ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(NASA) ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (JWST) ತಾನು ಕಾರ್ಯಾರಂಭ ಮಾಡಿದ ಕೆಲವು ಸಮಯದಲ್ಲೇ ಹಿಂದೆ ಮನುಷ್ಯರು ಕಂಡಿರದ ವಿಶ್ವದ ಅತ್ಯದ್ಭುತ ಚಿತ್ರಗಳನ್ನು ಸೆರೆಹಿಡಿದಿತ್ತು. ಇದೀಗ ಭೂಮಿಗೆ ಹತ್ತಿರವಿರುವ ಗುರು ಗ್ರಹಕ್ಕೆ (Jupiter) ತನ್ನ ಟೆಲಿಸ್ಕೋಪನ್ನು ಇಟ್ಟು ಬಹಳ ಅಪರೂಪದ ಚಿತ್ರಗಳನ್ನು ಭೂಮಿಗೆ ರವಾನಿಸಿದೆ.
ಜೆಡಬ್ಲ್ಯುಎಸ್ ಟಿ ಟೆಲಿಸ್ಕೋಪ್ ಬಣ್ಣ ಬಣ್ಣದ ಹಾಗೂ ಕಪ್ಪು ಬಿಳುಪಿನ ಚಿತ್ರಗಳನ್ನು ಸೆರೆಹಿಡಿದಿದೆ. ಅದರಲ್ಲಿ ಬ್ಲಾಕ್ ಎಂಡ್ ವೈಟ್ ಚಿತ್ರಗಳು ಗುರು ಗ್ರಹವು ಕತ್ತಲಲ್ಲಿ ಹೊಳೆಯುತ್ತಿರುವುದನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ.
ಜೇಮ್ಸ್ ವೆಬ್ ದೂರದರ್ಶಕ ತನ್ನ ಕಾರ್ಯಾರಂಭ ಮಾಡಿದಾಗ ಯೂನಿವರ್ಸ್ ನ ಬಹಳ ದೂರದ ಚಿತ್ರಗಳನ್ನು ಒದಗಿಸಿತ್ತು. ಆಗಲೂ ಗುರುಗ್ರಹದ ಚಿತ್ರವನ್ನು ತೆಗೆದಿತ್ತು. ಆದರೀಗ ಭೂಮಿಗೆ ಹತ್ತಿರವಾದ ಗುರು ಗ್ರಹದ ಮತ್ತಷ್ಟು ವೈವಿಧ್ಯಮಯ ಆಕರ್ಷಕ ಚಿತ್ರಗಳನ್ನು ವಿವಿಧ ಕೋನಗಳಲ್ಲಿ ಸೆರೆಹಿಡಿದಿದೆ.
ಜು.27ರಂದು ಈ ಟೆಲಿಸ್ಕೋಪ್ ನ ನಿಯರ್ ಇನ್ಫ್ರಾರೆಡ್ (ಅವಗೆಂಪು) ಕ್ಯಾಮರಾ ಬಳಸಿ ಜ್ಯುಪಿಟರ್ ಚಿತ್ರವನ್ನು ತೆಗೆದಿದೆ. ಇದರಲ್ಲಿ ಗುರುಗ್ರಹದಲ್ಲಿ ಕಂಡುಬಂದ ಕೆಂಪು ಬಣ್ಣದ ಸ್ಥಳಗಳು, ಗ್ರಹದಲ್ಲಿನ ವಿಶಿಷ್ಟ ಸ್ತರಗಳು, ಮೇಲ್ಮೈ ಲಕ್ಷಣಗಳನ್ನು ತಿಳಿಯಲು ಅನುಕೂಲವಾಗುವಂತೆ ಟೆಲಿಸ್ಕೋಪ್ ಅವುಗಳನ್ನು ಸೆರೆಹಿಡಿದಿದೆ. ಗುರುಗ್ರಹದಲ್ಲಿ ಏಳುವ ಭಯಂಕರ ಚಂಡಮಾರುತ ಅದೆಷ್ಟು ದೊಡ್ಡದಿರುತ್ತದೆ ಎಂದರೆ ಒಂದಿಡೀ ಭೂಮಿಯನ್ನು ನುಂಗಿ ಬಿಡುವಷ್ಟು ದೊಡ್ಡದಿರುತ್ತದೆ.
ಜ್ಯುಪಿಟರ್ ನ ಚಿತ್ರಗಳನ್ನು ಜೇಮ್ಸ್ ವೆಬ್ ಸ್ಪೇಸ್ ದೂರದರ್ಶಕವು ನಿರ್ ಕ್ಯಾಮ್ ಮೂಲಕ F212N ಫಿಲ್ಟರ್ ಬಳಸಿ 11 ನಿಮಿಷಗಳ ಗುರುವಿನ ಫೊಟೊಗಳನ್ನು ತೆಗೆದಿದೆ. ಈ ದೊಡ್ಡ ಟೆಲಿಸ್ಕೋಪ್ ನಲ್ಲಿನ ಕ್ಯಾಮರಾದಲ್ಲಿ ಬಳಸಿರುವ ಫಿಲ್ಟರ್ ಗಳು ಜಲಜನಕದಲ್ಲಿನ ಪರಮಾಣುಗಳ ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಹಾಯಕವಾಗಲಿದೆ.
ಗುರುಗ್ರಹದ ಬಗ್ಗೆ ಜೇಮ್ಸ್ ವೆಬ್ ತೆಗೆದ ಇಮೇಜ್ ಗಳು ಹಾಗೂ ಅವಲೋಕನಗಳು ಖಗೋಳ ವಿಜ್ಞಾನಿಗಳಿಗೆ ಗುರು ಗ್ರಹದ ಧ್ರುವಗಳಲ್ಲಿ ಕಂಡು ಬರುವ ವಿದ್ಯಮಾನ, ಗಾಳಿ ಸೇರಿದಂತೆ ಅಲ್ಲಿನ ಪರಿಸರ, ಅನಿಲ ದೈತ್ಯ ಗ್ರಹದ ಉಷ್ಣ ರಚನೆ ಹಾಗೂ ಅದರಲ್ಲಿನ ಪದರಗಳ ಬಗ್ಗೆ ವಿಜ್ಞಾನಿಗಳಿಗೆ ತಿಳಿಯಲು ಈ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಸಹಾಯಕವಾಗಲಿದೆ.
ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಕಾರ್ಯಾಚರಣೆ ನಡೆಸುವ ಮೆರಿಲ್ಯಾಂಡ್ ನ ಸ್ಪೇಸ್ ಟೆಲಿಸ್ಕೋಪ್ ಸೈನ್ಸ್ ಇನ್ಸಿಟ್ಯೂಟ್ ವೀಕ್ಷಣಾಲಯವು, ಪ್ರಾಥಮಿಕವಾಗಿ ಗುರು ಗ್ರಹದ ಉಪಗ್ರಹದಲ್ಲಿನ ಜ್ವಾಲಾಮುಖಿಗಳ ಬಗ್ಗೆ, ಕ್ಷುದ್ರಗ್ರಹಗಳ ಬಗ್ಗೆ ಗಮನಹರಿಸಲಿದೆ.