ಬೆಂಗಳೂರು, ಆ.17 www.bengaluruwire.com : ಕಮಲ ಪಕ್ಷ ಕರ್ನಾಟಕದಲ್ಲಿ ಪಕ್ಷದ ಸಂಘಟನೆಯು ಹಳಿ ತಪ್ಪುತ್ತಿರುವ ನಡುವೆಯೇ ದೆಹಲಿ ನಾಯಕರು ಸಕಾಲಕ್ಕೆ ಸೂಕ್ತ ನಿರ್ಧಾರ ಕೈಗೊಂಡು, ಬಿಜೆಪಿ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪನವರಿಗೆ ಕೇಂದ್ರೀಯ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದೆ.
ಬಿಜೆಪಿ ಪಕ್ಷವನ್ನು ದಶಕಗಳಿಂದ ಕಟ್ಟಿದ್ದ ಬಿ.ಎಸ್.ಯಡಿಯೂರಪ್ಪ ಪಕ್ಷವು ತಮ್ಮನ್ನು ಮೂಲೆಗುಂಪು ಮಾಡಿದ್ದಕ್ಕೆ ಪ್ರತಿಯಾಗಿ ತಮ್ಮ ಸ್ವಕ್ಷೇತ್ರ ಶಿಕಾರಿಪುರವನ್ನು ವಿಜಯೇಂದ್ರ ಅವರಿಗೆ ಬಿಟ್ಟುಕೊಟ್ಟು ರಾಜಕೀಯ ಸನ್ಯಾಸ ಸ್ವೀಕರಿಸುವ ಸಂದೇಶ ನೀಡಿದ್ದರು. ಅದಕ್ಕೆ ಸರಿಯಾಗಿ ರಾಜ್ಯ ಬಿಜೆಪಿಯಲ್ಲಿ ನಿರಂತರವಾಗಿ ಆಗುತ್ತಿರುವ ಇರುಸು ಮುರುಸು- ತಲ್ಲಣಗಳನ್ನು ಅರಿತ ಹೈಕಮಾಂಡ್ ರಾಜ್ಯ ಬಿಜೆಪಿಗೆ ಬಲ ತುಂಬಲು ಹಾಗೂ ಬಿ.ಎಸ್.ಯಡಿಯೂರಪ್ಪನವರ ಅನುಭವ, ಸಂಘಟನೆ ಬಳಸಿಕೊಳ್ಳದಿದ್ದರೆ ಮುಂದೆ ಬರುವ ಗಂಡಾಂತರವನ್ನು ಅರಿತು ಬಿಜೆಪಿ ರಾಷ್ಟ್ರಮಟ್ಟದ ಉನ್ನತಾಧಿಕಾರ ಸಮಿತಿಯಾಗಿರುವ ಕೇಂದ್ರೀಯ ಸಂಸದೀಯ ಮಂಡಳಿ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪನವರಿಗೆ ಮಹತ್ವದ ಸ್ಥಾನವನ್ನು ನೀಡಿದೆ.
ಘಟಾನುಘಟಿ ನಾಯಕರ ನಡುವೆ ಬಿಎಸ್ ವೈ :
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ನೇತೃತ್ವದ 11 ಸದಸ್ಯರ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪರಿಗೆ ಈ ಜವಾಬ್ದಾರಿ ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೀಗೆ ಘಟಾನುಘಟಿ ನಾಯಕರುಗಳಿರುವ ತಂಡದಲ್ಲಿ ಬಿ.ಎಸ್.ಯಡಿಯೂರಪ್ಪ ಸ್ಥಾನ ಪಡೆದಿದ್ದಾರೆ. ಈ ಮೂಲಕ ಕೆಲವು ತಿಂಗಳಲ್ಲೇ ನಡೆಯಲಿರುವ ಬೆಂಗಳೂರಿನ ಬಿಬಿಎಂಪಿ ಹಾಗೂ ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪನವರ ನಿರ್ಧಾರ ನಿರ್ಣಾಯಕವಾಗಿದೆ ಎಂಬ ಸೂಚನೆಯನ್ನು ರಾಜ್ಯದ ನಾಯಕರಿಗೆ ನೀಡಿದೆ.
ಪಕ್ಷದ ಸಂಸದೀಯ ಮಂಡಳಿಯಲ್ಲಿ ಬಿಎಸ್ ವೈಗೆ ಸ್ಥಾನ ಕಲ್ಪಿಸುವ ಮೂಲಕ ಹೈಕಮಾಂಡ್ ಪಕ್ಷಕ್ಕಾಗಲಿದ್ದ ಸಾಕಷ್ಟು ಅಪಾಯವನ್ನು ತಪ್ಪಿಸಿದಂತಾಗಿದೆ. ಅಲ್ಲದೆ ತಮ್ಮನ್ನು ಹಾಗೂ ತಮ್ಮ ಬೆಂಬಲಿಗರನ್ನು ಮೂಲೆಗುಂಪು ಮಾಡಿದ್ದಾರೆಂದು ಮುನಿಸಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರಬಲ ರಾಜಕೀಯ ಅಖಾಡ ಸಿಕ್ಕಂತಾಗಿದೆ. ಈ ಇಳಿಯ ವಯಸ್ಸಿನಲ್ಲೂ ಪಕ್ಷದ ಸಂಘಟನೆಯ ಬಗ್ಗೆ ಛಾತಿ ಹೊಂದಿರುವ ಬಿ.ಎಸ್.ಯಡಿಯೂರಪ್ಪನವರಿಗೆ ಸ್ಥಾನ ನೀಡಿ ಆ ಮೂಲಕ ರಾಜ್ಯ ಬಿಜೆಪಿಯನ್ನು ಮುಂದಿನ ಚುನಾವಣೆಗೆ ಸಂಘಟಿಸುವ ಕ್ಯಾಲುಕೇಟವ್ ನಡೆಯನ್ನು ಪಕ್ಷದ ಹೈಕಮಾಂಡ್ ಮಾಡಿದಂತಾಗಿದೆ. ಹೊಸದಾಗಿ ಪಾರ್ಲಿಮೆಂಟರಿ ಬೋರ್ಡ್ ಸದಸ್ಯರಾಗಿ ಆಯ್ಕೆಯಾದ ವಿಷಯ ಹೊರಬೀಳುತ್ತಿದ್ದಂತೆ ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್.ವೈ ಆಪ್ತರು, ಸಚಿವ ಸಂಪುಟದ ಸದಸ್ಯರು ಅವರ ಬೆಂಗಳೂರಿನ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ :
2024ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಹಾಗೂ ಮುಂದಿನ ವರ್ಷ ದೇಶದಲ್ಲಿನ ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಪಕ್ಷದ ಟಿಕೆಟನ್ನು ಪಕ್ಷದ ಸಂಸದೀಯ ಮಂಡಳಿಯ ಸಮಿತಿಯು ನೀಡುತ್ತದೆ. ಇಂತಹ ಸಂಸದೀಯ ಮಂಡಳಿಯಲ್ಲಿ ರಾಜ್ಯದಿಂದ ಬಿ.ಎಲ್.ಸಂತೋಷ್ ಈಗಾಗಲೇ ಸ್ಥಾನಪಡೆದಿದ್ದಾರೆ. ಇದೀಗ ಇಂತಹ ಮಹತ್ವದ ಹುದ್ದೆಯನ್ನು ಬಿ.ಎಸ್.ಯಡಿಯೂರಪ್ಪನವರಿಗೆ ನೀಡಿ, ರಾಜ್ಯದಲ್ಲಿ ಪ್ರಬಲ ಹಾಗೂ ಬಹುಸಂಖ್ಯಾತರಾಗಿರುವ ಲಿಂಗಾಯತ ಸಮುದಾಯಕ್ಕೆ ಹಾಗೂ ಬಿ.ಎಸ್.ವೈ ಕಾರ್ಯಕರ್ತರಿಗೆ ಹುರುಪು ತುಂಬವ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಜಾಣ ನಡೆಯನ್ನು ಹೈಕಮಾಂಡ್ ಅನುಸರಿಸಿದೆ.
ಈ ಬೆಳವಣಿಗೆಯಿಂದ ಪಕ್ಷವನ್ನು ಕಾಡುತ್ತಿದ್ದ ಸಂಘಟನೆ ಕೊರತೆ ನೀಗಿಸಲಿದ್ದಾರೆ. ಈ ಇಳಿವಯಸ್ಸಿನಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡು ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎನ್ನುವುದು ಹೈಕಮಾಂಡ್ ಲೆಕ್ಕಾಚಾರ. ಬಿಎಸ್ ವೈ ವ್ಯಕ್ತಿತ್ವ, ಎದುರಾಳಿಗಳಿಗೆ ಪಟ್ಟು ಹಾಕುವ ಚಾಕಚಕ್ಯತೆ, ಎಂತಹ ಸವಾಲುಗಳು ಬಂದರೂ ಅದನ್ನು ಎದುರಿಸುವ ರಾಜಕೀಯ ಅನುಭವವನ್ನು ಮತ್ತೊಮ್ಮೆ ಗುರುತಿಸಿರುವ ಹೈಕಮಾಂಡ್ ಸಂಸದೀಯ ಮಂಡಳಿ ಸದಸ್ಯ ಸ್ಥಾನವನ್ನು ನೀಡಿದೆ ಎಂಬ ಲೆಕ್ಕಾಚಾರಗಳು ಕೇಳಿಬಂದಿದೆ.
ಫೀನಿಕ್ಸ್ ನಂತೆ ಮೇಲೆದ್ದು ಕುಳಿತ ಮಾಜಿ ಸಿಎಂ :
ಯಡಿಯೂರಪ್ಪನವರಿಗೆ ಇದೀಗ ಸಂಸದೀಯ ಮಂಡಳಿಯ ಸದಸ್ಯ ಸ್ಥಾನ ದೊರೆಯುತ್ತಿದ್ದಂತೆ ಪಕ್ಷದ ನಾಯಕರೆಲ್ಲರೂ ನಾಮುಂದು ತಾಮುಂದು ಎಂದು ಅವರ ಮನೆಗೆ ಎಡತಾಕಿ ಶುಭ ಹಾರೈಕೆಗಳ ಹೊಳೆಯನ್ನೇ ಹರಿಸುತ್ತಿದ್ದಾರೆ. ಅಧಿಕಾರ ಬೇಕಾದಾಗ ತಮ್ಮನ್ನು ಬೇಕಾದಂತೆ ಬಳಸಿಕೊಂಡು ನಂತರ ತಮ್ಮನ್ನು ದೂರ ಮಾಡಿದರೆಂಬ ಅಳುಕು ಬಿ.ಎಸ್.ವೈ ಮನದ ಮೂಲೆಯಲ್ಲಿ ಕಾಡಿದ್ದಂತು ಸತ್ಯ. ಹಾಗಾಗಿ ಯಾವುದರ ಗೊಡವೆಯೇ ಬೇಡವೆಂದು ಸುಮ್ಮನಿದ್ದರು. ಸ್ವಪಕ್ಷದಲ್ಲಿದ್ದ ಹಿತಶತ್ರುಗಳು ಕೂಡ ಯಡಿಯೂರಪ್ಪನವರ ಯುಗ ಮುಗಿಯಿತು ಎಂದು ಹೇಳುತ್ತಿರುವಾಗಲೇ ರಾಜ್ಯದಲ್ಲಿ ಹೋರಾಟ ಮಾಡಿಕೊಂಡೇ ರಾಜಕೀಯ ಭವಿಷ್ಯ ಕಂಡುಕೊಂಡ ಯಡಿಯೂರಪ್ಪ ಇದೀಗ ಫೀನಿಕ್ಸ್ ನಂತೆ ಮೇಲೆದ್ದು ಕೂತಿದ್ದಾರೆ.
ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಯಲ್ಲೂ ಪಕ್ಷದ ಪ್ರಣಾಳಿಕೆ, ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆಯಂತಹ ಮಹತ್ವದ ನಿರ್ಧಾರಗಳಲ್ಲಿ ಬಿ.ಎಸ್.ಯಡಿಯೂರಪ್ಪನವರ ಮಾತು ನಿರ್ಣಾಯಕವಾಗಲಿದೆ. ಹೀಗಾಗಿ ಇನ್ನು ಮುಂದೆ ಗೆದ್ದತ್ತಿದ ಬಾಲ ಹಿಡಿದಂತೆ ರಾಜಕೀಯ ಭವಿಷ್ಯಕ್ಕಾಗಿ ಅವರ ಮನೆ ಮುಂದೆ ಮಾರುದ್ದ ಸಾಲು ಸೃಷ್ಟಿಯಾದರೆ ಆಶ್ಚರ್ಯಪಡಬೇಕಿಲ್ಲ. ಅಧಿಕಾರ ಇದ್ದಾಗ ಯಾರು ಯಾವ ರೀತಿ ನೆಡೆಸಿಕೊಂಡರು ಎಂಬುದನ್ನು ಅರಿತು, ಯಡಿಯೂರಪ್ಪನವರು ಮುಂದೆ ಹೆಜ್ಜೆ ಇಟ್ಟರೆ ಉತ್ತಮ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ, ರಾಜಕೀಯ ಪಂಡಿತರಿಂದ ವ್ಯಕ್ತವಾಗಿದೆ.