ಬೆಂಗಳೂರು, ಆ.29 www.bengaluruwire.com : ರಾಜಧಾನಿ ಬೆಂಗಳೂರಿನಾದ್ಯಂತ ಎಲ್ಲೆಡೆ ವ್ಯಾಪಕ ಮಳೆಯಾಗುತ್ತಿದೆ. ನಾಳೆಯೂ ಭಾರೀ ಮಳೆಯಾಗುವ ಸಾಧ್ಯೆತೆಯ ಹಿನ್ನಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯಾದ್ಯಂತ ಮಂಗಳವಾರ ಎಲ್ಲಾ ಶಾಲಾ- ಕಾಲೇಜುಗಳಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ರಜೆ ಘೋಷಿಸಿದ್ದಾರೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಮುನ್ಸೂಚನೆಯಂತೆ ಮಂಗಳವಾರ ಬೆಳಗ್ಗೆ 8:30ರ ತನಕ ಬಿಬಿಎಂಪಿ ವ್ಯಾಪ್ತಿಯ ಎಲ್ಲ 8 ವಲಯಗಳಲ್ಲಿ 64.5 ಮಿ.ಮೀ ನಿಂದ 204.4 ಮಿ.ಮೀ ವ್ಯಾಪಕವಾಗಿ ಭಾರೀ ಮಳೆಯಾಗಲಿದೆಯೆಂದು ತಿಳಿಸಿದೆ.
ನಾಳೆಯಿಂದ ಎರಡು ದಿನಗಳ ಕಾಲ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅದರಂತೆ ಸೋಮವಾರ ಬೆಳಗ್ಗೆಯಿಂದಲೇ ಮೋಡ ಕವಿದು ಕತ್ತಲೆಯಾದಂತೆ ತೋರುತ್ತಿದ್ದ ಬೆಂಗಳೂರಿನಲ್ಲಿ ಮಧ್ಯೆ ಸ್ವಲ್ಪ ಹೊತ್ತು ಮಳೆಯು ಬಿಡುವು ನೀಡಿದ್ದರೂ ಸಂಜೆಯ ಮೇಲೆ ಎಡಬಿಡದೆ ಮಳೆಯಾಗುತ್ತಿರುವುದರಿಂದ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಮಲ್ಲೇಶ್ವರ ಸೇರಿದಂತೆ ಕೆಲವೆಡೆ ಮರಗಳು, ಲೈಟ್ ಕಂಬಗಳು ಧರೆಗೆ ಉರುಳಿ ಬಿದ್ದು ಹಾನಿಯಾದ ಬಗ್ಗೆ ಬಿಬಿಎಂಪಿ ನಿಯಂತ್ರಣ ಕಚೇರಿಗೆ ದೂರುಗಳು ಬಂದಿವೆ.
ಎರಡು ವರ್ಷಗಳಿಂದ ಕರೋನಾ ಸೋಂಕು, ಲಾಕ್ ಡೌನ್ ಕಾರಣಕ್ಕೆ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಿಸಿರಲಿಲ್ಲ. ಈ ಬಾರಿಯಾದರೂ ತಮ್ಮ ತಮ್ಮ ಊರುಗಳಿಗೆ ತೆರಳಿ ಹಬ್ಬ ಆಚರಿಸಲೆಂದು ಮೆಜಿಸ್ಟಿಕ್, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ಸ್ಟ್ಯಾಂಡ್, ಶಾಂತಿನಗರ ಬಸ್ ನಿಲ್ದಾಣದ ಮೂಲಕ ಊರಿನತ್ತ ಮುಖ ಮಾಡಲು ಹೊರಟವರಿಗೆ ರಸ್ತೆಯಲ್ಲಿ ಮಳೆಯ ಕಿರಿಕಿರಿ ಜೊತೆಗೆ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಯಿತು.
ವಂಡರ್ ಲಾ ಬಳಿಯ ಬೆಂಗಳೂರು – ಮೈಸೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯಲ್ಲಂತೂ ನೀರು ನಿಂತು ವಾಹನಗಳ ಓಡಾಟಕ್ಕೆ ಭಾರೀ ತೊಂದರೆಯಾಗಿದೆ.