ಬೆಂಗಳೂರು, ಆ.2 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲಕರವಾಗಿರಲೆಂದು ಮಾನ್ಯ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಇಂದು ಪೂರ್ವ ವಲಯ ವ್ಯಾಪ್ತಿಯ ವಸಂತನಗರದ ಸರ್ದಾರ್ ಪಟೇಲ್ ಭವನದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ 2020ರ ಅನುಸಾರ 243 ವಾರ್ಡ್ ಗಳನ್ನಾಗಿ ಮಾಡಿದ್ದು, ಅದರಂತೆ ಇದೇ ಆಗಸ್ಟ್ ತಿಂಗಳ ಮೊದಲನೆ ಶನಿವಾರ 198 ವಾರ್ಡ್ ಗಳಲ್ಲಿ ನಡೆಯುವ ಸಭೆಗಳಲ್ಲಿ, 3ನೇ ಶನಿವಾರದಿಂದ 243 ವಾರ್ಡ್ ಗಳ ಅನುಸಾರ ವಾರ್ಡ್ ಸಮಿತಿ ಸಭೆಗಳು ನಡೆಸುವ ಬಗ್ಗೆ ವಾರ್ಡ್ ಸಮಿತಿಯ ಸದಸ್ಯರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರೀಕರಿಗೆ ನಿಖರ ಮಾಹಿತಿ ಒದಗಿಸಬೇಕು. ಅಲ್ಲದೆ ಹೊಸ ವಾರ್ಡ್ ಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ವಲಯ ಆಯುಕ್ತರಿಗೆ ಸೂಚನೆ ನೀಡಿದರು.
ಪೂರ್ವ ವಲಯ ವ್ಯಾಪ್ತಿಯಲ್ಲಿ ಬರುವ 6 ವಿಧಾನಸಭಾ ಕ್ಷೇತ್ರಗಳ ಪೈಕಿ ಆಯಾ ವಿಧಾನಸಭಾ ಕ್ಷೇತ್ರವಾರು ಬರುವ ಕಾರ್ಯಪಾಲಕ ಅಭಿಯಂತರರು ರಸ್ತೆ ಗುಂಡಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಗಾಗಿ ವಾರ್ಡ್ ವಾರು ಮೀಸಲಿಟ್ಟಿರುವ ಅನುದಾನವನ್ನು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ತ್ವರಿತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಪ್ರಮುಖ ರಸ್ತೆ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡುವುದನ್ನು ಗುರುತಿಸಿ ಕೂಡಲೆ ತೆರವು ಕಾರ್ಯಾಚರಣೆ ಪ್ರಾರಂಭಿಸಲು ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಈ ವೇಳೆ ವಲಯ ಆಯುಕ್ತರಾದ ಪಿ.ಎನ್.ರವೀಂದ್ರ, ವಲಯ ಜಂಟಿ ಆಯುಕ್ತರಾದ ಶಿಲ್ಪಾ, ವಲಯ ಮುಖ್ಯ ಅಭಿಯಂತರರಾದ ಸುಗುಣಾ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.