ಬೆಂಗಳೂರು, ಆ.16 www.bengaluruwire.com : ರಾಜಧಾನಿಯಲ್ಲಿ ತಲೆ ಮೇಲೊಂದು ಸೂರು ಪಡೆಯಲು ಇನ್ನಿಲದ ಕಸರತ್ತು ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದವರಿಗೊಂದು ಖುಷಿಯ ಸಂಗತಿ. ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಒಂದು ಬಿಎಚ್ ಕೆ ಫ್ಲಾಟ್ ಗಳಿಗೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳು ಪಾವತಿಸಬೇಕಾದ ನಿಗದಿತ ಪ್ರಾರಂಭಿಕ ಠೇವಣಿಯನ್ನು ರಾಜ್ಯ ಸರ್ಕಾರ ಒಂದು ಲಕ್ಷ ರೂ. ನಿಂದ 50 ಸಾವಿರ ರೂ.ಗಳಿಗೆ ಇಳಿಕೆ ಮಾಡಿದೆ.
ಆದರೆ ನಿಗಧಿತ ಪ್ರಾರಂಭಿಕ ಠೇವಣಿ ಪರಿಷ್ಕರಣೆಯು ಭವಿಷ್ಯದಲ್ಲಿ ಒಂದು ಬಿಎಚ್ ಕೆ ಫ್ಲಾಟ್ ಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಅನ್ವಯವಾಗುತ್ತದೆ.
ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಮನೆ ಅಥವಾ ಫ್ಲಾಟ್ ಆಯ್ಕೆ ಮಾಡಿಕೊಳ್ಳಲು ನಿಗಧಿಪಡಿಸಿರುವ 1 ಲಕ್ಷ ರೂ. ಆರಂಭಿಕ ಠೇವಣಿ ಪಾವತಿಸುವುದು ಕಷ್ಟಕರವಾಗುತ್ತಿದೆ ಎಂದು ಹಲವು ನಾಗರೀಕರು ಹಾಗೂ ನಾಗರೀಕ ಸಂಘ ಸಂಸ್ಥೆಗಳು, ಆಟೊ ಚಾಲಕರು ಸೇರಿದಂತೆ ವಿವಿಧ ದುಡಿಯುವ ವರ್ಗ ಸರ್ಕಾರಕ್ಕೆ ಮನವಿ ಮಾಡಿದ್ದವು.
ಅಲ್ಲದೆ 2017-18ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಮುಖಾಂತರ ವಸತಿ ಇಲಾಖೆಯು ಆನ್ ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿ ಆಯ್ಕೆ ಮಾಡಲಾದ ಫಲಾನುಭವಿಗಳ ಪಟ್ಟಿಯನ್ನು ಹಾಗೂ ಇಲ್ಲಿಯವರೆಗೂ ಆನ್ ಲೈನ್ ಮುಖಾಂತರ ಅರ್ಜಿ ಆಹ್ವಾನಿಸಿ ಆಯ್ಕೆ ಮಾಡಲಾಗಿರುವ ಫಲಾನುಭವಿಗಳ ಪಟ್ಟಿಯನ್ನು ಹಾಗೂ ಇಲ್ಲಿಯವರೆಗೂ ಆನ್ ಲೈನ್ ಮುಖಾಂತರ ಸ್ವೀಕರಿಸಿರುವ ಎಲ್ಲಾ ಅರ್ಜಿಗಳನ್ನು ಕಾರಣಾಂತರಗಳಿಂದ ರದ್ದುಗೊಳಿಸಿತ್ತು.
ಆದರೆ 23 ಆಗಸ್ಟ್ 2021 ರಿಂದ ಹೊಸದಾಗಿ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಲು ಆರಂಭಿಸಿತ್ತು. ಆದರೂ ಹೆಚ್ಚಿನ ಅರ್ಜಿಗಳು ಬಾರದ ಕಾರಣ, ಸರ್ಕಾರ ವಸತಿ ರಹಿತ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗಾಗಿ ನಿಗದಿತ ಪ್ರಾರಂಭಿಕ ಠೇವಣಿ ಮೊತ್ತವನ್ನು ಇನ್ನು ಮುಂದೆ ಅರ್ಜಿ ಸಲ್ಲಿಸುವವರಿಗೆ ಒಂದು ಲಕ್ಷ ರೂ.ನಿಂದ 50 ಸಾವಿರ ರೂ.ಗಳಿಗೆ ಇಳಿಕೆ ಮಾಡಿದೆ.
‘ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗಾಗಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಬೆಂಗಳೂರು ನಗರ ಎಂಬ ಭೌಗೋಳಿಕ ವ್ಯಾಪ್ತಿಯನ್ನು ಬೆಂಗಳೂರು ನಗರ ಜಿಲ್ಲೆ ಎಂಬುದಾಗಿ ವಿಸ್ತರಿಸಿ, ಫಲಾನುಭವಿಗಳ ವಾರ್ಷಿಕ ಆದಾಯ ಮಿತಿಯನ್ನು 87,500 ರೂ.ನಿಂದ 3 ಲಕ್ಷಗಳಿಗೆ ಏರಿಕೆ ಮಾಡಲಾಗಿದೆ. ಇದೀಗ ಫ್ಲಾಟ್ ಆಯ್ಕೆ ಮಾಡಿಕೊಳ್ಳಲು ನಿಗದಿಪಡಿಸಲಾಗಿರುವ 1 ಲಕ್ಷ ರೂ. ಆರಂಭಿಕ ಠೇವಣಿಯನ್ನು ಬಡ ವಸತಿರಹಿತ ಅರ್ಜಿದಾರರಿಗೆ ಹೊರೆಯಾಗದಂತೆ 50 ಸಾವಿರ ರೂ.ಗಳಿಗೆ ಪರಿಷ್ಕರಿಸಲಾಗಿದೆ. ಇದರ ಲಾಭವನ್ನು ಅರ್ಹ ನಾಗರೀಕರು ಸದುಪಯೋಗಪಡಿಸಿಕೊಳ್ಳಬೇಕು.’
ವಿ.ಸೋಮಣ್ಣ, ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರು
ಯೋಜನೆಯ ಸದ್ಯದ ಸ್ಥಿತಿಗತಿಯೇನು?
ಆಗಸ್ಟ್ 2021ರಿಂದ ಹೊಸದಾಗಿ ಬಹು ಮಹಡಿ ಮನೆಗಳ ಬೇಡಿಕೆಗಾಗಿ ಆನ್ ಲೈನ್ ಮುಖಾಂತರ ಇಲ್ಲಿಯ ತನಕ 44,366 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈತನಕ 8,709 ಅರ್ಹ ಫಲಾನುಭವಿಗಳು ನಿಗಧಿಪಡಿಸಿರುವ ಪ್ರಾರಂಭಿಕ ಮೊತ್ತವನ್ನು ಪಾವತಿಸಿದ್ದಾರೆ. ಈ ಪೈಕಿ 6,427 ಅರ್ಹ ಫಲಾನುಭವಿಗಳು ಆನ್ ಲೈನ್ ಮುಖಾಂತರ ಒಂದು ಬಿಎಚ್ ಕೆ ಫ್ಲಾಟ್ ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ 79.37 ಕೋಟಿ ರೂ. ವಂತಿಗೆಯನ್ನು ಫಲಾನುಭವಿಗಳು ಕಟ್ಟಿದ್ದಾರೆ.
ಏನಿದು ಒಂದು ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆ ?
ಬೆಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದವರಿಗಾಗಿ ವಸತಿ ಕಲ್ಪಿಸಲು ಒಂದು ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ‘ವಾಜಪೇಯಿ ನಗರ ವಸತಿ ಯೋಜನೆ’ ಹಾಗೂ ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ)- ಸರ್ವರಿಗೂ ಸೂರು’ ಯೋಜನೆಯ ಅನುದಾನವನ್ನು ಸಂಯೋಜಿಸಿಕೊಂಡು ಹಾಗೂ ಫಲಾನುಭವಿಗಳ ವಂತಿಕೆಯೊಂದಿಗೆ ಮತ್ತು ಯೋಜನೆಯಡಿ ನಿರ್ಮಿಸುವ ನಿವೇಶನ ಅಥವಾ ಬಹುಮಹಡಿ ಮನೆಗಳ ಅಥವಾ ಉಳಿಕೆ ಜಮಿನನ್ನು ಮಾರಾಟ ಮಾಡಿ ಬರುವ ಮೊತ್ತದಿಂದ ವಸತಿ ಯೋಜನೆಯನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.
ಯಾರು ಯಾರಿಗೆ ಎಷ್ಟೆಷ್ಟು ಸಬ್ಸೀಡಿ ಲಭಿಸಲಿದೆ?
ಒಂದು ಬಿಎಚ್ ಕೆ ಫ್ಲಾಟ್ ಗೆ ಒಟ್ಟಾರೆ 10.60 ಲಕ್ಷ ರೂ.ಗಳಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರವು ಪ್ರತಿ ಮನೆಗೆ 1.50 ರೂ. ನೀಡಿದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಪ್ರತಿ ಮನೆಗೆ ರಾಜ್ಯ ಸರ್ಕಾರವು 2 ಲಕ್ಷ ರೂ.ಗಳನ್ನು ಸಹಾಯಧನ ನೀಡುತ್ತದೆ. ಸಾಮಾನ್ಯ ವರ್ಗದವರ ಪ್ರತಿ ಮನೆಗೆ 1.20 ಲಕ್ಷ ರೂ. ನೀಡುತ್ತದೆ. ಅಲ್ಲಿಗೆ ಎಸ್ ಸಿ ಅಥವಾ ಎಸ್ ಟಿ ಸಮುದಾಯದ ಫಲಾನುಭವಿ 7.10 ಲಕ್ಷ ರೂ. ಕಟ್ಟಬೇಕು. ಸಾಮಾನ್ಯ ವರ್ಗ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ಫಲಾನುಭವಿಯಾದರೆ ತನ್ನ ಕೈಯಿಂದ 7.90 ಲಕ್ಷ ರೂ.ಗಳನ್ನು ಕಟ್ಟಬೇಕಾಗುತ್ತದೆ.
ಜಿ+14 ವಸತಿ ಸಂಕೀರ್ಣದಲ್ಲಿ ವಿವಿಧೆಡೆ 46,499 ಫ್ಲಾಟ್ ಗಳ ನಿರ್ಮಾಣ :
ಮೊದಲ ಹಂತದಲ್ಲಿ ಜಿ+14 ಮಹಡಿಗಳವರೆಗಿನ 46,499 ಫ್ಲಾಟ್ ಗಳ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಪೈಕಿ 38,403 ಒಂದು ಬಿಎಚ್ ಕೆ ಫ್ಲಾಟ್ ಗಳಾಗಿದ್ದರೆ, 8,096 ಎರಡು ಬಿಎಚ್ ಕೆ ಫ್ಲಾಟ್ ಗಳಾಗಿದೆ. 5,035.35 ಕೋಟಿ ರೂ.ಗಳ ಯೋಜನೆಗೆ ಗುತ್ತಿಗೆದಾರರರೊಂದಿಗೆ ಕರಾರು ಮಾಡಿಕೊಂಡು ವಸತಿ ಇಲಾಖೆಯು ಕಾರ್ಯಾದೇಶ ನೀಡಿದೆ. ವಸತಿ ಸಮುಚ್ಛಯ ನಿರ್ಮಾಣ ಕಾರ್ಯದ ಪೈಕಿ 42,334 ಮನೆಗಳ ನಿರ್ಮಾಣ ಕಾಮಗಾರಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಇದಕ್ಕಾಗಿ ವಸತಿ ಇಲಾಖೆಯು ಗುತ್ತಿಗೆದಾರರಿಗೆ ವಿವಾದ ರಹಿತ 313 ಎಕರೆ ವಿಸ್ತೀರ್ಣದ ಭೂಮಿಯನ್ನು ಹಸ್ತಾಂತರಿಸಿದೆ. 46,499 ಫ್ಲಾಟ್ ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಪಾಲು 576.04 ಕೋಟಿ ರೂ. ಆದರೆ, ರಾಜ್ಯ ಸರ್ಕಾರದ ಪಾಲು 583.72 ಕೋಟಿ ರೂ.ಗಳಾಗಿದೆ. ಫಲಾನುಭವಿಗಳ ಪಾಲು 3,875.59 ಕೋಟಿ ರೂ.ಗಳಾಗಿರುತ್ತದೆ.
ಮೊದಲ ಹಂತದ ಕಾಮಗಾರಿ ವಿವರ :
ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭಿಸಿರುವ ಸಂಖ್ಯೆ | 42,334 |
ಛಾವಣಿ ಹಂತದಲ್ಲಿರುವ ಮನೆಗಳು (Roof Casted) | 11,299 |
ಪ್ಲಿಂತ್/ವಾಲಿಂಗ್ ಮಟ್ಟದ ಮನೆಗಳ ಸಂಖ್ಯೆ | 13,525 |
ತಳಪಾಯದ ಹಂತದಲ್ಲಿರುವ ಮನೆಗಳ ಸಂಖ್ಯೆ | 4,525 |
ಮಣ್ಣು ಅಗೆತದ ಹಂತದಲ್ಲಿರುವ ಮನೆಗಳ ಸಂಖ್ಯೆ | 4,558 |
ಜಮೀನು ಸಮತಟ್ಟು ಹಂತದಲ್ಲಿರುವ ಮನೆಗಳು | 8,427 |
ಜಿ+3 ಮಾದರಿಯಲ್ಲಿ 53,501 ಮನೆ ನಿರ್ಮಾಣ ಯಾವ ಹಂತದಲ್ಲಿದೆ?
ವಸತಿ ಇಲಾಖೆಯು ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಎರಡನೇ ಹಂತದಲ್ಲಿ ಜಿ+3 ಮಾದರಿಯಲ್ಲಿ 53,501 ಮನೆಗಳನ್ನು ನಿರ್ಮಿಸಲು 16-01-2020ರಲ್ಲೆ ಸರ್ಕಾರ ಮಂಜೂರಾತಿ ನೀಡಿದೆ. ಈ ಪೈಕಿ 14,332 ಮನೆಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ. ಇವುಗಳ ನಿರ್ಮಾಣದ ಅಂದಾಜು ಮೊತ್ತ 1,623.51 ಕೋಟಿ ರೂ.ಗಳಾಗಿದೆ. ಈ ಪೈಕಿ 5,684 ಮನೆಗಳ ಕಾಮಗಾರಿಯನ್ನು ರಾಜೀವ್ ಗಾಂಧಿ ವಸತಿ ನಿಗಮವು ಪ್ರಾರಂಭಿಸಿದೆ. ಹಾಗೆಯೇ 1,624 ಮನೆಗಳ ಕಾಮಗಾರಿಯನ್ನು ಇನ್ನಷ್ಟೇ ಪ್ರಾರಂಭಿಸಬೇಕಿದೆ. 7,024 ಮನೆಗಳ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ.
ರಾಜೀವ್ ಗಾಂಧಿ ವಸತಿ ನಿಗಮಕ್ಕೆ 40,000 ಮನೆಗಳನ್ನು ಕಟ್ಟಲು 398 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿ, ಅದನ್ನು ನಿಮಗಕ್ಕೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳು/ ತಹಸೀಲ್ದಾರ್ ರವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಬಿಡಿಎನ 150 ಎಕರೆ ಜಮೀನಿನಲ್ಲಿ 15,000 ಮನೆಗಳನ್ನು ನಿರ್ಮಿಸಬಹುದೆಂದು ಅಂದಾಜಿಸಲಾಗಿದೆ ಎಂದು ರಾಜೀವ್ ಗಾಂಧಿ ವಸತಿ ನಿಗಮದ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
2 ಬಿಎಚ್ ಕೆ ಮನೆಗಳ ವಿವರ :
ಮೊದಲ ಹಂತದಲ್ಲಿ 2 ಬಿಎಚ್ ಕೆಯ 8,096 ಮನೆಗಳು 8 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಮಾಣವಾಗಲಿದೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿರುವ ಕಡಿಮೆ ಆದಾಯ ವರ್ಗದ ವಸತಿ ರಹಿತರಿಗೆ ಹಂಚಿಕೆ ಮಾಡಲು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಯೋಜಿಸಿದೆ. ಈ ಹಿನ್ನಲೆಯಲ್ಲಿ ನಗರದ 16 ಕಡೆಗಳಲ್ಲಿ ಜಿ+3ಯಿಂದ ಹಿಡಿದು ಎಸ್+14 ಮಹಡಿಗಳ ವಸತಿ ಸಂಕೀರ್ಣ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದೆ. ಇನ್ನು 3 ಕಡೆಗಳಲ್ಲಿ 2 ಬಿಎಚ್ ಕೆಯ ಮನೆ ನಿರ್ಮಾಣ ಕಾರ್ಯ ಇನ್ನಷ್ಟೇ ಪ್ರಾರಂಭವಾಗಬೇಕಿದೆ.
2 ಬಿಎಚ್ ಕೆ ಫ್ಲಾಟ್ ವೊಂದರ ದರ 15 ರಿಂದ 14 ಲಕ್ಷ ರೂ.ಗೆ ಇಳಿಕೆ :
1 ಬಿಎಚ್ ಕೆ ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಬ್ಸೀಡಿ ದರದಲ್ಲಿ ಮನೆಗಳನ್ನು ಹಂಚಿಕೆ ಮಾಡುತ್ತಿದೆ. ಆದರೆ 2 ಬಿಎಚ್ ಕೆ ಗೆ ಯಾವುದೇ ಸಬ್ಸೀಡಿ ನೀಡುತ್ತಿಲ್ಲ. ಯೋಜನೆಯ ಫಲಾನುಭವಿಗಳು ಕಡಿಮೆ ಆದಾಯ ವರ್ಗಕ್ಕೆ ಸೇರಿರುವುದರಿಂದ ರಾಜ್ಯ ಸರ್ಕಾರವು ಈ ಹಿಂದೆ ಪ್ರತಿ ಮನೆಗೆ ನಿಗಧಿಪಡಿಸಿದ್ದ 15 ಲಕ್ಷ ರೂ.ಗಳ ದರವನ್ನು ಒಂದು ಲಕ್ಷ ರೂ. ಇಳಿಕೆ ಮಾಡಿ 14 ಲಕ್ಷ ರೂ.ಗೆ ನಿಗಧಿ ಮಾಡಿದೆ. ಈ ಕುರಿತಂತೆ ಸಚಿವ ಸಂಪುಟದಲ್ಲಿ ಇತ್ತೀಚೆಗಷ್ಟೇ ಅನುಮೋದನೆಯಾಗಿತ್ತು. ಆದರೆ 2 ಆಗಸ್ಟ್ 2022ರಂದು ಈ ಕುರಿತಂತೆ ಸರ್ಕಾರಿ ಆದೇಶವಾಗಿದೆ.
ವಸತಿ ಯೋಜನೆಗೆ ಈವರೆಗೆ 1,088 ಕೋಟಿ ರೂ. ವೆಚ್ಚ :
ಒಟ್ಟಾರೆ ಒಂದು ಲಕ್ಷ ಬಹು ಮಹಡಿ ಬೆಂಗಳೂರು ವಸತಿ ಯೋಜನೆಗೆ ಇಲ್ಲಿಯ ತನಕ ಕೇಂದ್ರ ಸರ್ಕಾರ 1,500 ಕೋಟಿ ರೂ. ತಾನು ನೀಡಬೇಕಿರುವ ಹಣ ಪೈಕಿ 600 ಕೋಟಿ ರೂ.ಗಳನ್ನು ನೀಡಿದ್ದರೆ, ರಾಜ್ಯ ಸರ್ಕಾರವು 1,520 ಕೋಟಿ ರೂ.ಗಳ ಪೈಕಿ 466.98 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಫಲಾನುಭವಿಗಳ ವಂತಿಕೆ 79.37 ಕೋಟಿ ರೂ. ನಿಗಮಕ್ಕೆ ಸಂದಾಯವಾಗಿದೆ. ಒಟ್ಟಾರೆ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ 1,088 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗುತ್ತಿಗೆದಾರರಿಗೆ 148.92 ಕೋಟಿ ರೂ. ಬಾಕಿ ಬಿಲ್ಲುಗಳನ್ನು ಪಾವತಿಸಬೇಕಾಗಿದೆ.
ಈ ವಸತಿ ಯೋಜನೆ ಕುರಿತಂತೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ https://ashraya.karnataka.gov.in/index.aspx ಜಾಲತಾಣಕ್ಕೆ ಭೇಟಿ ನೀಡಬಹುದು.