡಿಸುವ ಹಾಗೂ ಪರಂಪರೆಯ ಹಿನ್ನಲೆಯಿದೆ ಎಂಬುದು ಅವುಗಳ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿದಾಗ ಅರಿವಾಗುತ್ತದೆ. ಅಷ್ಟೆ ಅಲ್ಲ ಹಬ್ಬ ಮಾಡುವುದಕ್ಕಾಗಿ ನಾವು ಹಬ್ಬವನ್ನು ಆಚರಿಸುತ್ತಿಲ್ಲ ಎಂಬ ಸತ್ಯದ ಅರಿವಾಗುತ್ತದೆ.
ನಮ್ಮ ಸನಾತನ ಧರ್ಮದಲ್ಲಿ ಗಣಪತಿಗೆ ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ. ಗಣಪತಿಯನ್ನು ಬುದ್ಧಿ, ಜ್ಞಾನ, ವಿವೇಕ, ವಿನಯ ಹೀಗೆ ಗುಣಸಂಪನ್ನನಾಗಿಯೂ ಕಾಣುವುದರ ಜೊತೆಗೆ ಏಕದಂತನ ಪೂಜೆ ನಿರ್ಲಕ್ಷಿಸಿದರೆ, ಹೇಗೆ ನಮಗೆ ಒಳಿತಾಗುತ್ತದೆ? ಎಂಬ ಧ್ವನಿ ಸಂಕೇತವೇ ಗಣಪತಿಯ ಆರಾಧನೆ ಎಷ್ಟು ಮುಖ್ಯವಾದದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಆಗಲೇ ಲಂಬೋದರ ಎನ್ನುವ ಶಕ್ತಿಯ ದಿವ್ಯತೆಯ ಅರಿವಾಗುತ್ತದೆ.
ಪ್ರತಿವರ್ಷ ಭಾದ್ರಪದ ಶುಕ್ಲಪಕ್ಷ ಚತುರ್ಥಿಯ ದಿನದಂದು ಗಣಪತಿಯ ಹಬ್ಬವನ್ನು ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಭೂಮಿಯು ನೆನೆದು ಹಸನಾಗಿ, ಬೆಳೆದ ಫಸಲು ಸಂವೃದ್ಧಿಯಾಗಿ, ಹಚ್ಚಹಸಿರು ಎಲ್ಲೆಡೆ ಕಂಗೊಳಿಸುವ ಸುಸಂದರ್ಭವಾಗಿರುತ್ತದೆ. ಇಂತಹ ಸಮಯದಲ್ಲಿ ತಾಯಿ ಗೌರಿಯ ಜೊತೆಗೆ ಆಕೆಯ ಮಾನಸಪುತ್ರ, ಭವಿಷ್ಯವನ್ನು ರೂಪಿಸುವ ವಿನಾಯಕ ನಮ್ಮ ಭೂಮಿಗೆ ಬರುತ್ತಿದ್ದಾನೆ ಎನ್ನುವ ವಿಚಾರದಲ್ಲೂ ಅರ್ಥವಿದೆ, ಮಹತ್ವವಿದೆ. ಜಗನ್ಮಾತೆ ಎನಿಸಿದ ಪಾರ್ವತಿಯ ಮೈಬೆವರಿನಿಂದ ಹುಟ್ಟಿದವನು ನಮ್ಮ ಗಣಪ.
ಅಂದರೆ ಪ್ರಕೃತಿ ಮಾತೆ ಪಾರ್ವತಿ ಈ ಭೂಮಿ. ಈ ಭೂಮಿಯಿಂದ ಮಾಡಲ್ಪಡುವ ಮಣ್ಣಿನ ಮೂರ್ತಿಯ ಗಣಪತಿ ನಮ್ಮೆಲ್ಲರ ಶ್ರಮದ ಸಂಕೇತ. ಬೆಳೆಯುವ ಫಸಲು ಆಗಬಹುದು, ನಮ್ಮ ಇನ್ಯಾವುದೇ ರೂಪದ ದುಡಿಮೆಯಾಗಿರಬಹುದು, ಅದು ನಮ್ಮ ಕೈಗೆ ಎಟುಕಬೇಕಾದರೆ ಶ್ರಮವು ಫಲಕಾರಿಯಾಗಬೇಕಾದರೆ, ಭರವಸೆ ಎನ್ನುವ ಗಣಪತಿಯನ್ನು ಆರಾಧಿಸುವುದು, ನಮ್ಮ ಪೂರ್ವಿಕರ ನಂಬಿಕೆಯಾಗಿ ಗಣೇಶ ಚತುರ್ಥಿಯ ಹಬ್ಬದ ಆಚರಣೆ ಪರಂಪರೆಯಾಗಿ ನಡೆದುಕೊಂಡು ಬಂದಿದೆ.
ಆದುದರಿಂದಲೇ ಮಳೆಗಾಲದಲ್ಲಿ ಮಳೆಯ ಮೋಡ ತುಂಬಿ ಆಕಾಶವು ಕಪ್ಪಾಗಿರಬೇಕೇ ಹೊರತು, ಬೆಳ್ಳಗಿರುವ ಆಕಾಶದಲ್ಲಿ ಚಂದ್ರ ಕಾಣಿಸಿಕೊಳ್ಳುವಂತಾದರೆ, ಆ ಮಾಸ, ಆ ಕಾಲ ಮಳೆಯಿಂದ ವಂಚಿತವಾಗಿ, ಫಸಲಿಗೆ ಧಕ್ಕೆಯಾದರೆ, ಅದು ಅಕಾಲವಲ್ಲದೆ ಮತ್ತಿನ್ನೇನು ಆಗಲು ಸಾಧ್ಯ? ಹಾಗಾಗಿಯೇ ಶ್ರಮಿಕ ರೂಪದ ಸಂಕೇತದ ಗಣೇಶ. ಗಣೇಶ ಹಬ್ಬದಂದು ಚಂದ್ರನನ್ನು ಕಂಡರೆ, ಅದು ಅಶುಭದ ಸಂಕೇತವೆಂದು ಅಂದು ಯಾರು ಚಂದ್ರನನ್ನು ಕಾಣಲು ಯಾರೂ ಇಷ್ಟಪಡುವುದಿಲ್ಲ.
ಇನ್ನು ಇಂತಹ ಗಣಪತಿಯನ್ನು ಸೃಷ್ಟಿಸಿದ ಪ್ರಕೃತಿ ಮಾತೆ ಪಾರ್ವತಿಯು ಭೂಮಿಗೆ ಬರುವುದು ಸಹ, ಜನರ ಸುಖ, ನೆಮ್ಮದಿ, ಸೌಭಾಗ್ಯವನ್ನು ಕಾಣುವುದಕ್ಕಾಗಿಯೇ. ಆದ್ದರಿಂದ ಯಾವುದೇ ತಾರತಮ್ಯವಿಲ್ಲದೆ, ಬೇಧಬಾವವಿಲ್ಲದೆ, ಎಲ್ಲಾ ವರ್ಗದ ಜನರು ಸಹ ಪೂಜಿಸಿ, ಬರ ಮಾಡಿಕೊಳ್ಳುವ, ಆರಾಧಿಸುವ ಹಬ್ಬವೇ ಗಣೇಶ ಚತುರ್ಥಿ ಎನಿಸಿದೆ. ಗಣೇಶ ಹಬ್ಬದ ದಿನದಂದು, ಗಣಪತಿ ವೃತವನ್ನು ಆಚರಿಸುವವರು, ಪುರೋಹಿತರ ಮುಖಾಂತರವಾಗಲಿ ಅಥವಾ ತಾವೇ ಸ್ವತಃ ಮಾಡುವವರಾಗಲೀ, ‘ಸಂಕಲ್ಪ’ ಮಾಡಬೇಕು.
ಮಣ್ಣಿನ ಗಣಪತಿಗೆ ವಿಶೇಷ ಪೂಜೆ- ಪುನಸ್ಕಾರ ಮಾಡಿ, ಭಕ್ಷ್ಯ ಭೋಜ್ಯಗಳಿಂದ, ಗೀತ ಗಾಯನಗಳಿಂದ ಆರಾಧಿಸಿ, ನಂತರ ಖುಷಿ ಖುಷಿಯಾಗಿ ಗಣಪತಿ ಭಪ್ಪಾ ಮೋರಿಯಾ ಎಂದು ನೀರಿನಲ್ಲಿ ವಿಸರ್ಜನೆ ಮಾಡುವುದರಲ್ಲೂ ಬದುಕಿನ ರಹಸ್ಯ ಅಡಗಿದೆ. ನಮ್ಮ ಬದುಕು ಸಹ ಅಷ್ಟೆ, ಈ ದೇಹ ಪಂಚಭೂತಗಳಿಂದ ಆಗಿದ್ದು, ಇರುವಷ್ಟು ದಿನ ಖುಷಿಯಾಗಿ ಬದುಕಿ ನಂತರ ಮಣ್ಣಿನಲ್ಲಿ ಲೀನವಾಗುವಂತೆ, ಮಣ್ಣಿಂದ ಕಾಯ ಮಣ್ಣಿಗೆ ಎನ್ನುವ ಸತ್ಯವನ್ನು ಈ ಗಣೇಶ ಹಬ್ಬ ಧ್ವನಿಸುತ್ತದೆ.
ಗಣಪತಿಯ ಮಣ್ಣಿನ ವಿಗ್ರಹದಲ್ಲಿ, ಪಂಚಭೂತವೆನಿಸಿದ ಭೂಮಿ, ಜಲ, ಅಗ್ನಿ, ವಾಯು ಹಾಗೂ ಆಕಾಶ ತತ್ವವು ಅಡಗಿದೆ. ನಾವು ಅಷ್ಟೆ, ಪಂಚಭೂತಗಳಿಂದ ಹುಟ್ಟಿ, ಪಂಚಭೂತಗಳಲ್ಲಿಯೇ ನಮ್ಮ ದೇಹ ಲೀನವಾಗುತ್ತದೆ. ಲಂಬೋದರನ ಪ್ರತಿ ಅಂಗಾಂಗಗಳೂ ಸಹ ಜ್ಞಾನ, ಬುದ್ದಿವಂತಿಕೆ, ಏಕಾಗ್ರತೆ, ದಕ್ಷತೆಯನ್ನು ಪ್ರತಿ ಪಾದಿಸುತ್ತದೆ. ಅವನ ಆಯುಧಗಳಾದ ಸಹ ಪಾಶ, ಅಂಕುಶ, ಸಂಯಮದೊಂದಿಗೆ ಆಧ್ಯಾತ್ಮಿಕ ಮಾರ್ಗದತ್ತ ಸೂಚಿಸುವ ಸಂಕೇತಗಳಾಗಿದೆ.
ಗಣಪತಿಯ ಕಥೆಗಳು ಸಹ ಹೇಗೆ ತಂದೆ- ತಾಯಿಯರಿಗೆ ಗೌರವ ನೀಡಬೇಕು ಎಂಬುದನ್ನು ಪ್ರತಿಪಾದಿಸಿದರೆ, ಅವನ ನಡೆ-ನುಡಿಯು ಎಂತೆಂತಹ ಸಂದರ್ಭದಲ್ಲಿ ಜಾಣ್ಮೆ, ವಿವೇಕ, ಸಹನೆಯನನು ಬಳಸಬೇಕು ಎಂಬುದನ್ನು ಕಥೆಯ ರೂಪದಲ್ಲಿ ಸ್ವಾರಸ್ಯಕರವಾಗಿ ನಿರೂಪಿಸಲಾಗಿದೆ. ಇಲಿಯು ವಾಹನವೆನಿಸಿದರೂ, ಅದರಲ್ಲೂ ವಿಶೇಷ ಅರ್ಥವಿದೆ. ಇಲಿಯೆಂಬ ವಾಹನ ಚಂಚಲವೆನ್ನುವ ಆಸೆಗಳಾಗಿದ್ದು, ಅದನ್ನು ನಾವು ಹಿಡಿತದಲ್ಲಿಟ್ಟುಕೊಂಡು ಸವಾರಿ ಮಾಡಬೇಕು. ಕತ್ತಲೆಯಂತಹ ಅಜ್ಞಾನದಲ್ಲಿ ಕಣ್ಣರಳಿಸಿ ಓಡುವ ಇಲಿಯಂತೆ, ಅಂಧಕಾರದಿಂದ ಹೊರಬಂದು ಬೆಳಕಿನತ್ತ ಬರುವ ಸೂಚನೆಯನ್ನು ಕೂಡುತ್ತದೆ.
ಹೀಗೆ ಗಣಪತಿಯು ವಿಘ್ನನಿವಾರಕನಾಗಿಯೂ, ಸಕಲ ಗುಣ ಸಂಪನ್ನನಾಗಿ ಸಮಷ್ಠಿ ರೂಪದಲ್ಲಿ ನಮಗೆ ಕಾಣುವುದರಿಂದಲೇ ಚಿಕ್ಕಮಕ್ಕಳಿಂದ ವೃದ್ಧರವರೆಗೂ, ಪಾಮರರಿಂದ ಪಂಡಿತರವರೆಗೂ, ಯಾವುದೇ ಬೇಧಬಾವವಿಲ್ಲದೆ ಮೆಚ್ಚುಗೆಯಾಗುತ್ತಾನೆ. ಎಲ್ಲರಿಗೂ ಪ್ರಿಯವಾಗುತ್ತಾನೆ. ‘ಭಕ್ತಾನಾಂ ಕಂಪಿನಂ ದೇವಂ ಜಗತ್ಕಾರಣಮಚ್ಯುತಂ’ ಎನ್ನುವ ನಂಬಿಕೆ, ಶ್ರದ್ಧೆಯಲ್ಲಿ ಗಣೇಶನ ಆರಾಧನೆ, ಪೂಜೆಯಿದೆ.
- ಮಾರ್ಪಳ್ಳಿ ಆರ್.ಮಂಜುನಾಥ್, ಅಂಕಣಕಾರರು
(ಆಹಾರ ಇಲಾಖೆ ನಿವೃತ್ತ ಉಪ ನಿರ್ದೇಶಕ ಹಾಗೂ ಸಾಹಿತಿಗಳು)