ಬೆಂಗಳೂರು, ಜು.27 www.bengaluruwire.com : ಪ್ರಚಾರಕ್ಕಾಗಿ ಕೆಲವು ಜನಪ್ರತಿನಿಧಿಗಳು, ಅವರ ಬೆಂಬಲಿಗರು ಫ್ಲೆಕ್ಸ್, ಬ್ಯಾನರ್ಸ್ ನಿಷೇಧ ಹೇರಿದ್ರೂ ನಿಯಮ ಉಲ್ಲಂಘಿಸಿ ಊರು ತುಂಬಾ ಬ್ಯಾನರ್, ಬಂಟಿಂಗ್ಸ್ ಹಾಕೋದನ್ನು ನೋಡಿದ್ದೀವಿ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿನ ಜನಪ್ರತಿನಿಧಿಗಳು ಪ್ರಚಾರಕ್ಕಾಗಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಸುವ ವಾರ್ಡ್ ಕಾಮಗಾರಿಗಳಲ್ಲೂ ಶಾಶ್ವತವಾಗಿ ಅವರ ಹೆಸರು ಉಳಿಯುವಂತೆ ಮಾಡಲು ರಸ್ತೆ ಬದಿಯ ಮೋರಿ ಮೇಲಿನ ಪ್ರೀಕಾಸ್ಟ್ ಸ್ಲಾಬ್ ಆಯ್ದುಕೊಂಡಿದ್ದಾರೆ. 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಏಳೆಂಟು ತಿಂಗಳು ಬಾಕಿ ಇರುವಾಗಲೇ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಸಚಿವ ಮುನಿರತ್ನ ಅವರು ಮೋರಿ ಸಿಮೆಂಟ್ ಸ್ಲಾಬ್ ಮೇಲೆ “MUNIRATHNA MLA” ಎಂದು ಅಚ್ಚನ್ನು ಹಾಕಿಸಿ ಆ ಸ್ಲಾಬ್ ಗಳನ್ನು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಗಳಲ್ಲಿ ಹಾಕಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಪರ- ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
ಮೋರಿ ಸ್ಲಾಬ್ ಮೇಲೆ ಜನಪ್ರತಿನಿಧಿಯೊಬ್ಬರ ಹೆಸರು ಮತ್ತು ಹುದ್ದೆಯನ್ನು ಅಚ್ಚೊತ್ತಿಸಿರುವ ಪ್ರಕರಣ ಬಹುಶಃ ದೇಶದಲ್ಲೇ ಮೊದಲಿರಬೇಕು. ಮುಂದಿನ ದಿನಗಳಲ್ಲಿ ಬೇರೆ ಜನಪ್ರತಿನಿಧಿಗಳು ಇದೇ ಮಾರ್ಗ ಹಿಡಿದರೆ, ಸಾರ್ವಜನಿಕರ ತೆರಿಗೆ ಹಣದಲ್ಲಿ ಕೈಗೊಳ್ಳುವ ಕಾಮಗಾರಿಗಳ ಮೇಲೆ ಬರೀ ಜನಪ್ರತಿನಿಧಿಗಳ ಹೆಸರೇ ಕಣ್ಣಿಗೆ ರಾಚುವುದರಲ್ಲಿ ಆಶ್ಚರ್ಯವಿಲ್ಲ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಪ್ರಜ್ಞ ನಾಗರೀಕರು ಈ ಕ್ರಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರು ವೈರ್, ಶಾಸಕರಾದ ಮುನಿರತ್ನ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.
ಸದ್ಯ ಯಶವಂತಪುರ, ಲಗ್ಗೆರೆ ವಾರ್ಡ್ ಗಳಲ್ಲಿನ ರಸ್ತೆಬದಿಯ ಕಾರ್ನರ್ ಗಳಲ್ಲಿ ಮೋರಿ ಮೇಲಿನ ಸ್ಲಾಬ್ ಗಳ ಮೇಲೆ ಶಾಸಕ ಮುನಿರತ್ನ ಎಂಬ ಆಂಗ್ಲಭಾಷೆಯಲ್ಲಿ ಹೆಸರಿರುವ 8 ಇಂಚು ದಪ್ಪ ಹಾಗೂ 2×4 ಹಾಗೂ 2×3 ಅಡಿಯ ಪ್ರೀಕ್ಯಾಸ್ಟ್ ಸ್ಲಾಬ್ ಹಾಕುವ ಕಾಮಗಾರಿ ಮುಗಿಸಲಾಗಿದ್ದು, ಸದ್ಯ ಜೆಪಿ ಪಾರ್ಕ್ ವಾರ್ಡ್ ನಲ್ಲಿ ರಸ್ತೆ ಬದಿಯ ಮೋರಿಯಲ್ಲಿನ ಹೂಳೆತ್ತಿ ಕಾರ್ನರ್ ಗಳಲ್ಲಿ ಪ್ರೀಕ್ಯಾಸ್ಟ್ ಸಿಮೆಂಟ್ ಸ್ಲಾಬ್ ಹಾಕಲಾಗುತ್ತಿದೆ.
ಈತನಕ ಶಾಸಕ ಹೆಸರಿರುವ 300 ಸ್ಲಾಬ್ ಅಳವಡಿಕೆ :
“ಯಶವಂತಪುರ ವಾರ್ಡ್ ನಲ್ಲಿ ರಸ್ತೆಬದಿ ಮೋರಿಗಳಲ್ಲಿ ಹೂಳು ತೆಗೆದು, ಕಾರ್ನರ್ ಜಾಗದಲ್ಲಿ 300 ಪ್ರೀಕ್ಯಾಸ್ಟ್ ಸ್ಲಾಬ್ ಅಳವಡಿಸಲಾಗಿದೆ. ಶಾಸಕ ಮುನಿರತ್ನ ಅವರ ಹೆಸರನ್ನು ಸ್ಲಾಬ್ ಮೇಲೆ ಅಳವಡಿಸಲು ನಾವೇ ಸ್ವಯಂಪ್ರೇರಿತವಾಗಿ ಹಾಕಿರೋದು. ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇವೆ. ಕೆಲವು ಸಾರ್ವಜನಿಕರು ಸ್ಲಾಬ್ ಮೇಲೆ ಶಾಸಕರ ಹೆಸರಿದ್ದು, ಅದರ ಮೇಲೆ ತುಳಿದುಕೊಂಡು ಓಡಾಡೋಕೆ ಮುಜುಗರಪಡುತ್ತಿದ್ದಾರೆ. ಆ ಸ್ಲಾಬ್ ಹಾಗೂ ಸುತ್ತಮುತ್ತಲ ಜಾಗ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಈ ಆಲೋಚನೆ ಮಾಡಿದ್ದೇವೆ. ಕಾರ್ನರ್ ಸ್ಲಾಬ್ ಲಾರಿ ಮತ್ತಿತರ ದೊಡ್ಡ ಗಾಡಿಗಳು ಹಾದುಹೋಗುವಾಗ ಸ್ಲಾಬ್ ಹಾಳಾಗಬಾರದೆಂಬ ಕಾರಣಕ್ಕೆ 8 ಇಂಟು ದಪ್ಪದ ಸ್ಲಾಬ್ ಹಾಕಿದ್ದೇವೆ. ಉಳಿದೆಡೆ 6 ಇಂಚಿನ ಸ್ಲಾಬ್ ಹಾಕಿದ್ದೇವೆ.”
– ಸುರೇಶ್, ಗುತ್ತಿಗೆ ಸಂಸ್ಥೆಯ ಸೂಪರ್ ವೈಸರ್
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಸರ್ಕಾರ ಬಿಬಿಎಂಪಿಯ ವಾರ್ಡ್ ಕಾಮಗಾರಿ ನಡೆಸಲು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಬರೋಬ್ಬರಿ 208 ಕೋಟಿ ರೂ. ಹಣವನ್ನು ಮಂಜೂರು ಮಾಡಿದೆ. ರಾಜ್ಯ ಸರ್ಕಾರದ ಮಂತ್ರಿ ಸ್ಥಾನದಲ್ಲಿರುವ ಪ್ರಭಾವಿ ರಾಜಕಾರಣಿ ಮುನಿರತ್ನ ಅವರ ಸೂಚನೆಯಿಲ್ಲದೆ ರಾಜರಾಜೇಶ್ವರಿನ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕಾಮಗಾರಿಯು ನಡೆಯದು ಎಂಬ ಮಾತಿದೆ. ಇಲ್ಲಿ ಗುತ್ತಿಗೆದಾರರ ಕಡೆಯವರು ಹೇಳುವಂತೆ ತಾವು ಸ್ವಯಂಪ್ರೇರಿತವಾಗಿ ಶಾಸಕರ ಹೆಸರನ್ನು ಸ್ಲಾಬ್ ಮೇಲೆ ಹಾಕಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನು ಶಾಸಕರ ಗಮನಕ್ಕೂ ತಂದಿದ್ದೇವೆ ಅಂತ ತಿಳಿಸಿದ್ದಾರೆ. ಇಷ್ಟೆಲ್ಲಾ ಗೊತ್ತಿದ್ದರೂ ಶಾಸಕ ಮುನಿರತ್ನ ಅವರು ಏಕೆ ಸುಮ್ಮನಿದ್ದರೂ? ಎಂಬ ಪ್ರಶ್ನೆ ಯಾರಿಗಾದರೂ ಕಾಡದೆಯಿರದು. ಇನ್ನೊಂದೆಡೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಶಾಸಕ ಮುನಿರತ್ನ ಹೆಸರನ್ನು ಮೋರಿ ಸ್ಲಾಬ್ ಮೇಲೆ ಹಾಕಲಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳು ಟೀಕೆ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತರು ಕೂಡಲೇ ಕ್ರಮ ಕೈಗೊಳ್ಳಬೇಕು :
“ಹೈಕೋರ್ಟ್ ಆದೇಶದ ಪ್ರಕಾರ ಸಾರ್ವಜನಿಕರ ಕಾಮಗಾರಿಗಳಲ್ಲಿ ಜನಪ್ರತಿನಿಧಿಗಳ ಹೆಸರು ಹಾಕದಂತೆ ನಿರ್ಬಂಧವಿದೆ. ಆದರೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮತ್ತು ಸಚಿವರಾದ ಮುನಿರತ್ನ, ತಮ್ಮ ವ್ಯಾಪ್ತಿಯ ವಾರ್ಡ್ ಕಾಮಗಾರಿಗಳಲ್ಲಿ ಮೋರಿ ಪ್ರೀಕ್ಯಾಸ್ಟ್ ಸಿಮೆಂಟ್ ಸ್ಲಾಬ್ ಮೇಲೆ ತಮ್ಮ ಹೆಸರು ಹಾಕುತ್ತಿರುವುದು ಸರಿಯಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ಈ ರೀತಿ ಪ್ರಚಾರ ಪಡೆಯುವುದು ಸೂಕ್ತವಲ್ಲ. ತಮ್ಮ ಸ್ವಂತ ಹಣ ಹಾಕಿ ಈ ಕಾಮಗಾರಿ ನಡೆಸಿದ್ದರೂ ಸಾರ್ವಜನಿಕ ಕಾಮಗಾರಿ ವಿಷಯದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಬಿಬಿಎಂಪಿ ಮುಖ್ಯ ಆಯುಕ್ತರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.”
– ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರು
ರಸ್ತೆ ಎರಡು ಮೂಲೆ ಸೇರುವ ಜಾಗದಲ್ಲಿ ಸಿಮೆಂಟ್ ಕಾಂಕ್ರಿಟ್ ಇರುವ ಪ್ರೀಕ್ಯಾಸ್ಟ್ ಸ್ಲಾಬ್ ಅಳವಡಿಸಲು ಹೆಚ್ಚು ಆಸಕ್ತಿ ತೋರುವ ಗುತ್ತಿಗೆದಾರರು, ಹಲವು ಕಡೆಗಳಲ್ಲಿ ಮೋರಿ ಹೂಳು ತೆಗೆಯದೆ ಸ್ಲಾಬ್ ಅಳವಡಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಶಾಸಕರ ಹೆಸರನ್ನು ಶಾಶ್ವತವಾಗಿ ಸ್ಲಾಬ್ ಮೇಲೆ ಅಚ್ಚೊತ್ತಿಸಿರುವ ಕಾಮಗಾರಿ ನಡೆಸುತ್ತಿರುವ ಬಗ್ಗೆ ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯ ಚೀಫ್ ಎಂಜಿನಿಯರ್ ವಿಜಯ್ ಕುಮಾರ್ ಅವರನ್ನು ಬೆಂಗಳೂರು ವೈರ್ ಪ್ರಶ್ನಿಸಿತು.
MLA ಹೆಸರಿನ ಸ್ಲಾಬ್ ಅಳವಡಿಕೆ ಬಗ್ಗೆ ದೂರುಗಳು ಬಂದಿದೆ :
“ರಾಜರಾಜೇಶ್ವರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ಅವರ ಹೆಸರನ್ನು ಮೋರಿ ಸ್ಲಾಬ್ ಮೇಲೆ ಹಾಕಲಾಗುತ್ತಿದೆ ಎಂಬ ಬಗ್ಗೆ ಎರಡು- ಮೂರು ದೂರುಗಳ ಬಂದಿದೆ. ಸಾರ್ವಜನಿಕ ಕಾಮಗಾರಿಗಳಲ್ಲಿ ಶಾಸಕರ ಫೊಟೋ ಹಾಕುವಂತಿಲ್ಲ ಎಂಬ ಬಗ್ಗೆ ತಿಳಿದಿದೆ. ಆದರೆ ಚರಂಡಿ ಕಾಮಗಾರಿಗಳಲ್ಲಿ ಶಾಸಕರ ಹೆಸರು ಅಚ್ಚೊತ್ತಿರುವ ಸ್ಲಾಬ್ ಅಳವಡಿಸುತ್ತಿರುವ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ.”
– ವಿಜಯ್ ಕುಮಾರ್, ಮುಖ್ಯ ಅಭಿಯಂತರರು, ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯ
ಪರ್ಮನೆಂಟ್ ಪ್ರಚಾರಕ್ಕೆ ನಗರದಲ್ಲಿರುವ ಎಲ್ಲಾ ಜನಪ್ರತಿನಿಧಿಗಳೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರವನ್ನು ಅನುಸರಿಸೋಕೆ ಶುರು ಮಾಡಿದ್ರೆ, ಬೆಂಗಳೂರಿನಲ್ಲಿ ಬ್ಯಾನರ್, ಬಂಟಿಂಗ್ಸ್, ಸಾರ್ವಜನಿಕ ಜಾಹೀರಾತು ನಿಷೇಧ ಮಾಡಿಯೂ ಪ್ರಯೋಜನ ಇಲ್ಲದಂತಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಜನಪ್ರತಿನಿಧಿಗಳ ಹೆಸರು, ಭಾವಚಿತ್ರವಿರುವ ಬಸ್ ಸ್ಟ್ಯಾಂಡ್, ರಸ್ತೆ ನಾಮಫಲಕ ಮತ್ತಿತರ ಕಡೆ ಟೇಪ್ ಹಾಕಿ ಅವುಗಳನ್ನು ಮುಚ್ಚಬಹುದು. ಆದರೆ ಪಾದಚಾರಿ ಮಾರ್ಗದಲ್ಲಿ ಊರಿಡಿ ಹಾಕಿರುವ ಸ್ಲಾಬ್ ಅನ್ನು ಹೇಗೆ ಮುಚ್ಚುತ್ತಾರೆ? ನಾಗರೀಕರ ತೆರಿಗೆ ಹಣದಲ್ಲಿ ಈ ರೀತಿ ಪ್ರಚಾರ ಮಾರ್ಗ ಹಿಡಿದಿರುವುದು ಸರಿಯೇ?