ಬೆಂಗಳೂರು, ಆ.9 www.bengaluruwire.com : ರಾಜ್ಯದಲ್ಲಿ ಕೋವಿಡ್ ಸೋಂಕಿನ ನಂತರ ಆಸ್ತಿ ನೋಂದಣಿ ಪ್ರಮಾಣ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದೇ ಸಮನೆ ಏರಿಕೆಯಾಗುತ್ತಿದೆ. ರಿಯಲ್ ಎಸ್ಟೇಟ್ ಕ್ಷೇತ್ರವೂ ಕೂಡ ಸಾಕಷ್ಟು ಸುಧಾರಿಸಿದೆ. ಇದೇ ಹೊತ್ತಿನಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಅತಿಹೆಚ್ಚು ಕರ್ನಾಟಕ ಯಾವ ಸ್ಥಳದಲ್ಲಿ ಅತಿಹೆಚ್ಚಾಗಿದೆ ಅಂತ ಕೇಳಿದರೆ ನಿಮಗೆ ಆಶ್ಚರ್ಯ ಆಗಬಹುದು.
ನಿಮ್ಮ ನಿರೀಕ್ಷೆಯಂತೆಯೇ ಇಡೀ ರಾಜ್ಯದಲ್ಲಿ ಅತಿಹೆಚ್ಚು ಸ್ಥಿರಾಸ್ತಿಯ ಗರಿಷ್ಠ ಮಾರುಕಟ್ಟೆ ಬೆಲೆ ಬೆಂಗಳೂರಿನ ಬೇರೆ ಬೇರೆ ಪ್ರದೇಶಗಳಲ್ಲಿಯೇ ಇರೋದು. ಇಲ್ಲಿ ಒಂದು ಚದರಡಿ (ಒಂದು ಅಡಿ ಉದ್ದ X ಒಂದು ಅಡಿ ಅಗಲ) ಜಾಗದ ವಾಣಿಜ್ಯ ದರ ನೋಂದಣಿ ಮತ್ತು ಮುದ್ರಾಂಕ (Sub Registrar And Stamps)ದ ಪ್ರಕಾರ ಸಾವಿರಾರು ರೂಪಾಯಿ ಮೌಲ್ಯ ಹೊಂದಿದೆ. ಇನ್ನು ಇವುಗಳ ಮಾರ್ಕೇಟ್ ದರವನ್ನು ನೋಡಿದ್ರೆ ಎರಡರಿಂದ ಮೂರುಪಟ್ಟು ಇರುತ್ತದೆ ಅನ್ನೋದು ರಿಯಲ್ ಎಸ್ಟೇಟ್ ಕ್ಷೇತ್ರದ ಥಂಬ್ ರೂಲ್.
ಜಯನಗರ 4ನೇ ಬ್ಲಾಕ್ ವಾಣಿಜ್ಯ ನಿವೇಶನದ ಮೌಲ್ಯ ಅತಿಹೆಚ್ಚು :
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯದಾದ್ಯಂತ 253 ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಹೊಂದಿದೆ. ಆ ಕಚೇರಿಗಳ ಪೈಕಿ ಜಯನಗರ ಮತ್ತು ಶಿವಾಜಿನಗರ ನೋಂದಣಿ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಅತಿಹೆಚ್ಚು ಗರಿಷ್ಠ ಮಾರುಕಟ್ಟೆ ಬೆಲೆ ಹೊಂದಿದ ಸ್ಥಿರಾಸ್ತಿಗಳಿರುವ ಪ್ರದೇಶವನ್ನು ಸಬ್ ರಿಜಿಸ್ಟ್ರಾರ್ ಕಚೇರಿ ಗುರ್ತಿಸಿದೆ. ಅವುಗಳ ಪೈಕಿ ಜಯನಗರ 4ನೇ ಬ್ಲಾಕ್ ವಾಣಿಜ್ಯ ನಿವೇಶನದ ದರ ಇಡೀ ರಾಜ್ಯದಲ್ಲಿಯೇ ಅತಿಹೆಚ್ಚು ಇದು, ಮೊದಲ ಸ್ಥಾನದಲ್ಲಿದೆ. ಇಲ್ಲಿನ ಕಮರ್ಷಿಯಲ್ ನಿವೇಶನದ ದರ ಪ್ರತಿ ಚದರ ಅಡಿಗೆ ಬರೋಬ್ಬರಿ 42,493 ರೂಪಾಯಿಯಾಗಿದೆ. ಇದು ಸಬ್ ರಿಜಿಸ್ಟ್ರಾರ್ ಇಲಾಖೆ ನಿಗಧಿಪಡಿಸಿರುವ ಗರಿಷ್ಠ ಮಾರ್ಗಸೂಚಿ ದರವಾಗಿದೆ. ಇವತ್ತಿನ ಬೆಂಗಳೂರು ಚಿನ್ನದ ಮಾರುಕಟ್ಟೆ ದರದಲ್ಲಿ 22 ಕ್ಯಾರೆಟ್ ಚಿನ್ನ 9 ಗ್ರಾಮ್ ಗಳಿಗೆ (ಪ್ರತಿ ಗ್ರಾಮ್ ಚಿನ್ನದ ದರ 4,760 ರೂ.) ಹೆಚ್ಚು ಕಮ್ಮಿ ಜಯನಗರ 4ನೇ ಬ್ಲಾಕ್ ಬಳಿಯಲ್ಲಿನ ನಿವೇಶನದ ದರಕ್ಕೆ ಸಮನಾಗಿದೆ.
ಹಾಗಾದ್ರೆ ಬೆಂಗಳೂರಿನ ಟಾಪ್-12 ಅತಿಹೆಚ್ಚು ಮಾರುಕಟ್ಟೆ ದರ ಹೊಂದಿದ ವಾಣಿಜ್ಯ ನಿವೇಶನಗಳಿರುವ ಪ್ರದೇಶಗಳು ಹಾಗೂ ಅಲ್ಲಿ ಪ್ರತಿ ಚದರಡಿ ನಿಗಧಿಪಡಿಸಿರುವ ದರವನ್ನು ಈ ಕೆಳಗೆ ನೀಡಲಾಗಿದೆ :
ಕ್ರಮಸಂಖ್ಯೆ | ಜಯನಗರ ನೋಂದಣಿ ಜಿಲ್ಲೆ ವ್ಯಾಪ್ತಿಯ ಸ್ಥಿರಾಸ್ತಿಗಳ ವಿವರ | ಪ್ರತಿ ಚದರ ಅಡಿಗೆ ರೂ.ಗಳಲ್ಲಿ |
1) | ಜಯನಗರ 4ನೇ ಬ್ಲಾಕ್, 11ನೇ ಮುಖ್ಯರಸ್ತೆ | 42,493 ರೂ. |
2) | ಜಯನಗರ ಕಾಸ್ಮೋಪಾಲಿಟನ್ ಕ್ಲಬ್ ವೃತ್ತದಿಂದ 11ನೇ ಮುಖ್ಯರಸ್ತೆ | 41,499 ರೂ. |
3) | ಜಯನಗರ 11ನೇ ಮುಖ್ಯರಸ್ತೆ (33ನೇ ಅಡ್ಡರಸ್ತೆಯಿಂದ ಜೆಪಿ ನಗರದ ತನಕ) | 33,993 ರೂ. |
4) | ಬನ್ನೇರುಘಟ್ಟ ರಸ್ತೆ | 33,993 ರೂ. |
5) | ಕನಕಪುರ ರಸ್ತೆ (ಎಸ್.ಕರಿಯಪ್ಪ ರಸ್ತೆ) | 31,995 ರೂ. |
6) | ಸೌತ್ ಎಂಡ್ ರಸ್ತೆ (ಜಯನಗರ 3ನೇ ಬ್ಲಾಕ್ ವೃತ್ತದಿಂದ ಸೌತ್ ಎಂಡ್ ವೃತ್ತದವರೆಗೆ, ಆನೆ ಬಂಡೆ ರಸ್ತೆ 3ನೇ ಬ್ಲಾಕ್ ಸರ್ಕಲ್ ನಿಂದ ಸೌತ್ ಎಂಡ್ ವೃತ್ತದವರೆಗೆ) | 28,493 ರೂ. |
7) | ಅಶೋಕ ಪಿಲ್ಲರ್ ರಸ್ತೆಯಿಂದ ಮಾಧವನ್ ಪಾರ್ಕ್ ಸರ್ಕಲ್ ತನಕ (10ನೇ ಮುಖ್ಯರಸ್ತೆ) 100 ಅಡಿ ರಸ್ತೆ | 26,495 ರೂ. |
ಶಿವಾಜಿನಗರ ನೋಂದಣಿ ಜಿಲ್ಲೆ ವ್ಯಾಪ್ತಿಯ ಸ್ಥಿರಾಸ್ತಿಗಳ ವಿವರ | ಪ್ರತಿ ಚದರ ಅಡಿಗೆ ರೂ.ಗಳಲ್ಲಿ | |
8) | ಕನ್ನಿಂಗ್ ಹ್ಯಾಮ್ ರಸ್ತೆ (ಸಂಪಂಗಿ ರಾಮಸ್ವಾಮಿ ದೇವಸ್ಥಾನ) | 26,012 ರೂ. |
9) | ಕಮರ್ಷಿಯಲ್ ಸ್ಟ್ರೀಟ್ | 25,752 ರೂ. |
10) | ಎಂ.ಜಿ.ರಸ್ತೆ (ಕಸ್ತೂರಬಾ ರಸ್ತೆಯಿಂದ ಟ್ರಿನಿಟಿ ಸರ್ಕಲ್ ವರೆಗೆ) | 25,418 ರೂ. |
11) | ರೆಸಿಡೆನ್ಸಿ ರಸ್ತೆ | 20,029 ರೂ. |
12) | ಸೆಂಟ್ ಮಾರ್ಕ್ಸ್ ರಸ್ತೆ | 19,732 ರೂ. |
ವಾಣಿಜ್ಯ ನಿವೇಶನ ಮತ್ತು ಕಟ್ಟಡಗಳ ಮಾರ್ಗಸೂಚಿ ದರ ಹೇಗೆ ನಿಗಧಿಯಾಗುತ್ತೆ?
“ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರೀಯ ಮೌಲ್ಯಮಾಪನ ಸಮಿತಿಯು ವಾಣಿಜ್ಯ ದರ ನಿಗದಿಪಡಿಸದ ಪ್ರದೇಶಗಳಲ್ಲಿ ವಾಣಿಜ್ಯ ನಿವೇಶನಗಳಿದ್ದರೆ, ಆ ಪ್ರದೇಶದ ಮಾರ್ಗಸೂಚಿ ದರದ ಶೇ.40ರಷ್ಟು ಹೆಚ್ಚುವರಿ ದರವನ್ನು ಸೇರಿಸಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಒಂದೊಮ್ಮೆ ಮಾಲ್, ವಾಣಿಜ್ಯ ಕಾಂಪ್ಲೆಕ್ಸ್ ಇದ್ದಲ್ಲಿ, ಆ ಪ್ರದೇಶದ ಮಾರ್ಗಸೂಚಿದರದ ಶೇ.30ರಷ್ಟನ್ನು ವಾಣಿಜ್ಯ ಕಟ್ಟಡದ ಸೂಪರ್ ಬಿಲ್ಟಪ್ ಏರಿಯಾವನ್ನು ಗಣನೆಗೆ ತೆಗೆದುಕೊಂಡು ರಿಜಿಸ್ಟ್ರೇಷನ್ ಮತ್ತು ಸ್ಟ್ಯಾಂಪ್ ಡ್ಯೂಟಿ ನಿಗದಿ ಮಾಡಲಾಗುತ್ತದೆ.”
– ಡಾ.ಬಿ.ಆರ್.ಮಮತ, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು
ಮೇಲೆ ತಿಳಿಸಿದ ಸ್ಥಿರಾಸ್ತಿ ಮಾರ್ಗಸೂಚಿ ದರ ಸರ್ಕಾರ ನಿಗದಿಪಡಿಸಿದ್ದಾಗಿದೆ. ಆದ್ರೆ ಮಾರುಕಟ್ಟೆ ಬೆಲೆಯು ಅದಕ್ಕಿಂತ ಒಂದೂವರೆ ಎರಡು ಪಟ್ಟು ಹೆಚ್ಚು ಇರುತ್ತೆ. ಏಪ್ರಿಲ್ 2016ರಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯಾದ್ಯಂತ ಪರಿಷ್ಕೃತ ಮಾರ್ಗಸೂಚಿ ದರವನ್ನು ಪರಿಷ್ಕರಣೆ ಮಾಡಿತ್ತು. ಇದಾದ 3 ವರ್ಷದ ಬಳಿಕ ರಾಜ್ಯ ಸರ್ಕಾರ 2019ರ ಜನವರಿಯಿಂದ ಜಾರಿಗೆ ಬರುವಂತೆ ಪರಿಷ್ಕೃತ ಮಾರ್ಗಸೂಚಿ ದರವನ್ನು ಪ್ರಕಟಿಸಿತ್ತು. ಅದಾದ ಬಳಿಕ ಪರಿಷ್ಕೃತ ದರವನ್ನು ನಿಗದಿ ಮಾಡಿಲ್ಲ. 2023ರ ಇಸವಿಯಲ್ಲಿ ಸಾರ್ವತ್ರಿಕ ಚುನಾವಣಾ ವರ್ಷವಾಗಿರುವ ಕಾರಣ ನೂತನ ಪರಿಷ್ಕೃತ ಮಾರ್ಗಸೂಚಿ ದರವನ್ನು ಜಾರಿಗೆ ತರುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈಹಾಕುವ ಗೋಜಿಗೆ ಹೋಗದು ಎಂದು ಹೇಳಲಾಗುತ್ತಿದೆ.
ಕ್ರೆಡಾಯ್ ಬೆಂಗಳೂರು ಸಂಸ್ಥೆಯ ಅಧ್ಯಕ್ಷರು ಈ ಬಗ್ಗೆ ಏನಂತಾರೆ?
“ಸ್ಥಿರಾಸ್ತಿಗಳ ಮಾರ್ಗಸೂಚಿ ದರ ನಿಗದಿ ಮಾಡುವುದು ಹಿಂದೆಲ್ಲ ಆದಾಯ ತೆರಿಗೆ ಇಲಾಖೆಯ ಲೆಕ್ಕಾಚಾರಕ್ಕಾಗಿ ಮಾಡಲಾಗಿತ್ತು. ಆದರೀಗ ಆಸ್ತಿಗಳ ಗೈಡೆನ್ಸ್ ವ್ಯಾಲ್ಯೂ ಎಂಬುದು ಸರ್ಕಾರಕ್ಕೆ ಮುಂದ್ರಾಂಕ ಶುಲ್ಕ ಸಂಗ್ರಹ ಮಾಡಿಕೊಳ್ಳುವ ಒಂದೂ ಟೂಲ್ ಆಗಿ ಬದಲಾಗಿದೆ. ಬೇಡಿಕೆ ಹೆಚ್ಚಿರುವ ಕಡೆ ಸಾಮಾನ್ಯವಾಗಿ ವಾಣಿಜ್ಯ ನಿವೇಶನ ದರ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಸಬ್ ರಿಜಿಸ್ಟ್ರಾರ್ ಇಲಾಖೆ ದರ ನಿಗಧಿ ಮಾಡಿದೆ. ಆದರೆ ಆ ಪ್ರದೇಶದಲ್ಲಿ ಒಂದೊಂದು ಆಸ್ತಿಯ ಬೆಲೆ ಒಂದೊಂದು ದರಕ್ಕೆ ಮಾರಾಟವಾಗುತ್ತದೆ. ಮಾರುಕಟ್ಟೆದರಕ್ಕೂ ಮತ್ತು ಮಾರ್ಗಸೂಚಿ ದರಕ್ಕೆ ಶೇ.20ರಷ್ಟು ವ್ಯತ್ಯಾಸ ಇರುತ್ತೆ. ರಿಯಲ್ ಎಸ್ಟೇಟ್ ಉದ್ಯಮ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.”
– ಸುರೇಶ್ ಹರಿ, ಅಧ್ಯಕ್ಷ, ಕ್ರೆಡಾಯ್ ಬೆಂಗಳೂರು
ರಿಯಲ್ ಎಸ್ಟೇಟ್ ಮಾರುಕಟ್ಟೆ ಬಿದ್ದಾಗ ಮಾರ್ಗೂಸೂಚಿ ದರವನ್ನು ಕಡಿಮೆ ಮಾಡಬೇಕು. ಕರೋನಾ ಸೋಂಕಿನ ಕಾಲಾವಧಿ ನಂತರ ರಿಯಲ್ ಎಸ್ಟೇಟ್ ಕ್ಷೇತ್ರದ ಚೇತರಿಕೆಗೆ ಒಂದು ವರ್ಷಗಳ ಕಾಲ ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ರಿಯಾಯಿತಿ ಘೋಷಿಸಬೇಕು ಎಂದು ಕ್ರೆಡಾಯ್ ಸಂಸ್ಥೆಯಿಂದ ಮನವಿ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಮೂರು ಮೂರು ತಿಂಗಳಿಗೆ ವಿಸ್ತರಣೆ ಮಾಡುತ್ತಿದೆ. ಆಸ್ತಿ ಖರೀದಿ- ಮಾರಾಟ ಮಾಡುವವರಿಗೆ ನಿರ್ದಿಷ್ಟ ಅವಧಿವರೆಗೆ ರಿಯಾಯಿತಿ ಕಾಲಾವಧಿ ನಿಗದಿ ಮಾಡಿದರೆ ಒಳ್ಳೆಯದು ಎಂದು ಸುರೇಶ್ ಹರಿ ಅಭಿಪ್ರಾಯಪಟ್ಟಿದ್ದಾರೆ.